ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಾರಣ ಮಳೆಗೆ ಕೊಚ್ಚಿಹೋದ ರಸ್ತೆ

Last Updated 23 ಜುಲೈ 2017, 6:27 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ‘ನಮ್ಮ ಊರು ನಮ್ಮ ರಸ್ತೆ’ ಯೋಜನೆಯಡಿ ಅಭಿವೃದ್ಧಿ ಕಂಡ ರಸ್ತೆಗಳು ಮೊನ್ನೆ ಸುರಿದ ಸಾಮಾನ್ಯ ಮಳೆಗೆ ಚುದುರಿ ಹೋಗಿದ್ದು, ಕಳಪೆ ಕಾಮಗಾರಿಗೆ ಕನ್ನಡಿ ಹಿಡಿದಿವೆ. ಮುಂಗಾರು ಮಳೆ ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿಸಿಲ್ಲ. ಸಾಮಾನ್ಯ ಜಡಿಮಳೆಗೆ ಕೊಚ್ಚಿಹೋಗಿರುವ ಕಡೇಚೂರು–ಮಾವಿನಹಳ್ಳಿ ಸಂಪರ್ಕ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಕೇಂದ್ರ ಬಿಟ್ಟದ್ದು, ರಾಜ್ಯ ಕೈಗೆತ್ತಿಕೊಂಡದ್ದು: ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಕೇಂದ್ರ ಸರ್ಕಾರ ‘ನಮ್ಮ ಊರು ನಮ್ಮ ರಸ್ತೆ’, ‘ನಮ್ಮ ಹೊಲ; ನಮ್ಮ ರಸ್ತೆ’  ಯೋಜನೆ ಆರಂಭಿಸಿತು. ಜನವಸತಿ ಆಧಾರದ ಮೇಲೆ ಗ್ರಾಮಗಳನ್ನು ಕೇಂದ್ರ ಆಯ್ಕೆ ಮಾಡಿ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ, ಕೇಂದ್ರ ಕೈಬಿಟ್ಟ ಹಳ್ಳಿಗಳನ್ನು ರಾಜ್ಯ ಸರ್ಕಾರ ಅದೇ ಹೆಸರಿನಲ್ಲಿ ಯೋಜನೆ ಕೈಗೆತ್ತಿಕೊಂಡು ರಾಜ್ಯದ ಎಲ್ಲಾ ಮತಕ್ಷೇತ್ರ ವ್ಯಾಪ್ತಿಯಲ್ಲಿನ ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ನಿರ್ಧರಿಸಿತ್ತು.

₹1.40 ಕೋಟಿ ಅನುದಾನ: ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ‘ನಮ್ಮ ಊರು ನಮ್ಮ ರಸ್ತೆ’ ಯೋಜನೆ ಅಡಿ 20 ಕಿಲೋ ಮೀಟರ್ ಗ್ರಾಮೀಣ ರಸ್ತೆ ಅಭಿವೃದ್ಧಿಪಡಿಸಬೇಕು. 1ಕಿಲೋ ಮೀಟರ್‌ ರಸ್ತೆ ಅಭಿವೃದ್ಧಿಗೆ ₹70 ಲಕ್ಷ ಅನುದಾನ ಮೀಸಲಿಡುವಂತೆ ಒಂದು ವಿಧಾನಸಭಾ ಕ್ಷೇತಕ್ಕೆ ₹1.40 ಕೋಟಿ ಅನುದಾನ ಒದಗಿಸಿದೆ. ಆದರೆ, ಜಿಲ್ಲೆಯ ಸುರಪುರ, ಶಹಾಪುರ, ಗುರುಮಠಕಲ್‌, ಯಾದಗಿರಿ ವಿಧಾನಸಭಾ ಕ್ಷೇತ್ರಗಳಲ್ಲಿನ ಗ್ರಾಮೀಣ ರಸ್ತೆಗಳು ಇದುವರೆಗೂ ಅಭಿವೃದ್ಧಿ ಕಂಡಿಲ್ಲ.

ಜಿಲ್ಲೆಯಲ್ಲಿ ನಾಲ್ಕು ಮತ ಕ್ಷೇತಗಳ 123 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ‘ನಮ್ಮ ಊರು ನಮ್ಮ ರಸ್ತೆ’ ಯೋಜನೆ ಅನುಷ್ಠಾನಗೊಂಡಿದೆ. ಆದರೆ, ಕಾಮಗಾರಿಗಳು ನಡೆದಿರುವ ಬಗ್ಗೆ ಕುರುಹು ಸಹ ಇಲ್ಲದಷ್ಟು ಕಳಪೆ ಕಾಮಗಾರಿ ನಡೆಸಲಾಗಿದೆ ಎಂಬುದಾಗಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟ ಆರೋಪಿಸಿದೆ.

20 ಕಿ.ಮೀ ಅಭಿವೃದ್ಧಿ; 5ವರ್ಷ ನಿರ್ವಹಣೆ:‘ಒಂದು ಮತಕ್ಷೇತ್ರದಲ್ಲಿ ಒಟ್ಟು  20 ಕಿಲೋ ಮೀಟರ್ ಗ್ರಾಮೀಣ ರಸ್ತೆ ಅಭಿವೃದ್ಧಿಪಡಿಸುವುದರ ಜತೆಗೆ 5 ವರ್ಷ ಅವುಗಳನ್ನು ನಿರ್ವಹಣೆ ಮಾಡಬೇಕು ಎಂದು ಯೋಜನೆ ಮಾರ್ಗದರ್ಶಿ ನಿಯಮ ಹೇಳುತ್ತದೆ. ಆದರೆ, ನಿರ್ವಹಣೆಯಷ್ಟೇ ಅಲ್ಲ; ಕನಿಷ್ಠ ರಸ್ತೆಗಳ ಗುಣಮಟ್ಟ ಸಹ ಕಾಪಾಡಿಲ್ಲ.

ಇದರಿಂದ ಗ್ರಾಮೀಣ ಭಾಗದ ಜನರು ಹಾಳಾದ ರಸ್ತೆಯಲ್ಲೇ ಸಂಚರಿಸುವಂತಾಗಿದೆ. ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಂದೂ ಸಭೆ ನಡೆಸಿಲ್ಲ’ ಎಂದು ಸೈದಾಪುರ ತಾಲ್ಲೂಕು ಪಂಚಾಯಿತಿ ಸದಸ್ಯ ಚಂದಪ್ಪ ಸಿದ್ರಾಮಪ್ಪ ಕಾವಲೆರ ದೂರುತ್ತಾರೆ.

* * 

‘ನಮ್ಮ ಊರು; ನಮ್ಮ ರಸ್ತೆ’ ಯೋಜನೆಯಡಿ ಅವ್ಯವಹಾರ ನಡೆದಿದೆ. ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ
ವೆಂಕೋಬದೊರೆ, ಕಾರ್ಯಾಧ್ಯಕ್ಷ,
ಶೋಷಿತರ ಪರ ಸಂಘಟನೆಗಳ ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT