ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಖರ ಮಾಹಿತಿ ಕೊರತೆ

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯದಲ್ಲೇ ಸಾರ್ವಜನಿಕ ಜೀವನದಲ್ಲಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲದಿರುವುದರಿಂದ ‘ವಿಶ್ವ ಕನ್ನಡ ಸಮ್ಮೇಳನ ಸದ್ಯಕ್ಕೆ ಬೇಡ’ ಎಂದು ನಮ್ಮ ಕೆಲವು ಪ್ರಮುಖ ಸಾಹಿತಿಗಳು, ಬರಹಗಾರರು ಮತ್ತು ಇತರ ಕ್ಷೇತ್ರಗಳ ಚಿಂತಕರು ಮನವಿ ಮಾಡಿದ್ದಾರೆ (ಪ್ರ.ವಾ., ಸಂಗತ, ಜುಲೈ 21). ಈ ಮನವಿಗೆ ಸರ್ಕಾರ ಪೂರಕವಾಗಿ ಸ್ಪಂದಿಸಬೇಕು.

ವಿಶ್ವ ಕನ್ನಡ ಸಮ್ಮೇಳನಕ್ಕೆ ಸರ್ಕಾರ ₹ 20 ಕೋಟಿ ತೆಗೆದಿರಿಸಿದೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಶಿಕ್ಷಣ ಒಳಗೊಂಡಂತೆ ಪ್ರಮುಖ ಕ್ಷೇತ್ರಗಳಲ್ಲಿ ಕನ್ನಡದ ನಿಜವಾದ ಸ್ಥಿತಿಗತಿ ಬಗ್ಗೆ ಖಚಿತವಾದ ಮಾಹಿತಿ ಸಂಗ್ರಹಿಸಲು ಈ ಹಣ ಬಳಸಿಕೊಳ್ಳಬೇಕು. ಆ ಮಾಹಿತಿಯನ್ನು ನಂತರ ಸಾರ್ವಜನಿಕರ ಮುಂದಿರಿಸಬೇಕು. ಕನ್ನಡ ಭಾಷೆಯ ಸ್ಥಿತಿಗತಿ ಬಗ್ಗೆ ಖಚಿತ ಮಾಹಿತಿ ಅಭಾವದಿಂದಾಗಿಯೇ ಕನ್ನಡ ಪರ ಹೋರಾಟಗಾರರಷ್ಟೇ ಅಲ್ಲ, ನಮ್ಮ ಚಿಂತಕರಲ್ಲಿ ಕೂಡ ಕನ್ನಡದ ಭವಿಷ್ಯದ ಬಗ್ಗೆ ಹತಾಶೆ ಮೂಡಿದೆ.

ಉದಾಹರಣೆಗೆ ಸುಮಾರು 15 ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಖ್ಯೆ ಏರುತ್ತಿದೆ. ಇದರ ಪರಿಣಾಮವಾಗಿ, ಕೆಲವು ವರ್ಷಗಳ ನಂತರ ಕನ್ನಡದಲ್ಲಿ ಬರೆಯುವವರಾಗಲೀ ಅಥವಾ ಕನ್ನಡದ ಪುಸ್ತಕಗಳನ್ನು ಓದುವವರಾಗಲೀ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.

ಆದರೆ ಇದೇ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದ ಜೊತೆಗೆ ಪ್ರಕಟವಾದ ಮಾಹಿತಿಯಲ್ಲಿ ಈ ಪರೀಕ್ಷೆಗೆ ಹಾಜರಾದ 8,56,286 ವಿದ್ಯಾರ್ಥಿಗಳಲ್ಲಿ 5,34,339 (ಶೇ 61) ಮಂದಿ ಕನ್ನಡ ಮಾಧ್ಯಮದವರು ಮತ್ತು 2,80,925 (ಶೇ 33) ಮಂದಿ ಇಂಗ್ಲಿಷ್ ಮಾಧ್ಯಮದವರು ಹಾಗೂ ಉಳಿಕೆ ವಿದ್ಯಾರ್ಥಿಗಳು ಉರ್ದು, ಮರಾಠಿ, ತೆಲುಗು ಮತ್ತು ಹಿಂದಿ ಮಾಧ್ಯಮದವರು ಎಂದು ತಿಳಿಸಲಾಗಿತ್ತು. ಈ ಮಾಹಿತಿ ಕನ್ನಡದ ಭವಿಷ್ಯದ ಬಗ್ಗೆ ನಮ್ಮ ಆತಂಕ ವಾಸ್ತವ ಸ್ಥಿತಿಯನ್ನು ಉತ್ಪ್ರೇಕ್ಷಿಸುತ್ತಿದೆ ಎಂದು ಅನಿಸುವುದಿಲ್ಲವೇ?

ಇದರ ಜೊತೆಗೆ 1957ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದವರ ಪ್ರಮಾಣದಲ್ಲಿ ಯಾವ ರೀತಿಯ ಬದಲಾವಣೆಯಾಗಿದೆ ಎಂಬುದನ್ನು ತಿಳಿಸುವ ಮಾಹಿತಿ ಸಿಕ್ಕಿದರೆ ಒಳ್ಳೆಯದಲ್ಲವೇ?

‘ಬೆಂಗಳೂರಿನಲ್ಲಿ ಕನ್ನಡ ಕೇಳಿಸುತ್ತಿಲ್ಲ’, ‘ಕನ್ನಡ ಪುಸ್ತಕಗಳನ್ನು ಓದುವುದಿಲ್ಲ’ ಎಂಬಂತಹ ಹೇಳಿಕೆಗಳಿಗೂ ವಾಸ್ತವದಲ್ಲಿ ಸಾಕ್ಷ್ಯಾಧಾರಗಳಿಲ್ಲ ಎಂದೇ ನನ್ನ ಅನಿಸಿಕೆ.
- ಗಿರೀಶ ವಿ. ವಾಘ್,
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT