ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಬೃಹತ್ ವನಮಹೋತ್ಸವ

Last Updated 23 ಜುಲೈ 2017, 10:31 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಾದ್ಯಂತ ಶನಿವಾರ ಶಾಲಾವನ, ಪ್ರಗತಿವನ, ದೇವರಕಾಡು–  ಹೀಗೆ ಭಿನ್ನ ವಿಭಿನ್ನ ಹೆಸರಿನಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮ, ಗಿಡಗಳನ್ನು ನೆಟ್ಟು ಅವುಗಳ ಮಹತ್ವ ಸಾರುವ ಕಾರ್ಯ ನಡೆಯಿತು. ಇಂತಹ ಪರಿಸರ ರಕ್ಷಣೆಯ ವಿಶಿಷ್ಟ ಕಾರ್ಯಕ್ರಮ ರೂಪಿಸಿದ್ದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ಪ್ರಕೃತಿ ಪ್ರೇಮಿಯಾಗಿ ವನಸಂವರ್ಧನೆಗೆ ಒತ್ತು ನೀಡಿದವರು. ಇದೀಗ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯ ಮಟ್ಟದ ಬೃಹತ್ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶನಿವಾರ ಜಿಲ್ಲೆಯಾದ್ಯಂತ ಈ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಜನಪ್ರತಿನಿಧಿಗಳು, ಮಠಾಧೀಶರು, ಶಿಕ್ಷಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು, ಶಾಲಾ ಕಾಲೇಜು ಆಡಳಿತ ಮಂಡಳಿಗಳು ಈ ಕಾರ್ಯಕ್ಕೆ ಕೈ ಜೋಡಿಸಿದರು.

‘ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ 342 ಕಾರ್ಯಕ್ರಮಗಳನ್ನು ನಡೆಸಲಾಯಿತು. ಇದರಲ್ಲಿ 31,000 ಜನರು ಭಾಗಿಯಾಗಿ 18,000 ಸಸಿಗಳನ್ನು ಹಾಗೂ 2,36,000 ಬೀಜದುಂಡೆಗಳನ್ನು ನಾಟಿ ಮಾಡಿ ಪರಿಸರ ಸಂರಕ್ಷಣೆ ಬಗ್ಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು’ ಎಂದು ಸಂಸ್ಥೆಯ ತುಮಕೂರು ಜಿಲ್ಲಾ ನಿರ್ದೇಶಕ ಬಿ.ವಸಂತ್ ತಿಳಿಸಿದರು.

ನಗರದ ಮರಳೂರು ದಿಣ್ಣೆ ಈದ್ಗಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ರಫೀಕ್ ಅಹಮ್ಮದ್ ಹಾಗೂ ಉಪ ಮೇಯರ್ ಫರ್ಜಾನಾ ಖಾನಂ ಅವರು ಗಿಡ ನೆಡುವುದರ ಮೂಲಕ ಪರಿಸರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತುರುವೇಕೆರೆ ತಾಲ್ಲೂಕಿನ ದಂಡಿನಶಿವರದಲ್ಲಿ ಶಾಸಕ ಎಂ.ಪಿ.ಕೃಷ್ಣಪ್ಪ, ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿಯಲ್ಲಿ  ಗವಿಮಠದ ಚಂದ್ರಶೇಖರ ಸ್ವಾಮೀಜಿ, ತಿಪಟೂರಿನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ್, ಜನಪ್ರತಿನಿಧಿ ಶಾಂತಕುಮಾರ್‌, ಕುಣಿಗಲ್ ತಾಲೂಕಿನ ಕೊಡವತ್ತಿಯಲ್ಲಿ ಸಿದ್ದಗಂಗಾಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಗಿಡಗಳನ್ನು ನೆಟ್ಟರು.

ಹುಲಿಯೂರು ದುರ್ಗ, ಹುಳಿಯಾರು ಮತ್ತಿತರ ಕಡೆ ವಿವಿಧ ಇಲಾಖೆಯ ಮುಖ್ಯಸ್ಥರು, ಶಾಲಾ ಮಕ್ಕಳು, ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರು ಗಿಡಗಳನ್ನು ನೆಟ್ಟರು.

ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ
ಕುಣಿಗಲ್: ‘ಪರಿಸರ ಸಂರಕ್ಷಣೆ ಅರಣ್ಯ ಇಲಾಖೆಯ ಕೆಲಸ ಮಾತ್ರವಲ್ಲ. ಪ್ರತಿಯೊಬ್ಬ ಜನಪ್ರತಿನಿಧಿ, ಅಧಿಕಾರಿ, ನಾಗರಿಕನ ಕರ್ತವ್ಯವೂ ಆಗಿದೆ’ ಎಂದು ಶಾಸಕ ಡಿ.ನಾಗರಾಜಯ್ಯ ತಿಳಿಸಿದರು. ಜೆಡಿಎಸ್ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಬಿ.ಎನ್.ಜಗದೀಶ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಯುವಶಕ್ತಿ ವನಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿ ಅಭಿವೃದ್ಧಿಪಡಿಸಲಾಗಿರುವ ಹಳೆಯ ರಾಷ್ಟ್ರೀಯ ಹೆದ್ದಾರಿ 48ರ ಇಕ್ಕೆಲಗಳಲ್ಲಿ 2 ಸಾವಿರ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಅಭಿವೃದ್ಧಿ ನೆಪದಲ್ಲಿ ಮರಗಳನ್ನು ಕಡಿಯಲಾಗಿದೆ. ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಸಸಿಗಳನ್ನು ನೆಡುವುದರ ಜತೆ ಉಳಿಸಿ ಬೆಳೆಸಬೇಕಾಗಿದೆ’ ಎಂದು ತಿಳಿಸಿದರು.

‘ಸಸಿಗಳ ಸಂರಕ್ಷಣೆಗೆ ಟ್ರೀ ಗಾರ್ಡ್‌ಗಳ ಅಗತ್ಯ ಮನಗಂಡ ತಾಲ್ಲೂಕಿನ ಕೈಗಾರಿಕ ಸಂಘದವರು 250 ಟ್ರೀ ಗಾರ್ಡ್‌ಗಳನ್ನು ದಾನವಾಗಿ ನೀಡಿದ್ದಾರೆ. ಶಾಸಕರ ಮತ್ತು ವಿಧಾನ ಪರಿಷತ್ ಸದಸ್ಯರ ಅಭಿವೃದ್ಧಿ ನಿಧಿಯಿಂದ ಮತ್ತಷ್ಟು ಟ್ರೀ ಗಾರ್ಡ್‌ಗಳನ್ನು ಪಡೆಯಲಾಗುವುದು’ ಎಂದರು.

‘ಸಸಿಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ಯುವ ಶಕ್ತಿಗೆ ನೀಡಬೇಕಿದೆ. ಅರಣ್ಯಾಧಿಕಾರಿಗಳು, ಆಸಕ್ತ ಕಾಲೇಜು ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಬೇಕು’ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಬಿ.ಎಂ.ಎಲ್.ಕಾಂತರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹರೀಶ್ ನಾಯಕ್, ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ತಿಮ್ಮಪ್ಪ, ವಲಯ ಅರಣ್ಯಾಧಿಕಾರಿ ರವಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಕ.ಚ.ಕೃಷ್ಣಪ್ಪ, ಮಾಜಿ ಅಧ್ಯಕ್ಷ ದಿನೇಶ್ ಕುಮಾರ್, ಪುರಸಭೆ ಸದಸ್ಯ ಕೆ.ಎಲ್.ಹರೀಶ್, ಮುಖಂಡರಾದ ಡಾ.ಬಿ.ಎನ್.ರವಿ, ಬಿ.ಎನ್.ಜಗದೀಶ್, ಗುರುಪ್ರಸಾದ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT