ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನ್ನ ನೋಡಿ ಪುಟ್ಟಣ್ಣಯ್ಯಗೆ ಹೊಟ್ಟೆಕಿಚ್ಚು’

Last Updated 23 ಜುಲೈ 2017, 10:17 IST
ಅಕ್ಷರ ಗಾತ್ರ

ಪಾಂಡವಪುರ: ‘ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಓಡಾಟ ನೋಡಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಹೊಟ್ಟೆಕಿಚ್ಚು ಬಂದಿದೆ’ ಎಂದು ಸಂಸದ ಸಿ.ಎಸ್.ಪುಟ್ಟರಾಜು ವ್ಯಂಗ್ಯವಾಡಿದರು. ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಶನಿವಾರ ನಡೆದ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

2018ರ ವಿಧಾನಸಭಾ ಚುನಾವಯಲ್ಲಿ ಸೋಲುವ ಭೀತಿಯಿಂದ ಶಾಸಕ ಪುಟ್ಟಣ್ಣಯ್ಯ ಈಗಿನಿಂದಲೇ ನನ್ನ ಬಗ್ಗೆ ಆರೋಪಗಳನ್ನು ಮಾಡಲು ಶುರು ಹಚ್ಚಿಕೊಂಡಿದ್ದಾರೆ ಎಂದು ಕಿಡಿಕಾರಿದರು. ‘ಬೇಬಿ ಗ್ರಾಮದ ಅಮೃತಮಹಲ್ ಕಾವಲ್‌ನಲ್ಲಿ ನಡೆಯುತ್ತಿರುವುದು ಅಧಿಕೃತ ಕಲ್ಲು ಗಣಿಗಾರಿಕೆ, ಚಿನಕುರಳಿ ಗ್ರಾಮ ಪಂಚಾಯಿತಿ ಸರ್ವೆ ನಂ. 80, ಮತ್ತು ಹೊನಗಾನಹಳ್ಳಿ ಗ್ರಾಮ ಪಂಚಾಯಿತಿ ಸರ್ವೆ ನಂ. 127ರಲ್ಲಿ ರಾಜಧನ ಪಾವತಿಸಿ ಕಲ್ಲು ಗಣಿಗಾರಿಕೆ ನಡೆಸಲು 1980ರಲ್ಲಿ ಅಂದಿನ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ದರಂತೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ರಾಜಧನ ಪಾವತಿಸಿ ಗಣಿಗಾರಿಕೆ ನಡೆಸಲಾಗುತ್ತಿದೆ. ಆದರೆ, ನನ್ನ ಮೇಲೆ ವೃಥಾ ಆರೋಪ ಮಾಡುವುದಕ್ಕಾಗಿ ಶಾಸಕ ಪುಟ್ಟಣ್ಣಯ್ಯ ಸರ್ಕಾರಕ್ಕೆ ಮತ್ತು ಜನರಿಗೆ ಸುಳ್ಳು ಮಾಹಿತಿಗಳನ್ನು ನೀಡಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ನಮ್ಮದು ವಂಶಿಕರ ಕುಟುಂಬ, ಶ್ರೀಮಂತ ಮನೆತನ, ನನ್ನಪ್ಪನ ಕಾಲದಲ್ಲೇ ನನ್ನ ಜಮೀನಿನಲ್ಲಿ 150 ಮಂದಿ ನಾಟಿ ಮಾಡುತ್ತಿದ್ದರು. ಇಂತಹ ಶ್ರೀಮಂತ ಹಿನ್ನೆಲೆಯುಳ್ಳ ನನ್ನ ಮೇಲೆ, ‘ಗಣಿಗಾರಿಕೆಯಿಂದ ಹಣ ಮಾಡಿದ್ದೇನೆ’ ಎಂದು ಪುಟ್ಟಣ್ಣಯ್ಯ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಸಾಲದಲ್ಲೇ ಶ್ರೀಮಂತಿಕೆಯಿಂದ ಬದುಕುತ್ತಿದ್ದೇನೆ’ ಎಂದರು.

‘ಸಾರ್ವಜನಿಕರ ಮುಂದೆ ಮುಖ್ಯಮಂತ್ರಿಗಳಿಗೆ ಫೋನ್ ಮಾಡಿ, ‘ಯಾಕ್ರೀ ಇನ್ನೂ ಪುಟ್ಟರಾಜುವನ್ನು ಅರೆಸ್ಟ್ ಮಾಡಿಲ್ಲ’ ಎಂದು ಬಡಾಯಿಕೊಚ್ಚಿಕೊಳ್ಳುವ ಪುಟ್ಟಣ್ಣಯ್ಯ ಅವರು ಮೊದಲು ರೈತರಿಗೆ ಸಮರ್ಪಕವಾದ ನೀರು ಮತ್ತು ವಿದ್ಯುತ್ ಕೊಡಿಸಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ನನ್ನ ಜೀವಮಾನದಲ್ಲೇ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಲ್ಲ, ಹತ್ತುವುದೂ ಇಲ್ಲ’ ಎಂದು ಸವಾಲು ಹಾಕಿದರು.

‘ಗಣಿಗಾರಿಕೆ ಬಗ್ಗೆ ನಾನು ಮುಖ್ಯಮಂತ್ರಿಗಳ ಬಳಿ ಮಾತನಾಡಿ ದಾಗ, ಸ್ವತಃ ಮುಖ್ಯಮಂತ್ರಿಯೇ ‘ಪುಟ್ಟಣ್ಣಯ್ಯ ಮಾತನ್ನಾಡುತ್ತಿರುತ್ತಾರೆ. ನೀನು ನಿನ್ನ ಕೆಲಸ ಮಾಡು’ ಎಂದು ನನಗೆ ಸಮಜಾಯಿಷಿ ನೀಡಿದ್ದಾರೆ. ಅಲ್ಲದೇ ಶಾಸಕ ನರೇಂದ್ರಸ್ವಾಮಿ  ಅವರನ್ನು ಮುಖ್ಯಮಂತ್ರಿಯ ಬಳಿ ಕರೆದುಕೊಂಡು ಹೋಗಿ ಗಣಿಗಾರಿಕೆ ನಿಲ್ಲಿಸಿದರೆ ಮಂಡ್ಯ ಜಿಲ್ಲೆಯಲ್ಲಿ 7ಕ್ಕೆ 7 ಕಾಂಗ್ರೆಸ್ ಗೆಲ್ಲುತ್ತೆ ಎಂದು ಕಾಂಗ್ರೆಸ್ ಪರ ವಕಾಲತ್ತು ವಹಿಸಿ ಅಂಗಲಾಚುತ್ತಿರುವುದು ಹಾಸ್ಯಾಸ್ಪದ’ ಎಂದರು.

‘ರೈತರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಪುಟ್ಟಣ್ಣಯ್ಯ ರೈತರ ಕೆಲಸ ಮಾಡಿಕೊಡಲು ತಮ್ಮ ಹೆಂಡತಿಯ ಶಿಫಾರಸು ಕೇಳುತ್ತಾರೆ. ನಾನು ಇಂತಹ ಕೆಲಸ ನನ್ನ ಜೀವಮಾನದಲ್ಲಿ ಮಾಡಿಲ್ಲ’ ಎಂದು ಟೀಕಿಸಿದರು. ‘ಕಾರ್ಯಕರ್ತರು ಇನ್ನೂ ಹೆಚ್ಚು ಹುರುಪಿನಿಂದ ಕೆಲಸ ಮಾಡಬೇಕು. ಕಾರ್ಯಕರ್ತರೇ ದೇವೇಗೌಡ ಮತ್ತು ಕುಮಾರಣ್ಣ ಎಂದುಕೊಂಡು ಪಕ್ಷವನ್ನು ಬಲವಾಗಿ ಸಂಘಟಿಸಬೇಕು’ ಎಂದು ಸಲಹೆ ನೀಡಿದರು.

ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಡಿ.ರಮೇಶ್ ಮಾತನಾಡಿ, ‘ವರಿಷ್ಠರ ಆದೇಶದಂತೆ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಲಾಗುತ್ತಿದೆ. ಪ್ರತಿ ಬೂತ್‌ನಲ್ಲಿ ಕನಿಷ್ಠ 20 ಕಾರ್ಯಕರ್ತರು ಇರಬೇಕು’ ಎಂದರು. ಜೆಡಿಎಸ್ ವೀಕ್ಷಕರಾದ ಗಂಗಾಧರ ಮೂರ್ತಿ ಮಾತನಾಡಿ, ‘ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಸಂಘಟನೆಗೆ ಕೊರತೆ ಇಲ್ಲ. ಆದರೂ ಇಡೀ ರಾಜ್ಯದಲ್ಲಿ ಜೆಡಿಎಸ್ ಬೂತ್‌ಮಟ್ಟದ ಕಾರ್ಯಕಾರಿ ಸಮಿತಿ ನೇಮಕ ಮಾಡುವುದರ ಮೂಲಕ ಅಧಿಕಾರ ವಿಕೇಂದ್ರೀಕರಣ ಮಾಡುತ್ತಿದೆ’ ಎಂದರು.

ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಹಿರೇಮರಳಿ ಧರ್ಮರಾಜು ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ವೀಕ್ಷಕ ಪ್ರದೀಪ್‌ಕುಮಾರ್, ಮಂಡ್ಯ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬೀರಪ್ಪ, ಯುವ ಜನತಾದಳ ಅಧ್ಯಕ್ಷ ಶಶೀಧರ್, ತಾ.ಪಂ. ಅಧ್ಯಕ್ಷೆ ರಾಧಮ್ಮ, ಪುರಸಭೆ ಅಧ್ಯಕ್ಷೆ ವಿನುತಾ, ಉಪಾಧ್ಯಕ್ಷೆ ರಾಧಾಮಣಿ, ಜಿ.ಪಂ. ಸದಸ್ಯರಾದ ತಿಮ್ಮೇಗೌಡ, ಶಾಂತಲಾ, ಅನಸೂಯಾ, ಎಪಿಎಂಸಿ ಅಧ್ಯಕ್ಷ ಸ್ವಾಮಿಗೌಡ, ಮುಖಂಡರಾದ ಕನಗನಹಳ್ಳಿ ರಾಮಕೃಷ್ಣ, ಕೆಂಪೇಗೌಡ, ದುದ್ದ ಸಿದ್ದರಾಮಯ್ಯ, ಭೂವಣ್ಣ, ಸಿ.ಕೆ. ದೇವೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT