ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದೂ ಧರ್ಮದಿಂದ ಲಿಂಗಾಯತ ಸಮಾಜ ಪ್ರತ್ಯೇಕವಾಗಬಾರದು’

Last Updated 24 ಜುಲೈ 2017, 19:33 IST
ಅಕ್ಷರ ಗಾತ್ರ

ಉಡುಪಿ: ‘ಲಿಂಗಾಯತ ಸಮಾಜವು ಹಿಂದೂ ಧರ್ಮದಿಂದ ಪ್ರತ್ಯೇಕವಾಗಬಾರದು, ಯಾವುದೇ ಕಾರಣಕ್ಕೂ ಹಿಂದೂ ಧರ್ಮದ ವಿಘಟನೆಗೆ ಲಿಂಗಾಯತ ಮಠಾಧೀಶರು ಮತ್ತು ಸಮಾಜದವರು ಅವಕಾಶ ನೀಡಬಾರದು’ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮನವಿ ಮಾಡಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಲ್ಪಸಂಖ್ಯಾತರ ಧರ್ಮದ ಮಾನ್ಯತೆ ಸಿಕ್ಕರೆ ಕೆಲವು ಸೌಲಭ್ಯಗಳು ಸಿಗಲಿವೆ ಎಂಬ ಕಾರಣಕ್ಕೆ ಪ್ರತ್ಯೇಕ ಧರ್ಮದ ಬೇಡಿಕೆ ಇಡಲಾಗಿದೆ ಎನ್ನಲಾಗುತ್ತಿದೆ. ಹಿಂದೂ ಧರ್ಮದ ಬಲಿಷ್ಠ ಅಂಗವಾಗಿರುವ ಲಿಂಗಾಯತ ಸಮಾಜ ಬೇರ್ಪಟ್ಟು ಪ್ರತ್ಯೇಕ ಸ್ವತಂತ್ರ ಧರ್ಮವಾಗಿ ರೂಪುಗೊಳ್ಳುವ ಪ್ರಸ್ತಾವನೆ ಬಂದಿರುವುದು ಅತ್ಯಂತ ಕಳವಳಕಾರಿ ಸಂಗತಿ. ಪರಶಿವನು ಹಿಂದೂ ದೇವತೆಗಳಲ್ಲಿ ಪ್ರಾಮುಖ್ಯತೆ ಪಡೆದವನು ಎಂಬುದು ನಿರ್ವಿವಾದ. ಅಂತಹ ಶಿವನನ್ನೇ ಪರದೈವ ಎಂದು ಸಾರುವ ಲಿಂಗಾಯತರು ಸಹ ಹಿಂದೂಗಳೇ ಆಗಿದ್ದಾರೆ. ಹಿಂದೂಗಳ ದೇವನಾದ ಶಿವನನ್ನು ಲಿಂಗಾಯತರು ಆರಾಧಿಸಿದ ಮೇಲೆ ಅದು ಪ್ರತ್ಯೇಕ ಧರ್ಮವಾಗಲು  ಸಾಧ್ಯವಿಲ್ಲ’ ಎಂದು ಅವರು ಪ್ರತಿಪಾದಿಸಿದರು.

‘ಲಿಂಗಾಯತ ಧರ್ಮವು ವರ್ಣಾಶ್ರಮ ಹಾಗೂ ಜಾತಿ ವ್ಯವಸ್ಥೆಯನ್ನು ಒಪ್ಪದಿರಬಹುದು, ಆದರೆ ಅದು ಹಿಂದೂ ಧರ್ಮವಲ್ಲವೆಂದು ಹೇಳಲಾಗದು. ಜಾತಿ ವ್ಯವಸ್ಥೆಯನ್ನು ಒಪ್ಪದ ರಾಮಕೃಷ್ಣ ಆಶ್ರಮ, ಆರ್ಯ ಸಮಾಜ ಹಿಂದೂ ಧರ್ಮವೇ ಆಗಿದೆ. ರಾಮಕೃಷ್ಣ ಆಶ್ರಮ ತನ್ನದು ಪ್ರತ್ಯೇಕ ಧರ್ಮವೆಂದು ಪ್ರತಿಪಾದಿಸಿತು, ಆದರೆ ಅದನ್ನು ನ್ಯಾಯಾಲಯ ಒಪ್ಪಲಿಲ್ಲ ಎಂಬ ಅಂಶವನ್ನು ಗಮನಿಸಬೇಕು. ಸ್ವಾಮಿ ನಾರಾಯಣ, ಚೈತನ್ಯ ಪಂಥ ಹಾಗೂ ತಮಿಳುನಾಡಿನ ಶೈವ ಪಂಥಗಳು ಜಾತಿ ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದಿಲ್ಲ. ಆದರೂ ಅವು ಹಿಂದೂ ಧರ್ಮದ ಭಾಗವೇ ಆಗಿವೆ’ ಎಂದರು.

‘ಜಾತಿ ವ್ಯವಸ್ಥೆಯನ್ನು ಒಪ್ಪಲಿ, ಬಿಡಲಿ ಶಿವ ಭಕ್ತರೆಲ್ಲ ಹಿಂದೂಗಳೇ ಎಂಬುದು ನಿಸ್ಸಂಶಯ. ಕ್ರೈಸ್ತರು, ಮುಸಲ್ಮಾನರು ರಾಷ್ಟ್ರ ವ್ಯಾಪಿಯಾಗಿ ಸಂಘಟಿತರಾಗಿದ್ದಾರೆ. ಉಳಿದವರು ಸಂಘಟಿತರಾಗಲು ಹಿಂದೂ ಧರ್ಮ ಒಂದೇ ನೆಲೆಯಾಗಿದೆ. ಆದ್ದರಿಂದ ಅದನ್ನು ದುರ್ಬಲಗೊಳಿಸುವ ಪ್ರಯತ್ನ ಆಗಬಾರದು. ಲಿಂಗಾಯತರ ಪ್ರತ್ಯೇಕತೆಯ ಮಾತು ಬೇಡ ಎಂಬುದು ಕಳಕಳಿಯ ಮನವಿ’ ಎಂದು ಹೇಳಿದರು.

ವೀರಶೈವ ಸಮಾಜವೂ ವಿಘಟನೆಗೊಳ್ಳಬಾರದು: ‘ಸಂಪ್ರದಾಯ, ನಂಬಿಕೆ ಮತ್ತು ಆಚರಣೆಯ ಪ್ರತ್ಯೇಕತೆಯ ಕಾರಣ ವೀರಶೈವ ಸಮಾಜವೂ ವಿಘಟನೆಯಾಗಬಾರದು. ಶ್ರೀ ವೈಷ್ಣವರಲ್ಲಿ ಸಹ ತೆಂಗಲೆ, ವಡಗೆಲೆ ಎಂಬ ಭೇದವಿದೆ. ಸ್ಮಾರ್ತರಲ್ಲಿ ಶೈವ, ಭಾಗವತ ಮುಂತಾದ ಸಂಪ್ರದಾಯವಿದೆ. ಮುಸಲ್ಮಾನರಲ್ಲಿಯೂ ಶಿಯಾ, ಸುನ್ನಿ ಎಂಬ ಭೇದವಿದೆ. ವೀರಶೈವರಲ್ಲಿಯೂ ಭೇದಗಳಿದ್ದರೂ ಎಲ್ಲರೂ ವೀರಶೈವ ಅಥವಾ ಲಿಂಗಾಯತರ ಹೆಸರಿನಲ್ಲಿ ಒಂದಾಗಬೇಕು’ ಎಂದು ಪೇಜಾವರ ಶ್ರೀಗಳು ಸಲಹೆ ನೀಡಿದರು.
‘ಯಾವುದೇ ರಾಜಕೀಯ ಉದ್ದೇಶದಿಂದ ನಾನು ಈ ಮಾತು ಹೇಳುತ್ತಿಲ್ಲ. ಹಿಂದೂ ಸಂಘಟನೆಗೆ ಯಾವುದೇ ರೀತಿಯಿಂದಲೂ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ಒಂದಾಗಿರಿ ಎಂದು ಹೇಳುತ್ತಿದ್ದೇನೆ’ ಎಂದರು.

ಕೂಡಲಸಂಗಮ ಎಂದರೆ ಶಿವ: ‘ಬಸವಣ್ಣನವರು ವಚನಗಳಲ್ಲಿ ಬಳಸಿರುವ ‘ಕೂಡಲ ಸಂಗಮ’ ಎಂದರೆ ಶಿವ ಎಂಬುದಾಗಿದೆ. ಬಸವಣ್ಣನವರ ಕೆಲವು ವಚನಗಳಲ್ಲಿ ವೇದಗಳ ಉಲ್ಲೇಖ ಇದೆ. ‘ಮಾದಾರ ಚೆನ್ನಯ್ಯ ಶಿವ ದೀಕ್ಷೆ ಪಡೆದಾಗ ವೇದ ನಡುಗಿತು’ ಎಂಬ ಮಾತನ್ನೂ ಸಹ ಬಸವಣ್ಣ ಹೇಳಿದ್ದಾರೆ. ಶಿವ ದೀಕ್ಷೆ ಪಡೆದ ನಂತರ ಎಲ್ಲರೂ ಸಮಾನರು ಎಂಬುದು ಅವರ ನಿಲುವಾಗಿತ್ತು. ವೇದಗಳನ್ನು ಅವರು ಒಪ್ಪಿದ್ದರು ಅಥವಾ ಇಲ್ಲ ಎಂಬುದರ ಬಗ್ಗೆಯೇ ಈಗ ಚರ್ಚೆ ನಡೆಯುತ್ತಿದೆ. ಪ್ರತ್ಯೇಕ ಧರ್ಮದ ಪ್ರಸ್ತಾವನೆ ಬೇಡ ಎಂದು ಸರ್ಕಾರಕ್ಕೂ ತಿಳಿಸಲಾಗುತ್ತದೆ. ಮಠಾಧೀಶರೊಂದಿಗೂ ಮಾತನಾಡಲಾಗುವುದು’ ಎಂದರು.

‘ವೀರಶೈವ ಲಿಂಗಾಯತ ಸಮಾಜದ ಆಂತರಿಕ ವಿಷಯವಾಗಿದ್ದು ಆ ಬಗ್ಗೆ ಮಾತನಾಡುವುದು ಅಷ್ಟು ಸಮಂಜಸವಲ್ಲ. ಆದರೂ ವೀರಶೈವ ಸಮಾಜ ಮತ್ತು ಮಠಾಧಿಪತಿಗಳೊಂದಿಗೆ ದೀರ್ಘ ಕಾಲದ ಸಂಪರ್ಕ, ಸೌಹಾರ್ದ ಮತ್ತು ಆತ್ಮೀಯತೆ ಇರುವುದರಿಂದ ನನ್ನ ಅಭಿಪ್ರಾಯವನ್ನು ಹೇಳುತ್ತಿದ್ದೇನೆ. ಯಾರೂ ಸಹ ಅನ್ಯತಾ ಭಾವಿಸಬಾರದು’ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.
*
ಕನ್ಯಾಕುಮಾರಿಯಿಂದ ಹಿಮಾಲಯದ ವರೆಗೆ ಶಿವನೇ ಪರದೈವ ಎಂದು ನಂಬುವ ಹಿಂದೂಗಳಿರುವಾಗ, ಶಿವ ಭಕ್ತರಾದ ಲಿಂಗಾಯತರು ಮಾತ್ರ ಹಿಂದೂಗಳಲ್ಲ ಎಂದು ಹೇಳುವುದು ಹೇಗೆ?
ವಿಶ್ವೇಶತೀರ್ಥ ಸ್ವಾಮೀಜಿ,
ಪೇಜಾವರ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT