ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಬಾಹ್ಯಾಕಾಶದ ‘ಆದಿತ್ಯ’

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಯು.ಆರ್‌. ರಾವ್ ಎಂದೇ ಖ್ಯಾತರಾಗಿದ್ದ ಉಡುಪಿ ರಾಮಚಂದ್ರ ರಾವ್‌ ಬಾಹ್ಯಾಕಾಶ ವಿಜ್ಞಾನದ ಧ್ರುವ ತಾರೆ. ‘ಆರ್ಯಭಟ’ ಉಪಗ್ರಹದಿಂದ ಮೊದಲ್ಗೊಂಡು ‘ಆದಿತ್ಯ–1’ ಸಂಶೋಧನಾ ಬಾಹ್ಯಾಕಾಶ ನೌಕೆಯವರೆಗೆ ಭಾರತೀಯ ಬಾಹ್ಯಾಕಾಶ ವಿಜ್ಞಾನಕ್ಕೆ ಇವರ ಕೊಡುಗೆ ಅಪ್ರತಿಮ. 

ಹುಟ್ಟಿದ್ದು ಅದಮಾರು ಗ್ರಾಮದಲ್ಲಿ (1932). ಬಾಲ್ಯದಲ್ಲಿ ಕಡು ಬಡತನದ ಕಹಿ. ತಂದೆಗೆ ಉಡುಪಿ ಮಠದಲ್ಲಿ ಅಡುಗೆ ಕೆಲಸ. ‘ಶಾಲೆಗೆ ಹೋದರೆ ಒಳ್ಳೆಯದಾಗುತ್ತದೆ’ ಎಂಬುದಷ್ಟೇ ಗೊತ್ತಿದ್ದ ಬಾಲಕ ರಾಮಚಂದ್ರ ಹರಕು ಬಟ್ಟೆಯಲ್ಲೇ ಶಾಲಾ ಮುಖ್ಯೋಪಾಧ್ಯಾಯರ ಮುಂದೆ ಹೋಗಿ ನಿಂತಾಗ, ರಾಮಚಂದ್ರ ಹೆಸರಿನ ಮುಂದೆ ‘ಉಡುಪಿ’ ಎಂದು ಸೇರಿಸಿ ಶಾಲೆಗೆ ದಾಖಲಿಸಿಕೊಂಡರು.

ಜೀವನದಲ್ಲಿ ಎಂತಹುದೇ ಪ್ರತಿಕೂಲ ಪರಿಸ್ಥಿತಿ ಇದ್ದರೂ ಕಠಿಣ ಪರಿಶ್ರಮ ಮತ್ತು ಶ್ರದ್ಧೆ ಇದ್ದರೆ ಉನ್ನತ ಸ್ಥಾನಕ್ಕೆ ಏರಬಹುದು ಎಂಬುದಕ್ಕೆ ರಾವ್‌ ಉತ್ತಮ ನಿದರ್ಶನ.  ಜತೆಗೆ  ಸರಳತೆ, ಸಜ್ಜನಿಕೆ, ಹುಟ್ಟಿದ ನಾಡು, ನುಡಿಯ ಬಗ್ಗೆ ಅಪ್ರತಿಮ ಪ್ರೇಮ ಇವೆಲ್ಲವುಗಳ ಮೂರ್ತರೂಪವಾಗಿದ್ದವರು.

ಬಾಹ್ಯಾಕಾಶ ವಿಜ್ಞಾನದಲ್ಲಿ ರಾಯರ ಕೊಡುಗೆ ಏನು ಎಂಬುದು ನಮ್ಮವರಿಗೆ ಗೊತ್ತಿರುವುದು ಕಡಿಮೆ ಅಥವಾ ಅವರನ್ನು ಗುರುತಿಸುವಲ್ಲಿ ನಾವು ಕನ್ನಡಿಗರು ವಿಫಲರಾಗಿರಬಹುದು. ಆದರೆ, 2004ರಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ‘ಸ್ಪೇಸ್‌ ಮ್ಯಾಗಝೀನ್‌’ ವಿಶ್ವದ ಪ್ರಮುಖ ಹತ್ತು ವಿಜ್ಞಾನಿಗಳಲ್ಲಿ ಒಬ್ಬರೆಂದು ರಾವ್‌ ಅವರನ್ನು ಪರಿಗಣಿಸಿತು.


(ಬೆಂಗಳೂರಿನ ನೆಹರು ತಾರಾಲಯದಲ್ಲಿ ದೂರದರ್ಶಕದ ಮೂಲಕ ಗ್ರಹ ವೀಕ್ಷಿಸುತ್ತಿರುವ ಯು.ಆರ್. ರಾವ್‌)

ಬಾಹ್ಯಾಕಾಶ ವಿಜ್ಞಾನದಲ್ಲಿ ನಾಗರಿಕ, ವಾಣಿಜ್ಯ ಮತ್ತು ಮಿಲಿಟರಿ ಎಂಬ ಪ್ರತ್ಯೇಕ ಉದ್ದೇಶಗಳನ್ನು ಗುರುತಿಸಿದ ಆದ್ಯ ಪ್ರವರ್ತಕ. ‘ನೈಸರ್ಗಿಕ ದುರಂತದಲ್ಲಿ ಆಗುವ ಅನಾಹುತಕ್ಕಿಂತ ಕ್ರಿಕೆಟ್‌ನಲ್ಲಿ ದೇಶ ಸೋತರೆ ಘೋರ ದುರಂತ ಎಂದು  ತಲ್ಲಣಕ್ಕೆ ಒಳಗಾಗುವ ಭಾರತದಲ್ಲಿ ಬಾಹ್ಯಾಕಾಶ ವಿಜ್ಞಾನವನ್ನು ರಾವ್‌ ತಮ್ಮ ಕೌಶಲದಿಂದ ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಿದ್ದು ನಿಜಕ್ಕೂ ಬೆರಗು ಹುಟ್ಟಿಸುವಂತಹದ್ದು.

ಇಂತಹ ಕೆಲಸಗಳು ಸರ್ವಾಧಿಕಾರಿಗಳ ದೇಶದಲ್ಲಿ ಸುಲಭ. ಆದರೆ, ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ  ಕಷ್ಟ. ಅದನ್ನು ಸಾಧ್ಯವಾಗಿಸಿದ ಕೀರ್ತಿ ನಿಜಕ್ಕೂ  ಯು.ಆರ್‌.ರಾವ್‌‌ ಅವರಿಗೆ ಸಲ್ಲುತ್ತದೆ.

ಇವರ ಶ್ರಮದಿಂದಾಗಿಯೇ ಭಾರತ ವಿಶ್ವದ ಅತ್ಯಂತ ಪ್ರಬಲ ಬಾಹ್ಯಾಕಾಶ ವಿಜ್ಞಾನದ ದೈತ್ಯ ರಾಷ್ಟ್ರವಾಗಿ ಹೊರ ಹೊಮ್ಮಲು ಸಾಧ್ಯವಾಗಿದೆ’ ಎಂದು ಅಮೆರಿಕದ ನ್ಯೂಪೋರ್ಟ್‌ ನೇವಲ್‌ ವಾರ್‌ ಕಾಲೇಜಿನ ರಾಷ್ಟ್ರೀಯ ಭದ್ರತಾ ನೀತಿ ನಿರೂಪಕ ಜೆ. ಜಾನ್ಸನ್‌ ಫ್ರೀಸೆ  ಸ್ಮರಿಸುತ್ತಾರೆ.

ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂಎಸ್‌ಸಿ ಮುಗಿಸಿ ಅಮೆರಿಕದ ಮೆಸಾಚುಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಪಿಎಚ್‌ಡಿ ಮಾಡಲು ಸೇರಿಕೊಂಡಾಗ ಇವರ ಪ್ರತಿಭೆ ಅನಾವರಣಗೊಂಡಿತು. ಜೆಟ್‌ ಪ್ರೊಪಲ್ಷನ್‌ ಲ್ಯಾಬೊರೇಟರಿ (ಜಪಿಎಲ್‌)ಯಲ್ಲಿ  ಸೂರ್ಯನಿಂದ ನಿರಂತರವಾಗಿ ಹೊರಹೊಮ್ಮುವ ಸೌರ ಮಾರುತ, ಅದರ ಗುಣ–ಲಕ್ಷಣಗಳು ಮತ್ತು  ಅದರಿಂದ ಭೂ–ಆಯಸ್ಕಾಂತೀಯ ವ್ಯವಸ್ಥೆಯ ಮೇಲೆ ಆಗುವ ವ್ಯತ್ಯಯ, ಪರಿಣಾಮಗಳ ಬಗ್ಗೆ ಅದ್ವಿತೀಯ ಸಂಶೋಧನೆ ನಡೆಸಿದ್ದರು. 1963ರಲ್ಲಿ ಟೆಕ್ಸಾಸ್‌ ವಿಶ್ವವಿದ್ಯಾಲಯದಲ್ಲಿ ಮೆಕ್‌ಕ್ರಾಕೆನ್‌ ಜತೆ ಪ್ರಧಾನ ಸಂಶೋಧಕರಾಗಿ ಪಯೋನಿಯರ್‌–6,7,8,9 (ಆಳ ಬಾಹ್ಯಾಕಾಶ ಅಧ್ಯಯನ ಯೋಜನೆ) ಹಾಗೂ ಎಕ್ಸ್‌ಪ್ಲೋರರ್‌ 34, 41 ಉಪಗ್ರಹಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿದ್ದರು.


(ಎ.ಪಿ.ಜೆ. ಅಬ್ದುಲ್‌ ಕಲಾಂ ಜೊತೆಗೆ)

ರಾವ್‌ ಅವರು ಮರಳಿ ಭಾರತಕ್ಕೆ ಬರುವಂತೆ ಮಾಡಿದವರು ವಿಕ್ರಂ ಸಾರಾಭಾಯ್‌. ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ಸಾರಾಭಾಯ್‌ ಅವರು ಸ್ಥಾಪಿಸಿದ್ದ  ಭೌತ ವಿಜ್ಞಾನ ಸಂಶೋಧನಾ ಪ್ರಯೋಗಾಲಯಕ್ಕೆ 1966ರಲ್ಲಿ ರಾವ್‌  ಸೇರಿದರು. ಅಲ್ಲಿ ಖಗೋಳ ವಿಜ್ಞಾನ ವಿಭಾಗದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಹಂತದಲ್ಲಿ ಭಾರತದಲ್ಲಿ ಬಾಹ್ಯಾಕಾಶ ವಿಜ್ಞಾನದ ಪ್ರತ್ಯೇಕ ಕವಲನ್ನು ಆರಂಭಿಸಬೇಕು. ಅದನ್ನು  ಸಮರ್ಥವಾಗಿ ಮುನ್ನಡೆಸಿ ದೇಶವನ್ನು ಸ್ವಾವಲಂಬಿಯಾಗಿಸುವ ನಾಯಕನನ್ನು ನೇಮಿಸಬೇಕು ಎಂಬ ಆಲೋಚನೆ ಸಾರಾಭಾಯ್‌  ಮನಸ್ಸಿನಲ್ಲಿ ಮೂಡಿತ್ತು. ರಾವ್ ಪ್ರತಿಭೆಯ ಗಣಿ ಎಂಬುದನ್ನು ಗುರುತಿಸಿದ್ದ  ಸಾರಾಭಾಯ್‌, ಭಾರತದಲ್ಲಿ ಉಪಗ್ರಹ ಯೋಜನೆ ಮತ್ತು ಅದರ ಅನ್ವಯ ಬಗ್ಗೆ ನೀಲನಕಾಶೆ ತಯಾರಿಸುವಂತೆ ಕೋರಿದರು. ಅದನ್ನು ತಯಾರಿಸಿಕೊಟ್ಟ ರಾವ್‌ ಅವರಿಗೆ ಆ ಸಂದರ್ಭದಲ್ಲಿ ಭಾರತದಲ್ಲಿ ಉಳಿದು ಬಾಹ್ಯಾಕಾಶ ಯೋಜನೆ ಮುನ್ನಡೆಸಬೇಕು ಎಂದು ಸಾರಾಭಾಯ್‌ ಒತ್ತಡ ಹೇರಿದ್ದರು.

ಆ ಸಂದರ್ಭದಲ್ಲಿ ನಾಸಾದಲ್ಲಿ ಉಪಗ್ರಹ ಯೋಜನೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದ ಏಕೈಕ ಭಾರತೀಯ ರಾವ್‌ ಆಗಿದ್ದರು. ನಾಸಾಕ್ಕೆ ಮರಳಿ ಹೋಗುವ ಅವಕಾಶವನ್ನು ಕೈಬಿಟ್ಟು ಭಾರತದಲ್ಲಿ ಉಳಿದು ಉಪಗ್ರಹ ಯೋಜನೆ ಕೈಗೆತ್ತಿಕೊಳ್ಳಲು ದೃಢ ಸಂಕಲ್ಪ ಮಾಡಿದರು.

ತಿರುವನಂತಪುರದ ಬಾಹ್ಯಾಕಾಶ ವಿಜ್ಞಾನ ತಂತ್ರಜ್ಞಾನ ಕೇಂದ್ರ ಮತ್ತು ಭೌತವಿಜ್ಞಾನ ಸಂಶೋಧನಾ ಪ್ರಯೋಗಾಲಯದ ಉಪಗ್ರಹ ವ್ಯವಸ್ಥೆ ವಿಭಾಗದ 40 ಎಂಜಿನಿಯರ್‌ಗಳನ್ನು ಒಟ್ಟುಗೂಡಿಸಿ 100 ಕೆ.ಜಿ. ತೂಕದ ಭಾರತದ ಮೊಟ್ಟಮೊದಲ  ಉಪಗ್ರಹ ವಿನ್ಯಾಸ ಆರಂಭಿಸಿದರು. ಆ ಉಪಗ್ರಹ ತಯಾರಿ ಪೂರ್ಣಗೊಂಡಾಗ ಅದರ ತೂಕ 358 ಕೆ.ಜಿ. ಆಗಿತ್ತು. ಅದಕ್ಕೆ ‘ಆರ್ಯಭಟ’ ಎಂಬ ಹೆಸರನ್ನಿಡಲಾಯಿತು. ಇದರ ನಿರ್ಮಾಣ ಆಗಿದ್ದು ಬೆಂಗಳೂರಿನ ಪೀಣ್ಯದ ಕೈಗಾರಿಕಾ ಶೆಡ್‌ನಲ್ಲಿ.


(1975ರಲ್ಲಿ ಕರ್ನಾಟಕದ ರಾಜ್ಯಪಾಲ ಮೋಹನ್‌ಲಾಲ್‌ ಸುಖಾಡಿಯಾ ಅವರು ಯು.ಆರ್. ರಾವ್‌ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ ಕ್ಷಣ)

ಆ ಬಳಿಕ ನಡೆದದ್ದು ಸುವರ್ಣ ಅಕ್ಷರಗಳಲ್ಲಿ ಬರೆದಿಡಬಹುದಾದ ಇತಿಹಾಸ. ದೂರಸಂವೇದಿ ಪ್ರಾಯೋಗಿಕ ಉಪಗ್ರಹಗಳಾದ ಭಾಸ್ಕರ  1 ಮತ್ತು 2, ರೋಹಿಣಿ ಡಿ 2 ಅಭಿವೃದ್ಧಿ ಮತ್ತು ಉಡಾವಣೆ, ದೂರಸಂವೇದಿ ಉಪಗ್ರಹಗಳ (ಐಆರ್‌ಎಸ್‌) ಸರಣಿಗೆ ನಾಂದಿ ಹಾಡಿತು. ಸಂವಹನ ಅನ್ವಯಕ್ಕಾಗಿ  ಇನ್ಸಾಟ್‌(ಇಂಡಿಯನ್‌ ನ್ಯಾಷನಲ್‌ ಸ್ಯಾಟಲೈಟ್‌)ಗೆ ಮೊದಲ ಹೆಜ್ಜೆಯಾಗಿ ‘ಆ್ಯಪಲ್‌’ ಪ್ರಾಯೋಗಿಕ ಸಂವಹನ ಉಪಗ್ರಹ ಇವರ ನೇತೃತ್ವದಲ್ಲೇ ನಿರ್ಮಾಣವಾಯಿತು. ಉಪಗ್ರಹ ತಯಾರಿಕೆ ಮತ್ತು ಉಡಾವಣೆಗೆ ಅಗತ್ಯವಿರುವ ವ್ಯವಸ್ಥೆಯೇ ಇರಲಿಲ್ಲ. ಅಂದಿನ ಸಂದರ್ಭ ನೆನಪಿಸುವ  ಎತ್ತಿನ ಗಾಡಿಯಲ್ಲಿ ಉಪಗ್ರಹವನ್ನು ಕೊಂಡೊಯ್ಯುತ್ತಿರುವಂಥ ಚಿತ್ರಗಳು ಈಗಲೂ ಲಭ್ಯ ಇವೆ.

ದೇಶೀಯವಾಗಿ ಇನ್ಸಾಟ್‌–2 ಸರಣಿಯ ಬಾಹ್ಯಾಕಾಶ ನೌಕೆಯನ್ನು ಅಭಿವೃದ್ಧಿಪಡಿಸಲು ಚಾಲನೆ ನೀಡಿದ್ದೂ ರಾವ್‌ ಅವರೇ. ಸರಿ ಸುಮಾರು ಇದೇ ಸಮಯದಲ್ಲಿ  ಉಡ್ಡಯನ ವಾಹನ ಅಥವಾ ರಾಕೆಟ್‌ ತಂತ್ರಜ್ಞಾನ ಭಾರತದಲ್ಲಿ ಅಭಿವೃದ್ಧಿಪಡಿಸಲು ಚಾಲನೆ ನೀಡಿದರು. 40 ಕೆ.ಜಿ. ತೂಕದ ರೋಹಿಣಿ ಉಪಗ್ರಹವನ್ನು ಎಸ್‌ಎಲ್‌ವಿ–3 ಮೂಲಕ ಸತೀಶ್‌ ಧವನ್‌ ಉಡ್ಡಯನ ಕೇಂದ್ರದಿಂದ ನಭಕ್ಕೆ (1980) ಹಾರಿಬಿಡಲಾಯಿತು. ಕ್ರಮೇಣ ಉಡ್ಡಯನ ಕ್ಷೇತ್ರದಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ವರ್ಧಿಸಿಕೊಳ್ಳುತ್ತಲೇ  ಮುನ್ನಡೆಯಿತು.

1984ರಲ್ಲಿ ಇಸ್ರೊ ಅಧ್ಯಕ್ಷರಾಗಿ ಹುದ್ದೆ ಅಲಂಕರಿಸಿ ರಾವ್‌  ಅವರು ಬಾಹ್ಯಾಕಾಶ ವಿಜ್ಞಾನವನ್ನು ಜನಪರ ಕಾರ್ಯಗಳತ್ತ ತಿರುಗಿಸಿದರು. ದೂರ ಸಂಪರ್ಕ, ಕೃಷಿ, ಮೀನುಗಾರಿಕೆ, ಹವಾಮಾನ ಮುನ್ಸೂಚನೆ,  ಉಪಗ್ರಹ ನೆರವಿನಿಂದ ಅರಣ್ಯದ ನಕಾಶೆ, ಪ್ರವಾಹ ಪ್ರದೇಶದ ನಕಾಶೆ, ಅಂತರ್ಜಲ ಪತ್ತೆ, ಬರ ಪ್ರದೇಶ ನಿರ್ವಹಣೆ ಅಧ್ಯಯನ – ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ರಾವ್‌  ಕನ್ನಡ ಪ್ರೇಮಿಯಾಗಿದ್ದರು. ಒಮ್ಮೆ ‘ಪ್ರಜಾವಾಣಿ’ಗೆ ಎಂ.ಜಿ.ಕೆ. ಮೆನನ್‌ ಬಗ್ಗೆ ಸಂದರ್ಶನ ನೀಡಲೆಂದು ನಾಲ್ಕು ಪುಟಗಳಷ್ಟು ಕನ್ನಡದಲ್ಲಿ ಟಿಪ್ಪಣಿ  ಸಿದ್ಧಪಡಿಸಿಕೊಂಡಿದ್ದರು. ರಾಜ್ಯದಲ್ಲಿ ಪ್ರೌಢಶಾಲೆ ಹಂತದವರೆಗೆ ಕನ್ನಡದಲ್ಲೇ ಶಿಕ್ಷಣ ವ್ಯವಸ್ಥೆ ಬರಬೇಕು ಎಂಬ ಪ್ರಬಲ ಪ್ರತಿಪಾದಕರೂ ಆಗಿದ್ದರು. ತೀರಾ ಇತ್ತೀಚಿನವರೆಗೆ ಇಸ್ರೊ ಕೇಂದ್ರ ಕಚೇರಿ ‘ಅಂತರಿಕ್ಷ ಭವನ’ಕ್ಕೆ ಹೋಗಿ ಕಾರ್ಯ ನಿರ್ವಹಿಸುತ್ತಿದ್ದರು. ಚಂದ್ರನಿಂದ ಹೀಲಿಯಂ ಖನಿಜ ಗಣಿಗಾರಿಕೆಯನ್ನು ಮಾಡುವ ಬಗ್ಗೆ ಮತ್ತು ಮಂಗಳಗ್ರಹದಲ್ಲಿ ಮಾನವ ವಸಾಹತು ಸ್ಥಾಪಿಸುವ ಸಾಧ್ಯತೆ ಬಗ್ಗೆ ಹೊಸ ಆಲೋಚನೆಯನ್ನು ಹೊಂದಿದ್ದರು.
*
ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ್ದು ರಾಯರ ಕೊಡುಗೆ: ರೊದ್ದಂ
ಬೆಂಗಳೂರು:
ಬಾಹ್ಯಾಕಾಶ ವಿಜ್ಞಾನಕ್ಕೆ ತಮ್ಮ ಜೀವನ ಮುಡಿಪಾಗಿಟ್ಟ ಯು.ಆರ್‌.ರಾವ್‌ ಅದನ್ನು ಜನರ ಸಮಸ್ಯೆಗಳ ಪರಿಹಾರಕ್ಕೆಂದೇ ಬಳಸಿದರು ಎಂದು ಖ್ಯಾತ ವಿಜ್ಞಾನಿ ರೊದ್ದಂ ನರಸಿಂಹ ಹೇಳಿದರು.

(ಭಾರತದ ಮೊದಲ ಉಪಗ್ರಹ ‘ಆರ್ಯಭಟ’ ಜತೆಗೆ ಯು.ಆರ್‌.ರಾವ್‌,  ಡಾ.ಕೆ.ಕಸ್ತೂರಿ ರಂಗನ್‌ ಮತ್ತು ಇತರ ಸದಸ್ಯರು)

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ಉಪಗ್ರಹ ಕಾರ್ಯಕ್ರಮಕ್ಕೆ ತಳಹದಿ ಹಾಕಿದ ರಾಯರು ಅದನ್ನು ಕೇವಲ ಪ್ರತಿಷ್ಠೆ ಅಥವಾ ಗೌರವಕ್ಕಾಗಿ  ಬಳಸಲಿಲ್ಲ ಎಂದು ತಿಳಿಸಿದರು.

‘ಜೀವನದ ಕೊನೆಯವರೆಗೂ ಬಾಹ್ಯಾಕಾಶ ವಿಜ್ಞಾನಕ್ಕಾಗಿ ದುಡಿದರು. ತೀರಾ ಇತ್ತೀಚಿನವರೆಗೂ ಇಸ್ರೊಗೆ ಹೋಗಿ ಕೆಲಸ ಮಾಡುತ್ತಿದ್ದರು. ಹಿಂದೆ ಎಎಸ್‌ಎಲ್‌ವಿ ಉಡಾವಣೆ ವಿಫಲಗೊಂಡಾಗ ಅದಕ್ಕೆ ಕಾರಣಗಳು ಏನಿರಬಹುದು ಎಂಬುದನ್ನು ಕಂಡುಕೊಳ್ಳಲು ನನ್ನ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚಿಸಿದರು. ಆ ಬಗ್ಗೆ ಮಾಹಿತಿ ನೀಡುವಂತೆ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಕರೆಸಿದಾಗ ಇಬ್ಬರೂ ಹೋಗಿದ್ದೆವು’ ಎಂದು ರೊದ್ದಂ ಸ್ಮರಿಸಿದರು.
*



ಯು.ಆರ್‌.ರಾವ್‌ ಇನ್ನಿಲ್ಲ
ಬೆಂಗಳೂರು:
ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಇಸ್ರೊ ಮಾಜಿ ಅಧ್ಯಕ್ಷ ಪ್ರೊ. ಯು.ಆರ್‌.ರಾವ್‌ (85) ಸೋಮವಾರ ನಿಧನರಾದರು. ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ  ರಾವ್‌, ಬೆಂಗಳೂರಿನ ಇಂದಿರಾನಗರದಲ್ಲಿರುವ ಸ್ವಗೃಹದಲ್ಲಿ ನಸುಕಿನ ಮೂರು ಗಂಟೆಗೆ ಕೊನೆಯುಸಿರೆಳೆದರು. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.

ಇಸ್ರೊ ಅಧ್ಯಕ್ಷರಾಗಿ ಹತ್ತು ವರ್ಷ (1984– 1994) ಕಾರ್ಯ ನಿರ್ವಹಿಸಿದ್ದರು. ಬಾಹ್ಯಾಕಾಶ ಆಯೋಗದ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಧಿಕ ತೂಕದ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲ ಎಎಸ್‌ಎಲ್‌ವಿ, ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ರಾಕೆಟ್‌ಗಳ ಅಭಿವೃದ್ಧಿಗೆ  ಹೆಚ್ಚಿನ ಒತ್ತು ನೀಡಿದರು. 

ರಾವ್‌ ಅವರಿಗೆ 1976 ರಲ್ಲಿ ಪದ್ಮಭೂಷಣ, 2017 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಸ್ಮಿಕ್‌ ಕಿರಣಗಳು, ಅಂತರ್‌ ಗ್ರಹ ಭೌತವಿಜ್ಞಾನ, ಅಧಿಕ ಶಕ್ತಿಯ ಖಗೋಳ ವಿಜ್ಞಾನ, ಬಾಹ್ಯಾಕಾಶ ಅನ್ವಯ, ಉಪಗ್ರಹ, ರಾಕೆಟ್‌ ತಂತ್ರಜ್ಞಾನದ ಕುರಿತು 350 ಕ್ಕೂ ಹೆಚ್ಚು ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಹಲವು ಪುಸ್ತಕಗಳನ್ನೂ ಬರೆದಿದ್ದಾರೆ.


(ಅಗಲಿದ ವಿಜ್ಞಾನಿಗೆ ಪುಷ್ಪ ನಮನ ಸಲ್ಲಿಸುತ್ತಿರುವ ಇಸ್ರೊ ಅಧ್ಯಕ್ಷ ಡಾ. ಕೆ.ಕಿರಣ್‌ ಕುಮಾರ್‌)

ಅಮೆರಿಕದ ವಾಷಿಂಗ್ಟನ್‌ ಡಿಸಿಯಲ್ಲಿರುವ ಪ್ರತಿಷ್ಠಿತ ‘ಸ್ಯಾಟಲೈಟ್‌ ಹಾಲ್‌ ಆಫ್‌ ಫೇಮ್‌‘ ಮತ್ತು ಮೆಕ್ಸಿಕೊದ ‘ಐಎಎಫ್‌ ಹಾಲ್ ಆಫ್‌ ಫೇಮ್‌’ ಗೆ ಸೇರ್ಪಡೆಗೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಬಾಹ್ಯಾಕಾಶ ವಿಜ್ಞಾನಿ ರಾವ್ ಪಾತ್ರರಾಗಿದ್ದಾರೆ.

ಅಂತ್ಯಸಂಸ್ಕಾರ: ಇಸ್ರೊ ಉಪಗ್ರಹ ಕೇಂದ್ರದದಲ್ಲಿ ಅಂತಿಮ ದರ್ಶನಕ್ಕಾಗಿ ರಾವ್‌ ಅವರ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಸಂಜೆ ಹೆಬ್ಬಾಳದಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT