ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕುನವೂ ಪ್ರತಿಭೆಯೂ

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ಕೊಂಚಿತಾ ಮಾರ್ಟಿನೆಜ್ ಶಕುನಗಳನ್ನು ನಂಬುತ್ತಾರೆ. ಸ್ಪೇನ್ ದೇಶದ ಪರವಾಗಿ ಆಡಿ 1994ರಲ್ಲಿ ವಿಂಬಲ್ಡನ್ ಗ್ರ್ಯಾನ್ ಸ್ಲ್ಯಾಮ್ ಗೆದ್ದು ಬೀಗಿದ್ದ ಟೆನಿಸ್ ಅಟಗಾರ್ತಿ ಅವರು.

ಈ ಸಲ ಅವರು ಲಂಡನ್‌ನಲ್ಲಿ ಇದ್ದುದು ತಾವು ಆಡಲು ಅಲ್ಲ. ಗಾರ್ಬೈನ್ ಮುಗುರುಜಾ ಎಂಬ 23 ವಯಸ್ಸಿನ ಆಟಗಾರ್ತಿಯ ಅಭ್ಯಾಸಕ್ಕೆ ನೆರವಾಗಲು. ಮುಗುರುಜಾ ತರಬೇತುದಾರ ಸ್ಯಾಮ್ ಸುಮಿಕ್ ಲಾಸ್ ಏಂಜಲಿಸ್ ನಲ್ಲಿ ಗರ್ಭಿಣಿ ಪತ್ನಿಯ ಜೊತೆ ಕಾಲ ಕಳೆಯುವ ಅನಿವಾರ್ಯವಿತ್ತು. ಹೀಗಾಗಿ ತಮ್ಮ ನೆಚ್ಚಿನ ಶಿಷ್ಯೆಗೆ ಬಲ ತುಂಬುವ ಜವಾಬ್ದಾರಿಯನ್ನು ಅವರು ಕೊಂಚಿತಾಗೆ ವಹಿಸಿದರು.

ಕೊಂಚಿತಾ ಟೆನಿಸ್ ಪ್ರತಿಭೆಯ ಬಗೆಗೆ ಎರಡು ಮಾತಿಲ್ಲ. ಆದರೆ ಅವರ ಶಕುನ ಪ್ರೀತಿ ಹಾಗೂ ನಂಬಿಕೆಗಳನ್ನು ಎಲ್ಲರೂ ಒಪ್ಪುವುದು ಕಷ್ಟ. ಮುಗುರುಜಾ ಕೂಡ ಅದೇ ಕಾರಣಕ್ಕೆ ಪರದಾಡಿದರು.

ವಿಂಬಲ್ಡನ್ ಟೆನಿಸ್ ಅಭ್ಯಾಸಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು ಕೋರ್ಟ್ ನಂಬರ್ ಹನ್ನೊಂದನ್ನು. ಕೊಂಚಿತಾ ಸದಾ ಆ ಕೋರ್ಟ್ ನಲ್ಲೇ ಅಭ್ಯಾಸ ಮುಂದುವರಿಸುವಂತೆ ತಾಕೀತು ಮಾಡಿದರು. ಒಂದೇ ಕಿಟ್ ತರಬೇಕು. ಅದರೊಳಗೆ ಸದಾ ಅವವೇ ಬಾಲ್ ಗಳಿರಬೇಕು. ಅಭ್ಯಾಸ ಎನ್ನುವುದರಲ್ಲೇ ಒಂದು ಏಕತಾನತೆ ಇದೆ. ಅದರ ಜತೆಗೆ ಕೊಂಚಿತಾ ಹೀಗೆಯೇ ಮಾಡು ಎಂದು ಸಣ್ಣಪುಟ್ಟ ವಿಷಯಗಳನ್ನೆಲ್ಲ ಹೇರಿದಾಗ ಮೊದಮೊದಲು ಮುಗುರುಜಾ ಅವರಿಗೆ ಸಂಕಟವಾಯಿತು. ತಂಗುದಾಣದಿಂದ ಅಂಕಣದತ್ತ ಮೊದಲು ಕೊಂಚಿತಾ ಸಾಗಬೇಕು. ಅವರನ್ನು ಮುಗುರುಜಾ ಹಿಂಬಾಲಿಸಬೇಕು.

ಇರಲಿ, ಹೀಗೆಲ್ಲಾ ಮಾಡಿದರಾದರೂ ಗೆಲುವು ಸಂದೀತು ಎಂಬ ಆಶಾವಾದ 23ರ ಹುಡುಗಿಯ ಮನದಲ್ಲಿ ಇತ್ತು. ವಿಂಬಲ್ಡನ್ ಫೈನಲ್ಸ್‌ನಲ್ಲಿ ಎದುರಲ್ಲಿ ಇದ್ದುದು ಅಮೆರಿಕದ ವೀನಸ್ ವಿಲಿಯಮ್ಸ್. ಅವರ ವಯಸ್ಸು 37. ಕೊಂಚಿತಾ 1994ರಲ್ಲಿ ವಿಂಬಲ್ಡನ್ ಫೈನಲ್ಸ್‌ನಲ್ಲಿ ಸೋಲಿಸಿದ್ದು ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿಯರಲ್ಲಿ ಒಬ್ಬರೆನಿಸಿದ ಮಾರ್ಟಿನಾ ನವ್ರಾಟಿಲೋವಾ ಅವರನ್ನು. ಆಗ ಅವರ ವಯಸ್ಸೂ 37. ಇದೂ ಶುಭ ಶಕುನ ಎಂದು ಕೊಂಚಿತಾ ಹೇಳಿದಾಗ ಮುಗುರುಜಾ ಮುಗುಳ್ನಕ್ಕಿದ್ದರು.

ಇಷ್ಟೆಲ್ಲಾ ನಂಬಿಕೆಗಳು ಹಾಗೂ ಪ್ರತಿಭೆ ಮುಗುರುಜಾ ಅವರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ತಂದಿತ್ತಿತು. ಗೆದ್ದ ಮರುಕ್ಷಣವೇ ಅವರು ತರಬೇತುದಾರ ಸ್ಯಾಮ್ ಸಮಿಕ್ ಗೆ ಫೋನಾಯಿಸಿದರು. ಅತ್ತರು, ನಕ್ಕರು, ಖುಷಿಯ ತೊದಲು ನುಡಿಗಳ ದಾಟಿಸಿದರು. ಗುರು-ಶಿಷ್ಯೆಯ ಈ ಸಂವಹನ ಸುಖ ಕಂಡು ಕೊಂಚಿತಾ ಕಣ್ಣಲ್ಲೂ ಹನಿಗಳಾಡಿದವು.

ಮುಗುರುಜಾ ಬಾಲಪ್ರತಿಭೆ. 3ನೇ ವಯಸ್ಸಿನಿಂದಲೇ ಟೆನಿಸ್ ಆಡಿದವರು. ಅಮ್ಮ ಸ್ಕಾರ್ಲೆಟ್ ಬ್ಲ್ಯಾಂಕೊ ವೆನಿಜುವೆಲಾ ದೇಶದವರು. ಅಪ್ಪ ಜೋಸ್ ಆಂಟೋನಿಯೊ ಸ್ಪೇನ್‌ನವರು. ಎರಡೂ ಸಂಸ್ಕೃತಿಗಳ ಹದವರಿತ ಮಿಶ್ರಣ ಮುಗುರುಜಾ. 2012ರಲ್ಲಿ ವೃತ್ತಿಪರ ಟೆನಿಸ್‌ನಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದು, ಮಿಯಾಮಿ ಓಪನ್ ನಲ್ಲಿ ಮಾಜಿ ನಂಬರ್ 2 ಆಟಗಾರ್ತಿ ವೆರಾ ಜೈನಾವೇರಾ ಅವರನ್ನು ಸೋಲಿಸಿ ಚಕಿತಗೊಳಿಸಿದ್ದರು. 2014ರ ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್ ಫೈನಲ್ಸ್‌ನಲ್ಲಿ ಆಗ ನಂಬರ್ 1 ಆಗಿದ್ದ ಕೆರೆಲಿನ್ ವೊಜ್ನಿಯಾಕಿ ಅವರನ್ನು ಮಣಿಸಿದ್ದರು. ಅದೇ ವರ್ಷ ಫ್ರೆಂಚ್ ಓಪನ್‌ನ ಎರಡನೇ ಸುತ್ತಿನಲ್ಲಿ ಸೆರೆನಾ ವಿಲಿಯಮ್ಸ್‌ಗೆ ಸೋಲಿನ ಬಿಸಿ ಮುಟ್ಟಿಸಿದ್ದರು. ಕಳೆದ ವರ್ಷ ಫ್ರೆಂಚ್ ಓಪನ್‌ನಲ್ಲಿ ವಿಜಯ. ಈ ಸಲ ವಿಂಬಲ್ಡನ್ ವಿಕ್ರಮ.

‘ಬದುಕಿನಲ್ಲಿ ಏರುಪೇರುಗಳ ಅನುಭವಿಸುತ್ತಲೇ ಇದ್ದೇನೆ. ಗೆಲುವು ಪಾಠ. ಸೋಲೂ ಪಾಠವೇ. ಗೆದ್ದ ರಾತ್ರಿ ನಿದ್ದೆ ಬರುವುದಿಲ್ಲ. ಖುಷಿಯ ಕನಸಿಗೇ ಬೇರೆಯದೇ ಅರ್ಥ’ ಎನ್ನುವ ಮುಗುರುಜಾ, ವಿಂಬಲ್ಡನ್ ಪ್ರಶಸ್ತಿ ಗೆದ್ದ ರಾತ್ರಿ ಒಂದೇ ಒಂದು ಗ್ಲಾಸ್ ವೈಟ್ ವೈನ್ ಕುಡಿದು ತಣ್ಣಗಾಗಿದ್ದರು.

**

ಪರಿಚಯ

* ಜನನ: ಅಕ್ಟೋಬರ್‌ 8, 1993

* ಸ್ಥಳ: ಕ್ಯಾರಕಸ್‌, ವೆನಿಜುವೆಲಾ

* ಗೆದ್ದ ಗ್ರ್ಯಾನ್‌ಸ್ಲ್ಯಾಮ್‌: ಫ್ರೆಂಚ್‌ ಓಪನ್‌ (2016), ವಿಂಬಲ್ಡನ್‌ (2017).

* ವೃತ್ತಿಪರ ಟೆನಿಸ್‌ಗೆ ಅಡಿ ಇಟ್ಟಿದ್ದು: 2011.

* ಕೋಚ್‌: ಸ್ಯಾಮ್‌ ಸುಮಿಕ್‌.

* ಇಷ್ಟದ ಕ್ರೀಡಾಪಟುಗಳು: ಸೆರೆನಾ ವಿಲಿಯಮ್ಸ್‌, ಪೀಟ್‌ ಸಾಂಪ್ರಾಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT