ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ: ಬೀದಿ ರಂಪಾಟ ಬೇಡ

ಅಕ್ಷರ ಗಾತ್ರ

ಅಖಿಲ ಭಾರತ ವೀರಶೈವ ಮಹಾಸಭಾದವರು ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಗಳೂರಲ್ಲಿ ಅಭಿನಂದಿಸಿದ್ದರು. ಅಭಿನಂದನೆಗೆ ಕಾರಣ- ಅವರು, ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕಲು ಹಾಗೂ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿಯವರ ಹೆಸರಿಡಲು ಆದೇಶಿಸಿದ್ದು. ಆ ಸಂದರ್ಭದಲ್ಲಿ ಲಿಂಗಾಯತ-ವೀರಶೈವ ಧರ್ಮವನ್ನು ಸ್ವತಂತ್ರ ಧರ್ಮವೆಂದು ಅಂಗೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮಹಾಸಭಾದವರು ಬೇಡಿಕೆ ಸಲ್ಲಿಸಿದ್ದರು.

ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ತೋರಿದ ಮುಖ್ಯಮಂತ್ರಿಗಳು ಕೆಲವರು ‘ಲಿಂಗಾಯತ', ಮತ್ತೆ ಕೆಲವರು `ವೀರಶೈವ', ಇನ್ನು ಕೆಲವರು `ವೀರಶೈವ ಲಿಂಗಾಯತ' ಧರ್ಮ ಎನ್ನುವರು. ಇದರಲ್ಲಿ ಯಾವ ಹೆಸರನ್ನು ಸೂಚಿಸಬೇಕೆಂದು ಕೇಳಿದರು. ಇದೇ ಈಗ ಗಂಭೀರ ಚರ್ಚೆಯ ವಸ್ತುವಾಗಿದೆ. ಕೆಲವರು `ಲಿಂಗಾಯತ' ಎಂದು, ಮತ್ತೆ ಕೆಲವರು `ವೀರಶೈವ ಲಿಂಗಾಯತ' ಎಂದು ರಾಡಿ ಎಬ್ಬಿಸುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಹಿತಾಸಕ್ತಿ, ವೋಟು ಬ್ಯಾಂಕಿನ ರಾಜಕಾರಣ ಅಡಗಿರುವುದು ವಿಷಾದನೀಯ.

ಧರ್ಮ ದಯಾಮೂಲವಾಗಿ ವ್ಯಕ್ತಿಯ ಬದುಕಿನ ರೀತಿ-ನೀತಿಗಳಿಗೆ ಅನ್ವಯಿಸಿದ್ದು. ಅದು ಬೀದಿಯ ರಂಪವಾಗಬೇಕಾಗಿಲ್ಲ. ಭಾರತದಲ್ಲಿರುವವರೆಲ್ಲ ಹಿಂದೂ ಧರ್ಮದ ಪರಿಧಿಯಲ್ಲಿ ಬರುವರು ಎನ್ನುವ ವಾದ ಒಂದುಕಡೆ. ವೀರಶೈವ ಧರ್ಮವೂ ಹಿಂದೂ ಧರ್ಮದ ಒಂದು ಭಾಗ ಎಂದು ಅದಕ್ಕೆ ಆಧಾರ ಕೊಡುವ ಪ್ರಯತ್ನ ಇನ್ನೊಂದೆಡೆ. ಹಿಂದೂ ಪದ ಭೌಗೋಳಿಕ ವ್ಯಾಪ್ತಿಗೆ ಸೇರಿದ್ದೇ ಅಥವಾ ಅದೊಂದು ಧರ್ಮವೇ ಎನ್ನುವ ಚರ್ಚೆಯೂ ನಡೆಯುತ್ತಿದೆ. ಅದು ಭೌಗೋಳಿಕ ವ್ಯಾಪ್ತಿಗೆ ಸೇರಿದ್ದು ಎನ್ನುವುದಾದರೆ ಭಾರತದಲ್ಲಿರುವ ಎಲ್ಲ ಧರ್ಮಗಳೂ ಹಿಂದೂ ಪ್ರದೇಶಕ್ಕೆ ಸೇರಿದವುಗಳೇ. `ಹಿಂದೂ' ಧರ್ಮ ಎನ್ನುವುದಾದರೆ ಬಸವಣ್ಣನವರು ಪ್ರತಿಪಾದಿಸುವ `ಲಿಂಗಾಯತ' ಧರ್ಮ ಅದಕ್ಕೆ ಸೇರುವುದಿಲ್ಲ. ಏಕೆಂದರೆ ಹಿಂದೂ ಧರ್ಮ ಅನೇಕ ಅಸಮಾನತೆಗಳ ಆಗರ. ಅಲ್ಲಿ ಲಿಂಗ ಸಮಾನತೆ ಇಲ್ಲ. ಜಾತ್ಯತೀತ ಮನೋಭಾವವಿಲ್ಲ. ಬಹುದೇವೋಪಾಸನೆ ಇದೆ. ಸ್ಥಾವರ, ದೇವರುಗಳಲ್ಲಿ ನಂಬಿಕೆ ಇದೆ. ಕರ್ಮ ಸಿದ್ಧಾಂತಕ್ಕೆ ಅಂಟಿಕೊಂಡಿದೆ. ಹೀಗೆ ಅಸಮಾನತೆಗಳ ಪಟ್ಟಿ ಬೆಳೆಯುತ್ತಲೇ ಹೋಗುವುದು.

ಬಸವಣ್ಣನವರು ಪ್ರತಿಪಾದಿಸಿರುವ ‘ಲಿಂಗಾಯತ’ ಧರ್ಮದಲ್ಲಿ ಸರ್ವರೂ ಸಮಾನರು. ಹೆಣ್ಣು-ಗಂಡು ಎನ್ನುವ ಅಂತರವಿಲ್ಲ. ಸಕಲ ಜೀವಾತ್ಮರಿಗೆ ಲೇಸು ಬಯಸುವುದೇ ಈ ಧರ್ಮದ ಧ್ಯೇಯ. ದೇವನೊಬ್ಬ ನಾಮ ಹಲವು ಎನ್ನುವಂತೆ ಏಕದೇವೋಪಾಸನೆಗೆ ಒತ್ತು ಕೊಡಲಾಗಿದೆ. ಇಷ್ಟಲಿಂಗ ಹೊರತು ಸ್ಥಾವರ ಲಿಂಗ ಪೂಜೆಗೆ ಅವಕಾಶವಿಲ್ಲ. ಇಂಥ ಇನ್ನೂ ಹಲವು ಸಂಗತಿಗಳ ಕಾರಣದಿಂದ ಲಿಂಗಾಯತ ಧರ್ಮ ಹಿಂದೂ ಧರ್ಮಕ್ಕಿಂತ ವಿಭಿನ್ನವಾದುದು. ಜೈನ, ಬೌದ್ಧ, ಸಿಖ್ ಇದ್ಯಾದಿ ಧರ್ಮಗಳಂತೆ `ಲಿಂಗಾಯತ'ವೂ ಒಂದು ಸ್ವತಂತ್ರ ಧರ್ಮ. ಇದು ಹಿಂದೂ ಧರ್ಮದ ಭಾಗ ಅಲ್ಲವೇ ಅಲ್ಲ. ಲಿಂಗಾಯತ ಎನ್ನುವುದು ಒಂದು ತತ್ವ, ಸಿದ್ಧಾಂತ. ಅದೊಂದು ಜಾತಿಯಲ್ಲ. ಅಂಗದ ಮೇಲೆ ಲಿಂಗ ಧರಿಸಿದವರೆಲ್ಲರೂ ಲಿಂಗಾಯತರೇ. ಶ್ರೀಗುರುವಿನಿಂದ ದೀಕ್ಷೆ ಪಡೆದು ಯಾರು ಬೇಕಾದರೂ ಲಿಂಗಾಯತರಾಗಬಹುದು. ಆಗ ಅವರ ಪೂರ್ವಜನ್ಮವಳಿದು ಪುನರ್ಜಾತರಾಗುವರು. ನರಜನ್ಮ ಹೋಗಿ ಹರಜನ್ಮ ಪ್ರಾಪ್ತವಾಗುವುದು. ಈ ನೆಲೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮ. ಇದರ ಸ್ಥಾಪಕರು ವಿಶ್ವಗುರು ಬಸವಣ್ಣನವರು.

12ನೆಯ ಶತಮಾನದ ಅನುಭಾವಿ ಅಲ್ಲಮಪ್ರಭುದೇವರು `ಬಸವಣ್ಣ ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೂ ಗುರು' ಎಂದು ಗೌರವಿಸಿದ್ದಾರೆ. ದೇವರಿಗೆ ಹೆಸರಿಟ್ಟವರೇ ಬಸವಣ್ಣನವರು ಎಂದು ಸಿದ್ಧರಾಮೇಶ್ವರರು ಹೇಳಿದ್ದಾರೆ. `ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರ', `ಬಸವಣ್ಣನೇ ಗುರು' ಎನ್ನುವ ನಿರ್ಣಯ ಶರಣೆ ಮಹಾದೇವಿಯಕ್ಕನದು. ಹೀಗೆ ಬಸವಣ್ಣನವರ ಸಮಕಾಲೀನ ಶರಣ ಶರಣೆಯರು ಬಸವಣ್ಣನವರೇ ಲಿಂಗಾಯತ ಧರ್ಮದ ಗುರು ಎಂದು ಮನದುಂಬಿ ಹೇಳಿದ್ದಾರೆ. ಲಿಂಗಾಯತ ಶಬ್ದ 8 ವಚನಕಾರರ 10 ವಚನಗಳಲ್ಲಿ 12 ಕಡೆ ಬಳಕೆಯಾಗಿದ್ದರೆ, ಲಿಂಗವಂತ 23 ವಚನಕಾರರ 106 ವಚನಗಳಲ್ಲಿ 173 ಕಡೆ ಬಳಕೆಯಾಗಿದೆ. ಲಿಂಗಾಯತ, ಲಿಂಗವಂತ ಸಮಾನಾರ್ಥಕ ಪದಗಳು.
ಲಿಂಗವಂತನ ನಡೆ ನುಡಿ ಚಾರಿತ್ರ ನಿಂದಕವನಾಡಿದಡೆ
ಆ ಲಿಂಗ ನಿಮ್ಮ ಹಲ್ಲ ಕಳೆವ; ಆ ಲಿಂಗ ನಿಮ್ಮ ನರಕಕ್ಕಿಕ್ಕುವ.
ಆ ಲಿಂಗವಂತ ಲಿಂಗ ಪ್ರಾಣಿಯಾಗಿಪ್ಪ.
ಇದು ಸತ್ಯ ವಚನ.
ಇದ ಕೇಳಿ ಲಿಂಗವಂತನ ನಾಸ್ತಿಕವನಾಡಿದಡೆ
ರೌರವನರಕದಲ್ಲಿಕ್ಕುವ ಕಾಣಾ
ಗುಹೇಶ್ವರಾ.

‘ಲಿಂಗಾಯತ' ಧರ್ಮ ಎನ್ನುವುದು ಅರ್ಥಪೂರ್ಣ. ‘ವೀರಶೈವ ಲಿಂಗಾಯತ' ಧರ್ಮ ಎನ್ನುವವರು ಬಸವಣ್ಣನವರನ್ನು ಧರ್ಮ ಗುರು ಎಂದು ಒಪ್ಪಲು ಸಿದ್ಧರಿಲ್ಲ. ಅವರು ಹೇಳುವ ಪಂಚಾಚಾರ್ಯರನ್ನು ಗುರು ಎಂದು ಲಿಂಗಾಯತ ಧರ್ಮೀಯರು ಒಪ್ಪಲು ಸಿದ್ಧರಿಲ್ಲ. ಲಿಂಗಾಯತ, ವೀರಶೈವ ಎನ್ನುವ ಪದಗಳು ಹಿಂದೆ ಒಂದೇ ಅರ್ಥದಲ್ಲಿ ಬಳಕೆಯಾಗುತ್ತಿದ್ದವು. ಕ್ರಮೇಣ ಗುರು ವರ್ಗ ಮತ್ತು ವಿರಕ್ತ ವರ್ಗದ ಗುರು-ಜಗದ್ಗುರುಗಳ ತಿಕ್ಕಾಟದಿಂದಾಗಿ ಗುರು ವರ್ಗದ ಮಠಾಧೀಶರು ಪಂಚಾಚಾರ್ಯರನ್ನು, ವಿರಕ್ತ ವರ್ಗದ ಮಠಾಧೀಶರು ಬಸವಣ್ಣನವರನ್ನು ತಮ್ಮ ಗುರುಗಳೆಂದು ಅಂಗೀಕರಿಸಿದ ನೆಲೆಯಲ್ಲಿ ಅವೆರಡೂ ಬೇರೆ ಬೇರೆ ಎನ್ನುವಂತಾಗಿವೆ.

ಉಭಯ ವರ್ಗದವರೂ ಬಸವಣ್ಣನವರನ್ನೇ ಗುರು ಎಂದು ಒಪ್ಪಿಕೊಳ್ಳುವುದಾದರೆ ಸಮಸ್ಯೆಯೇ ಉದ್ಭವಿಸದು. ಆದರೆ ಇದಕ್ಕೆ ಗುರು ಪರಂಪರೆಯ ಮಠಾಧೀಶರು ಸಿದ್ಧರಿಲ್ಲ. ಅವರು ಬಸವಣ್ಣನವರನ್ನು ಮತೋದ್ಧಾರಕ ಎನ್ನುತ್ತಾರೆಯೇ ಹೊರತು ಮತಸ್ಥಾಪಕ ಎನ್ನುವುದಿಲ್ಲ. ಮತವೇ ಬೇರೆ, ಧರ್ಮವೇ ಬೇರೆ. ಅದು ಚರ್ಚೆಯ ವಿಷಯ. ಅದೇನೇ ಇದ್ದರೂ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಕರು. ಈ ನೆಲೆಯಲ್ಲಿ ಅವರವರ ಧರ್ಮ ಅವರಿಗೇ ಶ್ರೇಷ್ಠವಾದುದು. ಇದನ್ನರಿತು ತಮ್ಮ ಧರ್ಮದ ತತ್ವ ಸಿದ್ಧಾಂತಗಳನ್ನು ವ್ಯಕ್ತಿಗತ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಅದನ್ನು ಚರ್ಚೆಯ ವಿಷಯವಾಗಿಸಿ ಹಗರಣ ಮಾಡುವ ಅಗತ್ಯವಿಲ್ಲ. ಲಿಂಗಾಯತ ಧರ್ಮೀಯರಿಗೆ ಬಸವಣ್ಣನವರೇ ಧರ್ಮ ಗುರುಗಳು. ವಚನ ಸಾಹಿತ್ಯವೇ ಧರ್ಮ ಗ್ರಂಥ. `ಲಿಂಗಾಯತ' ಧರ್ಮ ನಡೆ ನುಡಿ ಸಿದ್ಧಾಂತಕ್ಕೆ ಮನ್ನಣೆ ನೀಡಿದೆ.
ನಡೆ ನುಡಿ ಸಿದ್ಧಾಂತವಾದಲ್ಲಿ, ಕುಲ ಹೊಲೆ ಸೂತಕವಿಲ್ಲ.
ನುಡಿ ಲೇಸು, ನಡೆಯಧಮವಾದಲ್ಲಿ,
ಅದು ಬಿಡುಗಡೆಯಿಲ್ಲದ ಹೊಲೆ.
ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ,
ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ?
ಆಚಾರವೇ ಕುಲ, ಅನಾಚಾರವೆ ಹೊಲೆ.
ಇಂತೀ ಉಭಯವ ತಿಳಿದರಿಯಬೇಕು.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾತ್ಮಾ ರಾಮ ರಾಮನಾ.

ಮಾದಾರ ಚೆನ್ನಯ್ಯನವರು ಹೇಳುವಂತೆ `ನಡೆ ನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ'. ಈ ದಿಶೆಯಲ್ಲಿ ಗುರು ಬಸವಣ್ಣನವರು ಪ್ರತಿಪಾದಿಸಿದ ಲಿಂಗಾಯತ ಧರ್ಮ ಒತ್ತು ಕೊಟ್ಟದ್ದು ನಡೆ-ನುಡಿ ಒಂದಾದ ಅಂತರಂಗ ಮತ್ತು ಬಹಿರಂಗ ಶುದ್ಧಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT