ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಹುದ್ದೆಗೆ ನೇಮಕವೇ ಇಲ್ಲ: ಪ್ರಭಾರ ಕಾರುಬಾರು

ಪುತ್ತೂರು ಎಪಿಎಂಸಿ: ಅಭಿವೃದ್ಧಿಗೆ ತೊಡಕಾದ ಸಿಬ್ಬಂದಿ ಕೊರತೆ
Last Updated 23 ಜುಲೈ 2017, 6:57 IST
ಅಕ್ಷರ ಗಾತ್ರ

ಪುತ್ತೂರು: ರೈತ ವರ್ಗದ ಆಶೋತ್ತರಗಳ ಈಡೇರಿಕೆಗಾಗಿ ಬೃಹತ್ ವೆಚ್ಚದಲ್ಲಿ ನಿರ್ಮಾಣಗೊಂಡ ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆಡಳಿತ ವ್ಯವಸ್ಥೆಗೆ ಸಮರ್ಪಕ ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆ ಸಮಸ್ಯೆಯಾಗಿ ಕಾಡುತ್ತಿದೆ.

ಕೋಟ್ಯಂತರ ಆದಾಯವುಳ್ಳ, ತಾಲ್ಲೂಕು ಮಾರುಕಟ್ಟೆ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿರುವ ಎಪಿಎಂಸಿ ಆಡಳಿತ ವಿಭಾಗದಲ್ಲಿ ಮಂಜೂರಾದ  ಒಟ್ಟು 15 ಹುದ್ದೆಗಳು ಇರಬೇಕಿದ್ದರೂ ಇದೀಗ ಇಲ್ಲಿ ಕರ್ತವ್ಯದಲ್ಲಿರುವುದು ಸಿಪಾಯಿ ಸೇರಿದಂತೆ ಮೂವರು ಸಿಬ್ಬಂದಿ ಮಾತ್ರ. ಉಳಿದ 12 ಹುದ್ದೆಗಳು ಖಾಲಿಯಾಗಿಯೇ ಉಳಿದಿದೆ. 

ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಾರ್ಯದರ್ಶಿ ಹುದ್ದೆ ಬಹಳ ಮಹತ್ತರವಾಗಿದ್ದು, ಈ ಹುದ್ದೆ 5 ವರ್ಷಗಳಿಂದ ಖಾಲಿ ಇದೆ. ಪ್ರಭಾರ ಕಾರ್ಯದರ್ಶಿಗಳ ಮೂಲಕವೇ ಆಡಳಿತ ವ್ಯವಸ್ಥೆ ನಡೆದುಕೊಂಡು ಬರುತ್ತಿದ್ದು, ಪ್ರಭಾರ ಜವಾಬ್ದಾರಿ ಹೊಂದಿದ್ದ ಕಾಯದರ್ಶಿಗಳು ವಾರಕ್ಕೊಮ್ಮೆ ಬರುತ್ತಿದ್ದರೂ, ಇಲ್ಲಿ ಅವರು ಕೇವಲ ಸಹಿ ಮಾಡುವುದಕ್ಕೆ ಸೀಮಿತವಾಗಿದ್ದಾರೆ. 

ಇಲ್ಲಿ ಮೂರು ಮೂರನೇ ದರ್ಜೆ ಸಹಾಯಕ ಕಾರ್ಯದರ್ಶಿ ಹುದ್ದೆ ಇದ್ದರೂ, ಈ ಮೂರು ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. ಆಂತರಿಕ ಲೆಕ್ಕಪರಿಶೋಧಕ, ಹಿರಿಯ ಮಾರುಕಟ್ಟೆ ಮೇಲ್ವಿಚಾರಕ, ಬೆರಳಚ್ಚುಗಾರ ,ವಾಹನ ಚಾಲಕ ತಲಾ ಒಂದು ಹುದ್ದೆ ಖಾಲಿ ಇವೆ. ನಾಲ್ಕನೇ ದರ್ಜೆ ಮಾರುಕಟ್ಟೆ ಮೇಲ್ವಿಚಾರಕ ನಾಲ್ಕೂ ಹುದ್ದೆಗಳು ಖಾಲಿಯಾಗಿಯೇ ಉಳಿದಿದೆ.

ದ್ವಿತೀಯ ದರ್ಜೆ ಲೆಕ್ಕಿಗರ ಎರಡು ಹುದ್ದೆಗಳ ಪೈಕಿ ಒಂದು ಹುದ್ದೆ, ಮಾರುಕಟ್ಟೆ ಸಹಾಯಕ ಒಂದು ಹುದ್ದೆ ಮತ್ತು ಸಿಪಾಯಿ ಒಂದು ಹುದ್ದೆ ಮಾತ್ರ ಇದ್ದಾರೆ. ಸಿಪಾಯಿ ಸೇರಿದಂತೆ ಮೂವರು ಸಿಬ್ಬಂದಿ ಎಲ್ಲ ಕರ್ತವ್ಯ ನಿಭಾಯಿಸಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದಾಗಿ ಎಪಿಎಂಸಿ ಆಡಳಿತ ವರ್ಗದ ಅಭಿವೃದ್ಧಿ ಪಥಕ್ಕೆ ತೊಡಕಾಗಿ ಪರಿಣಮಿಸಿದೆ.   

ವಿಶಾಲ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿರುವ ,ಅಡಿಕೆ ಮಾರುಕಟ್ಟೆ, ಸಂತೆ ಪ್ರಾಂಗಣ, ಗೋದಾಮು, ಸಭಾ ಭವನ ಸೇರಿದಂತೆ ಹಲವು  ವ್ಯವಸ್ಥೆಗಳನ್ನೊಳಗೊಂಡ ಪುತ್ತೂರು ಎಪಿಎಂಸಿಯಲ್ಲಿ ಪ್ರಸ್ತುತ `ಸಹಿ' ಅಧಿಕಾರ ಚಲಾಯಿಸುವ ಯಾವುದೇ ಅಧಿಕಾರಿಗಳಿಲ್ಲ ಎನ್ನುವುದು ಶೋಚನೀಯ ವಿಚಾರ.

ಒಬ್ಬ ಮಾರುಕಟ್ಟೆ ಸಹಾಯಕರು ಹಾಗೂ ಎರಡನೇ ದರ್ಜೆ ಲೆಕ್ಕಿಗರೊಬ್ಬರು ಈ ದೊಡ್ಡ ವ್ಯವಸ್ಥೆ ಅಡಿ ಏನೆಲ್ಲ ಕೆಲಸ ಮಾಡಬಲ್ಲರು ಎಂಬುವುದನ್ನು ಸಂಬಂಧಪಟ್ಟ ಅಧಿಕಾರಿಗಳೇ ನಿರ್ಧರಿಸಬೇಕಾಗಿದ್ದು, ಸಿಬ್ಬಂದಿ ಕೊರತೆ ಆಡಳಿತ ವ್ಯವಸ್ಥೆಗೆ ತೊಡಕಾಗುತ್ತಿದೆ ಎಂಬುವುದು ಆಡಳಿತ ಮಂಡಳಿಯ ಕೊರಗು. 

ಪುತ್ತೂರು ತಾಲ್ಲೂಕಿನಲ್ಲಿ ಕೃಷಿಕರ ಸಂಖ್ಯೆ ಅಪಾರವಿದ್ದು, ಕೃಷಿ ಉತ್ಪನ್ನಗಳನ್ನು ಹೆಚ್ಚಾಗಿ ಬೆಳೆಯುವ ರೈತರು ಇಲ್ಲಿದ್ದಾರೆ. ಅವರಿಗೆ ಮಾರುಕಟ್ಟೆ ಸೌಲಭ್ಯವನ್ನು ಎಪಿಎಂಸಿಯಲ್ಲಿ ಕಲ್ಪಿಸಲಾಗಿದೆ.

ಕೃಷಿಕರಿಗೆ ಅಡಿಕೆ ಅಡಮಾನ ಸಾಲ ಯೋಜನೆ, ರೈತ ಸಂಜೀವಿನಿ ಅಪಘಾತ ವಿಮೆ ಯೋಜನೆ ಅಡಿ ಸೌಲಭ್ಯ ಕಲ್ಪಿಸಿಕೊಡುವ ಆಡಳಿತ ಮಂಡಳಿಯ ಚಿಂತನೆಗೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಕೊರತೆ ಸಮಸ್ಯೆಯಾಗಿ ಕಾಡುತ್ತಿದೆ. ಮಾತ್ರವಲ್ಲದೆ ಆದಾಯ ಗಳಿಕೆಯ ಗುರು ಸಾಧನೆಗೂ  ಸಮಸ್ಯೆಯಾಗಿ ಕಾಡುತ್ತಿದೆ.

ಎಪಿಎಂಸಿ ಪ್ರಾಂಗಣದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟಡಗಳನ್ನು ನಿರ್ಮಿಸಿ ಎಲ್ಲ ಅಡಿಕೆ ವರ್ತಕರಿಗೆ ಮೂಲ ಸೌಕರ್ಯಗಳೊಂದಿಗೆ ಅವಕಾಶ ಮಾಡಿಕೊಡುವ, ಅಡಿಕೆ ದಾಸ್ತಾನಿಗಾಗಿ ಇನ್ನಷ್ಟು ಗೋದಾಮುಗಳನ್ನು ನಿರ್ಮಿಸುವ, ರೈತಾಪಿ ವರ್ಗಕ್ಕೆ ಅನುಕೂಲವಾಗುವಂತೆ ಕಡಿಮೆ ಬಾಡಿಗೆಯಲ್ಲಿ ಸಭಾಭವನವನ್ನು ಕಾರ್ಯಕ್ರಮಗಳಿಗೆ ನೀಡುವ , ರೈತರು ಬೆಳೆದ ಉತ್ಪನ್ನಗಳ ದಿನನಿತ್ಯದ ಸಂತೆ ಆರಂಭಿಸುವ ಜೊತೆಗೆ ರೈತರನ್ನು ರೈತರನ್ನು ಎಪಿಎಂಸಿ ಪ್ರಾಂಗಣಕ್ಕೆ ಸೆಳೆಯುವ ಕಾರ್ಯಕ್ರಮಗಳನ್ನು ರೂಪಿಸಲು ಆಡಳಿತ ಸಮಿತಿ ಮುಂದಾಗಿದೆ.

ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಧಾರಣೆ ಒದಗಿಸುವ ಪ್ರಯತ್ನವೂ ನಡೆಯುತ್ತಿದೆ. ಇದರೊಂದಿಗೆ ಇಲಾಖೆ ನಿಗದಿ ಪಡಿಸಿದ ಶುಲ್ಕ ಗುರಿ ಸಾಧನೆಯೂ ನಡೆಯಬೇಕಾಗಿದೆ. ಇದು ಯಶಸ್ವಿಯಾಗಬೇಕಾದರೆ ಸಿಬ್ಬಂದಿ ಕೊರತೆ ನೀಗಿಸುವ ಕೆಲಸ ಆಗಬೇಕಿದೆ.
ಶಶಿಧರ್ ರೈ ಕುತ್ಯಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT