ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೇಣುಕ’ರ 101 ಅಡಿ ಮೂರ್ತಿ ನಿರ್ಮಾಣ

Last Updated 23 ಜುಲೈ 2017, 5:22 IST
ಅಕ್ಷರ ಗಾತ್ರ

ದಾವಣಗೆರೆ: ರಂಭಾಪುರಿ ಪೀಠದ ಸಂಸ್ಥಾಪಕ ರೇಣುಕಾಚಾರ್ಯರ 101 ಅಡಿ ಎತ್ತರದ ಮೂರ್ತಿ ನಿರ್ಮಾಣಕ್ಕೆ  ಸರ್ಕಾರ ಮುಂದಾಗಿದ್ದು, ಇದಕ್ಕೆ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮುಜರಾಯಿ ಹಾಗೂ ಜವಳಿ ಖಾತೆ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ನಗರದ ರೇಣುಕ ಮಂದಿರದಲ್ಲಿ ಮದ್ವೀರಶೈವ ಸದ್ಬೋಧನಾ ಸಂಸ್ಥೆ ದಾವಣಗೆರೆ ಜಿಲ್ಲಾ ಘಟಕ ಹಮ್ಮಿಕೊಂಡಿರುವ ರಂಭಾಪುರಿ ಸ್ವಾಮೀಜಿಯ 22ನೇ ವರ್ಷದ ಆಘಾಡ ಮಾಸದ ಇಷ್ಟಲಿಂಗ ಪೂಜೆ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.

ಮೂರ್ತಿ ನಿರ್ಮಾಣ ಕುರಿತಂತೆ ರಂಭಾಪುರಿ ಸ್ವಾಮೀಜಿ ಅವರೊಂದಿಗೆ ಚರ್ಚಿಸಲಾಗಿದೆ. ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ ಈ ಮೂರ್ತಿ ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ. ಬಾಳೆಹೊನ್ನೂರಿನಲ್ಲಿ ಇನ್ನೊಮ್ಮೆ ಈ ಸಂಬಂಧ ಭಕ್ತರ ಸಭೆ ಕರೆಯಲಾಗುವುದು ಎಂದು ಅವರು ಹೇಳಿದರು.

ರೇಣುಕಾಚಾರ್ಯರು ಅಗಸ್ತ್ಯ ಮುನಿಗೇ ಧರ್ಮ ಬೋಧನೆ ಮಾಡಿದವರು. ಅವರ ಕ್ರಾಂತಿಕಾರಕ ನಿರ್ಧಾರಗಳಿಂದ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದು ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕು ಎನ್ನುವ ದೃಷ್ಟಿಯಿಂದ ಮೂರ್ತಿ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದರು.

ಇದೇ ಸಂದರ್ಭ ರಂಭಾಪುರಿ ಸ್ವಾಮೀಜಿ ಪೀಠಾರೋಹಣ ರಜತ ಮಹೋತ್ಸವ ಹಾಗೂ ಷಷ್ಟಿಪೂರ್ತಿ ನೆನಪಿಗಾಗಿ ಪ್ರಕಟಿಸಿದ ‘ಅಕ್ಷಯ’ ಅಭಿನಂದನಾ ಗ್ರಂಥವನ್ನು ಸಚಿವರು ಬಿಡುಗಡೆ ಮಾಡಿದರು.

ಸಭೆಯ ನೇತೃತ್ವ ವಹಿಸಿದ್ದ ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸತ್ಯ ಮತ್ತು ಶಾಂತಿ ಧರ್ಮದ ಎರಡು ಕಣ್ಣು. ದೇವರು, ಧರ್ಮ ಮತ್ತು ಗುರುವನ್ನು ಯಾರೂ ಮರೆಯಬಾರದು’ ಎಂದರು.

ಐಕ್ಯತೆ ಮತ್ತು ಅಧ್ಯಾತ್ಮ ಜ್ಞಾನ ಭಾರತದ ಉಸಿರು. ಮನುಷ್ಯನಲ್ಲಿರುವ ಅಸುರ ಗುಣಗಳು ನಾಶವಾಗಿ ದೈವಿ ಗುಣಗಳು ಬಲಗೊಳ್ಳಬೇಕು. ಜಾತಿ, ಜನಾಂಗಗಳ ಗಡಿ ಮೀರಿ ಮಾನವೀಯ ಉದಾತ್ತ ಮೌಲ್ಯಗಳೊಂದಿಗೆ ಬಾಳುವುದರಿಂದ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.

ಸಭೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಾವಣಗೆರೆ ಅರ್ಬನ್ ಬ್ಯಾಂಕ್‌ ಉಪಾಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಅವರಿಗೆ ‘ಸಹಕಾರ ಸ್ನೇಹ ಸಂವರ್ಧಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸೂಡಿ ಜುಕ್ತಿ ಹಿರೇಮಠದ ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಣ್ವಕುಪ್ಪಿ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ಹೊಟ್ಯಾಪುರದ ಗಿರಿಸಿದ್ದೇಶ್ವರ ಸ್ವಾಮೀಜಿ, ರಾಂಪುರ ಕ್ಷೇತ್ರದ ವಿಶ್ವೇಶ್ವರ ಸ್ವಾಮೀಜಿ, ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ದಾವಣಗೆರೆ–ಹರಿಹರ ಕೋ ಆಪರೇಟಿವ್‌ ಬ್ಯಾಂಕ್ ಅಧ್ಯಕ್ಷ ಎನ್‌ಎಂಜೆಬಿ ಆರಾಧ್ಯ, ಚಿಕ್ಕಮಗಳೂರು ವೀರಶೈವ ಸಮಾಜದ ಮುಖಂಡ ಎಚ್‌.ಎಂ.ಲೋಕೇಶ್, ಮದ್ವೀರಶೈವ ಸದ್ಬೋಧನಾ ಸಂಸ್ಥೆ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನೆ ಶಿವಕುಮಾರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಶಶಿಕಲಾ ಪಿ.ಎಂ.ರುದ್ರಯ್ಯ, ಕೆ.ಬಿ.ನಾಗರಾಜ್ ಅವರಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು. ವೀರಶೈವ ಮುಖಂಡ ಸ್ವಾಗಿ ಶಾಂತಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ಕೆ.ಎಂ.ರುದ್ರಮುನಿ ಸ್ವಾಮಿ ನಿರೂಪಿಸಿದರು.

* * 

ಮೂರ್ತಿ ನಿರ್ಮಾಣದ ವೆಚ್ಚವನ್ನು ಸರ್ಕಾರವೊಂದೇ ಭರಿಸುವುದಿಲ್ಲ. ಭಕ್ತರೂ ಭಕ್ತಿಯಿಂದ ಆರ್ಥಿಕ ನೆರವು ನೀಡಬೇಕು.
–ರುದ್ರಪ್ಪ ಲಮಾಣಿ
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT