ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾರರನ್ನು ‘ಬನಶಂಕರಿ’ಯೇ ಕಾಪಾಡಬೇಕು

ಉಬ್ಬು–ತಗ್ಗುಗಳಿಂದ ಕೂಡಿದ ರಸ್ತೆ; ಸಂಚಾರವನ್ನೇ ಸ್ಥಗಿತಗೊಳಿಸುವ ಶಕ್ತಿ ಹೊಂದಿರುವ ಅವೈಜ್ಞಾನಿಕ ಉಬ್ಬುಗಳು !
Last Updated 24 ಜುಲೈ 2017, 8:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸುರಿಯುವ ಮಳೆಯಲ್ಲಿ ಈ ರಸ್ತೆಯಲ್ಲಿ ಸಾಗುತ್ತಿದ್ದರೆ, ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೇವೆ ಏನೋ ಎಂಬ ಅನುಭವವಾದಂತೆ ಆಗುತ್ತದೆ ಎನ್ನುತ್ತಾರೆ ವಾಹನ ಸವಾರರು.

ವಾರ್ಡ್‌ ಸಂಖ್ಯೆ 35ರ ಬನಶಂಕರಿ ಬಡಾವಣೆ ರಸ್ತೆಯ ಬಗ್ಗೆ ಸಾರ್ವಜನಿಕರು ಹೀಗೆ ವ್ಯಂಗ್ಯವಾಡುತ್ತಾರೆ. ‘ಈ ರಸ್ತೆಯಲ್ಲಿ ನಿತ್ಯ ನಾಲ್ಕು ಬಾರಿ ಸಂಚರಿಸಿದರೆ, ವಾಹನವೂ ಸರಿ ಇರುವುದಿಲ್ಲ, ದೇಹವೂ ಸರಿ ಇರುವುದಿಲ್ಲ’ ಎಂದು ವ್ಯಂಗ್ಯಮಿಶ್ರಿತ ಧ್ವನಿಯಲ್ಲಿಯೇ ಅಸಮಾಧಾನ ವ್ಯಕ್ತಪಡಿಸುತ್ತಾರೆ ಸಂಕೇತ್‌ ಉಣಕಲ್‌.

‘ಉಬ್ಬುಗಳ ಪಕ್ಕದಲ್ಲಿಯೇ ಗುಂಡಿಗಳೂ ಇವೆ. ಮಳೆಯ ನೀರಿನಿಂದ ಗುಂಡಿಗಳು ತುಂಬಿರುವುದರಿಂದ ಎಷ್ಟು ಆಳ ಇವೆ ಎಂಬುದೇ ತಿಳಿಯುವುದಿಲ್ಲ. ವೇಗವಾಗಿ ಗಾಡಿ ಓಡಿಸಿದರೆ ಪಲ್ಟಿ ಹೊಡೆಯುವುದು ನಿಶ್ಚಿತ’ ಎಂದು ಹೇಳುತ್ತಾರೆ ದಿನೇಶ ರಾಯ್ಕರ್‌.

‘ಕೆಸರಿನ ಮಣ್ಣು ಉಬ್ಬುಗಳ ಮೇಲೆಯೂ ಹರಡಿಕೊಂಡಿದೆ. ರಸ್ತೆ ಮತ್ತು ಉಬ್ಬುಗಳ ಬಣ್ಣ ಒಂದೇ ಆಗಿರುವುದರಿಂದ ತುಂಬಾ ಗೊಂದಲವಾಗುತ್ತದೆ. ಅವುಗಳನ್ನು ಕಣ್ಣಿಗೆ ಕಾಣುವಂತೆ ಮಾಡಲು ಬಣ್ಣ ಅಥವಾ ರೇಡಿಯಂ ಹಚ್ಚಬೇಕು’ ಎಂದು ಅವರು ಸಲಹೆ ನೀಡಿದರು.

ಹಲವರಿಗೆ ಗಾಯ: ವೇಗವಾಗಿ ವಾಹನ ಚಲಾಯಿಸುವ, ಉಬ್ಬುಗಳು ಇರುವುದು ಗಮನಕ್ಕೆ ಬಾರದೆ ಹಲವರು ಈ ರಸ್ತೆಯಲ್ಲಿ ಬಿದ್ದಿದ್ದಾರೆ. ತಿಂಗಳಿಂದೀಚೆಗೆ ಇವರ ಸಂಖ್ಯೆ ಇನ್ನೂ ಹೆಚ್ಚಾಗಿದೆ. ವಾಹನದ ತಳಭಾಗಕ್ಕೆ ಉಬ್ಬುಗಳು ತಗುಲುವುದರಿಂದ ಸ್ಕಿಡ್‌ ಆಗಿ ಬೀಳುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.

‘ಶಿರೂರ ಪಾರ್ಕ್‌, ಲಿಂಗರಾಜ ನಗರ, ಉಣಕಲ್‌ ಮತ್ತಿತರ ಕಡೆಗಳಿಗೆ ಹೋಗಲು ಇದೇ ಪ್ರಮುಖ ರಸ್ತೆಯಾಗಿದೆ. ಹಲವು ಕಾಲೇಜುಗಳು, ಆಸ್ಪತ್ರೆಗಳು ಈ ಮಾರ್ಗದಲ್ಲಿ ಇವೆ. ರಸ್ತೆ ಉಬ್ಬುಗಳ ಪರಿಣಾಮ ವಾಹನಗಳ ಸಂಚಾರ ನಿಧಾನವಾಗುವುದರಿಂದ ಬೆಳಿಗ್ಗೆ ಮತ್ತು ಸಂಜೆ ವೇಳೆ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ’ ಎಂದು ವಾಹನ ಸವಾರ ಬಾಬು ಕಾಳೆ ಹೇಳಿದರು.

‘ಈ ಮಾರ್ಗದಲ್ಲಿ ನಿತ್ಯ ಸಂಚರಿಸುತ್ತೇನೆ. ಸೊಂಟ ಮತ್ತು ಬೆನ್ನು ನೋವು ಬರುತ್ತದೆ. ಇನ್ನು, ಬೈಕ್‌ನಂತೂ ತಿಂಗಳಿಗೊಮ್ಮೆ ಸರ್ವಿಸ್‌ಗೆ ಬಿಡುವ ಪರಿಸ್ಥಿತಿ ಇದೆ’ ಎಂದು ಅವರು ಹೇಳಿದರು.

ಉಬ್ಬು ಇರಲಿ; ವೈಜ್ಞಾನಿಕವಾಗಿ ಇರಲಿ: ‘ಹಲವು ಶಾಲಾ–ಕಾಲೇಜುಗಳು ಇರುವುದರಿಂದ ಮತ್ತು ಇದು ಜನನಿಬಿಡ ರಸ್ತೆಯಾಗಿರುವುದರಿಂದ ರಸ್ತೆ ಉಬ್ಬುಗಳು ಬೇಕಾಗುತ್ತದೆ. ಕಾಲೇಜು ಹುಡುಗರು ತುಂಬಾ ವೇಗವಾಗಿ ಗಾಡಿ ಓಡಿಸುತ್ತಾರೆ. ಹಲವರು ಈ ಬೈಕ್‌ಗಳು ಡಿಕ್ಕಿಯಾಗಿ ಗಾಯಗೊಂಡಿದ್ದಾರೆ. ರಸ್ತೆ ಉಬ್ಬುಗಳು ಇದ್ದರೆ ಅವುಗಳ ವೇಗವನ್ನು ನಿಯಂತ್ರಿಸಬಹುದು’ ಎಂದು ಇಲ್ಲಿನ ನಿವಾಸಿ ಅನ್ನಪೂರ್ಣಮ್ಮ ಕೊಳದಮಠ ಹೇಳಿದರು.

‘ಉಬ್ಬುಗಳ ಎತ್ತರವನ್ನು ಕಡಿಮೆ ಮಾಡಬೇಕು. ವೈಜ್ಞಾನಿಕವಾಗಿ ನಿರ್ಮಾಣ ಮಾಡಿದರೆ, ಉಬ್ಬುಗಳಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಅಪಘಾತಗಳೂ ಕಡಿಮೆಯಾಗುತ್ತವೆ. ಪಾದಚಾರಿಗಳ ಸಂಚಾರಕ್ಕೂ ತೊಂದರೆಯಾಗುವುದಿಲ್ಲ’ ಎಂದು ಅವರು ಹೇಳಿದರು.

ತಕ್ಷಣಕ್ಕೆ ಸ್ಪಂದಿಸಿದ ಸದಸ್ಯ
ಲಿಂಗರಾಜನಗರದ ಬನಶಂಕರಿ ಬಡಾವಣೆಯಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳು ಹಾಗೂ ಗುಂಡಿಗಳು ಇರುವ ಬಗ್ಗೆ ಪಾಲಿಕೆ ಸದಸ್ಯ ಮಹೇಶ ಬುರ್ಲಿ ಅವರನ್ನು ಸಂಪರ್ಕಿಸಿದಾಗ, ‘ರಸ್ತೆ ಉಬ್ಬುಗಳ ಎತ್ತರ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಮಳೆ ಸುರಿಯುತ್ತಿರುವುದರಿಂದ ರಸ್ತೆಯ ಸ್ಥಿತಿ ಹೀಗಾಗಿದೆ’ ಎಂದರು.

ರಸ್ತೆಗಳಲ್ಲಿ ಅಡಿಗಳಷ್ಟು ಆಳದಲ್ಲಿ ಗುಂಡಿಗಳು ಇರುವ ಬಗ್ಗೆ ಪ್ರಶ್ನಿಸಿದಾಗ, ‘ಹೆಸ್ಕಾಂನವರು ಅದನ್ನು ತೋಡಿದ್ದಾರೆ. 24x7 ನೀರು ಪೂರೈಕೆ ಯೋಜನೆಗೆ ಪೈಪ್‌ಲೈನ್‌ ಹಾಕಲು ಗುಂಡಿ ತೋಡಲಾಗಿದೆ. ಏಷ್ಯನ್‌ ಫ್ಯಾಬ್‌ಟೆಕ್‌ ಇದರ ಗುತ್ತಿಗೆ ಪಡೆದಿದ್ದಾರೆ. ಆದರೂ ಸಾರ್ವಜನಿಕರಿಗೆ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ’ ಎಂಕಕದರು.

ಮತ್ತೆ, ಸಂಜೆ ಕರೆ ಮಾಡಿದ ಮಹೇಶ ಬುರ್ಲಿ, ‘ಬನಶಂಕರಿ ಬಡಾವಣೆಯಲ್ಲಿ ಇದ್ದ ಗುಂಡಿಯನ್ನು ಮಣ್ಣು ಹಾಕಿಸಿ ಸಮತಟ್ಟು ಮಾಡಿಸಿದ್ದೇನೆ. ಇನ್ನು, ರಸ್ತೆ ಉಬ್ಬುಗಳ ಎತ್ತರ ಕಡಿಮೆ ಮಾಡಲು ಕ್ರಮ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.

*
ವಾಹನಕ್ಕೆ ಹಾನಿ
ಬನಶಂಕರಿ ಬಡಾವಣೆಯ ಈ ರಸ್ತೆಯಲ್ಲಿ ಸಾಗುವಾಗ ವಾಹನಗಳಿಗೆ ಹಾನಿಯಾಗುತ್ತದೆ. ಉಬ್ಬು–ತಗ್ಗುಗಳು ಗೊತ್ತಾಗುವುದೇ ಇಲ್ಲ. ಕಾರುಗಳಿಗೆ ಉಬ್ಬುಗಳು ತಗುಲುತ್ತವೆ.
-ಆರ್.ಟಿ. ತವನಪ್ಪನವರ,
ವಾಹನ ಸವಾರ

*
ಬಂಪರ್‌ಗೆ ಹಾನಿ
ವಾಹನಗಳ ಬಂಪರ್‌ಗೆ ಹಾನಿಯಾಗಿ, ತುಂಬಾ ತೊಂದರೆಯಾಗುತ್ತಿದೆ. ಒಂದು ಬಂಪರ್‌ ಬೆಲೆ ₹8 ಸಾವಿರದಿಂದ ₹10 ಸಾವಿರದವರೆಗೆ ಇದೆ. ದುಬಾರಿ ಬೆಲೆಯ ವಾಹನಗಳನ್ನು ಈ ರಸ್ತೆಗೆ ತರದಿರುವುದೇ ಸೂಕ್ತ.
-ಜೆ.ಆರ್. ಪಟೇಲ್‌,
ಸ್ಥಳೀಯ ನಿವಾಸಿ

*
ಸಂಪೂರ್ಣ ರಸ್ತೆಯೇ ಸರಿಯಿಲ್ಲ
ಲಿಂಗರಾಜನಗರದಲ್ಲಿ ಯಾವ ರಸ್ತೆಯೂ ಸರಿಯಿಲ್ಲ. ನೀರು ಹೋಗುವುದಕ್ಕೂ ಸ್ಥಳವಿಲ್ಲ. ಮಳೆ ಬಂದರೆ  ರಸ್ತೆಗಿಳಿಯುವುದಕ್ಕೆ ಹೆದರಿಕೆಯಾಗುತ್ತದೆ.
-ರಫೀಕ್‌ ನದಾಫ,
ವಾಹನ ಸವಾರ

*
ದರಿದ್ರ ರಸ್ತೆ !
ದರಿದ್ರ ರಸ್ತೆ ಇದ್ದಂಗಿವೆ. ವೈಜ್ಞಾನಿಕ ರಸ್ತೆ ಉಬ್ಬುಗಳು ಇಲ್ಲ, ಒಳಚರಂಡಿ ವ್ಯವಸ್ಥೆ ಸರಿ ಇಲ್ಲ. ಫುಟ್‌ಪಾತ್‌ ಸರಿಯಾಗಿಲ್ಲ. ಹೊಸ ಆಟೊಗಳನ್ನು ಇಲ್ಲಿ ಬಾಡಿಗೆಗೆ ತರುವುದಕ್ಕೆ ಬೇಸರವಾಗುತ್ತದೆ.
-ರಾಘವೇಂದ್ರ ಬಾಳೇನಗಿಡ,
ವಾಹನ ಸವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT