ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೀರವ್ವ ಬೀಜ ಆಯಾಕ...

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

‘ರಾತ್ರಿ ಶ್ಯಾನೆ (ಬಹಳ) ಗಾಳಿ ಬೀಸೈತಿ. ಜಗ್ಗಿಷ್ಟು ಬೀಜ ಬಿದ್ದಿರ್ತಾವ. ಜಲ್ದಿ, ಜಲ್ದಿ ಬರ್‍ರಿ ಆಯಾಕ...’

ರಾಯಚೂರು ಜಿಲ್ಲೆ ಯರಗೇರಾದ ಸಾಬವ್ವ ಅವತ್ತು ಬೆಳ್ಳಂಬೆಳಿಗ್ಗೆ ಜತೆಗಿದ್ದವರನ್ನು ಹುರಿದುಂಬಿಸಿ ಕರೆಯುತ್ತಿದ್ದರು. ಕೈಯಲ್ಲಿ ಮೂರು ಗೊಬ್ಬರ ಚೀಲಗಳು ಬೇರೆ. ದೂರದ ಹೊಲಗಳಲ್ಲಿರುವ ಬೇವಿನ ಮರಗಳನ್ನು ಹುಡುಕಿಕೊಂಡು ಅವರ ಸವಾರಿ ಹೊರಟಿತ್ತು.

ಸೂರ್ಯ ನೆತ್ತಿಗೇರುವ ಹೊತ್ತಿಗೆ ವಾಪಸ್‌ ಬರುವ, ಹಾಗೆ ವಾಪಸ್‌ ಬರುವಾಗ ಆ ಮೂರೂ ಚೀಲಗಳಲ್ಲಿ ಬೇವಿನ ಬೀಜವನ್ನು ತುಂಬಿಕೊಂಡು ತರುವ ಗುರಿಯನ್ನೂ ಅವರ ತಂಡ ಹಾಕಿಕೊಂಡಿತ್ತು.

ಸಾಬವ್ವ ಮಾತ್ರವಲ್ಲ; ರಾಯಚೂರು, ಕೊಪ್ಪಳ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಯಾವುದೇ ತಾಲ್ಲೂಕಿನ ಯಾವುದೇ ಹಳ್ಳಿಗೆ ಹೋದರೂ ಕೃಷಿಕಾರ್ಮಿಕರು ದಂಡಿ ದಂಡಿಯಾಗಿ ಬೇವಿನಬೀಜ ಆಯಲು ಹೋಗುವಂತಹ ನೋಟಗಳು ಈಗ ಕಣ್ಣಿಗೆ ಬೀಳುತ್ತವೆ. ಒಂದುವೇಳೆ ಶಾಲೆಗೆ ರಜೆ ಇದ್ದರೆ ತಂಡದಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚಾಗಿರುತ್ತದೆ! ದಂಡಿಯಾತ್ರೆಯಂತೆ ಈ ಗುಂಪುಗಳ ಯಾತ್ರೆ ಬೇವಿನ ಮರಗಳಿರುವ ಹೊಲಗಳತ್ತ ಹೊರಟುಬಿಡುತ್ತದೆ.

ಬೇವಿನ ಬೀಜದ ಪ್ರಯೋಜನ ತಿಳಿಯುತ್ತಾ ಹೋದಂತೆ; ಆರೋಗ್ಯ ಕ್ಷೇತ್ರದಲ್ಲಿ, ಕೃಷಿ ಭೂಮಿಯಲ್ಲಿ ಅದರ ಬಳಕೆ ಹೆಚ್ಚಾದಂತೆ; ವಾಣಿಜ್ಯ ದೃಷ್ಟಿಯಿಂದ ಮಹತ್ವ ಗಿಟ್ಟಿಸಿದಂತೆ ಆ ಬೀಜಕ್ಕೂ ಅದನ್ನು ಆಯುವವರಿಗೂ ಎಲ್ಲಿಲ್ಲದ ಬೇಡಿಕೆ ಬಂದಿದೆ. ಮೊದಲು ಮಕ್ಕಳ ತಲೆಯಲ್ಲಿ ಹೇನಾದರೆ ಬೊಗಸೆ ಬೀಜವನ್ನಷ್ಟೇ ತಂದು, ಕುಟ್ಟಿ ತಲೆಗೆ ಹಾಕುತ್ತಿದ್ದವರು, ಈಗ ದೊಡ್ಡ ಚೀಲ ಹಿಡಿದುಕೊಂಡು ಅದರ ತುಂಬಾ ಬೇವಿನ ಫಲವನ್ನು ಆಯ್ದು ತರುತ್ತಿದ್ದಾರೆ.

ಕೆಲವು ವರ್ಷಗಳ ಹಿಂದಿನವರೆಗೆ ಬೇವಿನ ಬೀಜ ಆಯ್ದು ತಂದವರು ಹಳ್ಳದಲ್ಲಿ ತೊಳೆದು, ಅವುಗಳ ಮೇಲಿನ ತೊಗಟೆಯನ್ನು ಸುಲಿದು, ಬೀಜವನ್ನು ಪೂರ್ಣ ಒಣಗಿಸಿಯೇ ಕೊಡಬೇಕಿತ್ತು. ಬೇಡಿಕೆ ಹೆಚ್ಚುತ್ತಾ ಹೋದಂತೆ ಕಾರ್ಮಿಕರಿಗೆ ಬೀಜವನ್ನು ತೊಳೆಯುವ ತಾಪತ್ರಯ ತಪ್ಪಿಹೋಗಿದೆ. ಈಗ ಬೀಜವನ್ನು ಸುಮ್ಮನೆ ಆಯ್ದು ತಂದುಕೊಟ್ಟರೆ ಸಾಕು ಎನ್ನುವುದು ಮಧ್ಯವರ್ತಿಗಳು ತಮ್ಮ ನಿಯಮದಲ್ಲಿ ಮಾಡಿಕೊಂಡಿರುವ ಸಡಿಲಿಕೆ. ಕೆಲಸ ಹಗುರವಾಗಿದ್ದರಿಂದ ಬೀಜ ಆಯಲು ಬರುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ರಾಯಚೂರು ಹಾಗೂ ಪಕ್ಕದ ಕೊಪ್ಪಳ ಜಿಲ್ಲೆಗಳಲ್ಲೇ ಸಾವಿರಾರು ಕುಟುಂಬಗಳು ಈ ಕೆಲಸದಲ್ಲಿ ತೊಡಗಿರುವ ಅಂದಾಜಿದೆ.

ಬಿದಿರಿನಂತೆ ಬೇವಿನ ಮರ ಕೂಡ ಬಡವರ ಪಾಲಿನ ಸಾಗುವಾನಿ. ಬೇಸಿಗೆಯೇ ಇರಲಿ, ಬರಗಾಲವೇ ಬರಲಿ, ಹಚ್ಚಹಸಿರಾಗಿ ಬೆಳೆಯುವ ಈ ಮರ, ಕೃಷಿಕಾರ್ಮಿಕರ ಬದುಕನ್ನು ಹಸನಾಗಿಸುವ ಕಾಮಧೇನು. ಈ ಮರದ ಕಾಂಡ, ಎಲೆ, ಕಾಯಿ... ಹೀಗೆ ಪ್ರತಿಯೊಂದೂ ರೈತರ ಬಳಕೆಗೆ ಬೇಕು. ಬಹುತೇಕ ಕೃಷಿ ಉಪಕರಣಗಳು ಬೇವಿನ ಮರದ ತುಂಡುಗಳಿಂದಲೇ ತಯಾರಾಗಿರುತ್ತವೆ. ಈ ಮರದ ಕಟ್ಟಿಗೆಗೆ ಹುಳು ಹಿಡಿಯುವುದಿಲ್ಲ. ಹೀಗಾಗಿ ರೈತರು ರಂಟೆ, ಕುಂಟೆಗಳನ್ನೆಲ್ಲ ಇದೇ ಮರದ ತುಂಡುಗಳಿಂದ ಮಾಡಿಸುವುದು ರೂಢಿ.

ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನ ಆರಂಭದ ಬಳಿಕ ಕೃಷಿ ಚಟುವಟಿಕೆಗಳು ಗರಿಗೆದರದೆ ಇದ್ದಾಗ ಖಾಲಿ ಇರುವ ಗ್ರಾಮೀಣ ಭಾಗದ ಮಹಿಳೆಯರಿಗೆ ಬೇವಿನಬೀಜ ಆಯುವ ಕೆಲಸ ಒಕ್ಕಲುತನದ ಪೂರ್ವದ ಉದ್ಯೋಗವಾಗಿ ಪರಿಣಮಿಸಿದೆ. ಬೇವಿನ ಮರಗಳು ಸಾಮಾನ್ಯವಾಗಿ ಜನವರಿಯಿಂದ ಏಪ್ರಿಲ್‌ವರೆಗೆ ಹೂವು ಬಿಡುತ್ತವೆ. ಜೂನ್ ತಿಂಗಳಲ್ಲಿ ಕಾಯಿಗಳು ಪಕ್ವವಾಗುತ್ತವೆ. ಅಲ್ಲದೆ, ಜುಲೈವರೆಗೂ ಫಲ ಕೊಡುತ್ತವೆ. ಹೂವು ಬಿಟ್ಟು, ಕಾಯಿ ಆದೊಡನೆ ಮಹಿಳೆಯರು ಖಾಲಿ ಚೀಲಗಳೊಂದಿಗೆ ಹೊಲಗಳಿಗೆ ಹೊರಟುಬಿಡುತ್ತಾರೆ. ಐದರಿಂದ ಆರು ಡಬ್ಬ ಕಾಯಿಗಳೊಂದಿಗೆ ಮನೆ ಸೇರುತ್ತಾರೆ. ಪ್ರತಿ ಡಬ್ಬಕ್ಕೆ ಐವತ್ತು ರೂಪಾಯಿಯಂತೆ ದಿನಕ್ಕೆ 300 ರೂಪಾಯಿ ಸಂಪಾದನೆ.

ವಯಸ್ಸಾದ ಗಿಡಗಳಿಂತ ಎಳೆಮರಗಳು ಹೆಚ್ಚು ಬೀಜಗಳನ್ನು ಕೊಡುತ್ತವೆ. ಪ್ರತಿಯೊಂದು ಮರ ಒಂದು ಋತುಮಾನದಲ್ಲಿ ಸರಾಸರಿ 50 ಕೆ.ಜಿಯಷ್ಟು ಇಳುವರಿ ನೀಡುತ್ತದೆ. ಉತ್ತರ ಕರ್ನಾಟಕದ ಹವಾಗುಣ ಈ ಮರಗಳಿಗೆ ಹೇಳಿ ಮಾಡಿಸಿದಂತಿದೆ. ಆದ್ದರಿಂದಲೇ ರಾಜ್ಯದ ಇತರ ಭಾಗಗಳಿಗಿಂತ ಈ ಪ್ರದೇಶದಲ್ಲಿ ಅವುಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಮರಗಳನ್ನು ಕಡಿಯುವ ಪ್ರವೃತ್ತಿ ಹೆಚ್ಚಿದ್ದು, ಅವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.

ಬೇವಿನ ಬೀಜಕ್ಕೆ ಬೇಡಿಕೆ ಹೆಚ್ಚಾಗಿ ಬಂದಾಗ ದಲ್ಲಾಳಿಗಳು ಆಟೊಗಳಲ್ಲಿ ಕಾರ್ಮಿಕರನ್ನು ಬೀಜ ಆರಿಸಲು ದೂರದ ಊರುಗಳಿಗೆ ಕಳುಹಿಸುತ್ತಾರೆ. ಹೀಗಾಗಿ ಕೃಷಿ ಕಾರ್ಮಿಕರು ಹಳ್ಳಿಯಿಂದ 35–45 ಕಿ.ಮೀ. ದೂರದವರೆಗೂ ಹೋಗಬೇಕಾಗುತ್ತದೆ. ರಜಾದಿನಗಳಲ್ಲಿ ಮಕ್ಕಳು ಸಹ ಪಾಲಕರಿಗೆ ಸಾಥ್ ನೀಡುತ್ತಾರೆ. ಹಿರಿಯರಿಗಿಂತ ಈ ಮಕ್ಕಳೇ ಹೆಚ್ಚಿನ ಬೀಜ ಆಯುತ್ತಾರೆ!

ಟನ್‌ಗಟ್ಟಲೆ ಶೇಖರಣೆಯಾದ ಬೀಜವನ್ನು ಮಧ್ಯವರ್ತಿಗಳು ಸಂಸ್ಕರಿಸಿ ಮತ್ತು ವರ್ಗೀಕರಿಸಿ ಕೇರಳ, ತಮಿಳುನಾಡು ಹಾಗೂ ಮಹಾರಾಷ್ಟ್ರಗಳ ಕೈಗಾರಿಕೆಗಳಿಗೆ ಸಾಗಿಸುತ್ತಾರೆ. ತೋಟಗಾರಿಕೆಗೆ, ಅದರಲ್ಲೂ ದ್ರಾಕ್ಷಿ, ಕಬ್ಬು, ದಾಳಿಂಬೆ ಹಾಗೂ ಕೃಷಿ ಬೆಳೆಗಳಿಗೆ ರೋಗ ಹಾಗೂ ಕೀಟ ನಿರ್ವಹಣೆಗಾಗಿ ಬೇವಿನ ಎಣ್ಣೆಯನ್ನು ಬಳಕೆ ಮಾಡಲಾಗುತ್ತದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬೇವಿನ ಬೀಜದ ಕಷಾಯ ಬಳಸಲು ಸರ್ಕಾರದಿಂದ ಸಹ ಪ್ರೋತ್ಸಾಹ ದೊರೆಯುತ್ತಿದೆ. ಯೂರಿಯಾಗೆ ಇತ್ತೀಚೆಗೆ ಬೇವು ಲೇಪನ ಮಾಡಿ, ಪೂರೈಕೆ ಮಾಡುತ್ತಿರುವ ಕಾರಣ ಅದರ ಮಹತ್ವ ಮತ್ತಷ್ಟು ಹೆಚ್ಚಿದೆ.

ಬೇವಿನ ಬೀಜವನ್ನು ಸಂಗ್ರಹಿಸಿದ ಮಧ್ಯವರ್ತಿಗಳು ಅದನ್ನು ಕಚ್ಚಾ ಮತ್ತು ಪಕ್ಕಾ ಎಂದು ಬೇರ್ಪಡಿಸುತ್ತಾರೆ. ಪ್ರತಿ ಕ್ವಿಂಟಲ್ ಕಚ್ಚಾ ಬೀಜಕ್ಕೆ ₹ 800 ಹಾಗೂ ಪಕ್ಕಾ ಬೀಜಕ್ಕೆ ₹ 1800ವರೆಗೆ ಬೆಲೆ ಇದೆ. ಈ ಹಿಂದೆ ಬೇವು ಎಂದೊಡನೆ ಮೂಗು ಮುರಿಯುತ್ತಿದ್ದ ಜನರೂ ಈಗ ಅದನ್ನು ಬೆಳೆಯಲು ಮನಸ್ಸು ಮಾಡುತ್ತಿದ್ದಾರೆ. ಈ ಸಲ ಬಿತ್ತನೆ ಸಮಯಕ್ಕೆ ಹಾಕಿದರೆ ಮುಂದಿನ ಸಲದ ಮುಂಗಾರಿನ ಹೊತ್ತಿಗೆ ಫಸಲು ಕೊಡುತ್ತದೆ ಬೇವು.

‘ರಾಯಚೂರು ಹಾಗೂ ಸುತ್ತಲಿನ ಭಾಗಗಳಲ್ಲಿ ಬೇವಿನ ಮರಗಳು ಹೆಚ್ಚಾಗಿವೆ. ಪ್ರತಿವರ್ಷ ನೂರಾರು ಟನ್‌ ಬೇವಿನಬೀಜ ಇಲ್ಲಿಂದ ಬೇರೆ ರಾಜ್ಯಗಳಿಗೆ ಹೋಗುತ್ತಿದೆ. ಇಲ್ಲೇ ಬೇವಿನ ಬೀಜದ ಮೌಲ್ಯವರ್ಧಿತ ಘಟಕಗಳು ಶುರುವಾದರೆ ಅದರ ಪ್ರಯೋಜನ ಸ್ಥಳೀಯರಿಗೆ ಹೆಚ್ಚಾಗಿ ಸಿಗುತ್ತದೆ’ ಎನ್ನುತ್ತಾರೆ ಬೇವಿನ ಬೀಜದ ಸಗಟು ವಹಿವಾಟು ನಡೆಸುವ ವಲಿ ಪಾಷಾ.

ಹೊಲದ ಬದುವಿನಲ್ಲಿರುವ ಮರಗಳಿಂದ ಉದುರಿದ ಬೀಜ ಆರಿಸಲು ಹೊಲಗಳ ಮಾಲೀಕರು ಬಿಡುವುದಿಲ್ಲ. ಆದರೆ, ‘ಹೊಲದ ಉಳುಮೆ ಕಾರ್ಯಕ್ಕೆ ಯಾವುದೇ ತೊಂದರೆಯಾಗದಂತೆ ಬೀಜ ಆರಿಸುತ್ತೇವೆ’ ಎಂದು ಮಹಿಳೆಯರು ರೈತರ ಮನ ಒಲಿಸುವ ಪರಿ ಅನನ್ಯ. ಹೀಗಾಗಿ ಬೀಜ ಆಯುವವರ ಹಿಂದೆಯೇ ಹೊಲ ಹಾಳಾಗದಂತೆ ನೋಡಿಕೊಳ್ಳಲು ರೈತರೂ ಹೊರಟುಬಿಡುವುದು ರೂಢಿಯಾಗಿದೆ.

‘ಎಲ್ಲಾ ದಿನಾನೂ ಬೀಜ 4–5 ಡಬ್ಬೀನ ಸಿಗಲ್ರಿ. ಒಂದ್‌ ಸಲ ಹೆಚ್‌ ಸಿಕ್ರ, ಇನ್ನೊಂದ್‌ ಸಲ ಕಡ್ಮಿ ಸಿಕ್ತಾವು. ಆದ್ರ ಜೀವ್ನ ನಡಸ್ಯಾಕ ತೊಂದ್ರಿ ಆಗಿಲ್ಲ. ಬೀಜ ಆರ್ಸಾಕ ಹೋದ್ರ ಭೂಮ್ತಾಯಿ ಎಂದೂ ನಮ್ಗ ಮೋಸ ಮಾಡಿಲ್ಲ ನೋಡ್ರಿ’ ಎನ್ನುತ್ತಾರೆ ಸಾಬಕ್ಕ. ‘ಈ ಕಹಿ ಬೀಜಾನ ನೋಡ್ರಿ ಸಾಹೇಬ್ರ ಹಬ್ಬದಾಗ ನಮ್ಗ ಸಿಹಿ ಊಟಕ್ಕ ದಾರಿ ಮಾಡೂದು’ ಎಂದು ಅವರು ಕೃತಜ್ಞತೆಯಿಂದ ಹೇಳುತ್ತಾರೆ.

‘ನಾವ್‌ಗೋಳು ಸಣ್ಣೋರಿದ್ದಾಗ ಎಷ್ಟೊಂದು ಬೇವಿನ ಮರ್‌ಗೋಳು ಇದ್ವು. ಈಗ ಶ್ಯಾನೆ ಕಡ್ಮಿ ಆಗ್ಯಾವು. ಹಿಂಗ ಕಡ್ಮಿ ಅಕ್ಕೊಂತ ಹೋದ್ರ, ಮುಂದ ಹ್ಯಾಂಗ ಏನ’ ಎನ್ನುವ ಅವರ ಮಾತು ಮತ್ತೆ ಮತ್ತೆ ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT