ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೂಪಾಯಿಗೆ ಸಿನಿಮಾ ದೋಸೆಗೆ ನಾಲ್ಕಾಣೆ’

Last Updated 23 ಜುಲೈ 2017, 19:30 IST
ಅಕ್ಷರ ಗಾತ್ರ

ನಾನು ಬೆಂಗಳೂರಿನವಳೇ. ಆದರೆ ಹುಟ್ಟಿದ್ದು ಮೈಸೂರಿನಲ್ಲಿ. ನನ್ನಪ್ಪ ಎಲೆಕ್ಟ್ರಿಸಿಟಿ ಬೋರ್ಡ್‌ನಲ್ಲಿ ಕೆಲಸದಲ್ಲಿದ್ದರು. ನಂತರ ಶಿವನಸಮುದ್ರಕ್ಕೆ ವರ್ಗವಾಯಿತು. ಅಲ್ಲಿಯೇ ನಾನು ಶಿಶುವಿಹಾರದಿಂದ ಮೂರನೇ ತರಗತಿಯವರೆಗೆ ಓದಿದೆ. ನಂತರ ಅಪ್ಪನಿಗೆ ಬೆಂಗಳೂರಿಗೆ ವರ್ಗವಾಯಿತು. ಚಾಮರಾಜಪೇಟೆಯಲ್ಲಿ ನಮ್ಮ ಮನೆ ಇತ್ತು. ಅಲ್ಲಿನ ಮಾಡೆಲ್‌ ಸ್ಕೂಲ್‌ನಲ್ಲಿ ಏಳನೇ ತರಗತಿಯವರೆಗೆ ಓದಿದೆ. ನಂತರ ಜಯನಗರದಲ್ಲಿ ಮನೆ ಕಟ್ಟಿ ಅಲ್ಲಿಗೆ ಹೋದೆವು. ಅಲ್ಲಿ 8ನೇ ತರಗತಿಗೆ ರಾಣಿ ಸರಳಾದೇವಿ ಸ್ಕೂಲ್‌ಗೆ ಹೋದೆ. ವಿಜಯಾ ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ ಬಿಎಸ್ಸಿ ಆನರ್ಸ್‌ಗೆ ಸೆಂಟ್ರಲ್‌ ಕಾಲೇಜಿಗೆ ಸೇರಿದೆ. ಅಲ್ಲಿಯೇ ಪ್ರಾಣಿಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದೆ.

ಸೆಂಟ್ರಲ್‌ ಕಾಲೇಜಿನ ದಿನಗಳು ಅತ್ಯಂತ ಖುಷಿಕೊಟ್ಟ ದಿನಗಳು. ಜಯನಗರದಿಂದ ವಿಧಾನಸೌಧಕ್ಕೆ ಟ್ರೇಲರ್‌ ಬಸ್‌ ಸಂಚರಿಸುತ್ತಿತ್ತು. ಆ ಬಸ್ಸಿನಲ್ಲಿ ಕೆ.ಆರ್‌. ವೃತ್ತದ ಬಳಿ ಇಳಿದು ಸೆಂಟ್ರಲ್‌ ಕಾಲೇಜಿಗೆ ಹೋಗುತ್ತಿದ್ದೆ. ಸಂಜೆ ನಾಲ್ಕು ಗಂಟೆಗೇ ಮಳೆ ಸುರಿಯುತ್ತಿತ್ತು. ಆ ಮಳೆಗೆ ಜನತಾ ಬಜಾರ್‌ವರೆಗೂ ನಡೆದು ಹೋಗಿ ಬಸ್‌ ಹಿಡಿಯುತ್ತಿದ್ದೆವು. ಮಳೆಯಲ್ಲಿ ನೆನೆದರೂ ಖುಷಿಪಡುತ್ತಿದ್ದೆವು. ಕಾಲೇಜು ಬಿಟ್ಟ ಮೇಲೆ ಬೋಂಡಾ ತಿನ್ನಲು ಮೆಜೆಸ್ಟಿಕ್‌ ಬಳಿಯ ಮಲಬಾರ್‌ ಹೋಟೇಲಿಗೆ ಹೋಗುತ್ತಿದ್ದೆವು. ಮಿಕ್ಕಂತೆ ನಮಗೆಲ್ಲ ಆಗ ಬಸ್‌ನ ಅವಶ್ಯಕತೆಯೇ ಇರಲಿಲ್ಲ. ಬೈಕ್‌, ಸ್ಕೂಟರ್‌ಗಳು ಅಪರೂಪವಾಗಿತ್ತು. ಹೆಣ್ಣುಮಕ್ಕಳು ವಾಹನ ಚಲಾಯಿಸುತ್ತಿರಲಿಲ್ಲ.

ಎಂಎಸ್ಸಿ ಮುಗಿಯುತ್ತಿದ್ದಂತೆ ಮೈಸೂರಿನ ಕೆ.ಆರ್‌.ಪೇಟೆಯ ಕಾಲೇಜಿನಲ್ಲಿ ಕೆಲಸ ಸಿಕ್ಕಿತು. ಅಲ್ಲಿ ಎರಡು ವರ್ಷ ಉಪನ್ಯಾಸಕಿಯಾಗಿ ಕೆಲಸ ಮಾಡಿದೆ. 1973ರಲ್ಲಿ ಮಲ್ಲೇಶ್ವರದ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜು ಆರಂಭಗೊಂಡಿತ್ತು. ಇಲ್ಲಿಗೆ ಬಂದು ಸೇರಿಕೊಂಡೆ. 1978ರಲ್ಲಿ, ಕಿರಿಯ ವಯಸ್ಸಿಗೇ ಪ್ರಾಂಶುಪಾಲರ ಹುದ್ದೆಗೆ ಆಯ್ಕೆಗೊಂಡೆ. 2007ರಲ್ಲಿ ನಿವೃತ್ತಿ ಹೊಂದುತ್ತಿದ್ದಂತೆ ಕಾಲೇಜಿನ ನಿರ್ದೇಶಕಿಯಾಗಿ ನೇಮಕಗೊಂಡೆ. ಹೀಗೆ 44 ವರ್ಷಗಳಿಂದ ಈ ಕಾಲೇಜಿನ ಜೊತೆ ನಿರಂತರ ಸಂಬಂಧ ಹೊಂದಿದ್ದೇನೆ.

ಬಾಲ್ಯದಲ್ಲಿಯೇ ನನಗೆ ಕರ್ನಾಟಕ ಸಂಗೀತದಲ್ಲಿ ಆಸಕ್ತಿ ಇತ್ತು. ವೀಣೆ ನುಡಿಸುತ್ತಿದ್ದೆ. ಕಾಲೇಜಿನಲ್ಲೂ ಒಂದೆಡರು ಬಾರಿ ಕಾರ್ಯಕ್ರಮ ನೀಡಿದ್ದೆ. ಚಾಮರಾಜಪೇಟೆಯಲ್ಲಿದ್ದಾಗ ಶ್ರೀರಾಮ ನವಮಿ ಸಂಗೀತೋತ್ಸವಕ್ಕೆ ತಪ್ಪದೇ ಹೋಗುತ್ತಿದ್ದೆ. ಜಯನಗರದಲ್ಲಿ ಮನೆ ಮಾಡಿದ ನಂತರ ಸಂಗೀತೋತ್ಸವಕ್ಕೆ ಹೋಗಲು ಕಷ್ಟವಾಗುತ್ತಿತ್ತು. ಕೆಲಸಕ್ಕೆ ಸೇರಿದ ಮೇಲೆ ಮತ್ತೆ ಸಂಗೀತ ಕಾರ್ಯಕ್ರಮಗಳಿಗೆ ಹೋಗಲು ಶುರು ಮಾಡಿದ್ದೆ. ವೃತ್ತಿಯ ಕಾರಣದಿಂದ ಸಂಗೀತ ಮುಂದುವರಿಸಲಿಲ್ಲ. ಆದರೆ ಈಗಲೂ ವೀಣೆ ನುಡಿಸುತ್ತೇನೆ.

(ಪತಿ ಕೇಶವ್‌, ಪುತ್ರ ರಾಘವೇಂದ್ರ, ಸೊಸೆ ಶ್ರುತಿ ಜೊತೆ)

ಆಗಿನ ಬೆಂಗಳೂರು ನೆನ‍ಪಿಸಿಕೊಂಡರೆ ‘ಹೀಗೆಲ್ಲ ಆಗೋಯ್ತಲ್ಲ!’ಎಂದು ಬೇಸರವಾಗುತ್ತದೆ. ಆಗೆಲ್ಲ ಏಪ್ರಿಲ್‌ ತಿಂಗಳ ಮಧ್ಯದಲ್ಲಿಯೇ ಜೋರಾಗಿ ಮಳೆ ಸುರಿಯುತ್ತಿತ್ತು. ಕೋಟೆ ಮೈದಾನದಲ್ಲಿ ಹಾಕಿರುತ್ತಿದ್ದ ಶ್ರೀರಾಮ ನವಮಿ ಸಂಗೀತೋತ್ಸವದ ಪೆಂಡಾಲ್‌ ಮಳೆಗೆ ಬಿದ್ದು ಹೋಗುತ್ತಿತ್ತು. ಗುಡುಗು, ಮಿಂಚು ಸಹಿತ ಮಳೆ ಸುರಿಯುತ್ತಿತ್ತು. ಈಗ ಗುಡುಗು, ಮಿಂಚು ಕಾಣಬೇಕಿದ್ದರೆ ಸಿನಿಮಾ ನೋಡಬೇಕಷ್ಟೇ.

1973ರಿಂದ ಇಲ್ಲಿಯವರೆಗೆ ಜಯನಗರದಿಂದ ಮಲ್ಲೇಶ್ವರಕ್ಕೆ ಪ್ರತಿದಿನ ಪ್ರಯಾಣಿಸುತ್ತಿದ್ದೇನೆ. ಈಗ ಎಷ್ಟೊಂದು ಬದಲಾವಣೆಯಾಗಿದೆ! ಮನೆಯಿಂದ ಹೊರಗೆ ಬರುವುದೇ ಬೇಡ ಎನಿಸುತ್ತದೆ. ಆದರೆ, ಆಗ ಖಾಲಿ ಖಾಲಿ ರಸ್ತೆಗಳಿದ್ದವು. ಕೆಲವೇ ಕಟ್ಟಡಗಳಿದ್ದವು, ಕೆರೆಗಳಿದ್ದವು, ವಿಶಾಲ ಮೈದಾನಗಳಿದ್ದವು. ಯಾರ ಮನೆಯಲ್ಲೂ ಫ್ಯಾನ್‌ ಇರುತ್ತಿರಲಿಲ್ಲ. ಬೇಸಿಗೆಯಲ್ಲಿ ಸ್ವಲ್ಪ ಸೆಕೆ ಅನ್ನಿಸಿದರೆ ಬಾಗಿಲು ತೆರೆದಿಟ್ಟು ಮಲಗುತ್ತಿದ್ದೆವು. ಸುಖನಿದ್ರೆ ಬರುತ್ತಿತ್ತು. ಈಗ ರಾತ್ರಿಯೆಲ್ಲ ಮೈಮೇಲೆ ವಾಹನ ಹೋದಂತಾಗುತ್ತದೆ. ಬೀದಿಯಲ್ಲಿ ನಿಲ್ಲುವ ಖುಷಿ ಈಗ ಇಲ್ಲ. ರಸ್ತೆಯಲ್ಲೇ ಜನ ವಾಕಿಂಗ್‌ ಮಾಡುತ್ತಿದ್ದರು.

ಈಗ ಬೆಳಿಗ್ಗೆಯೂ ರಸ್ತೆಯಲ್ಲಿ ಓಡಾಡುವುದು ಅಸಾಧ್ಯ. ಶಬ್ದ ಮಾಲಿನ್ಯ ದೊಡ್ಡ ಶಾಪವಾಗಿದೆ.

ನಾನು ನೋಡಿದಂತೆ ತ್ಯಾಗರಾಜನಗರ ಮಾತ್ರ ಹಳೆಯ ಬೆಂಗಳೂರಿನ ಸ್ವರೂಪವನ್ನು ಸ್ವಲ್ಪ ಮಟ್ಟಿಗೆ ಉಳಿಸಿಕೊಂಡಿದೆ. ಅಲ್ಲಿ ಇನ್ನೂ ಕೆಲವು ಹಳೆಯ ಮನೆಗಳು ಇವೆ. ಬಸವನಗುಡಿಯ ಕೆಲವು ಏರಿಯಾಗಳು ಇನ್ನೂ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿವೆ. ಜಯನಗರ ಮೂರು ಮತ್ತು ನಾಲ್ಕನೇ ಬ್ಲಾಕ್‌ ಈ ರೀತಿ ಬದಲಾಗುತ್ತದೆ ಎಂದುಕೊಂಡೇ ಇರಲಿಲ್ಲ. ದಶಕಗಳಿಂದ ಇಲ್ಲಿ ವಾಸವಾಗಿದ್ದ ಜನ ಮನೆ ಮಾರಿ ಬೇರೆಡೆ ಹೋಗುತ್ತಿದ್ದಾರೆ. ಜನಜಂಗುಳಿ, ಶಬ್ದ ಮಾಲಿನ್ಯದಿಂದಾಗಿ ಅಲ್ಲಿ ವಾಸ ಮಾಡುದಂಥ ಸ್ಥಿತಿ ನಿರ್ಮಾಣವಾಗಿದೆ.

ಜಯನಗರ ಸೌತ್‌ಎಂಡ್‌ ವೃತ್ತದಿಂದ 8ನೇ ಬ್ಲಾಕ್‌ನವರೆಗೆ ಹೋಗುವ ರಸ್ತೆಯನ್ನು ಹಿಂದೆ ನಂದಾ ಟಾಕೀಸ್‌ ರಸ್ತೆ ಎಂದು ಕರೆಯುತ್ತಿದ್ದರು. ಆಗ ಪಾಲಿಕೆ ಆಯುಕ್ತರಾಗಿದ್ದ ಲಕ್ಷ್ಮಣರಾವ್‌ ಅವರು ಅಲ್ಲೊಂದು ಗುಲಾಬಿ ತೋಟ ನಿರ್ಮಿಸಿದ್ದರು. ನಂತರ ಆ ತೋಟ ನಿರ್ವಹಣೆ ಇಲ್ಲದೇ ಹಾಳಾಯಿತು. ಈಗ ಆ ಜಾಗವನ್ನು ಮೆಟ್ರೊ ಸೇತುವೆ ನುಂಗಿ ಹಾಕಿದೆ.

ಆಗ ಯಾರ ಮನೆಯಲ್ಲೂ ಫಿಲ್ಟರ್‌, ಅಕ್ವಾಗಾರ್ಡ್‌ ನೀರು ಬಳಸುತ್ತಿರಲಿಲ್ಲ. ನಲ್ಲಿಯಲ್ಲಿ ಬರುತ್ತಿದ್ದ ನೀರನ್ನು ನೇರವಾಗಿ ಕುಡಿಯುತ್ತಿದ್ದೆವು. ಫ್ರಿಡ್ಜ್‌ ಬಳಸುತ್ತಿರಲಿಲ್ಲ. ಪ್ರತಿದಿನ ತಾಜಾ ತರಕಾರಿ ತಂದು ಬಳಸುತ್ತಿದ್ದೆವು. ತರಕಾರಿಗೆಂದು ಮಾರುಕಟ್ಟೆಗೆ ಹೋಗಲು ಸಂಭ್ರಮಪಡುತ್ತಿದ್ದೆವು. ಜಯನಗರದಲ್ಲಿ ತಾಯಪ್ಪನ ಹಳ್ಳ ಅಂತ ಬೃಹತ್‌ ಕೆರೆ ಇತ್ತು. ಈಗ ಅದರ ಗುರುತೂ ಸಿಗುತ್ತಿಲ್ಲ. ಆ ಜಾಗದಲ್ಲಿ ಅಪಾರ್ಟ್‌ಮೆಂಟ್‌ ತಲೆಯೆತ್ತಿದೆ.

ಭಾರತೀಯ ವಿಜ್ಞಾನ ಸಂಸ್ಥೆಯಿಂದ ಮಲ್ಲೇಶ್ವರದ 18ನೇ ಕ್ರಾಸ್‌ವರೆಗೂ ಸಂಜೆ ಐದು ಗಂಟೆಯ ನಂತರ ಜನ ಸಂಚಾರವೇ ಇರುತ್ತಿರಲಿಲ್ಲ.   ಹಾಗಾಗಿ ನಾಲ್ಕೂವರೆಗೆಲ್ಲ ಕಾಲೇಜು ಬಿಡುತ್ತಿತ್ತು. ಜಯನಗರದಿಂದ ಮಲ್ಲೇಶ್ವರ ತಲುಪಲು ಅರ್ಧ ಗಂಟೆ ಸಾಕಾಗುತ್ತಿತ್ತು. ಭ್ರಷ್ಟಾಚಾರ ಎಂಬ ಪದ ಕೇಳಿಯೇ ಇರಲಿಲ್ಲ. ಮುಖ್ಯಮಂತ್ರಿ, ಕುಲಪತಿಗಳನ್ನು ಕಂಡರೆ ವಿದ್ಯಾರ್ಥಿಗಳು ಮಾತ್ರವಲ್ಲ ಜನರೂ ಹೆದರುತ್ತಿದ್ದರು. ಹೆಣ್ಣುಮಕ್ಕಳು ರಾತ್ರಿ ಹತ್ತು ಗಂಟೆಗೆಲ್ಲ ಹೊರಗಿದ್ದರೂ ಮನೆಯವರಿಗೆ ಭಯವೇ ಆಗುತ್ತಿರಲಿಲ್ಲ. ಸುರಕ್ಷಿತವಾಗಿ ಮನೆ ಸೇರುತ್ತಿದ್ದರು. ಈಗಿನ ಪೋಷಕರಿಗೆ ಇರುವ ಆತಂಕ ಆಗಿನವರಿಗೆ ಇರಲಿಲ್ಲ.

ನಾನು ಕಂಡ ವಿದ್ಯಾರ್ಥಿಗಳ ಸಂಘಟನೆ ಬಗ್ಗೆ ಹೇಳಲೇಬೇಕು. ಆಗ ವಿದ್ಯಾರ್ಥಿ ಸಂಘಟನೆ ಎಷ್ಟು ಬಲಿಷ್ಠವಾಗಿತ್ತು ಎಂಬುದಕ್ಕೆ ಆಗ ನಡೆಯುತ್ತಿದ್ದ ವಿದ್ಯಾರ್ಥಿಗಳ ಮುಷ್ಕರಗಳೇ ಸಾಕ್ಷಿ. 1980ರಲ್ಲಿ ಜಪಾನ್‌ನಲ್ಲಿ ನಡೆಯುತ್ತಿದ್ದ ‘ಜಪಾನ್‌ ಎಕ್ಸ್‌ಪೋ’ಗೆ ಹೋಗಲು ಸೆಂಟ್ರಲ್‌ ಕಾಲೇಜಿನಿಂದ ಕೆಲವು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಗೋಲ್‌ಮಾಲ್‌ ನಡೆದಿದೆ ಎಂದು ವಿದ್ಯಾರ್ಥಿ ಸಂಘ ನಡೆಸಿದ ಮುಷ್ಕರ ವಿಕೋಪಕ್ಕೆ ಹೋಗಿತ್ತು. ದೊಣ್ಣೆ ಹಿಡಿದು ಪ್ರಯೋಗಾಲಯ ಪ್ರವೇಶಿಸಿದ ವಿದ್ಯಾರ್ಥಿಗಳು ಮೈಕ್ರೋಸ್ಕೋಪ್‌ ಸೇರಿದಂತೆ ಅನೇಕ ಉಪಕರಣಗಳನ್ನು ಪುಡಿಗಟ್ಟಿದ್ದರು. ಬೆಂಗಳೂರಿನಲ್ಲಿ ನಡೆದ ಮರೆಯಲಾಗದ ವಿದ್ಯಾರ್ಥಿ ಮುಷ್ಕರ ಅದು. ನಂತರದ ದಶಕಗಳಲ್ಲಿ ವಿದ್ಯಾರ್ಥಿ ಸಂಘಗಳಿಗೆ ರಾಜಕೀಯ ಪಕ್ಷಗಳು ಹಣ ನೀಡಲು ಶುರು ಮಾಡಿದವು. ವಿದ್ಯಾರ್ಥಿಗಳಲ್ಲಿಯೇ ಗುಂಪುಗಳಾಗಿ ಅವರ ಮಧ್ಯೆಯೇ ಘರ್ಷಣೆಗೆ ಶುರುವಾಗಿತ್ತು. ವಿದ್ಯಾರ್ಥಿ ಸಂಘಟನೆಗಳು ಪಕ್ಷಗಳ ಜೊತೆ ಗುರುತಿಸಿಕೊಂಡ ನಂತರ ನೈಜ ಕಾರಣಗಳಿಗಾಗಿ ಮುಷ್ಕರ ನಡೆಸುವ ಪರಂಪರೆ ನಿಂತೇಹೋಯಿತು.

**

ಪರಿಚಯ
ಹೆಸರು: ಟಿ.ಎಲ್‌ ಶಾಂತಾ, ಮಹಾರಾಣಿ ಅಮ್ಮಣ್ಣಿ ಮಹಿಳಾ ಕಾಲೇಜಿನ ನಿರ್ದೇಶಕಿ
ಜನನ: ಮಾರ್ಚ್‌ 13, 1949
ಮನೆ: ಜಯನಗರ
ಕುಟುಂಬ: ಪತಿ ಬಿ.ಎನ್‌ ಕೇಶವ (ವಕೀಲರು), ಮಗ ರಾಘವೇಂದ್ರ (ಎಂಜಿನಿಯರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT