ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ‘ಕುಸ್ತಿ’ಯ ನಡುವೆಯೂ ಸಾಧನೆ...

Last Updated 23 ಜುಲೈ 2017, 19:30 IST
ಅಕ್ಷರ ಗಾತ್ರ

ನಮ್ಮ ಕುಟುಂಬಕ್ಕೆ ಕುಸ್ತಿ ಅಪರಿಚಿತವೇನಲ್ಲ. ರಾಜ್ಯ, ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಕುಟುಂಬದ ಮೊದಲ ಪೈಲ್ವಾನನೂ ನಾನಲ್ಲ. ಅಪ್ಪ ದುರ್ಗಪ್ಪ, ದೊಡ್ಡಪ್ಪ ತಳಸಪ್ಪ ಹಲಕುರ್ಕಿ, ಕಾಕಾ ವಿಠ್ಠಲ ಕೆಂಪಣ್ಣವರ, ಅಣ್ಣ ಪ್ರಕಾಶ ಹಲಕುರ್ಕಿ ಹೀಗೆ ಕುಸ್ತಿ ಆಡುವವರ ದೊಡ್ಡ ಪಡೆಯೇ ನಮ್ಮ ಮನೆಯಲ್ಲಿದೆ.

ಆದ್ದರಿಂದ ನನಗೂ ಕುಸ್ತಿಯಲ್ಲಿ ಎತ್ತರದ ಸಾಧನೆ ಮಾಡಬೇಕು ಎನ್ನುವ ಆಸೆ ಬೆಳೆಯಿತು. ಇದಕ್ಕೆ ಪೂರಕವಾದ ವಾತಾವರಣವೂ ಇತ್ತು. ಕುಸ್ತಿ ಆಡುತ್ತಿದ್ದರೆ ಹೊಟ್ಟೆ ತುಂಬುವುದಿಲ್ಲ, ತುತ್ತು ಅನ್ನಕ್ಕಾಗಿ ನಿತ್ಯವೂ ಪರದಾಡಬೇಕಾದ ಸಂಕಷ್ಟ ತಪ್ಪುವುದಿಲ್ಲ ಎನ್ನುವುದು ಚೆನ್ನಾಗಿ ಗೊತ್ತು. ಆದರೂ ಕುಸ್ತಿ ಮೇಲಿನ ಪ್ರೀತಿ ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಲ್ಲುವಂತೆ ಮಾಡುತ್ತಿದೆ. ಗೆಳೆಯರ ಸಹಕಾರ, ಕೋಚ್‌ಗಳ ಬೆಂಬಲ, ಕಷ್ಟದ ನಡು ವೆಯೂ ಪ್ರೋತ್ಸಾಹ ನೀಡುವ ಕುಟುಂ ಬದವರ ನೆರವಿನಿಂದ ಈಗ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿದೆ.

ಕ್ರೀಡಾ ಕುಟುಂಬದ ಹಿನ್ನಲೆ ಇರುವುದರಿಂದ ಐದನೇ ತರಗತಿಯಲ್ಲಿದ್ದಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕುಸ್ತಿ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದೆ.

ಐದನೇ ತರಗತಿಯಲ್ಲಿದ್ದಾಗ ಮೊದಲ ಬಾರಿಗೆ ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಂಡಿದ್ದೆ. ನಂತರದ ವರ್ಷ ನವದೆಹಲಿಯಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ 35 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಲಭಿಸಿತು.

ಮೊದಲ ಪದಕದ ಖುಷಿ ಮತ್ತಷ್ಟು ಸಾಧನೆಗೆ ಪ್ರೇರಣೆಯೂ ಆಯಿತು. ಮೈಸೂರು ದಸರಾ ಕುಸ್ತಿಯಲ್ಲಿ ಮೂರು ಸಲ ಪಾಲ್ಗೊಂಡಿದ್ದೆ. ಅಲ್ಲಿ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಜಯಿಸಿದ್ದೆ. ಒಟ್ಟು ಹನ್ನೊಂದು ಸಲ ವಿವಿಧ ರಾಷ್ಟ್ರೀಯ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದೆ. ಮೂರು ಸಲ ಪದಕ ಕೂಡ ಜಯಿಸಿದ್ದೇನೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಸನಾಳದ ಬಳಿ ಆಗಾಗ ದೊಡ್ಡಮಟ್ಟದ ಕುಸ್ತಿ ಸ್ಪರ್ಧೆಗಳು ನಡೆಯುತ್ತವೆ. ಹೊರ ರಾಜ್ಯಗಳ ಪೈಲ್ವಾನರೂ ಪಾಲ್ಗೊಂಡಿರುತ್ತಾರೆ. ಆ ಸ್ಪರ್ಧೆಯಲ್ಲಿ ಬಲಿಷ್ಠ ಕುಸ್ತಿ ಪಟುವನ್ನು ಸೋಲಿಸಿದ್ದಕ್ಕೆ ಬೆಳ್ಳಿಗದೆ ಕೊಟ್ಟು ಬಾಲಕೇಸರಿ ಗೌರವ ನೀಡಿದ್ದರು.

ಹಿರಿಯರ ನೆರವು

ವಿಶ್ವ ಕೂಟಕ್ಕೆ ಸೋನೆಪತ್‌ನಲ್ಲಿ ಅಭ್ಯಾಸ ಮಾಡಿದ್ದೇನೆ. ಅನುಭವಿ ಕುಸ್ತಿಗಳಾದ ಯೋಗೀಶ್ವರ ದತ್‌, ನರಸಿಂಗ್ ಪಂಚಮ್‌ ಯಾದವ್‌, ರಾಹುಲ್‌ ಅವಾರೆ, ಸುಶೀಲ್‌ ಕುಮಾರ್ ಉತ್ತಮ ಸಲಹೆಗಳನ್ನು ನೀಡಿದ್ದಾರೆ.

ಒಲಿಂಪಿಕ್ಸ್‌, ಕಾಮನ್‌ವೆಲ್ತ್‌, ಏಷ್ಯನ್‌ ಕ್ರೀಡಾಕೂಟಗಳಲ್ಲಿ ಆಡುವಾಗ ತಾವು ಪ್ರಯೋಗಿಸುವ ಪಟ್ಟುಗಳನ್ನು ಅವರು ನನಗೆ ಹೇಳಿಕೊಟ್ಟಿದ್ದಾರೆ.

ಸೋನೆಪತ್‌ನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಪ್ರತಿ ಶನಿವಾರ ಯಾರ ನೆರವಿಲ್ಲದೇ ಕೋಚ್‌ ನೆರವಿಲ್ಲದೆ ಅಭ್ಯಾಸ ಮಾಡಬೇಕು. ಆಗ ಅನುಭವಿ ಕುಸ್ತಿಗಳ ಜೊತೆ ಚರ್ಚಿಸಲು ಅವಕಾಶ ಸಿಗುತ್ತದೆ.

ಸಾಧನೆಯಿದ್ದರೂ ತಪ್ಪದ ಸಂಕಷ್ಟ

ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ಗೆದ್ದರೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ಕೊಡುತ್ತದೆ ಎಂದು ನಂಬಿಕೊಂಡಿದ್ದೆ. ನಮ್ಮ ಭಾಗದ ಜನಪ್ರತಿನಿಧಿಗಳು ಬೆಂಬಲಿಸುತ್ತಾರೆ ಎಂದು ಭಾವಿಸಿದ್ದೆ. ಯಾರೂ ಸ್ಪಂದಿಸಿಲ್ಲ. ಅನೇಕ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಸಾಲ ಮಾಡಿ ಹೋಗಿದ್ದೇನೆ.

ಇಲ್ಲೊಂದು ಘಟನೆಯನ್ನು ನಿಮ್ಮೊಡನೆ ಹಂಚಿಕೊಳ್ಳಬೇಕಿದೆ. ವಿಶ್ವ ಶಾಲಾ ಕೂಟದಲ್ಲಿ ಪಾಲ್ಗೊಳ್ಳಲು ಹೋದ ವರ್ಷದ ಜುಲೈನಲ್ಲಿ ಟರ್ಕಿಯ ಟ್ರ್ಯಾಬನ್‌ಗೆ ಹೋಗಿದ್ದೆ. ಆ ದೇಶದ ಕೆಲ ಭಾಗಗಳಲ್ಲಿ ಆಗ ಕ್ಷಿಪ್ರಕ್ರಾಂತಿ ನಡೆದಿತ್ತು. ಜೀವ ಭಯದ ನಡುವೆಯೂ ಕೂಟದಲ್ಲಿ ಪಾಲ್ಗೊಂಡಿದ್ದೆವು.

ವಿದೇಶಕ್ಕೆ ಹೋದಾಗ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಾವು ಹಲವಾರು ಕಷ್ಟಗಳನ್ನು ಎದುರಿಸಿ ಪದಕ ಗೆದ್ದುಬಂದರೂ ನಮ್ಮನ್ನು ಯಾರೂ ಗುರುತಿಸುವುದಿಲ್ಲ. ಅಂಟ್ಯಾಲಕ್ಕೆ ಹೋಗಲು ಮಾಡಿದ ಲಕ್ಷಾಂತರ ರೂಪಾಯಿ ಸಾಲವನ್ನು ಇನ್ನೂ ತೀರಿಸಿಲ್ಲ. ಸಾಲವನ್ನು ಮರಳಿ ನೀಡಲು ನನ್ನಲ್ಲಿ ಸಾಮರ್ಥ್ಯ ಇಲ್ಲ. ಆದ್ದರಿಂದ ಸಾಲ ಕೊಡಲು ಯಾರೂ ಮುಂದೆ ಬರುವುದಿಲ್ಲ.

ಲಕ್ಷಾಂತರ ರೂಪಾಯಿ ಆಸ್ತಿ ಮಾಡಬೇಕು ಎನ್ನುವ ಆಸೆ ನನಗಿಲ್ಲ. ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಅಗತ್ಯ ಇರುವಷ್ಟು ಹಣ ಕೊಟ್ಟರೆ ಸಾಕು ಕುಸ್ತಿಯಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ.

ಮುಂದೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಆಸೆ ಹೊಂದಿದ್ದೇನೆ. ಪ್ರೋತ್ಸಾಹವೇ ಇಲ್ಲವಾದರೆ ಎತ್ತರದ ಸಾಧನೆಯ ಕನಸು ಕಾಣುವುದಾದರೂ ಏಕೆ?

**

ವಿಶ್ವ ಕುಸ್ತಿಗೆ ಬೇವಿನಮಟ್ಟಿಯ ಅರ್ಜುನ

ಆಗಸ್ಟ್‌ 1ರಿಂದ ಹತ್ತು ದಿನ ಫಿನ್ಲೆಂಡ್‌ನಲ್ಲಿ ಆಯೋಜನೆಯಾಗಿರುವ ವಿಶ್ವ ಕಿರಿಯರ ಕುಸ್ತಿ ಚಾಂಪಿಯನ್‌ಷಿಪ್‌ಗೆ ಬಾಗಲಕೋಟೆ ಜಿಲ್ಲೆಯ ಅರ್ಜುನ ಹಲಕುರ್ಕಿ ಆಯ್ಕೆಯಾಗಿದ್ದಾರೆ.

ವಿಶ್ವ ಕೂಟಕ್ಕೆ ಭಾರತದ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಸಲುವಾಗಿ ನಡೆದ ಟ್ರಯಲ್ಸ್‌ನಲ್ಲಿ ಕರ್ನಾಟಕ ಅರ್ಜುನ, ಬಾಹುಬಲಿ ಶಿರಹಟ್ಟಿ, ಪ್ರಶಾಂತಗೌಡ ಹಾಗೂ ಫಾಲಾಕ್ಷಗೌಡ ಪಾಲ್ಗೊಂಡಿದ್ದರು. ಅರ್ಜುನ ದಾವಣಗೆರೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಸತಿ ನಿಲಯದಲ್ಲಿ ಕುಸ್ತಿ ಕೋಚ್‌ ಶಿವಾನಂದ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

ಎರಡನೇ ಕೂಟ: ವಿಶ್ವ ಜೂನಿಯರ್‌ ಕೂಟಕ್ಕೆ ಅರ್ಜುನ ಆಯ್ಕೆಯಾಗಿರುವುದು ಎರಡನೇ ಬಾರಿ. ಕಳೆದ ವರ್ಷ ಫ್ರಾನ್ಸ್‌ನಲ್ಲಿ ನಡೆದಿದ್ದ ಕೂಟದಲ್ಲಿ ಭಾಗವಹಿಸಿದ್ದರು. ಟರ್ಕಿಯ ಅಂಟಾಲ್ಯದಲ್ಲಿ ನಡೆದಿದ್ದ ವಿಶ್ವ ಶಾಲಾ ಕ್ರೀಡಾಕೂಟದಲ್ಲಿ ಬೆಳ್ಳಿ ಜಯಿಸಿದ್ದರು. ಫಿಲಿಪ್ಪೀನ್ಸ್‌ನಲ್ಲಿ ಜರುಗಿದ್ದ ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು.

**

‘ಶ್ರಮಕ್ಕೆ ಲಭಿಸಿದ ಗೌರವ’
ಐದನೇ ತರಗತಿಯಲ್ಲಿ ಇದ್ದಾಗ ಅರ್ಜುನ ನನ್ನ ಬಳಿ ತರಬೇತಿಗೆ ಬಂದ. ಆಗಲೇ ದೈಹಿಕವಾಗಿ ಬಲಿಷ್ಠನಾಗಿದ್ದ. ಕೆಲವೇ ತಿಂಗಳಲ್ಲಿ ಪಟ್ಟುಗಳನ್ನು ಕಲಿತ. ಬಡತನದ ಬೇಗೆಯ ನಡುವೆಯೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಸಾಕಷ್ಟು ಪೈಪೋಟಿ ಇರುವ ವಿಶ್ವ ಕ್ರೀಡಾಕೂಟದಲ್ಲಿ ಉತ್ತಮ ಸಾಮರ್ಥ್ಯ ನೀಡಲಿ.
–ರಾಜು ಕೊಳಕೆ
ಅರ್ಜುನ ಅವರ ಬಾಲ್ಯದ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT