ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲುಗಳಲ್ಲಿ ಕೆಟ್ಟ ಊಟ ಹೊಣೆ ನಿಗದಿ ಮಾಡಿ

Last Updated 23 ಜುಲೈ 2017, 19:30 IST
ಅಕ್ಷರ ಗಾತ್ರ

ರೈಲುಗಳಲ್ಲಿ ಸರಬರಾಜು ಮಾಡುತ್ತಿರುವ ಆಹಾರದ ಗುಣಮಟ್ಟ ಹೇಗಿದೆ ಎಂದು ತಿಂದವರಿಗೆಲ್ಲ ಗೊತ್ತು. ಅದು ಒಂದು ರೀತಿಯ ಕಠಿಣ ಶಿಕ್ಷೆ ಇದ್ದಂತೆ. ಈ ಬಗ್ಗೆ  ರೈಲ್ವೆ ಆಡಳಿತಕ್ಕೆ ದೂರು ಕೊಟ್ಟು ಕೊಟ್ಟು ಪ್ರಯಾಣಿಕರೇ ಸುಸ್ತಾಗಿದ್ದಾರೆ. ಸಂಸತ್ತಿನಲ್ಲಿಯೂ ಅನೇಕ ಸಲ ಚರ್ಚೆಯಾಗಿದೆ.

ಯಥಾಪ್ರಕಾರ ಸರ್ಕಾರದ ಕಡೆಯಿಂದ ‘ನೋಡೋಣ, ಸರಿಪಡಿಸೋಣ, ಕ್ರಮ ಜರುಗಿಸುತ್ತೇವೆ, ಎಚ್ಚರಿಕೆ ಕೊಡುತ್ತೇವೆ’ ಎಂಬ ಉತ್ತರ.  ಮೂರು ದಿನಗಳ ಹಿಂದೆ ಸಂಸತ್ತಿನಲ್ಲಿ    ಮಂಡಿಸಿದ ಮಹಾಲೇಖಪಾಲರ (ಸಿಎಜಿ) ವರದಿ ಕೂಡ, ರೈಲುಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿನ ಆಹಾರದ ಗುಣಮಟ್ಟದ ಮೇಲೆ ಬೆಳಕು ಚೆಲ್ಲಿದೆ. ಇವು ‘ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲ’ ಎಂದು ಕಿಡಿಕಾರಿದೆ.

ಈ ವರದಿ ಸಿದ್ಧಪಡಿಸುವುದಕ್ಕಾಗಿ ಅದು ಕಳೆದ ವರ್ಷದ ಜುಲೈ– ಅಕ್ಟೋಬರ್‌ ಮಧ್ಯೆ 80 ರೈಲುಗಳು ಮತ್ತು 74 ನಿಲ್ದಾಣಗಳಲ್ಲಿ  ಪೂರೈಸುವ ಆಹಾರವನ್ನು ತಪಾಸಣೆಗೆ ಒಳಪಡಿಸಿತ್ತು. ಒಂದು ರೈಲಿನಲ್ಲಿ ಜಿರಳೆ, ಇಲಿಗಳಿದ್ದವು. ಇನ್ನೊಂದು ರೈಲಿನಲ್ಲಿ ಪೂರೈಸಿದ ಕಟ್ಲೆಟ್‌ನಲ್ಲಿ ಮೊಳೆ ಇತ್ತು. ಅದೇನಾದರೂ ಹೊಟ್ಟೆಗೆ ಹೋಗಿದ್ದರೆ ಪ್ರಾಣಾಪಾಯ ಆಗುತ್ತಿತ್ತು. ಅಡುಗೆಗೆ ಶುದ್ಧೀಕರಿಸದ ನೀರು ಬಳಕೆಯಂತೂ ಸಾಮಾನ್ಯವಾಗಿತ್ತು. 

ಊಟ– ತಿಂಡಿ ಸರಬರಾಜು ಸಿಬ್ಬಂದಿಯಲ್ಲೂ ಸ್ವಚ್ಛತೆಯ ಕೊರತೆ ಎದ್ದು ಕಾಣುವಂತಿತ್ತು.  ಇದೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಅದು ನೀಡಿದ ವರದಿಯಲ್ಲಿನ ಟೀಕೆ– ಟಿಪ್ಪಣಿ ಖಾರವಾಗಿದೆ ಎನ್ನುವ ಕಾರಣವೋ ಏನೋ, ರೈಲ್ವೆ ಇಲಾಖೆ  ಕೂಡಲೇ ಸ್ಪಷ್ಟನೆಯನ್ನೂ ಕೊಟ್ಟಿದೆ. ‘ಸಚಿವ ಸುರೇಶ್‌ ಪ್ರಭು ಅವರು ಈಚೆಗೆ ಘೋಷಿಸಿದ ಹೊಸ ಊಟೋಪಚಾರ ನೀತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ; ಅದು ಈ ಎಲ್ಲ ಕೊರತೆಗಳನ್ನು ಸರಿಪಡಿಸಲಿದೆ’ ಎಂದು ಹೇಳಿದೆ.

ಆದರೆ ರೈಲುಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಪೂರೈಸುವ  ಆಹಾರಕ್ಕೆ ಸಂಬಂಧಪಟ್ಟಂತೆ ಅನುಸರಿಸಿದ ಮನಸೋಇಚ್ಛೆ ನೀತಿಯೇ ಈ ಎಲ್ಲ ಅವ್ಯವಸ್ಥೆಗಳಿಗೆ ಕಾರಣ. 2005ರಲ್ಲಿ ರೈಲ್ವೆ ಊಟೋಪಚಾರ ವ್ಯವಸ್ಥೆಯನ್ನು ರೈಲ್ವೆಯ ಅಂಗಸಂಸ್ಥೆಯಾದ ಇಂಡಿಯನ್‌ ರೈಲ್ವೆ ಕೇಟರಿಂಗ್‌ ಅಂಡ್‌ ಟೂರಿಸಂ ಕಾರ್ಪೊರೇಷನ್‌ಗೆ  (ಐಆರ್‌ಸಿಟಿಸಿ) ವಹಿಸಲಾಗಿತ್ತು. ಅದನ್ನು 2010ರಲ್ಲಿ ರದ್ದುಪಡಿಸಿ ಖಾಸಗಿಯವರಿಗೆ ಒಪ್ಪಿಸಲಾಯಿತು.

ಈಗ ಪುನಃ ಐಆರ್‌ಸಿಟಿಸಿಗೆ ಕೊಡಲಾಗಿದೆ. ಈ ರೀತಿಯ ಎಡಬಿಡಂಗಿ ಧೋರಣೆಗಳು ಮತ್ತು ಒಬ್ಬೊಬ್ಬರ ಅಧಿಕಾರಾವಧಿಯಲ್ಲಿ ಒಂದೊಂದು ಬಗೆಯ ಪ್ರಯೋಗಗಳು, ಹಸಿವೆಯಿಂದ ಬಳಲುವ ಅಸಹಾಯಕ   ಪ್ರಯಾಣಿಕರ ಹೊಟ್ಟೆ ಹಾಳುಮಾಡುತ್ತಿವೆ. ಅವರ ಆರೋಗ್ಯವನ್ನು ಅಪಾಯಕ್ಕೆ ಒಡ್ಡುತ್ತಿವೆ. ಆಹಾರದ ಗುಣಮಟ್ಟ ಸರಿ ಇಲ್ಲದಿದ್ದರೆ, ಹೊಸ ನೀತಿ ಪ್ರಕಾರ ರೈಲ್ವೆ ವಲಯ ಮಟ್ಟದ ಅಧಿಕಾರಿಗಳನ್ನು ಹೊಣೆ ಮಾಡುವುದಾಗಿ  ಸಚಿವ ಪ್ರಭು ಹೇಳಿದ್ದರು.

ಆದರೆ ಅದನ್ನು ಹೇಗೆ ನಿರ್ಧರಿಸಲಾಗುತ್ತದೆ, ಅನುಷ್ಠಾನ ಮಾಡಲಾಗುತ್ತದೆ ಎಂಬ ಬಗ್ಗೆ ಈ ನೀತಿಯಲ್ಲಿ ಸ್ಪಷ್ಟನೆ ಇಲ್ಲ. ದುಬಾರಿ ಟೆಂಡರ್‌ ಶುಲ್ಕ ಕೂಡ ಸಾಕಷ್ಟು ಹಾನಿ ಮಾಡುತ್ತದೆ. ಈ ವೆಚ್ಚ ಸರಿದೂಗಿಸುವುದಕ್ಕಾಗಿ ಊಟ ತಿಂಡಿಯ ಪ್ರಮಾಣಕ್ಕೆ ಕತ್ತರಿ ಹಾಕುವ   ಗುತ್ತಿಗೆದಾರರಿದ್ದಾರೆ.  ಈ ಎಲ್ಲ ಓರೆಕೋರೆಗಳನ್ನೂ ಸಿಎಜಿ ಗುರುತಿಸಿದೆ. 

ಆದರೆ ರೈಲು ಪ್ರಯಾಣಿಕರು, ಇಷ್ಟೇ ಅಲ್ಲ; ಇದಕ್ಕಿಂತಲೂ ಹೆಚ್ಚು ಕಷ್ಟ ಅನುಭವಿಸುತ್ತಿದ್ದಾರೆ.   ಮೂರೂ ಹೊತ್ತು ರುಚಿ ಮತ್ತು ವೈವಿಧ್ಯ ಇಲ್ಲದ ಒಂದೇ ಬಗೆಯ ಊಟ– ತಿಂಡಿ, ಬಾಯಿಗೆ ಬಂದ ದರ, ಅಡುಗೆ ಸಿಬ್ಬಂದಿ ಬಟ್ಟೆಬರೆಗಳಲ್ಲಿ ಶುಚಿತ್ವದ ಕೊರತೆ,  ನಿಲ್ದಾಣಗಳಲ್ಲಿ ಯಾವಾಗಲೋ ಮಾಡಿಟ್ಟ ತಣ್ಣನೆಯ ತಿನಿಸಿನ ಸರಬರಾಜುಗಳಿಂದ ರೋಸಿಹೋಗಿದ್ದಾರೆ. ಸಾಮಾನ್ಯ ರೈಲುಗಳಿರಲಿ; ಐಷಾರಾಮಿ ವರ್ಗದ ಮತ್ತು ದುಬಾರಿ ಟಿಕೆಟ್‌ ದರದ ಶತಾಬ್ದಿ, ರಾಜಧಾನಿ ರೈಲುಗಳಲ್ಲೂ ಊಟ– ತಿಂಡಿ  ಚೆನ್ನಾಗಿಲ್ಲ.

ಹೀಗಾಗಿ ಈಗೀಗ ಇಂಟರ್‌ನೆಟ್‌ ಅಥವಾ ಎಸ್‌ಎಂಎಸ್‌ ಮೂಲಕ ಸ್ವಾದಿಷ್ಟವಾದ ತಾಜಾ ಮತ್ತು ಬಿಸಿ ಆಹಾರಕ್ಕೆ ಬೇಡಿಕೆ ಸಲ್ಲಿಸುವ, ನಿರ್ದಿಷ್ಟ ನಿಲ್ದಾಣಗಳಲ್ಲಿ ಪ್ರಯಾಣಿಕರು ಕೂತ ಕಡೆಯೇ ಸರಬರಾಜು ಮಾಡುವ ವ್ಯವಸ್ಥೆ ಬಂದಿದೆ. ಸಾಕಷ್ಟು ಜನಪ್ರಿಯವಾಗಿದೆ. ಹಾಗೆಂದು ರೈಲ್ವೆ ಇಲಾಖೆ ತನ್ನ ಹೊಣೆ ಜಾರಿಸಿಕೊಳ್ಳುವಂತಿಲ್ಲ. ಗುಣಮಟ್ಟದ, ಶುಚಿ– ರುಚಿಯ ತಿಂಡಿ ತಿನಿಸು ಲಭ್ಯವಾಗುವಂತೆ ಮಾಡುವುದು ಅದರ ಹೊಣೆ.

ದಿನಕ್ಕೆ ತಾನು 11.5 ಲಕ್ಷ ಊಟ– ತಿಂಡಿ ಪೂರೈಸುತ್ತಿದ್ದು ಸರಾಸರಿ 24 ದೂರುಗಳು ಮಾತ್ರ ಬರುತ್ತಿವೆ ಎಂದು ಸಮರ್ಥಿಸಿಕೊಂಡರೆ ಏನೂ ಪ್ರಯೋಜನ ಇಲ್ಲ. ಮೇಲ್ದರ್ಜೆ ಬೋಗಿಗಳಲ್ಲಿ  ಪ್ರಯಾಣಿಕರಿಗೆ ಒದಗಿಸುವ ಹೊದಿಕೆ, ಬೆಡ್‌ಶೀಟ್‌ಗಳನ್ನು ನಿಯಮಿತವಾಗಿ  ಒಗೆಯುತ್ತಿಲ್ಲ; ಹಳೆಯದನ್ನೇ ಮತ್ತೆ ಮತ್ತೆ ಕೊಡಲಾಗುತ್ತಿದೆ ಎಂಬ ಸತ್ಯವನ್ನೂ ಸಿಎಜಿ ಬಹಿರಂಗಪಡಿಸಿದೆ. ಇದನ್ನೆಲ್ಲ ನೋಡಿದರೆ ರೈಲ್ವೆಗೆ ಅಂಟಿಕೊಂಡ ರೋಗಕ್ಕೆ ದೊಡ್ಡ ಚಿಕಿತ್ಸೆಯೇ ಬೇಕು. ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು. ತಪ್ಪು ಮಾಡಿದರೆ ಕಠಿಣ ಕ್ರಮ ಜರುಗಿಸಬೇಕು. ಪ್ರಯಾಣಿಕರ ವಿಶ್ವಾಸ ಉಳಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT