ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿಗೆ ಹರಿಯುತ್ತಿದೆ ಜೀವಜಲ!

24x7 ಯೋಜನೆ: 4 ವಲಯಗಳಲ್ಲಿ ಪ್ರಾಯೋಗಿಕ ಪರೀಕ್ಷೆ; ಹಲವೆಡೆ ನೀರು ಸೋರಿಕೆ
Last Updated 24 ಜುಲೈ 2017, 8:13 IST
ಅಕ್ಷರ ಗಾತ್ರ

ಗದಗ: ಗದಗ–ಬೆಟಗೇರಿ ಅವಳಿ ನಗ ರದ 12 ವಲಯಗಳ ಪೈಕಿ, 4 ವಲಯ ಗಳಿಗೆ ಪ್ರಾಯೋಗಿಕವಾಗಿ 24x7 ಮಾದರಿಯಲ್ಲಿ ಕುಡಿಯುವ ನೀರು  ಪೂರೈಕೆ ಪ್ರಾರಂಭವಾಗಿ ಎರಡು ತಿಂಗಳು ಸಮೀಪಿಸಿದೆ.

ಪ್ರಾಯೋಗಿಕವಾಗಿ ನೀರು ಹರಿಸಿ, ಸೋರಿಕೆ ಇದ್ದರೆ ಪತ್ತೆ ಹಚ್ಚಿ ಅದನ್ನು ಸರಿಪಡಿಸಲು ಒಂದೊಂದು ವಲಯ ಗಳಿಗೆ ಕನಿಷ್ಠ ಒಂದೊಂದು ವಾರ ಬೇಕಾ ಗಬಹುದು  ಎಂದು ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಅಂದಾಜು ಮಾಡಿತ್ತು. ಆದರೆ, ಎರಡು ತಿಂಗಳು ಕಳೆಯುತ್ತಾ ಬಂದರೂ ಈ ನಾಲ್ಕು ವಲಯಗಳಿಗೆ ನಿರಂತರ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಸದ್ಯ ಎರಡು ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದೆ. ಆದರೆ, ಪೈಪ್‌ಲೈನ್‌ ಸೋರಿಕೆಯಿಂದ ಪೂರೈಸ ಲಾದ ನೀರಿನಲ್ಲಿ ಅರ್ಧದಷ್ಟು ಚರಂಡಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದೆ.

ಎಸ್‌.ಪಿ.ಎಂ.ಎಲ್‌ ಇನ್‌ಫ್ರಾ ಎಂಬ ಕಂಪೆನಿ ನಗರದಲ್ಲಿ 24x7 ಕುಡಿಯುವ ನೀರಿನ ಯೋಜನೆಯ ಗುತ್ತಿಗೆ ಪಡೆದು ಕೊಂಡಿದೆ. ‘ನಗರದ ಒಳಗೆ ನಡೆಯು ತ್ತಿರುವ ಪೈಪ್‌ಲೈನ್‌ ಅಳವಡಿಕೆ ಕಾಮ ಗಾರಿಯಲ್ಲಿ ನಗರಾಡಳಿತದ ಯಾವುದೇ ಹಸ್ತಕ್ಷೇಪ ಇಲ್ಲ. ಹೀಗಾಗಿ, ಈಗ ಕಾಮಗಾರಿ ಪ್ರಗತಿ ಮೇಲೆ ನಿಗಾ ವಹಿಸಲು, ನಿಗದಿತ ಸಮಯದೊಳಗೆ ಮುಗಿಸು ವಂತೆ ಸೂಚನೆ ನೀಡಲು ಸಾಧ್ಯವಾಗುತ್ತಿಲ್ಲ.

ವಾರ್ಡ್‌ಗಳಲ್ಲಿ ಕೆಲಸ ಪ್ರಾರಂಭಿ ಸುವ ಮುನ್ನ ಗುತ್ತಿಗೆದಾರರು ಕನಿಷ್ಠ ವಾರ್ಡ್‌ ಸದಸ್ಯರ ಸಲಹೆಯನ್ನೂ ಪರಿ ಗಣಿಸುತ್ತಿಲ್ಲ. ಎಲ್ಲಿ ಬೇಕೆಂದರಲ್ಲಿ ರಸ್ತೆ ಅಗೆದು ಹಾಕಿದ್ದಾರೆ. ಗುತ್ತಿಗೆದಾರರದ್ದೇ ಆಟ ಎನ್ನುವಂತಾಗಿದೆ’ ಎನ್ನುವುದು ನಗರಸಭೆ ಸದಸ್ಯರ ಆರೋಪ.

24x7 ಯೋಜನೆಯ ಜತೆಗೆ ಈಗ ಹಲವು ವಾರ್ಡ್‌ಗಳಲ್ಲಿ ಒಳಚರಂಡಿ ಪೈಪ್‌ಲೈನ್‌ ಅಳವಡಿಕೆ ನಡೆದಿರುವುದರಿಂದ ರಸ್ತೆ ಗಳು ಕೆಸರುಗದ್ದೆಯಾಗಿದ್ದು, ಜನರು ರಸ್ತೆಗೆ ಇಳಿಯಲು ಪರದಾಡುತ್ತಿದ್ದಾರೆ. ಕುಡಿ ಯುವ ನೀರು ಸೋರಿಕೆಯಾಗಿ ಅಲ್ಲಲ್ಲಿ ರಸ್ತೆಯ ಮೇಲೆ ನಿಂತಿದೆ.

ಬೇಸಿಗೆಯಲ್ಲಿ ಹನಿ ಹನಿ ನೀರಿಗೂ ಅಕ್ಷರಶಃ ಪರದಾಡಿದ ನಗರದ ಜನತೆ ಈಗ ಸ್ವಲ್ಪ ನಿರಾಳರಾಗಿದ್ದಾರೆ. ನಗರಸಭೆ ಸರಾಸರಿ ವಾರಕ್ಕೊಮ್ಮೆ ತುಂಗಭದ್ರಾ ನದಿ ನೀರು ಪೂರೈಕೆ ಮಾಡುತ್ತಿದೆ. ಹುಡ್ಕೋ ಕಾಲೊನಿ, ಪಿ ಅಂಡ್‌ ಟಿ ಕ್ವಾಟರ್ಸ್‌ ಸೇರಿ ಹಲವು ಪ್ರದೇಶಗಳ ನಿವಾಸಿಗಳಿಗೆ 24x7 ಯೋಜನೆಯ ನೀರು ಬೋನಸ್‌ ರೂಪದಲ್ಲಿ ಸಿಗುತ್ತಿದೆ.

‘ಎರಡೋ, ಮೂರೋ ದಿನಗಳಿಗೊಮ್ಮೆ ಈ ನಳದಲ್ಲಿ ಅರ್ಧಗಂಟೆ ನೀರು ಬರುತ್ತದೆ. ಅದನ್ನು ಹಿಡಿದಿಟ್ಟುಕೊಂಡು ಪಾತ್ರೆ ತೊಳೆಯಲು, ಇನ್ನಿತರ ಗೃಹ ಬಳಕೆಗೆ ಬಳಸಿಕೊಳ್ಳುತ್ತೇವೆ. ಕುಡಿಯಲು ಯೋಗ್ಯವಲ್ಲ’ ಎಂದು ವಿವೇಕಾನಂದ ಬಡಾವಣೆ ನಿವಾಸಿ ರತ್ನಮ್ಮ ಹೂಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

24x7 ಯೋಜನೆಯಡಿ ನಗರದಲ್ಲಿ ಒಟ್ಟು 41,618 ನಳ ಸಂಪರ್ಕ ಕಲ್ಪಿಸುವ ಉದ್ದೇಶವನ್ನು ನಗರಸಭೆ ಹೊಂದಿದೆ. ಇದರದಲ್ಲಿ ಈಗಾಗಲೇ ಅರ್ಧದಷ್ಟು ನಳ ಅಳವಡಿಸಲಾಗಿದೆ. ಆದರೆ, ಕೆಲವೆಡೆ ಪೈಪ್‌ಲೈನ್‌ ಸಂಪರ್ಕ ನೀಡಿ, ಮೀಟರ್‌ ಅಳವಡಿಸಿ ಕೈಬಿಡಲಾಗಿದೆ.

ಈ ನಳಗಳಿಗೆ ಕ್ಯಾಪ್‌ ಅಳವಡಿಸಿಲ್ಲ. ಹೀಗಾಗಿ ಕೆಲ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿದಾಗ, ಈ ನಳದ ಮೂಲಕ ನೀರು ರಸ್ತೆಗೆ ಹರಿದು ಚರಂಡಿ ಪಾಲಾ ಗುತ್ತಿದೆ. ಕೆಲವೆಡೆ ಜನರು ತಾವಾಗಿಯೇ  24x7 ನಳ ಸಂಪರ್ಕಕ್ಕೆ ಹೆಚ್ಚುವರಿ ಪೈಪ್‌ ಜೋಡಿಸಿಕೊಂಡು, ಅದನ್ನು ನೇರವಾಗಿ ನೀರಿನ ಸಂಪಿಗೆ ಬಿಟ್ಟಿದ್ದಾರೆ. ಈ ನಳದಲ್ಲಿ ನೀರು ಬಂದಾಗ, ನೀರು ಸಂಪಿನಲ್ಲಿ ಸಂಗ್ರಹಗೊಳ್ಳುತ್ತದೆ.

*
4 ವಲಯಗಳಲ್ಲಿ ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಂಡಿದೆ. ಸೋರಿಕೆ ಸಮಸ್ಯೆಯನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.
-ಮನ್ಸೂರ್ ಅಲಿ,
ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT