ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಿಯ ಕೈರುಚಿ ನೆನಪಿಸುವ ‘ಹಳ್ಳಿ ನೆನಪು’

Last Updated 23 ಜುಲೈ 2017, 19:30 IST
ಅಕ್ಷರ ಗಾತ್ರ

ಮಾಲ್‌ಗಳಲ್ಲಿ ಸಿಗುವ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಪಿಜ್ಜಾ, ಬರ್ಗರ್‌, ಸ್ಯಾಂಡ್‌ವಿಚ್‌ ಸೇರಿದಂತೆ ಆಧುನಿಕ ತಿಂಡಿ ತಿನಿಸುಗಳ ಸಾಲೇ ದೊಡ್ಡದಿರುತ್ತದೆ. ಆದರೆ, ಮಾಗಡಿ ರಸ್ತೆಯ ಜಿಟಿ ಮಾಲ್‌ನ ನಾಲ್ಕನೇ ಮಹಡಿಗೆ ಹೋಗುತ್ತಿದ್ದಂತೆ ಅಲ್ಲೊಂದು ಅಪ್ಪಟ ಹಳ್ಳಿ ತಿನಿಸುಗಳ ಹೋಟೆಲ್‌ ಗಮನ ಸೆಳೆಯುತ್ತದೆ. ಆ ಹೋಟೆಲಿನ ಹೆಸರೇ ‘ಹೋಟೆಲ್‌ ಹಳ್ಳಿ ನೆನಪು’. ಹೋಟೆಲು ಆರಂಭವಾಗಿ ಮೂರು ತಿಂಗಳಾಗಿದೆ. ಆದರೆ ಮಾಲ್‌ಗೆ ಕುಟುಂಬ ಸಮೇತರಾಗಿ ಬರುವ ಗ್ರಾಹಕರ ನೆಚ್ಚಿನ ತಾಣವಾಗಿದೆ.

ಈ ಹೋಟೆಲಿನಲ್ಲಿ ಸಿಗುವ ಆಹಾರದ ಪಟ್ಟಿಯಲ್ಲಿ ಅಪ್ಪಟ ಗ್ರಾಮೀಣ ಶೈಲಿಯ ನಾಟಿಕೋಳಿ ಸಾರು, ನೀರುದೋಸೆ, ಒತ್ತು ಶ್ಯಾವಿಗೆ, ಅಕ್ಕಿರೊಟ್ಟಿ, ಗೋಧಿ ರೊಟ್ಟಿ, ಮಟನ್‌ ಕರಿ ಪ್ರಮುಖವಾಗಿದೆ. ಮಾಂಸಾಹಾರಿಗಳ ನೆಚ್ಚಿನ ಚಿಕನ್‌, ಮಟನ್‌ ಬಿರಿಯಾನಿ ಕೂಡಾ ಇಲ್ಲಿ ಸಿಗುತ್ತದೆ.

ಆಹಾರ ಆರ್ಡರ್‌ ನೀಡಿದ ತಕ್ಷಣ ವೆಲ್‌ಕಂ ಡ್ರಿಂಕ್‌ ನೀಡುತ್ತಾರೆ. ವೆಲ್‌ಕಂ ಡ್ರಿಂಕ್‌ ಅಂದ ತಕ್ಷಣ ಬಗೆ ಬಗೆ ಪಾನೀಯ ನೆನಪಾಗುತ್ತಾದೆ. ಆದರೆ ಹಳ್ಳಿ ನೆನಪು ಹೋಟೆಲಿನಲ್ಲಿ ರಸಂ ನೀಡುತ್ತಾರೆ. ಜೀರಿಗೆ, ದನಿಯಾ, ಬೆಳ್ಳುಳ್ಳು, ಶುಂಠಿ ಮಸಾಲೆ ಹಾಕಿದ ರಸಂ ಕುಡಿದರೆ ಶೀತ–ನೆಗಡಿ, ಕೆಮ್ಮು ಇದ್ದವರಿಗೆ ರಿಲೀಫ್‌ ಸಿಗುತ್ತದೆ. ಮಾಂಸಾಹಾರ ಸೇವನೆ ಮಾಡಿದವರಿಗೆ ಜೀರ್ಣಕ್ಕೂ ಸಹಕಾರಿಯಾಗುತ್ತದೆ. ಈ ಉದ್ದೇಶದಿಂದ ರಸಂ ನೀಡುತ್ತೇವೆ. ನಮ್ಮ ಗ್ರಾಹಕರೂ ಇದನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಮಾಲ್‌ನಲ್ಲಿ ಹಳ್ಳಿತಿಂಡಿಗಳನ್ನು ಪರಿಚಯಿಸುವ ಬಗ್ಗೆ ಆರಂಭದಲ್ಲಿ ಭಯವಿತ್ತು. ಆದರೆ, ನಗರದ ಜನ ಹಳ್ಳಿ ಸೊಗಡಿನ ತಾಜಾ ಆಹಾರವನ್ನು ಇಷ್ಟಪಟ್ಟು ಸವಿದಿದ್ದಾರೆ ಎಂದು ಹೋಟೆಲಿನ ವ್ಯವಸ್ಥಾಪಕ ಗಣೇಶ್‌ ಹೇಳುತ್ತಾರೆ.

ತರಾವರಿ ಮೀನಿನ ಖಾದ್ಯ: ಹಳ್ಳಿ ನೆನಪು ಹೋಟೆಲಿನಲ್ಲಿ ತರಾವರಿ ಮೀನಿನ ಖಾದ್ಯ ತಯಾರಿಸುತ್ತಾರೆ. ಸಿಲ್ವರ್‌ಫಿಷ್‌ ಫ್ರೈ, ಸಿಗಡಿ, ಬಾಂಗ್ಡಾ, ಅಂಜಲ್‌ ಫ್ರೈ ಸಿಗುತ್ತದೆ. ಬಾಳೆ ಎಲೆಯಲ್ಲಿ ಮಸಾಲೆ ಹಚ್ಚಿದ ಮೀನನ್ನು ಸುತ್ತಿ ಹಬೆಯಲ್ಲಿ ಬೇಯಿಸಿದ ಮೀನಿನ ಖಾದ್ಯ  ಇವರ ವಿಶೇಷ. ಕೃತಕ ಬಣ್ಣ, ಮಸಾಲೆಪುಡಿಗಳನ್ನು ಬಳಸದೇ ತಯಾರಿಸುವ ಕಾರಣ ಎಲ್ಲ ವಯಸಿನವರಿಗೂ ಇಷ್ಟವಾಗುತ್ತದೆ. ಬಿರಿಯಾನಿಗೆ ಪುದೀನ ಸೊಪ್ಪು ಹೆಚ್ಚು ಬಳಸುತ್ತಾರೆ. ಚಿಕನ್‌, ಫಿಷ್‌ ಫ್ರೈಗಳ ಜೊತೆ ಸಾಸ್‌ ನೀಡುವ ಬದಲು ಪುದೀನ ಚಟ್ನಿ ನೀಡುವುದು ಇಲ್ಲಿನ ವಿಶೇಷಗಳಲ್ಲಿ ಒಂದು.

ಹೋಟೆಲ್‌ನ ಮಾಲೀಕ ರವಿ ನಂದನ್ ದಾಬಸ್‌ಪೇಟೆಯ ಹೆದ್ದಾರಿ ಸಮೀಪ ನಾಲ್ಕು ವರ್ಷಗಳಿಂದ ಹಳ್ಳಿ ನೆನಪು ಹೋಟೆಲ್‌ ನಡೆಸುತ್ತಿದ್ದಾರೆ. ಅಪ್ಪಟ ಹಳ್ಳಿಯ ತಿನಿಸುಗಳಿಂದಲೇ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಆರಂಭಿಸಿದ ಈ ಹೋಟೆಲ್‌ಗೆ ಹಳ್ಳಿಗಳಿಂದಲೂ ಗ್ರಾಹಕರು ಬರುತ್ತಿದ್ದಾರಂತೆ. ಇನ್ನು ಹೆದ್ದಾರಿಯಲ್ಲಿ ಸಂಚರಿಸುವ ಜನರ ಮೆಚ್ಚಿನ ತಾಣವಾಗಿದೆ. ವಾರಾಂತ್ಯಗಳಲ್ಲಿ ಸಾಕಷ್ಟು ಯುವಕರು, ಚಿತ್ರನಟರು ಊಟಕ್ಕೆ ಬರುತ್ತಾರೆ. ಹಾಗಾಗಿ ನಗರದ ಮಾಲ್‌ಗಳಲ್ಲಿ ತಮ್ಮ ರುಚಿ ಹಂಚಬೇಕು ಎಂಬ ಉದ್ದೇಶದಿಂದ ಜಿಟಿ ಮಾಲ್‌ನಲ್ಲಿ ಹೋಟೆಲ್ ಆರಂಭಿಸಿರುವುದಾಗಿ ಅವರು ಹೇಳುತ್ತಾರೆ.

(ರವಿ ನಂದನ್‌)

**

ರೆಸ್ಟೋರೆಂಟ್‌: ಹೋಟೆಲ್‌ ಹಳ್ಳಿಯ ನೆನಪು

ವಿಶೇಷ: ನಾಟಿ ಕೋಳಿ ಸಾರು, ಶಾವಿಗೆ, ಮುದ್ದೆ

ಸ್ಥಳ: ಜಿಟಿ ವರ್ಲ್ಡ್‌ ಮಾಲ್‌, ಮಾಗಡಿ ರಸ್ತೆ, ಪ್ರಸನ್ನ ಚಿತ್ರಮಂದಿರ ಹತ್ತಿರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT