ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಇನ್ನೂ ಬರ; ಅಲ್ಲಿ ಆಗಲೇ ಹಾಲ್ನೊರೆ!

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

–ನಾಗೇಂದ್ರ ಮುತ್ಮುರ್ಡು

*

ಸಾಗರದ ಸತೀಶನಿಗೆ ನಿಟ್ಟೂರಿಗೆ ಹೋಗುವ ಅವಸರ. ತರಾತುರಿಯಿಂದ ‘ಹೊಂಡಾ’ ಏರಿ ಹೊರಟವನು ಹಸಿರುಮಕ್ಕಿಯ ತನಕ ಬಂದು ಹಾಗೇ ನಿಂತುಬಿಟ್ಟ. ಜೋರು ಮಳೆಯಿಲ್ಲದ ಕಾರಣ ಆತ ತನ್ನ ಆ ದಿನದ ಪ್ರಯಾಣ ಕೈಬಿಟ್ಟಿದ್ದ.

ಅರೆ! ಇದೇನಿದು? ಮಳೆ ಜೋರಾದರೆ ನಾವೆಲ್ಲ ಪ್ರಯಾಣ ನಿಲ್ಲಿಸುವುದುಂಟು. ಆದರೆ ಮಳೆ ಇಲ್ಲದ್ದರಿಂದಲೇ ಪಯಣ ಕೈಬಿಡುವುದೆ?

ಹೌದು, ಮಳೆ ಚೆನ್ನಾಗಿ ಆದರಷ್ಟೇ ಹಸಿರುಮಕ್ಕಿಯಲ್ಲಿ ಓಡಾಟ, ಸಾಗಾಟ. ಇಲ್ಲದಿದ್ದರೆ ಎಲ್ಲಾ ಬಂದ್!

ಆದದ್ದಿಷ್ಟೆ… ‘ಲಿಂಗನಮಕ್ಕಿ’ ಜಲಾಶಯದ ಹಿನ್ನೀರ ಪ್ರದೇಶ ಈ ಹಸಿರುಮಕ್ಕಿ. ಶಿವಮೊಗ್ಗೆಯ ಸಾಗರದ ಕಡೆಯಿಂದ ನಿಟ್ಟೂರು, ಕೊಲ್ಲೂರು, ಕುಂದಾಪುರಗಳಿಗೆ ಹೋಗುವವರಿಗೆ ಈ ಹಸಿರುಮಕ್ಕಿಯಲ್ಲಿರುವ ಬಾರ್ಜ್‌ಗಳ ಮೂಲಕ ತಮ್ಮ ವಾಹನ ಸಮೇತ ಜಲಾಶಯ ದಾಟಿ ಸಾಗುವುದು ಸಮೀಪದ ದಾರಿ. ಆದರೆ ಕಳೆದೆರಡು ವರ್ಷಗಳಿಂದ ಮಳೆ ತೀರಾ ಕಡಿಮೆಯಾಗಿದೆ. ಈ ವರ್ಷವೂ ಮುಂಗಾರು ಇನ್ನೂ ಸಾಕಷ್ಟು ಸುರಿಯದೆ ಇರುವುದರಿಂದ ಇಲ್ಲಿ ಬಾರ್ಜ್‌ಗಳು ತೇಲಲಿಕ್ಕೆ ಸಾಲುವಷ್ಟು ಕೂಡ ನೀರಿಲ್ಲದಂತೆ ಜಲಾಶಯ ಬರಿದಾಗಿದೆ. ಹೀಗಾಗಿ ಬಾರ್ಜ್‌ಗಳು ಬಂದಾಗಿ 2 ತಿಂಗಳುಗಳೇ ಆಗಿವೆ. ಇದರಿಂದ ನಿಟ್ಟೂರು, ಕುಂದಾಪುರ ತಲುಪಲು ಹೊಸನಗರದ ಮೂಲಕ ನೂರಾರು ಕಿ.ಮೀ. ಸುತ್ತುದಾರಿ ಬಳಸಬೇಕಾಗಿದೆ. ಹಾಗಾಗಿಯೇ ಸತೀಶ ಅಂದಿನ ಪ್ರಯಾಣ ಕೈಬಿಟ್ಟದ್ದು.

(ಜಲಾಶಯವೀಗ ಮೇವಿನ ಮೈದಾನ)

ಹಸಿರುಮಕ್ಕಿ ಹೆಸರೇನೋ ಸೊಗಸಾಗಿದೆ. ಆದರೆ ಈಗ ಹಸಿರೂ ಇಲ್ಲ, ಹಕ್ಕಿಗಳಿಗೆ ಸಾಕಷ್ಟು ನೀರೂ ಇಲ್ಲ ಎಂಬಂತಾಗಿದೆ. ಹಿಂದೆ ಜಲಾಶಯ ತುಂಬಿಕೊಂಡಿರುವಾಗ ಹಸಿರುಮಕ್ಕಿಯ ಸುತ್ತಣ ಹಸಿರೆಲ್ಲ ಆ ನೀರಲ್ಲಿ ಪ್ರತಿಫಲಿಸುತ್ತಿದ್ದ ಚಿತ್ರದ ನೆನಪಿನೊಂದಿಗೆ ಅಲ್ಲಿಗೆ ಹೋದವರಿಗೆ, ಬಾರದ ಮಳೆಯಿಂದಾಗಿ ಬರಿದಾದ ಜಲಾಶಯದಲ್ಲಿ ಎಲ್ಲವೂ ಬಣ ಬಣ! ಜೂನ್ ಕೊನೆಯಲ್ಲೊಮ್ಮೆ ಛಾಯಾಗ್ರಾಹಕ ಮಿತ್ರ ವಿ.ಡಿ.ಭಟ್ಟ ಸುಗಾವಿಯೊಂದಿಗೆ ನೀರಿಲ್ಲದ ಆ ನೀರಾಶಯದಲ್ಲಿ ಒಂದಿಡೀದಿನ ಓಡಾಡಿದಾಗ, ಮಲೆನಾಡು ಬಿಟ್ಟು ಮರುಭೂಮಿಯಲ್ಲಿ ತಿರುಗಾಡಿಸಿದಂತೆ ಎನಿಸಿತ್ತು. ಓಯಸಿಸ್‌ಗಳಂತೆ ಎಲ್ಲೋ ಅಲ್ಲಲ್ಲಿ ಹೊಂಡಗಳಲ್ಲಿ ಉಳಿದಿರುವ ನೀರು ಬಿಟ್ಟರೆ ಉಳಿದಂತೆ ಎಲ್ಲಾ ಖಾಲಿ ಖಾಲಿ. ಜೂನ್ ತಿಂಗಳು ಕಳೆಯುತ್ತ ಬಂದಿದ್ದರೂ ಮುಂಗಾರು ಮಳೆ ಸಾಕಷ್ಟು ಆಗಿರಲಿಲ್ಲ. ಮುಖ್ಯವಾಗಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಶಿವಮೊಗ್ಗದ ಭಾಗದಲ್ಲೇ ಮಳೆ ಮತ್ತೂ ಕಡಿಮೆ ಆಗಿತ್ತು.

‘ಎಷ್ಟೋ ವರ್ಷಗಳಿಂದ ಬಾರ್ಜ್ ಬಂದೇ ಆಗಿರಲಿಲ್ಲ. ಕಳೆದೆರಡು ವರ್ಷ ಕೇವಲ ಎಂಟ್ಹತ್ತು ದಿನ ಮಾತ್ರ ನಿಲ್ಲಿಸಿದ್ವಿ. ಈ ವರ್ಷ ಬಾರ್ಜ್ ನಿಲ್ಸಿ ಆಗಲೇ ಎರಡು ತಿಂಗಳಾಗಿದೆ. ನಮಗೂ ಆದಾಯ ಇಲ್ಲ, ಜನರಿಗೂ ಇನ್ನಿಲ್ಲದ ಪರದಾಟ...’ ಎಂದು ಬಾರ್ಜ್ ಮ್ಯಾನೇಜರ್ ಅಲವತ್ತುಕೊಂಡರು.

‘ಬಾರ್ಜ್ ನಡೆಯುತ್ತಿದ್ದರೆ ನಮ್ಮ ಕ್ಯಾಂಟಿನ್‌ನಲ್ಲೂ ಒಲೆ ಉರಿಯುತ್ತೆ. ನಾವೂ ಬಾಗಿಲು ಹಾಕಿ ಎರಡು ತಿಂಗಳಾಯ್ತು. ಇನ್ನೂ ಮಳೆ ಇಲ್ಲ, ಮುಂದೆ ಏನು ಕತೆಯೋ’ –ಇದು ಕ್ಯಾಂಟೀನ್ ಮಾಲೀಕ ನಾಗರಾಜ ಅವರ ಕಳವಳ.

ಕಳೆದ ಡಿಸೆಂಬರ್‌ನಲ್ಲೊಮ್ಮೆ ಅಲ್ಲಿ ಹೋದಾಗ, ತುಂಬಿಕೊಂಡಿದ್ದ ಜಲಾಶಯದ ಹಿನ್ನೆಲೆಯಲ್ಲಿ ಸುಂದರ ಸೂರ್ಯಾಸ್ತದ ಚಿತ್ರ ಕ್ಲಿಕ್ಕಿಸಿದ ನೆನಪಿತ್ತು. ಆದರೀಗ ಚಿತ್ರಪಟವೇ ಪೂರ್ಣ ಬದಲಾಗಿತ್ತು. ಲೊಚಕ್, ಲೊಚಕ್ ಎಂದು ನಿರಂತರವಾಗಿ ದಡಕ್ಕೆ ಮುತ್ತಿಡುತ್ತಿದ್ದ ತೆರೆಗಳು ಅಲ್ಲಿರಲಿಲ್ಲ. ನೀರಿನ ಮೇಲ್ಮೈನ ಸಪಾಟು ಮೈದಾನದ ಅಡಿಯಲ್ಲಿದ್ದ ದಿನ್ನೆ, ಕೊರಕಲುಗಳು, ಕಣಿವೆ, ಗುಡ್ಡಗಳೆಲ್ಲ ಗೋಚರಿಸತೊಡಗಿದ್ದವು.

(ಬಾರ್ಜಿಲ್ಲದೆ ತೆಪ್ಪದಲ್ಲೇ ಸಾಗಿದೆ ಪಯಣ)

ಹಿಂದೊಮ್ಮೆ ಸಮೃದ್ಧ ಅರಣ್ಯದ ಅಂಗವಾಗಿದ್ದ ಮುಗಿಲೆತ್ತರದ ಮರಗಳೆಲ್ಲ ನೀರಲ್ಲಿ ಮುಳುಗಿ ಮರಣ ಹೊಂದಿ ಅರ್ಧ ಶತಮಾನವೇ ಕಳೆದಿದೆ. ಆದರೂ ‘ಅವಕಾಶ ಸಿಕ್ಕರೆ ಮತ್ತೆ ಚಿಗುರುವೆವೇನೋ’ ಎನ್ನುವ ಆಸೆಯಿಂದಲೋ ಎಂಬಂತೆ ಅವು ಇನ್ನೂ ನೆಲಕ್ಕಚ್ಚಿ ನಿಂತೇ ಇವೆ! ಇದೀಗ, ಮೈ ಮುಚ್ಚಿಕೊಂಡಿದ್ದ ಸುತ್ತಲಿನ ನೀರಿನ ಬಟ್ಟೆ ಕಳಚಿ ಬಿದ್ದಾಗ, ಬಯಲಲ್ಲಿ ಬೆತ್ತಲಾಗಿದ್ದನ್ನೂ ಲೆಕ್ಕಿಸದೇ, ನಿಲ್ಲಿಸಲ್ಪಟ್ಟ ತಮ್ಮ ಉಸಿರನ್ನರಸುತ್ತ, ಅಳಿದು ಹೋದ ಅರಣ್ಯ ವೈಭವದ ಕತೆ ಹೇಳುತ್ತಿದ್ದವು. ಅಸ್ಥಿ ಪಂಜರವಾದ ಅಂತಹ ಸಹಸ್ರಾರು ಮರಗಳೆಲ್ಲ ಸೇರಿ, ಮಸಣದೊಳಗಿನ ಪ್ರೇತಗಳ ರೂಪ ತಾಳಿ, ಪ್ರಕೃತಿಯ ಮೇಲೆ ಮಾನವ ಸಾಧಿಸಲು ಹೊರಟ ಪಾರಮ್ಯವನ್ನು ಅಣಕಿಸುತ್ತಿರುವಂತೆನಿಸಿತು!

ತುಂಬಿದ ನೀರು ಕೆಳಗಿಳಿಯುತ್ತ ಸಾಗಿದಂತೆ ಗುಡ್ಡದಂಚಿನ ಮಣ್ಣಿನಲ್ಲಿ ಅಂದಂದಿನ ನೀರಿನ ಮಟ್ಟ ನಿರ್ಮಿಸಿದ ಗೆರೆಗಳು ಗತಕಾಲದ ನೀರ ಸಮೃದ್ಧಿಯ ದಾಖಲೆ ಬರೆದಿಟ್ಟಿದ್ದವು.

ಜಲಾಶಯ ಭರ್ತಿಯಾದರೆ ನೂರಾರು ಅಡಿ ನೀರು ನಿಲ್ಲಬಹುದಾದ ಅಲ್ಲಲ್ಲಿನ ನೀರ ತಡಿಗಳಲ್ಲಿ ಮೀನುಗಾರರ ತಾತ್ಕಾಲಿಕ ಟೆಂಟ್‌ಗಳು ತಲೆ ಎತ್ತಿದ್ದವು. ಬಾರ್ಜ್‌ಗಳು ಬಂದಾಗಿದ್ದರಿಂದ ಪ್ರಯಾಣಿಕರಿಗಾಗಿ ಇಟ್ಟಿದ್ದ ಹರಿಗೋಲುಗಳಲ್ಲೊಂದನ್ನು ಬಳಸಿ ತಾನೇ ಹುಟ್ಟು ಹಾಕುತ್ತ ಮಹಿಳೆಯೊಬ್ಬರು ಜಲಾಶಯ ದಾಟುತ್ತಿದ್ದರು. ನೀರಿಳಿದಂತೆ ಮೇಲೆದ್ದು ತುಸು ಹಸಿರಾದ ನೆಲಗಳು ದನಗಳ ಮೇವಿನ ಮೈದಾನಗಳಾಗಿದ್ದವು. ರಿವರ್‍ಟರ್ನ್, ಬ್ರಹ್ಮಿನಿಕೈಟ್, ಟಿಕ್ಟಿಭ, ಬೆಳ್ಳಕ್ಕಿಗಳಿಂದ ಮೀನಿನ ಬೇಟೆ ಸಾಗಿತ್ತು.

ಎತ್ತರದಲ್ಲಿದ್ದ ನಡುಗಡ್ಡೆಗಳಲ್ಲಿನ ಅಕೇಶಿಯಾ ನೆಡುತೋಪುಗಳಲ್ಲಿ ಒಂದಿಷ್ಟು ಹಸಿರು ಇಣುಕುತ್ತಿತ್ತು. ನೆರಳಿಗಾಗಿ ಅಲ್ಲಿ ಹೋಗಿ ನೋಡಿದರೆ ಒಡೆದು ಹಾಕಿದ ಹೆಂಡದ ಬಾಟಲಿಯ ರಾಶಿಗಳು, ಚೆಲ್ಲಾಡಿದ ಪ್ಲಾಸ್ಟಿಕ್ ಕವರ್‌ಗಳು ಪ್ರಕೃತಿಯೆಡೆಗಿನ ಮನುಷ್ಯನ ವಿಕೃತಿಯನ್ನು ಸಾರುತ್ತಿದ್ದವು. ಅಪರೂಪಕ್ಕೊಮ್ಮೆ ನೀರಿನಿಂದ ಮೇಲೆ ಕಾಣಿಸಿಕೊಳ್ಳುವ ಸ್ಥಳಗಳಲ್ಲೂ ಮಜಾ ಉಡಾಯಿಸಿ, ಕಸ ಚೆಲ್ಲದೆ ಹಾಗೆ ಬಿಡುವುದೆಂದರೆ, ಎಲ್ಲಾದ್ರೂ ಉಂಟೆ!?

ಶಬ್ದ ಮಾಡದೇ ನಿಂತ ಬಾರ್ಜ್‌ಗಳು, ಸಪ್ಪಳ ನಿಲ್ಲಿಸಿದ ತೆರೆಗಳು, ಮೌನವಾಗಿ ನಿಂತ ಒಣ ಮರಗಳು, ಆಗಾಗ ಚೀತ್ಕರಿಸುವ ಟಿಟ್ಟಿಭಗಳ ‘ಟಿಟಿಟ್ರಿಂವ್’ ಸಪ್ಪಳ ಬಿಟ್ಟರೆ ಇಡೀ ಕಣಿವೆಯಲ್ಲಿ ಗಂವ್‌ವೆನ್ನುವ ಗಾಢ ಮೌನ ನೆಲೆ ನಿಂತಂತಿತ್ತು.

ಇದು ಕೇವಲ ಹಸಿರುಮಕ್ಕಿಯ ಚಿತ್ರವಾಗಿರದೆ ಹೊಳೆ ಬಾಗಿಲು, ಮಡೆನೂರುಗಳು ಸೇರಿ ಇಡೀ ಲಿಂಗನಮಕ್ಕಿ ಜಲಾಶಯದ ಸದ್ಯದ ನಿರಾಶಾದಾಯಕ ಚಿತ್ರವೂ ಹೌದು. ಲಿಂಗನಮಕ್ಕಿಯ ಹೊಸ ಅಣೆಕಟ್ಟೆ ಕಟ್ಟಿದ ಮೇಲೆ ಸದಾ ನೀರಿನಡಿಯಲ್ಲಿ ಮುಳುಗಿ ಮಲಗಿರುತ್ತಿದ್ದ ಮಡೆನೂರು ಅಣೆಕಟ್ಟೆ ಕೂಡ ಈಗ ನೀರ ಬರದಿಂದಾಗಿ ಮೈಕೊಡವಿ ಮೇಲೆದ್ದು ಬಿಸಿಲು ಕಾಯಿಸಿಕೊಳ್ಳುತ್ತಿದೆ. ಜೋಗದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿ ಹಲವು ದಿನಗಳೇ ಸಂದಿದ್ದವು. ಈ ವರ್ಷವೂ ಮಳೆ ಕೈಕೊಟ್ಟರೆ ಬರುವ ಬೇಸಿಗೆಯಲ್ಲಿ ಬೆಳಕಿಗಾಗಿ ಚಿಮಣಿ ಬುಡ್ಡಿಯೇ ಗತಿಯಾದೀತು.

(ಕಾಮನಬಿಲ್ಲೆಂಬ ಭರವಸೆಯು ಮೂಡಿದೆ)

ಜಲವಿಲ್ಲದ ಜಲಾಶಯದಲ್ಲಿ ದಿನವಿಡೀ ಓಡಾಡಿ ನೀರ ಬರದ ಚಿತ್ರದೊಂದಿಗೆ ಸಂಜೆ ವೇಳೆಗೆ ಮೇಲೇರಿ ಬಂದಾಗ ಇಳಿ ಬಿಸಿಲಿನ ನಡುವೆ ತುಂತುರು ಮಳೆ ಮೇಳೈಸಲು ಪ್ರಾರಂಭಿಸಿತು.

ಇದ್ದಕ್ಕಿದ್ದಂತೆ ಮಿತ್ರ ಸುಗಾವಿ ಥಟ್ಟನೆ ‘ಅಲ್ಲಿ ನೋಡು’ ಎಂದು ಕೂಗಿ ಗಮನಸೆಳೆದ. ಪೂರ್ವದಿಗಂತದಲ್ಲಿ ಆ ಅದ್ಭುತ ಸೌಂದರ್ಯ ಘಟಿಸಿತ್ತು! ಹೊಸ ಆಸೆಯ ಸೆಲೆಯೆಂಬಂತೆ, ನೆಲದ ಈ ಅಂಚಿಂದ ಆ ಅಂಚಿನವರೆಗೆ ನಿಚ್ಚಳವಾಗಿ, ಇಡಿಯಾಗಿ ಮೂಡಿನಿಂತಿದ್ದ ಸುಂದರವಾದ ಕಾಮನಬಿಲ್ಲು, ‘ಕತ್ತಲು ಕಳೆದು ಬೆಳಕು ಬಂದೇ ಬರುತ್ತದೆ’ ಎಂಬ ಸಂದೇಶ ಸಾರುತ್ತಿರುವಂತೆನಿಸಿ, ಮುಂಗಾರಿನ ಬಗ್ಗೆ ಆಸೆ ಚಿಗುರಿಸಿಕೊಂಡು ಹೊಸ ನಿರೀಕ್ಷೆಯೊಂದಿಗೆ ಹಿಂತಿರುಗಿದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT