ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ನಲ್ಲಿ ಅಂಗವಿಕಲರೊಂದಿಗೆ ಎಚ್‌ಡಿಕೆ ಪ್ರಯಾಣ

ಮುಂದಿನ ಬಾರಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ವಿಧಾನ ಪರಿಷತ್‌ಗೆ ಅಂಗವಿಕಲರ ನೇಮಕ: ಭರವಸೆ
Last Updated 24 ಜುಲೈ 2017, 7:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅಂಗವಿಕಲರೊಡಗೂಡಿ ಹುಬ್ಬಳ್ಳಿಯಿಂದ ಧಾರವಾಡಕ್ಕೆ ನಗರ ಸಾರಿಗೆ ಬಸ್ಸಿನಲ್ಲಿ ಭಾನುವಾರ ಪ್ರಯಾಣಿಸುವ ಮೂಲಕ ಗಮನ ಸೆಳೆದರು.

ಧಾರವಾಡದ ಸನ್ನಿಧಿ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಕುಮಾರ ಪಥ’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಭಾನುವಾರ ಬೆಳಿಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ಬಳಿಕ ಇಲ್ಲಿನ ಕೋರ್ಟ್‌ ಸರ್ಕಲ್‌ ಬಳಿ ಇರುವ ಶ್ರೀಸಾಯಿ ಮಂದಿರಕ್ಕೆ ಕಾರಿನಲ್ಲಿ ಬಂದ ಅವರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಂಗವಿಕಲರೊಂದಿಗೆ ಸಾಯಿಬಾಬಾಗೆ ವಿಶೇಷ ಪೂಜೆ ಸಲ್ಲಿಸಿದರು.

ಆ ನಂತರ ಬೆಳಿಗ್ಗೆ 11.20ಕ್ಕೆ ನಗರ ಸಾರಿಗೆ ಬಸ್‌ನಲ್ಲಿ (ಕೆಎ 25, ಎಫ್‌ 3052) ಹೊಸೂರು, ವಿದ್ಯಾನಗರ, ಉಣಕಲ್‌, ನವನಗರ ಮಾರ್ಗವಾಗಿ ಧಾರವಾಡಕ್ಕೆ ಮಧ್ಯಾಹ್ನ 12ಕ್ಕೆ ತಲುಪಿದರು. ಅಂಗವಿಕಲೆ ಮಂಟೂರಿನ ಲಕ್ಷ್ಮಿ ಇದರಮನಿ ಅವರನ್ನು ಬಸ್ಸಿನಲ್ಲಿ ತಮ್ಮ ಪಕ್ಕದ ಆಸನದಲ್ಲಿ ಕೂರಿಸಿಕೊಂಡು, ಅವರ ಅಹವಾಲು ಆಲಿಸಿದರು.

ಅಂಗವಿಕಲರಾದ ವಿಜಯಲಕ್ಷ್ಮಿ, ಶಕುಂತಲಾ ಪೂಜಾರ, ಕರಿಯಪ್ಪ ವಿಠಲ ಕೆಲಗೇರಿ, ಗೀತಾ ಬಡಿಗೇರ ಅವರು ಅಂಗವಿಕಲರು ಎದುರಿಸುತ್ತಿರುವ ದುಃಖ, ದುಮ್ಮಾನ, ಸಮಸ್ಯೆಗಳನ್ನು ಕುಮಾರಸ್ವಾಮಿ ಅವರ ಬಳಿ ನಿವೇದಿಸಿಕೊಂಡಿರು.

ಅಂಗವಿಕಲರ ಅಹವಾಲು ಆಲಿಸಿದ ಬಳಿಕ ಮಾತನಾಡಿದ ಎಚ್‌ಡಿಕೆ, ಜೆಡಿಎಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಅಂಗವಿಕಲರೊಬ್ಬರನ್ನು ವಿಧಾನ ಪರಿಷತ್‌ಗೆ ನೇಮಕ ಮಾಡುವುದಾಗಿ ಭರವಸೆ ನೀಡಿದರು.

‘20 ತಿಂಗಳ ನನ್ನ ಆಡಳಿತಾವಧಿಯಲ್ಲಿ ಕರ್ನಾಟಕ ವಿದ್ಯುತ್‌ ನಿಗಮ(ಕೆಇಬಿ) ಮತ್ತು ಮುಖ್ಯಮಂತ್ರಿ ಕಚೇರಿಯಲ್ಲಿ ಒಂದು ಸಾವಿರ ಅಂಗವಿಕಲರಿಗೆ ಕೆಲಸ ನೀಡಿದ್ದೆ. ಅಲ್ಲದೇ, ಎರಡೂ ಕಣ್ಣು ಕಾಣದ ಮಹಿಳೆಯೊಬ್ಬರಿಗೆ ವಿಧಾನಸೌಧದಲ್ಲಿ ಕೆಲಸ ನೀಡಿದ್ದೆ. ಇಂದು ಆ ಮಹಿಳೆ ತನ್ನಂತೆ ಎರಡೂ ಕಣ್ಣು ಕಾಣದ ಮಗುವೊಂದನ್ನು ದತ್ತು ಸ್ವೀಕರಿಸಿದ್ದಾರೆ’ ಎಂದು ಶ್ಲಾಘಿಸಿದರು.

ರಾಜ್ಯ ಸರ್ಕಾರವು ಅಂಗವಿಕಲರಿಗೆ ಉದ್ಯೋಗ ನೀಡುವಲ್ಲಿ, ಮನೆಗಳನ್ನು ನೀಡುವಲ್ಲಿ,  ಪಡಿತರ ಚೀಟಿ ನೀಡುವಲ್ಲಿ ಕಡೆಗಣಿಸಿದೆ. ಅಂಗವಿಕಲರಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಎನ್‌.ಎಚ್. ಕೋನರಡ್ಡಿ, ಮಾಜಿ ಸಚಿವ ಅಲ್ಕೋಡ್‌ ಹನುಮಂತಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ರಾಜಣ್ಣ  ಕೊರವಿ, ಆಲ್ತಾಫ್‌ ಕಿತ್ತೂರ, ಫೆಮಿದಾ ಕಿಲ್ಲೇದಾರ ಇದ್ದರು.

‘ಫಸಲ್‌ ಬಿಮಾ ಯೋಜನೆ ಹಗಲುದರೋಡೆ’
ಧಾರವಾಡ: 
‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಿಂದ ರೈತರ ಹಗಲು ದರೋಡೆಯಾಗುತ್ತಿದೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಇಲ್ಲಿನ ಸನ್ನಿಧಿ ಕಲಾಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಯೋಜನೆಯಡಿ ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳಿಂದಾಗಿ ರೈತರಿಗೆ ಸಮರ್ಪಕವಾಗಿ ಬೆಳೆ ವಿಮೆ ದೊರೆತಿಲ್ಲ’ ಎಂದರು.

‘ಈ ಯೋಜನೆಯಡಿ ಪರಿಹಾರ ನೀಡಲು ಕೇಂದ್ರ ಸರ್ಕಾರ ಮಳೆ ಪ್ರಮಾಣ ಸೇರಿದಂತೆ ವಿವಿಧ ಮಾನದಂಡಗಳನ್ನು ನಿಗದಿಪಡಿಸಿದೆ. ಇದರಿಂದ ರೈತರಿಗೆ ಅನುಕೂಲವಾಗುತ್ತಿಲ್ಲ. ಬದಲಿಗೆ ವಿಮಾ ಕಂಪೆನಿಗಳಿಗೆ ಲಾಭವಾಗುತ್ತಿದೆ. ಕೇಂದ್ರ ಸರ್ಕಾರ ಈ ಮಾನದಂಡಗಳನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಜೆಡಿಎಸ್‌ ವತಿಯಿಂದ ಹೋರಾಟ ಮಾಡಲಾಗುವುದು’ ಎಂದರು.

‘ರಾಷ್ಟ್ರದಾದ್ಯಂತ ಏಕರೂಪದ ತೆರಿಗೆ ಪದ್ಧತಿ ಜಾರಿ ನಂತರ ಗೊಬ್ಬರದ ಬೆಲೆ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಅದು ಸತ್ಯವಲ್ಲ. ಸರ್ಕಾರ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ರೈತರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಪ್ರಕ್ರಿಯೆಯಿಂದ ಸರ್ಕಾರ ಹಿಂದೆ ಸರಿದಿದೆ. ಅದನ್ನು ಹೆಚ್ಚು ಮಾಡುವ ಪ್ರಯತ್ನ ಮಾಡುತ್ತಿಲ್ಲ’ ಎಂದು ಅವರು ಹೇಳಿದರು.

‘ನವಲಗುಂದದಲ್ಲಿ ನಡೆದ ರೈತರ ಹೋರಾಟದ ಸಂದರ್ಭದಲ್ಲಿನ ಮೊಕದ್ದಮೆಗಳನ್ನು ಹಿಂಪಡೆಯುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಆದರೆ ಇನ್ನೂ ರೈತರಿಗೆ ಸಮನ್ಸ್‌, ಗಡಿಪಾರು ನೋಟಿಸ್‌ ಜಾರಿಗೊಳಿಸಲಾಗುತ್ತಿದೆ. ಪೊಲೀಸರು ದ್ವೇಷ ಸಾಧಿಸುತ್ತಿದ್ದಾರೆ. ಇದಕ್ಕೆ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಕೂಡಲೇ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು’ ಎಂದರು.

‘ಮುಂದಿನ ವಿಧಾನಸಭೆ ಚುನಾವಣೆಗೆ ಎಲ್ಲ 224 ಕ್ಷೇತ್ರಗಳಿಂದ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಚುನಾವಣೆಯನ್ನು ಪಕ್ಷ ಗಂಭೀರವಾಗಿ ತೆಗೆದುಕೊಳ್ಳಲಿದೆ. ಜನ ಬದಲಾವಣೆ ಬಯಸಿದ್ದು, ಜೆಡಿಎಸ್‌ಗೆ  ಅಗತ್ಯ ಬಹುಮತ ದೊರೆಯಲಿದೆ’ ಎಂದರು.

‘ಉತ್ತರ, ದಕ್ಷಿಣದಲ್ಲಿ ಸ್ಪರ್ಧೆ’
ಉತ್ತರ ಕರ್ನಾಟಕದ ಜನ ಎದುರಿಸುತ್ತಿರುವ ಸಮಸ್ಯೆಗಳು ಪ್ರಶ್ನೆಗಳ ರೂಪದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರ ಮುಂದೆ ಪ್ರಸ್ತಾಪವಾದವು. ಅವೆಲ್ಲ ಪ್ರಶ್ನೆಗಳಿಗೆ ಅತ್ಯಂತ ಸಮಾಧಾನದಿಂದ ಉತ್ತರ ನೀಡಿದ ಅವರು ‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳು ಒತ್ತಾಯ ಮಾಡುತ್ತಿದ್ದಾರೆ. ಉತ್ತರ ಮತ್ತು ದಕ್ಷಿಣ ಕರ್ನಾಟಕ ರಾಜ್ಯದ ಎರಡು ಕಣ್ಣುಗಳಿದ್ದಂತೆ. ಹೀಗಾಗಿ ಎರಡೂ ಭಾಗದ ಒಂದೊಂದು ಕ್ಷೇತ್ರಗಳಿಂದ ಸ್ಪರ್ಧಿಸುವ ಚಿಂತನೆ ಇದೆ’ ಎಂದು ಸುಳಿವು ನೀಡಿ ಸಂವಾದ ಮುಕ್ತಾಯಗೊಳಿಸಿದರು.

*
ಅಂಗವಿಕಲರಿಗೆ ಉಚಿತ ಶಿಕ್ಷಣ, ಸ್ವ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು, ನಿವೇಶನ ನೀಡುವ ಜೊತೆಗೆ ಮನೆ ನಿರ್ಮಾಣ ಮಾಡಲು ಆದ್ಯತೆ ನೀಡುತ್ತೇನೆ.
-ಎಚ್.ಡಿ. ಕುಮಾರಸ್ವಾಮಿ,
ಜೆಡಿಎಸ್ ರಾಜ್ಯಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT