ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಶ್ಯಪ್‌ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದ ಪ್ರಣಯ್‌

ಅಮೆರಿಕ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಟೂರ್ನಿ; ಪ್ರಶಸ್ತಿಗಾಗಿ ಸೆಣಸಿದ ಭಾರತದ ಆಟಗಾರರು
Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ಅನಾಹೆಮ್‌, ಕ್ಯಾಲಿಫೋರ್ನಿಯಾ: ಭಾರತದ ಎಚ್‌.ಎಸ್. ಪ್ರಣಯ್‌ ಅಮೆರಿಕ ಓಪನ್ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೋಮವಾರ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿದ್ದ ಭಾರತದ ಆಟಗಾರ ಪರುಪಳ್ಳಿ ಕಶ್ಯಪ್‌ಗೆ ಪ್ರಣಯ್‌ ಆಘಾತ ನೀಡಿದರು. ಇಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಪ್ರಣಯ್ 21–15, 20–22, 21–12ರಲ್ಲಿ ಕಶ್ಯಪ್‌ಗೆ ಸೋಲುಣಿಸಿದರು.
ಮೊದಲ ಗೇಮ್‌ನಲ್ಲಿ ಪ್ರಣಯ್ ಸುಲಭದಲ್ಲಿ ಎದುರಾಳಿಯನ್ನು ಮಣಿಸಿ ದರು.

‘ಕಶ್ಯಪ್‌ ಹಾಗೂ ನಾನು ಗುಣಮಟ್ಟದ ಆಟ ಆಡಿದ್ದೇವೆ. ಎರಡನೇ ಗೇಮ್‌ನಲ್ಲಿ ಸೋಲು ಕಂಡ ಬಳಿಕ ನಾನು ತಾಳ್ಮೆಯಿಂದ ಆಡಿದೆ. ಆಟದ ಯೋಜನೆಯನ್ನು ಬದಲಾಯಿಸಿಕೊಂಡೆ. ಎದುರಾಳಿಯ ಮೇಲೆ ಒತ್ತಡ ಹೇರುವಲ್ಲಿ ಸಫಲನಾದೆ ಇದರಿಂದಾಗಿ ಗೆಲ್ಲಲು ಸಾಧ್ಯವಾಯಿತು ಮುಂಬರುವ ನ್ಯೂಜಿ ಲೆಂಡ್ ಓಪನ್‌ನಲ್ಲಿ ಪ್ರಶಸ್ತಿ ಗೆಲ್ಲುವುದು ನನ್ನ ಗುರಿ’ ಎಂದು ಪ್ರಣಯ್‌ ಹೇಳಿ ದ್ದಾರೆ.

ಪ್ರಣಯ್ ಹಾಗೂ ಕಶ್ಯಪ್ ಇಲ್ಲಿಯವರೆಗೆ ಎರಡು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ಪಂದ್ಯಗಳಲ್ಲಿ 1–1ರ ಸಮಬಲದ ಗೆಲುವು ದಾಖಲಿಸಿದ್ದರು. ಈಗ ಪ್ರಣಯ್‌ ಮುನ್ನಡೆ ಸಾಧಿಸಿದ್ದಾರೆ. ಸ್ಮ್ಯಾಷ್ ಹಾಗೂ ದೀರ್ಘವಾದ ರ್‍ಯಾಲಿಗಳಲ್ಲಿ ಪ್ರಣಯ್‌ ಚುರುಕಿನಿಂದ ಆಡಿದರು. ಮೊದಲ ಗೇಮ್‌ನಲ್ಲಿ ಕಶ್ಯಪ್‌ 7–1ರಲ್ಲಿ ಮುಂದಿದ್ದರು.

ಪ್ರಣಯ್ ಈ ಅಂತರವನ್ನು ನಿಧಾನವಾಗಿ ಕಡಿಮೆ ಮಾಡುತ್ತ ಬಂದರು. 9–12ರ ಬಳಿಕ ಐದು ನೇರ ಪಾಯಿಂಟ್ಸ್ ಪಡೆದು 15–15ರಲ್ಲಿ ಸಮಬಲ ಮಾಡಿಕೊಂಡರು. ಇಲ್ಲಿಂದ ಮುಂದೆ ಕಶ್ಯಪ್‌ ಮೇಲುಗೈ ಸಾಧಿಸಿದರು. ಈ ವೇಳೆ ಕ್ರಾಸ್ ಕೋರ್ಟ್‌ ಸ್ಮ್ಯಾಷ್‌ಗಳಿಂದ ಗಮನ ಸೆಳೆದ ಪ್ರಣಯ್ ಆರು ಸತತ ಪಾಯಿಂಟ್ಸ್ ಪಡೆದು ಗೇಮ್‌ ಗೆದ್ದುಕೊಂಡರು.

ಎರಡನೇ ಗೇಮ್‌ನಲ್ಲಿ ಪ್ರಣಯ್ ಹಾಗೂ ಕಶ್ಯಪ್‌ ಬಿರುಸಿನ ರ್‍ಯಾಲಿಗಳನ್ನು ಆಡಿದರು. ಕಶ್ಯಪ್‌ 14–9ರಲ್ಲಿ ಮುನ್ನಡೆ ಸಾಧಿಸಿದರು. ಒಂದು ಹಂತದಲ್ಲಿ ಪ್ರಣಯ್‌ 15–15ರಲ್ಲಿ ಸಮಬಲ ಮಾಡಿಕೊಂಡಿದ್ದರು. ಆದರೆ ಕಶ್ಯಪ್ ಯುವ ಆಟಗಾರನ ಮೇಲೆ ಒತ್ತಡ ಹೇರಿದರು. 20–18ರಲ್ಲಿ ಮುನ್ನಡೆ ಪಡೆದರು. ಪ್ರಣಯ್‌ ಅಪೂರ್ವ ಸ್ಮ್ಯಾಷ್‌ನಿಂದ ಎರಡು ಪಾಯಿಂಟ್ಸ್ ಪಡೆದರು. ಕಶ್ಯಪ್‌ ತಮ್ಮ ನೈಜ ಆಟದ ಮೂಲಕ ಗೇಮ್‌ ಒಲಿಸಿಕೊಂಡರು.

ನಿರ್ಣಾಯಕ ಗೇಮ್‌ನಲ್ಲಿ ಪ್ರಣಯ್‌ ಯೋಜನೆ ಬದಲಿಸಿದರು. ಇದರಿಂದಾಗಿ 13–7ರಲ್ಲಿ ಮುನ್ನಡೆ ಪಡೆಯುವ ಅವಕಾಶ ಅವರಿಗೆ ಸಿಕ್ಕಿತು.24 ವರ್ಷದ ಆಟಗಾರ ಸುಲಭದಲ್ಲಿ ಎದುರಾಳಿಯ ಮೇಲೆ ಒತ್ತಡ ಹಾಕಿ ತಬ್ಬಿಬ್ಬುಗೊಳ್ಳುವಂತೆ ಮಾಡಿದರು. ಈ ಹಂತದಲ್ಲಿ ಕಶ್ಯಪ್‌ ಅನಗತ್ಯ ತಪ್ಪುಗಳನ್ನು ಮಾಡಿದರು. ಇದರ ಲಾಭ ಪಡೆದ ಪ್ರಣಯ್‌ ಗೇಮ್‌ ಗೆದ್ದು ಸಂಭ್ರಮಿಸಿದರು.

2010ರ ಯೂತ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದ ಪ್ರಣಯ್‌ ಬಳಿಕ ಗಾಯದ ಸಮಸ್ಯೆಯಿಂದ ತೆರೆಮರೆಗೆ ಸರಿದಿದ್ದರು. ಇದು ಅವರ ಅಭ್ಯಾಸದ ಮೇಲೂ ಸಾಕಷ್ಟು ಪ್ರಭಾವ ಬೀರಿತು. 2011ರಲ್ಲಿ ಮೊಣಕಾಲು ಗಾಯಕ್ಕೆ ಒಳಗಾದರು.  2013ರಲ್ಲಿ ಅವರು ಅಂಗಳಕ್ಕೆ ಮರಳಿದರು. ಇದೇ ವರ್ಷ ನಡೆದ ಟಾಟಾ ಓಪನ್‌ನಲ್ಲಿ ಫೈನಲ್ ತಲುಪಿದ್ದರು. ಬಿಟ್‌ಬರ್ಗರ್‌, ಸೈಯದ್ ಮೋದಿ ಹಾಗೂ 2014ರ ಮಕಾವ್ ಓಪನ್‌ನಲ್ಲಿ ಫೈನಲ್‌ ಪ್ರವೇಶಿಸಿದರು. ವಿಯೆಟ್ನಾಂ ಹಾಗೂ ಇಂಡೊನೇಷ್ಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದರು.

2016ರ ಸ್ವಿಸ್ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ ಬಳಿಕ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 12ನೇ ಸ್ಥಾನಕ್ಕೆ ಏರಿದರು. ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ ವೇಳೆ ಮತ್ತೊಮ್ಮೆ ಗಾಯದ ಸಮಸ್ಯೆ ಅವರನ್ನು ಕಾಡಿತ್ತು. ಬೇಗನೆ ಚೇತರಿಸಿಕೊಂಡ ಅವರು ಈಗ ಮತ್ತೊಮ್ಮೆ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಸೆಮಿಫೈನಲ್‌ನಲ್ಲಿ ಪ್ರಣಯ್‌ 21–14, 21–19ರಲ್ಲಿ ವಿಯೆಟ್ನಾಂನ ಟೆನ್ ಮೆನ್ ನಜುಮ್ ಮೇಲೆ ಜಯದಾಖಲಿಸಿ ಫೈನಲ್ ತಲುಪಿದ್ದರು. ಕಶ್ಯಪ್ 15–21, 21–15, 21–16ರಲ್ಲಿ ಕೊರಿಯಾದ ಆಟಗಾರ ಕುವಾಂಗ್ ಹೀ ಹೊಯೊ ಮೇಲೆ ಜಯಗಳಿಸಿದ್ದರು.

ಈ ವರ್ಷ ಇಂಡೊನೇಷ್ಯಾ ಓಪನ್‌ನಲ್ಲಿ ಪ್ರಣಯ್‌ ಮಲೇಷ್ಯಾದ ಲೀ ಚಾಂಗ್ ವೀ ಹಾಗೂ ಚೀನಾದ ಚೆನ್ ಲಾಂಗ್‌ಗೆ ಆಘಾತ ನೀಡಿದ್ದರು.
‘ಗಾಯದ ಸಮಸ್ಯೆ ನನ್ನನ್ನು ಬಹಳವಾಗಿ ಕಾಡಿತು. ಇದರಿಂದಾಗಿ ಕೆನಡಾದಲ್ಲಿ ನಾನು ಉತ್ತಮವಾಗಿ ಆಡಲು ಸಾಧ್ಯವಾಗಲಿಲ್ಲ. ಸೋಲನ್ನು  ಸಹಜವಾಗಿ ತೆಗೆದುಕೊಂಡೆ. ಆಸ್ಟ್ರೇ ಲಿಯಾ ಓಪನ್‌ನಲ್ಲಿ ಸೋತಾಗ ಕೂಡ ಒತ್ತಡಕ್ಕೆ ಒಳಗಾಗಲಿಲ್ಲ. ಈಗ ದೈನಂದಿನ ಅಭ್ಯಾಸಕ್ಕೆ ಮರಳಿದ್ದೇನೆ. ಇಲ್ಲಿಯ ಪ್ರಶಸ್ತಿ ನನಗೆ ಉತ್ಸಾಹ ತುಂಬಿದೆ’ ಎಂದು ಪ್ರಣಯ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT