ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೋಟಾನೋಟು; ವಿಜಯಕುಮಾರ್‌ ಕವಲೂರು ಸೂತ್ರಧಾರ

Last Updated 23 ಜುಲೈ 2017, 9:08 IST
ಅಕ್ಷರ ಗಾತ್ರ

ಕೊಪ್ಪಳ: ಖೋಟಾ ನೋಟು ಮತ್ತು ಪ್ರಿಂಟರ್ ಮನೆಯೊಳಗಿಟ್ಟು ಉಪನ್ಯಾಸಕನನ್ನು ಸಿಲುಕಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ನವನಿರ್ಮಾಣ ಸೇನೆಯ ಕಾರ್ಯಕರ್ತರಾದ ಈಶ್ವರ್‌ ಪ್ರಸಾದ್, ಜೀವನ್‌ ಕುಮಾರ್‌ ಹಾಗೂ ಚೇತನ್‌ ಅವರನ್ನು ಶನಿವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್‌ ವಶದಲ್ಲಿದ್ದ ಉಪನ್ಯಾಸಕ ಶಿವಕುಮಾರ ಕುಕನೂರು ಅವರನ್ನು ಬಿಡುಗಡೆ ಮಾಡಲಾಗಿದೆ.

ಪ್ರಕರಣದ ಮುಖ್ಯ ಆರೋಪಿ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್‌ ಕುಮಾರ್‌ ಕವಲೂರು ಹಾಗೂ ಸಂತೋಷ್ ತಲೆಮರೆಸಿಕೊಂಡಿದ್ದಾರೆ.

ವಿಜಯ ಕುಮಾರ್‌ ಕವಲೂರು ಸೂಚನೆ ಪ್ರಕಾರ ಜುಲೈ 21ರಂದು ಶಿವಕುಮಾರ್‌ ಅವರ ಮನೆಯಲ್ಲಿ ಪ್ರಿಂಟರ್‌ ಮತ್ತು ಖೋಟಾ ನೊಟುಗಳನ್ನು ಈಶ್ವರ ಪ್ರಸಾದ್‌ ಇಟ್ಟಿದ್ದ. ಬಳಿಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ನಗರ ಪೊಲೀಸ್‌ ಠಾಣೆಗೆ ಫೋನ್‌ ಮಾಡಿದ್ದ. ಕೃತ್ಯದ ಬಳಿಕ ಫೋನನ್ನು ಸ್ಥಗಿತಗೊಳಿಸಿದ್ದ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅನೂಪ್‌ ಎ.ಶೆಟ್ಟಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಕೃತ್ಯಕ್ಕೆ ಈಶ್ವರ ಪ್ರಸಾದ್‌ ₹ 1 ಲಕ್ಷ ಮೊತ್ತದ ಗುತ್ತಿಗೆ ಪಡೆದಿದ್ದ. ಹಾಗೂ ₹ 60 ಸಾವಿರ ಮುಂಗಡ ಹಣ ಪಡೆದಿದ್ದ.

ವಾರದ ಹಿಂದೆ ಯೋಜನೆ:
‘ಶಿವಕುಮಾರ್‌ ಮತ್ತು ವಿಜಯ ಕುಮಾರ್‌ ಕವಲೂರು ಅವರಿಗೆ ಬಹಳ ವರ್ಷಗಳಿಂದಲೂ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆಯುತ್ತಿತ್ತು. ಕೆಲವು ನ್ಯಾಯಾಲಯದವರೆಗೂ ಹೋಗಿದ್ದವು. ಈ ಬಾರಿ ಹೇಗಾದರೂ ಮಾಡಿ ಶಿವಕುಮಾರ್‌ ಅವರನ್ನು ಸಿಲುಕಿಸಲು ವಿಜಯಕುಮಾರ್‌ ವಾರದ ಹಿಂದೆ ಯೋಜನೆ ರೂಪಿಸಿದ್ದ’ ಎಂದು ಎಸ್‌ಪಿ ತಿಳಿಸಿದರು.

ಹೊಸಪೇಟೆಯಲ್ಲಿ ಪ್ರಿಂಟರ್‌ ಖರೀದಿ, ಲಾಡ್ಜ್‌ನಲ್ಲಿ ಮುದ್ರಣ:
‘ಹೊಸಪೇಟೆಯಲ್ಲಿ ಕಲರ್‌ ಪ್ರಿಂಟರ್‌ ಖರೀದಿಸಿದ ಆರೋಪಿಗಳು ಅಲ್ಲಿನ ಲಾಡ್ಜ್‌ನಲ್ಲಿ ನೋಟುಗಳನ್ನು ಸಿದ್ಧಪಡಿಸಿದ್ದರು. ಅದೂ ಸರಿಯಾಗಿ ಮುದ್ರಣವಾಗಿರಲಿಲ್ಲ. ಮತ್ತೆ ಮೂರು ದಿನಗಳ ಹಿಂದೆ ಅದಕ್ಕೆ ಬೇಕಾದಂತೆ ಕಂಪ್ಯೂಟರ್‌, ಯಂತ್ರವನ್ನು ಸರಿಪಡಿಸಿಕೊಂಡು ನೋಟು ಮುದ್ರಿಸಿದರು. ಜುಲೈ 21ರಂದು ಶಿವಕುಮಾರ್‌ ಮನೆಯಲ್ಲಿ ಅನಾರೋಗ್ಯದಿಂದಿರುವ ಅವರ ತಾಯಿ ಒಬ್ಬರೇ ಇರುವಾಗ ಬೆಳಿಗ್ಗೆ 11ರ ಸುಮಾರಿಗೆ ಈಶ್ವರ ಪ್ರಸಾದ್‌ ಪ್ರಿಂಟರ್‌ ಹೊಂದಿದ್ದ ಬಾಕ್ಸ್‌ ಮತ್ತು ನಕಲಿ ನೋಟುಗಳನ್ನು ಇಟ್ಟುಬಂದಿದ್ದ. ದೂರವಾಣಿ ಮಾಹಿತಿಯಂತೆ ಪೊಲೀಸರು ಶಿವಕುಮಾರ್‌ ಮನೆ ಮೇಲೆ ದಾಳಿ ನಡೆಸಿದರು. ಇಡೀ ಸನ್ನಿವೇಶದಲ್ಲಿ ಸಮಯಪ್ರಜ್ಞೆ ತೋರಿದ ಶಿವಕುಮಾರ್‌ ಘಟನೆಯನ್ನು ಫೇಸ್‌ಬುಕ್‌ ಮೂಲಕ ನೇರ ಪ್ರಸಾರ ಮಾಡಿದರು.

ವಿಜಯ ಕುಮಾರ್‌ ಮತ್ತು ಸಂತೋಷ್‌ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

(ವಿಜಯ ಕುಮಾರ್‌ ಕವಲೂರು)

ಪೊಲೀಸರಿಗೆ ತಪ್ಪು ಮಾಹಿತಿ ನೀಡಿರುವುದು, ಖೋಟಾ ನೋಟು ಮುದ್ರಣ, ನಕಲಿ ನೋಟು ಮುದ್ರಣಕ್ಕಾಗಿ ಪ್ರಿಂಟರ್‌ ಹೊಂದಿದ್ದ ಆರೋಪದಡಿ ಐದೂ ಜನರ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸಲಾಗಿದೆ. ಆರೋಪ ಸಾಬೀತಾದರೆ ಗರಿಷ್ಠ 10 ವರ್ಷ ಜೈಲು ಶಿಕ್ಷೆಗೆ ಅವಕಾಶವಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅನೂಪ್‌ ಎ.ಶೆಟ್ಟಿ ತಿಳಿಸಿದರು. ಪ್ರಕರಣ ಬೇಧಿಸಿದ ಇನ್ಸ್‌ಪೆಕ್ಟರ್‌ ರವಿ ಉಕ್ಕುಂದ ನೇತೃತ್ವದ ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಲಾಗುವುದು ಎಂದು ಅವರು ತಿಳಿಸಿದರು.

* ಬಂಧಿತರು ಯಾರೂ ಅಮಾಯಕರಲ್ಲ. ಪೂರ್ವದ್ವೇಷ, ಉಪನ್ಯಾಸಕರನ್ನು ಸಿಲುಕಿಸುವ ಉದ್ದೇಶದಿಂದಲೇ ಕೃತ್ಯ ಎಸಗಿದ್ದಾರೆ.

– ಡಾ.ಅನೂಪ್‌ ಎ.ಶೆಟ್ಟಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

[ಇನ್ನಷ್ಟು ಓದು]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT