ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ ವೈದ್ಯರ ವಸತಿಗೃಹಗಳಿಗೆ ಅನಾರೋಗ್ಯ

Last Updated 23 ಜುಲೈ 2017, 6:19 IST
ಅಕ್ಷರ ಗಾತ್ರ

ಕಾಳಗಿ: ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳ ಹಾಗೂ ಸಿಬ್ಬಂದಿಯ ವಸತಿಗೃಹಗಳು ಪಾಳು ಬಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಅನಾರೋಗ್ಯಕ್ಕೆ ಒಳಗಾಗುವ ಪ್ರಸಂಗ ನಿರ್ಮಾಣವಾಗಿದೆ. ಹಲವು ವರ್ಷಗಳ ಹಿಂದೆ ಅಂದಾಜು 10 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಆರೋಗ್ಯ ಕೇಂದ್ರ ಜೊತೆಗಿನ ಈ ವಸತಿಗೃಹಗಳು ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಗೊಂಡಿದಷ್ಟೇ ಅಲ್ಲ, ಸುತ್ತ ಗಿಡಗಂಟಿ ಬೆಳೆದಿವೆ.

ಇಲ್ಲಿ ವಾಸಿಸಲು ಸಿಬ್ಬಂದಿ ಭಯಪಡುತ್ತಿದ್ದಾರೆ. ‘ವೈದ್ಯಾಧಿಕಾರಿಗಳಿಗೆ–4, ಶುಶ್ರೂಷಕರಿಗೆ–6, ಗ್ರೂಪ್ ಡಿ ಸಿಬ್ಬಂದಿಗೆ–6, ವಾಹನ ಚಾಲಕನಿಗೆ–1 ಮತ್ತು ಆರೋಗ್ಯ ಸಹಾಯಕಿಗೆ–1 ಗೃಹ  ಹೀಗೆ ಒಟ್ಟು 18 ವಸತಿಗೃಹಗಳಿವೆ. ಕೆಲ ವಸತಿಗೃಹಗಳ ಕಿಟಕಿ, ಬಾಗಿಲು ಹಾಳಾಗಿವೆ. ಕೆಲ ಗೋಡೆ ಸೀಳಿ, ಮೇಲ್ಚಾವಣಿ ಸಿಮೆಂಟ್ ಪದರು ಉದುರಿ ಬಿದ್ದು ಮಳೆ ನೀರಿನ ಸೋರಿಕೆ ಹೆಚ್ಚಾಗಿದೆ.

ಕೆಲವು ನೆಲದಮಣ್ಣು ಒಳಹೋಗಿ ಪರ್ಸಿಗಳು ಅಂಕುಡೊಂಕಾಗಿದ್ದು, ಕೂರಲು ಬಾರದಾಗಿವೆ. ಹೆಗ್ಗಣ, ಹಾವು, ಚೇಳು ಸೇರಿ ಹಾಳು ಕೊಂಪೆಯಂತಾಗಿದ್ದು, ಯಾರೂ ಒಳ ಹೋಗದಂತಾಗಿವೆ’ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ಈ ಎಲ್ಲದರ ಪರಿಣಾಮವಾಗಿ 5 ವಸತಿ ಗೃಹಗಳು ಕುಸಿದು ಬೀಳುವ ಹಂತದಲ್ಲಿದ್ದರೆ, 13 ವಸತಿ ಗೃಹಗಳು ದುರಸ್ತಿಗಾಗಿ ಕಾಯುತ್ತಿವೆ. ವೈದ್ಯರು ಆತಂಕದಲ್ಲೇ ಕಾಲ ಕಳೆದರೆ, ಹಗಲು–ರಾತ್ರಿ ಇಲ್ಲೇ ಇರುವ ಸಿಬ್ಬಂದಿ ಅಪಾಯಕ್ಕೆ ಅಂಜಿ ಅಂಗಳದಲ್ಲಿ ಜೋಪಡಿ ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ವಸತಿಗೃಹಗಳ ಸುತ್ತಲು ವ್ಯಾಪಿಸಿರುವ ಹುಲ್ಲು, ಮುಳ್ಳು, ಗಿಡಗಂಟಿಯ ಹಸಿರು, ವಿಷಜಂತುಗಳ ಓಡಾಟದ ನೆಲೆಯಾಗಿ ಮಾರ್ಪಡಿಸಿದೆ.

‘ಆವರಣದಲ್ಲಿ ಓಡಾಡಲು ರಸ್ತೆ ಇದ್ದರೂ ಪ್ರಯೋಜನಕಾರಿಯಾಗಿಲ್ಲ. ನೀರಿನ ಸೌಕರ್ಯ ಸಾಕಷ್ಟಿದ್ದರೂ ಒಂದೂ ವಸತಿಗೃಹಕ್ಕೆ ಶೌಚಾಲಯ ಸಮರ್ಪಕವಾಗಿಲ್ಲ. ಪುರುಷ ಸಿಬ್ಬಂದಿ ಹೇಗೋ ಹೋಗುತ್ತಾರೆ. ಆದರೆ, ಮಹಿಳೆಯರು ಪಕ್ಕದ ಹೊಲಕ್ಕೆ ಹೋಗಿ ಅವರಿಂದ ಬೈಯ್ಯಿಸಿಕೊಳ್ಳುವುದು ಅನಿವಾರ್ಯವಾಗಿದೆ’ ಎಂದು ಸಿಬ್ಬಂದಿ ಮನೆಯವರು ನೋವು ವ್ಯಕ್ತಪಡಿಸುತ್ತಾರೆ.

‘ರಾತ್ರಿ ಹೊತ್ತು ಯಾವೊಂದು ವಿದ್ಯುತ್ ಕಂಬ ಬೆಳಕು ಹರಿಸದೆ ಇಡೀ ಪ್ರದೇಶ ಕತ್ತಲೆಯಿಂದ ಕೂಡಿದೆ. ಯಾವ ಸಮಯದಲ್ಲಿ ಏನು ಕರೆ ಬರುತ್ತೊ ಗೊತ್ತಿಲ್ಲ. ಅವಾಗೆಲ್ಲ ಕತ್ತಲಲ್ಲೇ ಎದ್ದು ಆಸ್ಪತ್ರೆಗೆ ಓಡಿ ಹೋಗಬೇಕು. ಅಂಥ ವೇಳೆಯಲ್ಲಿ ನಮ್ಮ ಪಾಡು ದೇವರೆ ಬಲ್ಲ’ ಎನ್ನುತ್ತಾರೆ ಸಿಬ್ಬಂದಿ.

‘ನಾವು ಮನೆಯಲ್ಲಿದ್ದಾಗ ಹೆಂಡತಿ, ಮಕ್ಕಳು ನಿರ್ಭಯದಿಂದ ಇರುತ್ತಾರೆ. ಆದರೆ, ನಾವು ಕರ್ತವ್ಯಕ್ಕೆ ತೆರಳಿದ್ದಾಗ ಅವರು ಪಡುವ ಭಯ, ಸಂಭವಿಸುವ ಅನಾಹುತಕ್ಕೆ ಹೊಣೆ ಯಾರು? ಎಂಬುದು ತಿಳಿಯದಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ‘ಪ್ರಜಾವಾಣಿ’ಗೆ ನೋವು ತೋಡಿಕೊಂಡರು.

ಈ ಎಲ್ಲದರ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡುವುದರ ಜತೆಗೆ ಕ್ಷೇತ್ರದ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ್ ಅವರಿಗೆ ಎರಡು ಸಲ ಗಮನಕ್ಕೆ ತರಲಾಗಿದೆ ಎಂದು ಹೇಳಲಾಗಿದೆ. ಆದರೂ, ಯಾರೊಬ್ಬರೂ ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳದಿರುವುದು ನೋಡಿದರೆ ಆರೋಗ್ಯ ಇಲಾಖೆ ಸಿಬ್ಬಂದಿಯ ವಸತಿಗೃಹಗಳಿಗೆ ಅನಾರೋಗ್ಯ ತಂದೊಡ್ಡುವ ಲಕ್ಷಣಗಳು ಗೋಚರಿಸುತ್ತಿವೆ.

*  * 

ವಸತಿಗೃಹಗಳ ಶೌಚಾಲಯ ಸರಿಯಿಲ್ಲ. ಹೊರಗಡೆ ಹೋದರೆ ಪಕ್ಕದ ಹೊಲದವರು ಬೈಯುತ್ತಾರೆ. ಇಲ್ಲಿನ ಅವ್ಯವಸ್ಥೆಗೆ ಬದುಕು ಸಾಕಾಗಿದೆ. ನಮ್ಮ ಗೋಳು ಲೆಕ್ಕಕ್ಕೆ ಇಲ್ಲದಂತಾಗಿದೆ.
ಕಾಶಿಬಾಯಿ ಗುಂಡಪ್ಪ
ಗೃಹಿಣಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT