ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ತಾರತಮ್ಯ ನೀತಿ ಅನುಸರಿಸಬಾರದು

‘ಕುಮಾರ ಪಥ’ ಸಂವಾದದಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ
Last Updated 24 ಜುಲೈ 2017, 7:22 IST
ಅಕ್ಷರ ಗಾತ್ರ

ಧಾರವಾಡ: ‘ರಾಜ್ಯದ ಯಾವುದೇ ಭಾಗದ ಜನರಿಗೆ ಸರ್ಕಾರ ನಮ್ಮನ್ನು ಅಲಕ್ಷಿಸುತ್ತಿದೆ ಎನ್ನುವ ಭಾವನೆ ಬರಬಾರದು. ಹಾಗೆ ಸರ್ಕಾರ ಆಡಳಿತ ನಡೆಸಬೇಕು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಇಲ್ಲಿನ ಜೆಎಸ್‌ಎಸ್‌ ಆವರಣದಲ್ಲಿರುವ ಸನ್ನಿಧಿ ಕಲಾಕ್ಷೇತ್ರದಲ್ಲಿ ಭಾನುವಾರ ಜೆಡಿಎಸ್‌ ವತಿಯಿಂದ ಏರ್ಪಡಿಸಿದ್ದ ‘ಕುಮಾರ ಪಥ’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕರ್ತರು ಮತ್ತು ಸಭಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

‘ಉತ್ತರ ಕರ್ನಾಟಕ ಭಾಗದ ಪ್ರತಿಭಾವಂತರಿಗೆ ಐಎಎಸ್‌, ಐಪಿಎಸ್‌ನಂತಹ ಪರೀಕ್ಷೆಗಳಿಗೆ ಸರ್ಮಪಕ ಮಾರ್ಗದರ್ಶನ ದೊರಕುತ್ತಿಲ್ಲ. ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದು ನೀವು ಮುಖ್ಯಮಂತ್ರಿಯಾದರೆ ಏನು ಸೌಲಭ್ಯ ಒದಗಿಸುತ್ತೀರಿ’ ಎಂದು ಸಭಿಕರು ಪ್ರಶ್ನಿಸಿದರು.

‘ಉತ್ತರ ಕರ್ನಾಟಕದಲ್ಲಿ ಅತ್ಯಂತ ಪ್ರತಿಭಾವಂತರಿದ್ದಾರೆ. ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅದು ಸಾಬೀತಾಗಿದೆ. ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾತ್ರವಲ್ಲ, ಒಟ್ಟು ಗುಣಾತ್ಮಕ ಶಿಕ್ಷಣ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು’ ಎಂದು ಕುಮಾರಸ್ವಾಮಿ ಹೇಳಿದರು.

‘ಆಡಳಿತಾತ್ಮಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ರಾಜ್ಯದ ಬಗ್ಗೆ ಬದ್ಧತೆ ಮತ್ತು ಇಚ್ಛಾಶಕ್ತಿ ಬೇಕಾಗುತ್ತದೆ. ಸರ್ಕಾರ ರೂಪಿಸಿದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಅವರದ್ದು. ಆದರೆ ಅಧಿಕಾರಿಗಳ ಸಲಹೆ ಮೇರೆಗೆ ಸರ್ಕಾರ ನಡೆಯಬಾರದು. ಜನರ ಅಪೇಕ್ಷೆಗಳಿಗೆ ತಕ್ಕಂತೆ ಆಡಳಿತ ನಡೆಯಬೇಕು. ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಜನರ ಅಪೇಕ್ಷೆಗೆ ತಕ್ಕಂತೆ ಸರ್ಕಾರ ಕಾರ್ಯ ನಿರ್ವಹಿಸಲಿದೆ’ ಎಂದು ಹೇಳಿದರು.

‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸರ್ಕಾರಿ ಶಾಲೆಗಳು ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ನೀವು ಅಧಿಕಾರಕ್ಕೆ ಬಂದರೆ ಇಲಾಖೆಗೆ ಹೇಗೆ ಕಾಯಕಲ್ಪ ನೀಡುತ್ತೀರಿ’ ಎಂದು ಪ್ರಶ್ನಿಸಲಾಯಿತು.

‘ನೇರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತೇನೆ. ಕನ್ನಡ ಭಾಷೆಗೆ ಧಕ್ಕೆಯಾಗದಂತೆ, ಆರಂಭಿಕ ಹಂತದಲ್ಲಿಯೇ ಇಂಗ್ಲಿಷ್‌ ಕಲಿಸುವುದು ಅಗತ್ಯ. ಆ ಮೂಲಕ ಸ್ಪರ್ಧಾತ್ಮಕ ಯುಗಕ್ಕೆ ಮಕ್ಕಳನ್ನು ತಯಾರುಗೊಳಿಸುವ ಶಿಕ್ಷಣ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.  

ರೈತರ ಫಲವತ್ತಾದ ಭೂಮಿಯನ್ನು ಕೈಗಾರಿಕೆಗಳಿಗಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ನಿಮ್ಮ ನಿಲುವೇನು ಎನ್ನುವ ಪ್ರಶ್ನೆಗೆ, ‘ಅಭಿವೃದ್ಧಿ ಹೆಸರಿನಲ್ಲಿ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ ಎನ್ನುವುದು ನನ್ನ ನಿಲುವು. ಆದರೆ ಕೈಗಾರಿಕೆಗಳು ಬೇಕು. ಅದಕ್ಕಾಗಿ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಳ್ಳಬೇಕು’ ಎಂದರು.

‘ತುಂಗಭದ್ರಾ ಜಲಾಶಯದಲ್ಲಿ ಕೆಲ ದಿನಗಳ ಹಿಂದೆ ರೈತರು ಸ್ವಯಂ ಪ್ರೇರಣೆಯಿಂದ ಸ್ವಲ್ಪ ಪ್ರಮಾಣದ ಹೂಳು ತೆಗೆಯುವ ಪ್ರಯತ್ನ ಮಾಡಿದ್ದಾರೆ. ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡರೆ ಹಣ ದುರ್ಬಳಕೆಯಾಗುವ ಸಾಧ್ಯತೆಯೇ ಹೆಚ್ದು. ಹೀಗಾಗಿ ರೈತರ ನೇತೃತ್ವದಲ್ಲಿಯೇ ಹೂಳು ತೆಗೆಯುವ ಯೋಜನೆ ರೂಪಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈ ಭಾಗದ ಸಮಸ್ಯೆಗಳ ಚರ್ಚೆ ನಡೆಯಲಿ ಎನ್ನುವ ಉದ್ದೇಶದಿಂದ ಸುವರ್ಣಸೌಧ ನಿರ್ಮಾಣ ಮಾಡಲಾಯಿತು. ಆದರೆ ಅದರ ಸದ್ಬಳಕೆ ಆಗುತ್ತಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳಲ್ಲಿ ಒಂದು ವಾರ ಸರ್ಕಾರ ಸುವರ್ಣಸೌಧದಲ್ಲಿ ಕಾರ್ಯ ನಿರ್ವಹಿಸಲಿದೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT