ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತರ ಬಾಲೆಗೆ ಗರ್ಭಪಾತ ಅವಕಾಶ ಕೇಂದ್ರದ ಪ್ರತಿಕ್ರಿಯೆ ಕೇಳಿದ ‘ಸುಪ್ರೀಂ’

Last Updated 28 ಜುಲೈ 2017, 10:48 IST
ಅಕ್ಷರ ಗಾತ್ರ

ನವದೆಹಲಿ: ಅತ್ಯಾಚಾರ ಸಂತ್ರಸ್ತೆಯಾಗಿರುವ 10 ವರ್ಷದ ಬಾಲಕಿಗೆ  ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಕೇಂದ್ರ ಸರ್ಕಾರ ಮತ್ತು ಇತರರಿಗೆ ಸುಪ್ರೀಂ ಕೋರ್ಟ್‌ ನೋಟಿಸ್ ಜಾರಿ ಮಾಡಿದೆ.

ಬಾಲಕಿ ಈಗ 26 ವಾರಗಳ ಗರ್ಭಿಣಿ.  1971ರ ಗರ್ಭಪಾತ ಕಾಯ್ದೆಯ ಪ್ರಕಾರ, 20 ವಾರಗಳವರೆಗಿನ ಭ್ರೂಣಗಳನ್ನು ವೈದ್ಯಕೀಯ ಕಾರಣಗಳಿಗಾಗಿ ತೆಗೆಯಲು ಅವಕಾಶ ಇದೆ. ಒಂದು ವೇಳೆ, ಭ್ರೂಣದಲ್ಲಿ ಆನುವಂಶಿಕ ತೊಂದರೆ ಇದ್ದರೆ, ಅದಕ್ಕಿಂತ ಹೆಚ್ಚು ಅವಧಿಯ ಭ್ರೂಣಗಳನ್ನು ತೆಗೆಯಬಹುದು.

ಬಾಲಕಿಯು 26 ವಾರಗಳ ಗರ್ಭಿಣಿ ಎಂಬುದು ದೃಢಪಟ್ಟಿದ್ದರಿಂದ, ಚಂಡೀಗಡದ ಸ್ಥಳೀಯ ನ್ಯಾಯಾಲಯ ಗರ್ಭಪಾತ ಮಾಡಿಸಿಕೊಳ್ಳಲು ಜುಲೈ18ರಂದು ಅವಕಾಶ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರಿದ್ದ ನ್ಯಾಯಪೀಠವು  ಈ ಪ್ರಕರಣದಲ್ಲಿ ನ್ಯಾಯಾಲಯದ ಸಹಾಯಕನಾಗಿ (ಅಮಿಕಸ್‌ ಕ್ಯೂರಿ) ಕಾರ್ಯನಿರ್ವಹಿಸುವಂತೆ ಚಂಡೀಗಡ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ಸೂಚಿಸಿದೆ.

ಅಲ್ಲದೇ, ಸಂತ್ರಸ್ತ ಬಾಲಕಿಯನ್ನು  ಬುಧವಾರ ವೈದ್ಯರ ಮಂಡಳಿಯಿಂದ ತಪಾಸಣೆ ಮಾಡಿಸುವಂತೆ ನಿರ್ದೇಶಿಸಿದೆ. ಒಂದು ವೇಳೆ ಗರ್ಭಪಾತಕ್ಕೆ ಅವಕಾಶ ನೀಡಿದರೆ ಬಾಲಕಿಯ ಜೀವಕ್ಕೆ ಏನಾದರೂ ತೊಂದರೆ ಇದೆಯೇ ಎಂಬ ಬಗ್ಗೆ ವೈದ್ಯರ ಮಂಡಳಿ ಪರಿಶೀಲನೆ ನಡೆಸಬೇಕು ಎಂದು ನ್ಯಾಯಪೀಠ ಹೇಳಿದೆ.

ಆರೋಗ್ಯ ತಪಾಸಣೆಗೆ ಹಾಜರಾಗುವುದಕ್ಕಾಗಿ ಬಾಲಕಿ ಹಾಗೂ ಆಕೆಯ ಪೋಷಕರೊಬ್ಬರಿಗೆ ಪ್ರಯಾಣ ಸೌಲಭ್ಯವನ್ನು ಒದಗಿಸಬೇಕು ಎಂದು ಸದಸ್ಯ ಕಾರ್ಯದರ್ಶಿಗೆ ಸೂಚಿಸಿದೆ.

ವೈದ್ಯರ ಮಂಡಳಿ ನೀಡುವ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದಿರುವ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಇದೇ 28ಕ್ಕೆ ನಿಗದಿ ಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT