ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ನಲ್ಲಿ ಇಸ್ರೊಗೆ ಎಚ್‌ಎಂಟಿ ಜಾಗ ಹಸ್ತಾಂತರ

Last Updated 23 ಜುಲೈ 2017, 10:35 IST
ಅಕ್ಷರ ಗಾತ್ರ

ತುಮಕೂರು: ‘ಆಗಸ್ಟ್‌ ತಿಂಗಳ ಕೊನೆಯಲ್ಲಿ ಎಚ್‌ಎಂಟಿ ಕಾರ್ಖಾನೆಯ ಜಾಗವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೊ) ಈ ಪ್ರದೇಶ ಹಸ್ತಾಂತರವಾಗಲಿದೆ’ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು. ಶನಿವಾರ ಮಧ್ಯಾಹ್ನ ಎಚ್ಎಂಟಿ ಕಾರ್ಖಾನೆ ಪ್ರದೇಶ, ಆಡಳಿತ ಕಚೇರಿ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇಸ್ರೊ ಸಂಸ್ಥೆಯು ಕೇಂದ್ರ ಸರ್ಕಾರಕ್ಕೆ ಈಗಾಗಲೇ ₹ 100 ಕೋಟಿ ಪಾವತಿ ಮಾಡಿದ್ದು, ಉಳಿದ ₹ 1,500 ಕೋಟಿ ಮೊತ್ತವನ್ನು ಹಂತ ಹಂತವಾಗಿ ಸರ್ಕಾರಕ್ಕೆ ಪಾವತಿಸಲಿದೆ’ ಎಂದು ಸಂಸದರು ತಿಳಿಸಿದರು.

ಎಚ್‌ಎಂಟಿ ಯುಗಾಂತ್ಯ: ‘ಜಾಗತಿಕ ಪ್ರಸಿದ್ಧಿ ಪಡೆದ ಕೈ ಗಡಿಯಾರ (ವಾಚ್‌) ತಯಾರಿಕಾ ಸಂಸ್ಥೆಯಾದ ಎಚ್‌ಎಂಟಿ ಯುಗ ಅಂತ್ಯವಾಗಿದೆ. ಇನ್ನು ಮುಂದೆ ಅದು ಬರೀ ನೆನಪಾಗಿ ಉಳಿಯಲಿದೆ. ವೈಯಕ್ತಿಕವಾಗಿ ಇದೊಂದು ನನಗೆ ಅತ್ಯಂತ ಭಾವುಕ ಕ್ಷಣವಾಗಿದೆ. ಹೀಗಾಗಿ, ವೀಕ್ಷಣೆಗೆ ಬಂದೆ’ ಎಂದು ನುಡಿದರು.

ಇಲ್ಲಿನ ಎಚ್‌ಎಂಟಿ ಕಾರ್ಖಾನೆಯು ಶ್ರೇಷ್ಠ ದರ್ಜೆಯ ಉತ್ಪನ್ನ ತಯಾರಿಸುತ್ತಿದ್ದರೂ ಜಾಗತಿಕ ಮಾರುಕಟ್ಟೆಯ ಸ್ಪರ್ಧಾತ್ಮಕ ದರ ಪೈಪೋಟಿ ಎದುರು ನಿಲ್ಲಲಾಗಲಿಲ್ಲ. ಕ್ರಮೇಣ ತನ್ನ ಅಸ್ತಿತ್ವ ಕಳೆದುಕೊಂಡು ಮುಚ್ಚಲ್ಪಟ್ಟಿತು ಎಂದು ತಿಳಿಸಿದರು.

ಸುಮಾರು 2,154 ಕಾರ್ಮಿಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಾರ್ಖಾನೆ ಮುಚ್ಚಿದ ನಂತರ ಇಲ್ಲಿಯ ಯಂತ್ರೋಪಕರಣಗಳು, ಪೀಠೋಪಕರಣಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಲಾಗಿದೆ. ಈಗ ಕಾರ್ಖಾನೆಯೂ ಇತಿಹಾಸ ಪುಟ ಸೇರುತ್ತಿದೆ ಎಂದು ಹೇಳಿದರು.

ಎಚ್‌ಎಂಟಿ ಕಾರ್ಖಾನೆಯ ಯೋಜನಾಧಿಕಾರಿ ರಘುರಾಮ್, ಮುಖ್ಯಲೆಕ್ಕಾಧಿಕಾರಿ ಶಿವರಾಜ್, ಕಾರ್ಮಿಕ ಸಂಘದ ಅಧ್ಯಕ್ಷ ಶಂಕರಲಿಂಗಪ್ಪ, ಕಾರ್ಯದರ್ಶಿ ಸತ್ಯನಾರಾಯಣ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಹೇಮಂತ್ ಇದ್ದರು.

ಕಟ್ಟಡ ಬಿಟ್ಟರೆ ಬೇರೇನೂ ಇಲ್ಲ
ಕಿಟಕಿ, ಬಾಗಿಲುಗಳೇ ಇಲ್ಲದ ಕಟ್ಟಡಗಳು, ಆಡಳಿತ ಕಟ್ಟಡದೊಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಯಂತ್ರೋಪಕರಣ, ಪೀಠೋಪಕರಣಗಳ ತ್ಯಾಜ್ಯ. ಕಟ್ಟಡ ಬಿಟ್ಟರೆ ಬೇರೇನೂ ಇಲ್ಲ. ಕಟ್ಟಡದ ಹೊರಮೈಯಲ್ಲಿ ಮಾತ್ರ ಇನ್ನೂ ಅದೇ ಎಚ್‌ಎಂಟಿ ಲಿಮಿಟೆಡ್‌ ಕೈ ಗಡಿಯಾರ ಕಾರ್ಖಾನೆ! ಇದು ಶನಿವಾರ ಸಂಸದರು ಎಚ್‌ಎಂಟಿ ಕಾರ್ಖಾನೆಗೆ ಭೇಟಿ ನೀಡಿದಾಗ ಕಂಡ ನೋಟ.

ಒಂದು ಕಡೆ ವಿಷಾದ ಮತ್ತೊಂದು ಕಡೆ ಹರ್ಷ
‘ಕಾರ್ಖಾನೆ ಮುಚ್ಚಿದ ಬಗ್ಗೆ ಒಂದು ಕಡೆ ವಿಷಾದವಾದರೆ ಮತ್ತೊಂದು ಕಡೆ ಇಸ್ರೊ ಸಂಸ್ಥೆಯು ತನ್ನ ಕೇಂದ್ರವನ್ನು ಈ ಸ್ಥಳದಲ್ಲಿ ಸ್ಥಾಪನೆ ಮಾಡುತ್ತಿರುವುದು ಹರ್ಷ ತಂದಿದೆ. ತುಮಕೂರು ವಿಶ್ವ ಭೂಪಟದಲ್ಲಿ ರಾರಾಜಿಸಲಿದೆ’ ಎಂದು ಸಂಸದರು ಹೇಳಿದರು.

ಅಂಕಿ ಅಂಶಗಳು
₹100ಕೋಟಿ ಇಸ್ರೊ ಸಂಸ್ಥೆ ಈಗ ಪಾವತಿಸಿದ ಮೊತ್ತ

₹1,500 ಕೋಟಿ ಪಾವತಿಸಬೇಕಿರುವ ಮೊತ್ತ

2,154 ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT