ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಲ್ಲಿ ಅರಳಿದೆ ಇಲ್ಲಿ!

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

-ಕೋಡಕಣಿ ಜೈವಂತ ಪಟಗಾರ

**

ಕೃಷಿಕ್ಷೇತ್ರ ಸದ್ಯ ಎದುರಿಸುತ್ತಿರುವ ಬಿಕ್ಕಟ್ಟಿನಲ್ಲಿ ಭವಿಷ್ಯ ಹೇಗೆ ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಹುಡುಕಾಟ ನಡೆಸಿದವರು ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ರಾಮನಾಳ ಗ್ರಾಮದ ಈರಯ್ಯ ಹಟಿಗನಾಳ. ಆಗ ಅವರಿಗೆ ಹೊಳೆದಿದ್ದು ಲಿಲ್ಲಿ ಹೂವಿನ ಕೃಷಿ. ಗುತ್ತಿಗೆ ಭೂಮಿಯಲ್ಲೇ ಹೂವಿನ ಕೃಷಿಯಲ್ಲಿ ಹಸನಾದ ಬದುಕು ಕಟ್ಟಿಕೊಂಡಿದ್ದಾರೆ.

ಈರಯ್ಯ ಅವರದು ಎರಡು ಎಕರೆ ಜಮೀನು. ಜೋಳದ ಕೃಷಿಗೆ ಜೋತುಬಿದ್ದಿದ್ದ ಅವರಿಗೆ ಬರುತ್ತಿರುವ ಆದಾಯ ಕಡಿಮೆ ಎನಿಸಿದಾಗ ಹೂವಿನ ಕೃಷಿಯ ಆಲೋಚನೆ ಹೊಳೆಯಿತು. ಈ ಕೃಷಿಕನ ಗ್ರಾಮದಲ್ಲಿ ಹೂವಿನ ಬೆಳೆಗಾರರು ಇರಲಿಲ್ಲ. ಹೀಗಾಗಿ ಮಾಹಿತಿ ಪಡೆದುಕೊಳ್ಳುವುದು ಹೇಗೆಂಬ ಚಿಂತೆಯೂ ಅವರನ್ನು ಕಾಡಿತು. ನೇರವಾಗಿ ಹೂವಿನ ವ್ಯಾಪಾರಿಗಳನ್ನು ಸಂಪರ್ಕಿಸಿ ಚರ್ಚಿಸಿದರು. ಕಲಘಟಗಿ ಹಾಗೂ ಹುಬ್ಬಳ್ಳಿಯ ವ್ಯಾಪಾರಸ್ಥರನ್ನು ಮಾತಿಗೆಳೆದು ಮಾರುಕಟ್ಟೆಯಲ್ಲಿ ಯಾವ ಹೂವಿನ ಕೊರತೆಯಿದೆ, ಯಾವುದಕ್ಕೆ ಒಳ್ಳೆಯ ಬೆಲೆ ಸಿಗಬಹುದೆಂದು ಮಾಹಿತಿ ಸಂಗ್ರಹಿಸಿದರು.

ಗೋವಾದಲ್ಲಿ ಲಿಲ್ಲಿ ಎಂದು ಕರೆಯಲ್ಪಡುವ ಹೂವಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ ಎನ್ನುವ ಮಾಹಿತಿ ತಿಳಿದು, ಅಲ್ಲಿಂದಲೇ ಆ ಹೂವಿನ 18 ಸಾವಿರ ಗಡ್ಡೆಗಳನ್ನು ವ್ಯಾಪಾರಸ್ಥರ ಮೂಲಕವೇ ತರಿಸಿಕೊಂಡರು.

ಕೃಷಿ ಹೇಗೆ?: ತಮಗಿರುವ ಎರಡು

ಎಕರೆಯಲ್ಲಿ ಜೋಳ, ಮೆಣಸು ಕೃಷಿಯನ್ನು ಮುಂದುವರೆಸಿದ ಅವರು, ಹೂವಿನ ಕೃಷಿಗಾಗಿ ಆರು ಎಕರೆ ಜಮೀನನ್ನು ಲಾವಣಿ ಪಡೆದರು. ನಾಟಿಪೂರ್ವದಲ್ಲಿ ಆಳವಾಗಿ ಉಳುಮೆ ಮಾಡಿಸಿ, ತಗ್ಗು–ದಿನ್ನೆಗಳ ಜಮೀನಿಗೆ ಹಸಿರು ಹೊದಿಸಲು ತುಸು ಜಾಸ್ತಿ ಶ್ರಮ ಹಾಕಿದರು. ಉಳುಮೆ ನಂತರ ಗಿಡದಿಂದ ಗಿಡಕ್ಕೆ ನಾಲ್ಕು ಅಡಿ, ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಅಂತರದಲ್ಲಿ ಅರ್ಧ ಅಡಿಯ ಗುಂಡಿ ತೆಗೆದು ಒಂದು ಬುಟ್ಟಿಯಷ್ಟು ಕಾಂಪೋಸ್ಟ್‌ ಗೊಬ್ಬರ ಹಾಕಿ ಗಡ್ಡೆಯನ್ನು ಊರಿದರು. 15 ಲಾರಿ ಲೋಡ್‌ಗಳಷ್ಟು ಕಾಂಪೋಸ್ಟ್‌ ಗೊಬ್ಬರವನ್ನು ಬಳಸಿದರು. ಸ್ಪ್ರಿಂಕ್ಲರ್ ಸಹಾಯದಿಂದ ನೀರುಣಿಸಿದರು. ಗಡ್ಡೆ ಊರಿದ ಇಪ್ಪತ್ತು ದಿನಕ್ಕೆ ಸಸಿಗಳು ಚಿಗುರಲು ಆರಂಭಿಸಿದವು. ಯಥೇಚ್ಛ ಬಿಸಿಲು ಉಂಡು ಹುಲುಸಾಗಿ ಬೆಳೆದ ಗಿಡಗಳು ಆರು ತಿಂಗಳಲ್ಲಿ ಅಲ್ಲಲ್ಲಿ ಹೂ ಬಿಡತೊಡಗಿದವು. ಸಿಗುತ್ತಿರುವ ಬೆರಳೆಣಿಕೆಯಷ್ಟು ಹೂವುಗಳನ್ನು ದೂರದ ಮಾರುಕಟ್ಟೆಗೆ ಕೊಂಡೊಯ್ಯುವುದು ವೆಚ್ಚದಾಯಕವೆಂದು ಒಂದು ವರ್ಷದವರೆಗೆ ಮಾರಾಟಕ್ಕೆ ಹೋಗಲಿಲ್ಲ. ವರ್ಷದ ನಂತರ ಇಳುವರಿಯ ಪ್ರಮಾಣ ಏರುಗತಿಗೆ ಸಾಗಿತು. ಆಗ ಮಾರಾಟ ಪ್ರಕ್ರಿಯೆ ಆರಂಭಿಸಿದರು.

ಗಿಡದ ಬೆಳವಣಿಗೆಯ ಆಧಾರದಲ್ಲಿ ಸಿಗುವ ಹೂವಿನ ಪ್ರಮಾಣ ನಿಗದಿ ಆಗುತ್ತದೆ. ಯಥೇಚ್ಛ ಎಲೆಗಳನ್ನು ಹೊಂದಿರುವ ಗಿಡದ ಪೊದೆಗಳಲ್ಲಿ ಸಿಗುವ ಹೂವಿನ ಪ್ರಮಾಣ ಜಾಸ್ತಿ.

ಒಂದು ಗುಣಿಯಲ್ಲಿ

ಒಂದು ಗಡ್ಡೆಯನ್ನು ಊರಿ ದ್ದರಿಂದ ಒಂದು ವರ್ಷ ಕಳೆಯು ವವರೆಗೆ ಗಡ್ಡೆಯ ಗಾತ್ರ ದುಪ್ಪಟ್ಟು ಆಗಿರುತ್ತದೆ. ಗಿಡದ ನಡುವಲ್ಲಿ ಹೂವು ಅರಳಿಸಿಕೊಳ್ಳಬಲ್ಲ ದಪ್ಪನೆಯ ದಂಟುಗಳು ಹುಟ್ಟಿ ಕೊಳ್ಳುತ್ತವೆ. ಒಂದೊಂದು ಗಿಡ ದಲ್ಲಿ 3-5 ದಂಟುಗಳು ಉದ್ದನಾಗಿ ಮೇಲೇಳುತ್ತವೆ. ಪ್ರತೀ ದಂಟಿನಿಂದ 8-10 ಹೂವುಗಳು ಕೊಯ್ಲಿಗೆ ಸಿಗುತ್ತವೆ. ಒಮ್ಮೆ ನಾಟಿ ಮಾಡಿದ ಗಡ್ಡೆಗಳಿಂದ ಇಪ್ಪತ್ತು ವರ್ಷದವರೆಗೆ ಹೂವಿನ ಇಳುವರಿ ಪಡೆಯಬಹುದು. ಇವರ ಜಮೀನಿನಲ್ಲಿ ಆರು ವರ್ಷ ಪೂರೈಸಿರುವ ಹೂವಿನ ಗಿಡಗಳಿವೆ. ಪ್ರತೀ ಗಿಡದ ಬುಡದಲ್ಲಿ 10-12 ಗಡ್ಡೆಗಳು ಬೆಳವಣಿಗೆ ಹೊಂದಿವೆ.

ಸುಲಭ ನಿರ್ವಹಣೆ: ಸುಗಂಧರಾಜ ಹೂವು ಹೋಲುವ ಲಿಲ್ಲಿ ಹೂವಿನ ಕೃಷಿ ನಿರ್ವಹಣೆ ಬಲು ಸುಲಭ. ಸುಗಂಧರಾಜ ಗಿಡಗಳ ಗಡ್ಡೆಗೆ ಕೊಳೆರೋಗ ಸಂಭವ ಜಾಸ್ತಿ. ಇವುಗಳಿಗೆ ಕೊಳೆ ರೋಗದ ಭಯವಿಲ್ಲ. ಹೂವನ್ನು ಕಡಿಯುವ ಹುಳದ ಭೀತಿಯಿಲ್ಲ. ಉದ್ದನಾಗಿ ಬೆಳೆಯುವ ಹೂವು ಬಿಳಿ ಬಣ್ಣದಲ್ಲಿರುತ್ತದೆ. ವರ್ಷಕ್ಕೊಮ್ಮೆ ಕಾಂಪೋಸ್ಟ್‌ ಗೊಬ್ಬರ ಹಾಕುತ್ತಾರೆ. ಯಾವ ರಾಸಾಯನಿಕ ಗೊಬ್ಬರವನ್ನೂ ಬಳಸುತ್ತಿಲ್ಲ. ಕಳೆ ಗಿಡಗಳು ಹೂವಿನ ಗಿಡವನ್ನು ಮೀರಿ ಬೆಳೆಯದಂತೆ ಗಮನ ವಹಿಸುತ್ತಾರೆ. ಸಾಲಿನ ಮಧ್ಯೆ ಉಳುಮೆ ಮಾಡಿ ಮಣ್ಣನ್ನು ಸಡಿಲಗೊಳಿಸುತ್ತಾರೆ. ಪ್ರತೀವರ್ಷ ಜನವರಿಯಲ್ಲಿ ಗಿಡಗಳ ಎಲೆಗಳನ್ನು ಕತ್ತರಿಸುತ್ತಾರೆ. ತುಂಡರಿಸಿದ ಎಲೆಗಳನ್ನು ಅದೇ ಗಿಡದ ಬುಡಕ್ಕೆ ಹಾಕಿ ಮಣ್ಣು ಮುಚ್ಚುತ್ತಾರೆ. ಒಂದು ತಿಂಗಳೊಳಗಾಗಿ ಪುನಃ ಹೊಸ ಎಲೆಗಳು ಬೆಳೆದಿರುತ್ತವೆ. ಒಂದೂವರೆ ತಿಂಗಳಲ್ಲಿ ಹೂವಿನ ಇಳುವರಿ ಕೊಯ್ಲಿಗೆ ಸಿಗುತ್ತದೆ.

ಭರ್ತಿ ಇಳುವರಿ: ಜನವರಿಯಿಂದ ಮಾರ್ಚ್‌ ತಿಂಗಳವರೆಗೆ ಹೂವಿನ ಇಳುವರಿ ಪ್ರಮಾಣ ಕಡಿಮೆ. ಮುಂಗಾರು ಮಳೆಯ ನಂತರ ಡಿಸೆಂಬರ್‌ವರೆಗೆ ಹೂವು ಸಿಗುತ್ತದೆ. ಕೊಯ್ದ ಹೂವುಗಳನ್ನು ಸಂಗ್ರಹಿಸಿ ಮೂವತ್ತು ಹೂವುಗಳನ್ನು ಒಟ್ಟಿಗೆ ಸೇರಿಸಿ ಒಂದು ಬಂಡಲ್ ತಯಾರಿಸುತ್ತಾರೆ. ಒಂದು ಬಂಡಲ್ ಹೂವಿಗೆ ಐದು ರೂಪಾಯಿ ದರ. ನಿತ್ಯ ಸರಾಸರಿ 250 ಬಂಡಲ್ ಹೂವು ಸಿಗುತ್ತದೆ.

ಬೆಳಗಿನ ಜಾವ ಆರು ಗಂಟೆಯಿಂದಲೇ ಕೊಯ್ಲು ಆರಂಭಿಸ ಬೇಕು. ಹೂವನ್ನು ಬೇಗ ಕೊಯ್ಲು ಮಾಡುವುದು ಅಗತ್ಯ. ತಡವಾದರೆ ಅರಳಿಬಿಡುತ್ತದೆ. ಅರಳಿ ನಿಂತರೆ ಮಾಲೆ ತಯಾರಿಸುವುದು ಕಷ್ಟ. ಸೂಕ್ತ ಬೆಲೆ ಸಿಗುವುದಿಲ್ಲ. ಹಾಗಾಗಿ ಕೊಯ್ಲು ಮಾಡಿದ ತಕ್ಷಣ ತಿಳುವಾದ ದಾರ ಸುತ್ತಿ ಬಂಡಲ್ ಕಟ್ಟುವುದು ಸೂಕ್ತ. ಬಂಡಲ್ ಮಾಡಿ ಇಟ್ಟಲ್ಲಿ ಹೂವು ಅರಳುವುದಿಲ್ಲ. ಸಾಯಂಕಾಲದವರೆಗೂ ಕೊಯ್ಲಿನ ಸ್ಥಿತಿಯಲ್ಲಿ ಇದ್ದ ಹಾಗೆ ಕಾಪಾಡಿಕೊಂಡಿರಬಹುದು. ಜೂನ್ ತಿಂಗಳಿನಲ್ಲಿ ದಿನಕ್ಕೆ ಸರಾಸರಿ 400 ಬಂಡಲ್ ಹೂವು ಸಿಕ್ಕಿತ್ತು. ಐದು ರೂಪಾಯಿಯಂತೆ ದರ ಸಿಕ್ಕಿದ್ದು ₹60,000 ಆದಾಯ ಗಳಿಸಿದ್ದರು. ಕತ್ತರಿಸಿದ ಹೂವುಗಳನ್ನು ಕಲಘಟಗಿ, ಹುಬ್ಬಳ್ಳಿ ಮಾರುಕಟ್ಟೆಗೆ ಕಳಿಸುತ್ತಾರೆ. ಹೂವಿನ ಕೊಯ್ಲಿಗೆ ದಿನನಿತ್ಯ ಮೂವರು ಕಾರ್ಮಿಕರ ನೆರವು ಪಡೆಯುತ್ತಾರೆ. ಅವರ ಕೂಲಿಗಾಗಿ ತಿಂಗಳಿಗೆ ₹10,000 ವೆಚ್ಚವಾಗುತ್ತದೆ. ಹೂವಿನ ದರದಲ್ಲಿ ಏರಿಳಿತವಾಗುವ ಸಂಭವವೂ ಇದೆ. ಗಣೇಶ ಚತುರ್ಥಿ, ರಮ್‍ಜಾನ್, ದೀಪಾವಳಿ ವೇಳೆಗೆ ಪ್ರತಿ ಕಟ್ಟಿಗೆ ಆರು ರೂಪಾಯಿ ದರ ಸಿಕ್ಕಿದ್ದೂ ಇದೆ.

(ಲಿಲ್ಲಿ ಪುಷ್ಪ ಕೃಷಿಯಲ್ಲಿ ಯಶ ಕಂಡ ಈರಯ್ಯ)

ಭೂಮಿಯ ಲಾವಣಿಗಾಗಿ ಪ್ರತಿ ವರ್ಷ ₹70,000 ಪಾವತಿಸುತ್ತಿದ್ದಾರೆ. ಹೂವಿನ ಕೃಷಿಯಲ್ಲಿ ಇವರಿಗೆ ಭರವಸೆ ಮೂಡಿದೆ. ತಮ್ಮ ಎರಡು ಎಕರೆ ಜಮೀನಿನಲ್ಲಿಯೂ ಹೂವಿನ ಕೃಷಿ ಅಳವಡಿಸಿಕೊಳ್ಳುವ ಆಲೋಚನೆಯಲ್ಲಿದ್ದಾರೆ. ಗಲಾಟೆ ಹೂವಿನ ಬೀಜಗಳಿಗೆ ರೈತರೊಬ್ಬರಲ್ಲಿ ಈಗಾಗಲೇ ಅವರು ಬೇಡಿಕೆ ಸಲ್ಲಿಸಿದ್ದಾರಂತೆ. ಸಂಪರ್ಕಕ್ಕೆ: 87229 69664

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT