ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ ಸುತ್ತ ಸಂಚಾರ ಅಸ್ತವ್ಯಸ್ಥ

ಸ್ಥಗಿತಗೊಂಡ ಬೈಪಾಸ್ ರಸ್ತೆ ಕಾಮಗಾರಿ *ರಾಶಿ ಬಿದ್ದಿರುವ ಮಣ್ಣಿನ ಗುಡ್ಡೆಗಳು ಜಲ್ಲಿಕಲ್ಲುಗಳು
Last Updated 24 ಜುಲೈ 2017, 9:46 IST
ಅಕ್ಷರ ಗಾತ್ರ

ದೇವನಹಳ್ಳಿ: ರಾಶಿ ಬಿದ್ದಿರುವ ಮಣ್ಣಿನ ಗುಡ್ಡೆಗಳು ಮತ್ತೊಂದೆಡೆ ಹರಡಿರುವ ಜಲ್ಲಿಕಲ್ಲುಗಳು. ರಾಷ್ಟ್ರೀಯ ಹೆದ್ದಾರಿ 207ರ ದಾಬಸ್ ಪೇಟೆಯಿಂದ ದೇವನಹಳ್ಳಿ, ಹೊಸಕೋಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಬೈಪಾಸ್ ರಸ್ತೆಗಳ ಸ್ಥಗಿತಗೊಂಡಿರುವ ಕಾಮಗಾರಿಯ ವಾಸ್ತವ ಸ್ಥಿತಿ ಇದು.

2011–12ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಎರಡು ಪಥದ ರಸ್ತೆಗಳನ್ನು ವಿಸ್ತರಿಸಿ ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಮುಂದಾಗಿತ್ತು. ಈ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು.

ರಸ್ತೆ ಬದಿಯ ರೈತರ ಫಲವತ್ತಾದ ಜಮೀನುಗಳನ್ನು ತರಾತುರಿಯಲ್ಲಿ ಸ್ವಾಧೀನ ಪಡಿಸಿಕೊಂಡು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 80ಕಿ.ಮೀ. ಉದ್ದದ ರಸ್ತೆಯ ಎರಡೂ ಬದಿಯಲ್ಲಿ ವಿವಿಧ ಮರಗಳು ಇದ್ದವು.

ಹುಣಸೆ, ನೇರಳೆ ವಿವಿಧ ಜಾತಿಯ ನೂರಾರು ವರ್ಷದ ಮರಗಳನ್ನು ನೆಲಕ್ಕುರುಳಿಸಿ ಆರೇಳು ತಿಂಗಳು ಸಮರೋಪಾದಿಯಲ್ಲಿ ಕಾಮಗಾರಿ ನಡೆದಿತ್ತು. ಕಾಮಗಾರಿ ಕೆಲವೊಂದು ಕಡೆ ಆಮೆ ಗತಿದಲ್ಲಿ ಸಾಗಿದರೆ ದೇವನಹಳ್ಳಿ ತಾಲ್ಲೂಕಿನಲ್ಲಿ ಮಾತ್ರ ಕಳೆದ ಆರು ವರ್ಷಗಳಿಂದ ಸ್ಥಗಿತಗೊಂಡಿದೆ. ಇದರಿಂದ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ.

ಪ್ರಸ್ತುತ ಇರುವ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ  ಕೆಲಸವನ್ನೂ ರಾಷ್ಟ್ರೀಯ ಹೆದ್ದಾರಿ  ಪ್ರಾಧಿಕಾರ ಮಾಡುತ್ತಿಲ್ಲ. ಇಂತಹ ಬೃಹತ್ ಕಾಮಗಾರಿಗೆ ಅನುದಾನ ಕೊರತೆಯೋ ಅಥವಾ ಕಾಮಗಾರಿಗೆ ಹಣ ಬಿಡುಗಡೆಯಾಗುತ್ತಿಲ್ಲವೋ ತಿಳಿದಿಲ್ಲ ಎಂದು ಕರ್ನಾಟಕ ದಲಿತ ವೇದಿಕೆ ಸದಸ್ಯ ಸಾವಕನಹಳ್ಳಿ ದೊಡ್ಡರಂಗಪ್ಪ ದೂರುತ್ತಾರೆ.

ದಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿ 207ರಿಂದ ದೇವನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 7ಕ್ಕೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಚಿಕ್ಕಬಳ್ಳಾಪುರ, ಕೋಲಾರ, ವಿಜಯಪುರ, ಶಿಡ್ಲಘಟ್ಟ, ಸೂಲಿಬೆಲೆ, ಹೊಸಕೋಟೆ, ಮಾಲೂರು, ಕೆ.ಆರ್.ಪುರ ಮತ್ತು ದೇವನಹಳ್ಳಿಯಿಂದ ಯಲಹಂಕ ನಗರಕ್ಕೆ ಇದು ಸಂಪರ್ಕ ರಸ್ತೆಯಾಗಿದೆ.

ರಾಜ್ಯ ಮತ್ತು ಅಂತರ ರಾಜ್ಯ ಸಾರಿಗೆ ಬಸ್ಸುಗಳು ಸಾವಿರಾರು ಸಂಖ್ಯೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತವೆ. ಅತಿಯಾದ ವಾಹನ ಸಂಚಾರದಿಂದ ಅಪಘಾತಗಳೂ ಹೆಚ್ಚುತ್ತಿವೆ. ಇದಕ್ಕೆ ಶಾಶ್ವತವಾದ ಮುಕ್ತಿ ಯಾವಾಗ ಎಂಬುದು ಹಿರಿಯ ನಾಗರಿಕ ಎಸ್.ಸಿ.ಗೋಪಾಲಸ್ವಾಮಿ ಅವರ ಪ್ರಶ್ನೆ.

ದೇವನಹಳ್ಳಿ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಕೆಲ ಮಾರ್ಗಗಳಿವೆ. ದೊಡ್ಡಬಳ್ಳಾಪುರ ರಸ್ತೆ ವಿಸ್ತರಣೆ ಕೈಗೊಳ್ಳುವುದು. ರಾಷ್ಟ್ರೀಯ ಹೆದ್ದಾರಿ 207ರ ಶೆಟ್ಟರಹಳ್ಳಿ ಗೇಟ್ ನಿಂದ ಸಾವಕನಹಳ್ಳಿ ಗ್ರಾಮ ಮತ್ತು ಪುರಸಭೆ ವ್ಯಾಪ್ತಿಯ ನಿಲೇರಿ ಬಡಾವಣೆ ಮಾರ್ಗವಾಗಿ ರಾಣಿ ಕ್ರಾಸ್ ಮತ್ತು ಸರ್ಕಾರಿ ಐ.ಟಿ.ಐ. ಕಾಲೇಜು ಮುಂಭಾಗದಿಂದ ಸೂಲಿಬೆಲೆ ರಸ್ತೆಗೆ ಸಂಪರ್ಕ ಕಲ್ಪಿಸಲು ಬೈಪಾಸ್ ರಸ್ತೆ ವಿಸ್ತರಣೆ ಆಗಬೇಕು ಎಂದು ಜನರು ತಿಳಿಸುತ್ತಾರೆ.

ಸಂಚಾರ ವ್ಯವಸ್ಥೆ ಜನರಿಗೆ ಅಗತ್ಯವಾಗಿದ್ದು ಇಂತಹ ಬೇಜವಾಬ್ದಾರಿಯುತ ಯೋಜನೆ ಸರ್ಕಾರ ಜಾರಿ ಮಾಡುವುದಾದರು ಯಾತಕ್ಕೆ ಎಂಬುದು ನಗರ ನಿವಾಸಿ ಆಂಜಿನಪ್ಪ ಪ್ರಶ್ನೆ.

ಈಗಾಗಲೇ ಬೆಂಗಳೂರು ನಗರ ಅಭಿವೃದ್ಧಿ ವಿಚಾರ ಬಂದಾಗ ಜೊತೆಯಲ್ಲಿ ದೇವಹಳ್ಳಿ ಪರಿಸರವೂ ಒಳಗೊಳ್ಳುತ್ತದೆ.  ಐದು ವರ್ಷದ ಹಿಂದೆ ಇಲ್ಲಿ ಪ್ರತಿದಿನಕ್ಕೆ ನಾಲ್ಕೈದು ಸಾವಿರ ವಾಹನ ಸಂಚಾರ ವ್ಯವಸ್ಥೆ ಇತ್ತು. ಪ್ರಸ್ತುತ ಹತ್ತು ಸಾವಿರ ಮೀರಿದೆ.  ಸಂಚಾರ ಪೊಲೀಸರು ಈ ಹಿಂದೆ ಇಲ್ಲಿ 30 ಸಿಬ್ಬಂದಿ ಇದ್ದರು. ಪ್ರಸ್ತುತ 79ಕ್ಕೆ ಹೆಚ್ಚಿದೆಯಾದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ.

*
ದೇವನಹಳ್ಳಿಯಲ್ಲಿ ಸಂಚಾರ ವ್ಯವಸ್ಥೆ ಸರಿದೂಗಿಸಲು ಹೆಣಗಾಡಬೇಕು. ಬೈಪಾಸ್ ರಸ್ತೆ ತ್ವರಿತವಾಗಿ ಆದರೆ ಮಾತ್ರ ಸಂಚಾರ ಸುಧಾರಣೆ ಕಾಣಲು ಸಾಧ್ಯ.
–ಮಹೇಶ್ ಕುಮಾರ್, ಸಂಚಾರ ಎಸ್ಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT