ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚೆಯನ್ನೂ ಸೇರಿಸಿಕೊಳ್ಳಿ

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

‘ಮರ್ಯಾದೆ ಬೇಡವೇ?’ ಎಂಬ ಶೀರ್ಷಿಕೆಯಡಿ ಶಿಕ್ಷಕಿಯರ, ಉಪನ್ಯಾಸಕಿಯರ ಉಡುಗೆ ಬಗೆಗೆ ಕೆಲವರು ತಕರಾರು ಎತ್ತಿದ್ದಾರೆ (ವಾ.ವಾ., ಜುಲೈ 21).

ಅಧ್ಯಯನ, ಅಧ್ಯಾಪನದಿಂದ ಪ್ರಬುದ್ಧರೆನಿಸಿಕೊಳ್ಳಬೇಕಾದ ಪ್ರಾಧ್ಯಾಪಕರು ಇಂತಹ ಅಸಹನೆಯ ಭಾಷೆಯಲ್ಲಿ ಪತ್ರ ಬರೆದಿದ್ದು ವಿಷಾದನೀಯ. ಯುನಿಫಾರ್ಮ್ ಎಂಬ ಬಂಧಕ್ಕೆ ಒಳಗಾಗಿ ಚಿಕ್ಕ ಮಕ್ಕಳು ಸುರಿಯುವ ಮಳೆಯಲ್ಲೂ ನಾಡಿನ ಎಷ್ಟೋ ಕಡೆ ಸಾಕ್ಸ್, ಶೂ ಹಾಕಿಕೊಂಡು ದಿನವಿಡೀ ಒದ್ದೆಯಾಗಿ ಕುಳಿತುಕೊಳ್ಳುವ ಹಿಂಸೆಯ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಈ ಅಸಹಾಯಕ ಮಕ್ಕಳಿಗೆ ಧ್ವನಿ ಕೊಡಬೇಕಾದ ನಾವು ಪ್ರೌಢ ವಯಸ್ಕರ ಬಗ್ಗೆ ಇಲ್ಲದ್ದನ್ನೆಲ್ಲಾ ಸೇರಿಸಿ ವಿವಾದ ಮಾಡಿ ಹೆಂಗಸರನ್ನು ‘ನಿಯಂತ್ರಿಸಲು’ ನೆಪ ಹುಡುಕುತ್ತಿದ್ದೇವೆ. ಇಂತಹವರು ಪದೇ ಪದೇ ನೆನಪಿಸುವ ವಸ್ತ್ರಸಂಹಿತೆಯಲ್ಲಿ ‘ಸೀರೆ’ ಎಂಬುದೇ ನೇರವಾಗಿ ಅಥವಾ ಗುಪ್ತವಾಗಿ ಇವರ ಅಜೆಂಡಾ ಆಗಿರುತ್ತದೆ. (ಆಗ ಗಾಳಿ ಬೀಸುವುದಿಲ್ಲವೇ? ಬಟ್ಟೆ ಹಾರುವುದಿಲ್ಲವೇ?)

ಈ ವಸ್ತ್ರಸಂಹಿತೆಗೆ ಇವರು ಮರೆತದ್ದೊಂದನ್ನು ಸೇರಿಸಲು ಮನವಿ ಮಾಡುತ್ತಿದ್ದೇನೆ. ನಾಡಿನಾದ್ಯಂತ ನಮ್ಮ ‘ಸಂಸ್ಕೃತಿಯ ಧ್ಯೋತಕ’ವಾದ ಪಂಚೆ, ಕಚ್ಚೆಪಂಚೆಗಳನ್ನು ಗಂಡಸರಿಗೆ ಕಡ್ಡಾಯವಾಗಿ ಧರಿಸುವಂತೆ ಆದೇಶ ಹೊರಡಿಸಿ. ಬೈಕ್ ಬಿಡಲಾಗುವುದಿಲ್ಲ, ಸ್ಕೂಟರಲ್ಲಿ ಹಾರಿಹೋಗುತ್ತೆ, ಬಸ್ಸಿನ ರಶ್ಶಿನಲ್ಲಿ ಬಿಚ್ಚಿಹೋಗುತ್ತೆ, ಮಳೆಬರುವಾಗ ಒಂದು ಕೈಯಲ್ಲಿ ಛತ್ರಿ, ಇನ್ನೊಂದು ಕೈಯಲ್ಲಿ ಬ್ಯಾಗು, ಅದರೊಂದಿಗೆ ಊಟದ ಚೀಲ, ಅದರೊಟ್ಟಿಗೆ ಪಂಚೆಯ ಚುಂಗು ಎಲ್ಲಾ ಹಿಡಿದುಕೊಂಡಿರುವಾಗ ಜೋರಾಗಿ ಗಾಳಿಯೂ ಬೀಸಬಹುದು. ಸ್ವಲ್ಪ ಸುಧಾರಿಸಿಕೊಳ್ಳಿ!
- ಡಾ. ಸಬಿತಾ ಬನ್ನಾಡಿ,
ಬಿ.ಆರ್. ಪ್ರಾಜೆಕ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT