ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಒಪಿ ಗಣೇಶ ಮೂರ್ತಿ ಬಳಕೆ ಸಲ್ಲ’

ಮಾರಾಟಗಾರರಿಗೆ ನಗರಸಭೆಯಿಂದ ನೋಟಿಸ್ ಜಾರಿ: ಕಠಿಣ ಕ್ರಮದ ಎಚ್ಚರಿಕೆ
Last Updated 24 ಜುಲೈ 2017, 9:09 IST
ಅಕ್ಷರ ಗಾತ್ರ

ಬಾಗಲಕೋಟೆ: ಈ ಬಾರಿ ಚೌತಿಯ ವೇಳೆ ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣಪನ ಮೂರ್ತಿಗಳ ಬಳಕೆ ತಡೆಯಲು ನಗರಸಭೆ ಆಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.

ಅಪಾಯಕಾರಿ ಬಣ್ಣ ಲೇಪಿಸಿದ ಹಾಗೂ ಪಿಒಪಿಯ ಗಣಪನ ಮೂರ್ತಿಗಳು ಇದ್ದರೆ ಅವುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡದೇ ಏಳು ದಿನಗಳ ಒಳಗಾಗಿ ನಗರಸಭೆ ಕಾರ್ಯಾಲಯಕ್ಕೆ ತಂದು ಒಪ್ಪಿಸುವಂತೆ ಇದೇ 17ರಂದು ಮಾರಾಟಗಾರರಿಗೆ ನೋಟಿಸ್ ಜಾರಿಗೊಳಿಸಿದೆ.

‘ಬಾಗಲಕೋಟೆಯಲ್ಲಿರುವ ಎಲ್ಲಾ ಗಣಪನ ಮೂರ್ತಿ ತಯಾರಿಕರಿಗೂ ಈಗಾಗಲೇ ತಿಳಿವಳಿಕೆ ಪತ್ರ (ನೋಟಿಸ್‌) ಕಳುಹಿಸಲಾಗಿದೆ. ಯಾವುದೇ ಕಾರಣಕ್ಕೂ ಅಂತಹ ಮೂರ್ತಿಗಳನ್ನು ಮಾರಾಟ ಮಾಡುವಂತಿಲ್ಲ. ನೋಟಿಸ್‌ ಧಿಕ್ಕರಿಸಿ ಸರ್ಕಾರದ ನಿರ್ದೇಶನ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಎಂಬ ಎಚ್ಚರಿಕೆಯನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ’ ಎಂದು ನಗರಸಭೆ ಪರಿಸರ ಎಂಜಿನಿಯರ್ ಹನುಮಂತ ಕಲಾದಗಿ ಹೇಳುತ್ತಾರೆ.

ಸರ್ಕಾರದ ಬಿಗಿ ನಿರ್ದೇಶನ: ‘ಕೆರೆ, ಹೊಂಡ,ಬಾವಿ, ನದಿ ಸೇರಿದಂತೆ ನೈಸರ್ಗಿಕ ಜಲಮೂಲಗಳಲ್ಲಿ ಹಾನಿಕಾರಕ ವಸ್ತುಗಳನ್ನು ವಿಸರ್ಜಿಸದಂತೆ ಹೈಕೋರ್ಟ್ ಆದೇಶಿಸಿದೆ. ಅದರ ಪಾಲನೆಗೆ ಮುಂದಾಗಿರುವ ಸರ್ಕಾರ ಈ ಬಾರಿ ಬಿಗಿ ನಿರ್ದೇಶನ ನೀಡಿದೆ. ಯಾವುದೇ ಕಾರಣಕ್ಕೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನ ಬಳಕೆಗೆ ಅವಕಾಶ ಮಾಡಿಕೊಡದಂತೆ ಸ್ಥಳೀಯ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸಿದೆ’ ಎಂದು ಕಲಾದಗಿ ತಿಳಿಸಿದರು.

ಕೃತಕ ಹೊಂಡವೂ ಇಲ್ಲ: ‘ಹಿಂದಿನ ವರ್ಷ ಕೃತಕ ಹೊಂಡ ನಿರ್ಮಿಸಿ ಪಿಒಪಿ ಮೂರ್ತಿಗಳನ್ನು ಅದರಲ್ಲಿ ಮುಳುಗಿಸ ಲಾಗುತ್ತಿತ್ತು. ಆದರೆ ಅಲ್ಲಿ ಬಳಕೆಯಾಗುವ ನೀರನ್ನು ಮತ್ತೆ ನೆಲಕ್ಕೆ ಚೆಲ್ಲುವ ಕಾರಣ ಹಾನಿಕಾರಕ ರಾಸಾಯನಿಕಗಳು ಭೂಮಿಯ ಆಳಕ್ಕಿಳಿದು ಅಂತರ್ಜಲ ಕಲುಷಿತಗೊಳ್ಳಲಿದೆ. ಹಾಗಾಗಿ ಕೃತಕ ಹೊಂಡ ನಿರ್ಮಾಣಕ್ಕೂ ಅವಕಾಶ ಮಾಡಿಕೊಡಬೇಡಿ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ’ ಎಂದು ಕಲಾದಗಿ ಹೇಳುತ್ತಾರೆ.

ಪರ್ಯಾಯ ವ್ಯವಸ್ಥೆ ಮಾಡಲಿ: ‘ನಗರದಲ್ಲಿ 168 ಕಡೆ ಸಾರ್ವಜನಿಕವಾಗಿ ಗಣಪನ ಪ್ರತಿಷ್ಠಾಪಿಸಲಾಗುತ್ತದೆ. ಸಾಗಣೆ ಸುಲಭ ಹಾಗೂ ಕಡಿಮೆ ವೆಚ್ಚ ಎಂಬ ಕಾರಣಕ್ಕೆ ಬಹುತೇಕ ಕಡೆ ಪಿಒಪಿ ಮೂರ್ತಿಗಳನ್ನೇ ಬಳಸಲಾಗುತ್ತದೆ. ಮನೆಯಲ್ಲಿ ಕೂರಿಸುವವರು ಮಾತ್ರ ಮಣ್ಣಿನ  ಮೂರ್ತಿ ಒಯ್ಯುತ್ತಾರೆ’ ಎಂದು ಇಲ್ಲಿನ ಬಸವೇಶ್ವರ ವೃತ್ತದ ಬಳಿಯ ಮಣ್ಣಿನ ಮೂರ್ತಿ ತಯಾರಕ ರವಿ ಪೇಟಕರ ಹೇಳುತ್ತಾರೆ.

ರ್ಕಾರದ ಆದೇಶ ಪಾಲಿಸಲು ನಾವು ಸಿದ್ಧರಿದ್ದೇವೆ. ಆದರೆ ಸಾರ್ವ ಜನಿಕರಿಂದ ಬರುವ ಬೇಡಿಕೆ ಈಡೇ ರಿಕೆಗೆ ಸಂಬಂಧಿಸಿದವರೇ ವ್ಯವಸ್ಥೆ ಮಾಡಲಿ’ ಎಂಬುದು ಪೇಟಕರ ಅಭಿಮತ. ‘ಪಿಒಪಿಯಲ್ಲಿ ದಿನಕ್ಕೆ 20ರಿಂದ 25 ಮೂರ್ತಿ ಸಿದ್ಧಗೊಳಿಸಬಹುದು. ಆದರೆ ಮಣ್ಣಿನಲ್ಲಿ 2ರಿಂದ 3 ಮಾಡುವುದು ಸಾಧ್ಯವಿಲ್ಲ. ಹಾಗಾಗಿ ಈ ಬಾರಿ ಮಾರು ಕಟ್ಟೆಯಲ್ಲಿ ಬೇಡಿಕೆ ಯಷ್ಟು ಗಣಪನ ಮೂರ್ತಿಗಳ ಪೂರೈಕೆ ಕಷ್ಟ, ಗಣಪನ ಭಾವಚಿತ್ರ ಇಟ್ಟು ಪೂಜೆ ಮಾಡುವ ಪರಿಸ್ಥಿತಿ ಬರಬಹುದು’ ಎಂದು ಭವಿಷ್ಯ ನುಡಿಯುತ್ತಾರೆ.

ಶಿಕ್ಷೆ ಹಾಗೂ ದಂಡ ವಿಧಿಸಲು ಸೂಚನೆ
‘ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನ ಮೂರ್ತಿ ಬಳಕೆ ಹಾಗೂ ಮಾರಾಟ ಮಾಡದಂತೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಾರ್ವಜನಿಕರಿಗೆ ಹಾಗೂ ಮಾರಾಟಗಾರರಿಗೆ ಪ್ರತಿ ವರ್ಷ ತಿಳಿವಳಿಕೆ ಮಾತ್ರ ನೀಡಲಾಗುತ್ತಿತ್ತು. ಆದರೆ ಈ  ಕಠಿಣ ಕ್ರಮಕ್ಕೆ ಸೂಚನೆ ಬಂದಿದೆ. ಪಿಒಪಿ ಗಣಪನ ಮೂರ್ತಿ ಮಾರಾಟ ಮತ್ತು ಬಳಕೆ ಮಾಡಿದಲ್ಲಿ ₹ 10 ಸಾವಿರ ದಂಡ ಇಲ್ಲವೇ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ’ ಎಂದು ಹನುಮಂತ ಕಲಾದಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT