ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕ ಭವನಕ್ಕೆ ₹ 50 ಲಕ್ಷ ಅನುದಾನ

Last Updated 23 ಜುಲೈ 2017, 9:52 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ದೇವರು. ಅವರ ಹಿತ ಕಾಯುವುದು ಎಲ್ಲರ ಕರ್ತವ್ಯ.  ಬುದ್ದ, ಬಸವ, ಅಂಬೇಡ್ಕರ್, ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಅನುಸರಿಸುತ್ತಾ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದಲ್ಲಿ ಕನಕ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕನಕ ಭವನಕ್ಕೆ ಈಗಾಗಲೇ 50 ಲಕ್ಷ ಅನುದಾನ ಒದಗಿಸಲಾಗಿದೆ. ಇನ್ನೂ ₹ 50 ಲಕ್ಷ ನೀಡಲಾಗುವುದು. ಎಲ್ಲಾ ಹಿಂದುಳಿದ ಜಾತಿಗಳ ಸಮುದಾಯ ಭವನ  ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೂ ಅನುದಾನ ಮತ್ತು ಜಾಗ ನೀಡಲಾಗುವುದು, ಸಾಮಾಜಿಕ ನ್ಯಾಯ ಇದರ ಉದ್ದೇಶ, ಹಿಂದುಳಿದ ವರ್ಗಗಳಿಗೂ ಸೌಲಭ್ಯ ಹಾಗೂ ಅವಕಾಶಗಳು ದೊರೆಯಬೇಕು ಎಂದರು.

ಪ್ರಣಾಳಿಕೆಯಲ್ಲಿ ನೀಡಿದ 165 ಆಶ್ವಾಸನೆಯಲ್ಲಿ 155 ಅನ್ನು ಈಡೇರಿಸಲಾಗಿದೆ, ಸಹಕಾರ ಸಂಘಗಳಲ್ಲಿ ರೈತರು ಮಾಡಿದ್ದ ₹ 8165 ಕೋಟಿ ಸಾಲ ಮನ್ನಾ ಮಾಡಿದ್ದೇವೆ.  ಜಿಲ್ಲೆಯಲ್ಲಿ ಸಹಕಾರ ಸಂಘಗಳಲ್ಲಿ ರೈತರು ಮಾಡಿದ್ದ ₹ 490 ಕೋಟಿ ಸಾಲದಲ್ಲಿ ₹ 390 ಕೋಟಿ ಸಾಲ ಮನ್ನಾ ಮಾಡಲಾಗಿದೆ.

ರಾಜ್ಯ ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ತಂದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಸಾಲವನ್ನು ಮನ್ನಾ ಮಾಡಿಸಬೇಕು ಎಂದು ಆಗ್ರಹಿಸಿದರು.  ದೇಶದ ಸಂಪತ್ತು ಮತ್ತು ಅಧಿಕಾರ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಪ್ರತಿ ಪ್ರಜೆಗೂ ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯಇರಬೇಕು. ಆಗ ಮಾತ್ರ ಸಮಾನತೆಗೆ ನಿಜವಾದ ಅರ್ಥ ಬರುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

ಸಚಿವ ಎ. ಮಂಜು, ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿ ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ. ಆದಾದ ಬಳಿಕ ಮೂರನೇ ಹಂತದ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಜಾವಗಲ್‌ನಲ್ಲಿ ಕನಕ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗದ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಜೊತೆ ಸದ್ಯದಲ್ಲಿ ಚರ್ಚಿಸಿ ಸಂಬಂಧಪಟ್ಟ ದಾಖಲೆಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಕಾಗಿನೆಲೆ ಮೈಸೂರು ಶಾಖಾಮಠದ ಶಿವಾನಂದ ಪುರಿ ಸ್ವಾಮೀಜಿ,  ಮಠದ ವತಿಯಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು. ಇದಕ್ಕೆ ಜಾಗದ ಕೊರತೆ ಇದ್ದು, ಸರ್ಕಾರದ ಸೂಕ್ತ ಜಾಗ ಒದಗಿಸಬೇಕು ಎಂದು ಕೋರಿದರು.

ಶಾಸಕ ಎಚ್‌.ಡಿ. ರೇವಣ್ಣ, ಮಳೆಯ ಕೊರತೆಯಿಂದ 1.60 ಲಕ್ಷ ತೆಂಗಿನ ಮರಗಳು ನಾಶವಾಗಿವೆ. ಕೇಂದ್ರ, ರಾಜ್ಯ ಸರ್ಕಾರಗಳು ರೈತರಿಗೆ ಪರಿಹಾರ ಒದಗಿಸಬೇಕು. ಕುಡಿಯುವ ನೀರು ಪೂರೈಸಲು ಜಿಲ್ಲೆಗೆ ₹ 20 ಕೋಟಿ ಅನುದಾನ ನೀಡಬೇಕು ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯರಾದ ಎಚ್‌.ಎಂ. ರೇವಣ್ಣ, ಎಂ.ಎ. ಗೋಪಾಲಸ್ವಾಮಿ,  ಮುಖಂಡ ಸಿ.ಎಸ್‌. ಪುಟ್ಟೇಗೌಡ, ತಾಲ್ಲೂಕು ಕುರುಬ ಸಂಘದ ಗೌರವಾಧ್ಯಕ್ಷ ಎಂ.ಕೆ. ಮಂಜೇಗೌಡ ಮಾತನಾಡಿದರು. ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಕೆ. ದೊಡ್ಡೇಗೌಡ ಅವರನ್ನು ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು ಪೇಟಾ ತೊಡಿಸಿ, ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಲಾಯಿತು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ. ರಾಜೇಂದ್ರ ಯಮುನಪ್ಪ ಸಣ್ಣಕ್ಕಿ, ಪ್ರಧಾನ ಕಾರ್ಯದರ್ಶಿ ಕೆ.ಎಂ. ರಾಮಚಂದ್ರಪ್ಪ, ಉಪಾಧ್ಯಕ್ಷ ನವಿಲೆಅಣ್ಣಪ್ಪ, ಜಿಲ್ಲಾ ಘಟಕದ ಅಧ್ಯಕ್ಷ  ಪಟೇಲ್‌ ಶಿವಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜು, ಎಚ್‌.ಎಂ. ವಿಶ್ವನಾಥ್‌, ಕೆಪಿಸಿಸಿ ಉಪಾಧ್ಯಕ್ಷ ಬಿ. ಶಿವರಾಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ವಿ.ರಾಜಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್‌.ಎಸ್‌. ವಿಜಯಕುಮಾರ್‌, ಕಾಂಗ್ರೆಸ್‌ ನಾಯಕಿ ಅನುಪಮಾ ಇದ್ದರು. ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ಕಬ್ಬಾಳು ರಮೇಶ್‌ ಸ್ವಾಗತಿಸಿದರು.

* * 

ಕಲ್ಲೇ ಸೋಮನಹಳ್ಳಿ ಏತ  ನೀರಾವರಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಸಚಿವ ಸಂಪುಟ ಅನುಮೋದನೆ ನೀಡಬೇಕು
ಸಿ.ಎನ್‌.ಬಾಲಕೃಷ್ಣ
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT