ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷ 3,336 ಡೆಂಗಿ, 706 ಚಿಕೂನ್‌ಗುನ್ಯ ಪ್ರಕರಣ ಪತ್ತೆ

Last Updated 24 ಜುಲೈ 2017, 19:35 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಡೆಂಗಿ, ಚಿಕೂನ್‌ಗುನ್ಯ ರೋಗಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆರೋಗ್ಯ ಇಲಾಖೆಯ ಅಂಕಿ–ಅಂಶಗಳ ಪ್ರಕಾರ ಜನವರಿಯಿಂದ ಜುಲೈ 19ರವರೆಗೆ 3,336 ಡೆಂಗಿ ಹಾಗೂ 706 ಚಿಕೂನ್‌ಗುನ್ಯ ಪ್ರಕರಣಗಳು ದೃಢಪಟ್ಟಿವೆ.

ಡೆಂಗಿಯಿಂದ ಐವರು ಮೃತಪಟ್ಟಿದ್ದಾರೆ. 21,806 ಶಂಕಿತ ಡೆಂಗಿ ರೋಗಿಗಳ ಪೈಕಿ 13,970 ಮಂದಿಯ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ಇವರಲ್ಲಿ 3,336 ರೋಗಿಗಳಿಗೆ ಡೆಂಗಿ ಇರುವುದು ಕಂಡುಬಂದಿದೆ. 8,151 ಶಂಕಿತ ಚಿಕೂನ್‌ಗುನ್ಯ ರೋಗಿಗಳಿದ್ದು, 4,922 ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವರಲ್ಲಿ 706 ಮಂದಿಗೆ ರೋಗ ಇರುವುದು ಖಚಿತಪಟ್ಟಿದೆ. ಬೆಂಗಳೂರು ನಗರದಲ್ಲಿ 1,651  ರೋಗಿಗಳು ಡೆಂಗಿ ಹಾಗೂ 23  ರೋಗಿಗಳು ಚಿಕೂನ್‌ಗುನ್ಯದಿಂದ ಬಳಲುತ್ತಿದ್ದಾರೆ.

ಮಂಡ್ಯದಲ್ಲಿ 422 ಪ್ರಕರಣ: ಬೆಂಗಳೂರು ನಗರ ಹೊರತುಪಡಿಸಿದರೆ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಡೆಂಗಿ ಪ್ರಕರಣಗಳು ದಾಖಲಾಗಿವೆ. 1,736 ಶಂಕಿತ ಡೆಂಗಿ ಪ್ರಕರಣಗಳಲ್ಲಿ 968 ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವರಲ್ಲಿ 422 ಮಂದಿಗೆ ಡೆಂಗಿ ಇರುವುದು ಪತ್ತೆಯಾಗಿದೆ.
ಮೈಸೂರು ಜಿಲ್ಲೆಯಲ್ಲಿ 383, ದಾವಣಗೆರೆ 283, ಉಡುಪಿ 220, ತುಮಕೂರು 213, ಶಿವಮೊಗ್ಗ 192, ಚಿತ್ರದುರ್ಗ 173, ಕೋಲಾರ 136, ಹಾಸನ 133, ಕೊಡಗು 130, ಚಾಮರಾಜನಗರ 127, ಚಿಕ್ಕಮಗಳೂರು 120, ಹಾವೇರಿ ಜಿಲ್ಲೆಯಲ್ಲಿ 113 ಡೆಂಗಿ ಪ್ರಕರಣಗಳು ದಾಖಲಾಗಿವೆ.

ಚಿಕೂನ್‌ಗುನ್ಯ ಪ್ರಕರಣಗಳು: ಡೆಂಗಿ ಜತೆಗೆ ಚಿಕೂನ್‌ಗುನ್ಯ ರೋಗದಿಂದ ಬಳಲುತ್ತಿರುವವರ ಸಂಖ್ಯೆಯೂ ಮಂಡ್ಯ ಜಿಲ್ಲೆಯಲ್ಲೇ ಹೆಚ್ಚಾಗಿದೆ. 189 ಮಂದಿ ಡೆಂಗಿಯಿಂದ ಬಳಲುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ 86, ಚಿತ್ರದುರ್ಗ 84, ಚಾಮರಾಜನಗರ ಜಿಲ್ಲೆಯಲ್ಲಿ 73 ರೋಗಿಗಳು ಚಿಕೂನ್‌ಗುನ್ಯದಿಂದ ಬಾಧಿತರಾಗಿದ್ದಾರೆ.

‘ಡೆಂಗಿ ಮತ್ತು ಚಿಕೂನ್‌ಗುನ್ಯಕ್ಕೆ ನಿಖರ ಔಷಧವಿಲ್ಲ. ಸೊಳ್ಳೆಗಳ ನಿಯಂತ್ರಣದಿಂದ ರೋಗವನ್ನು ಹತೋಟಿಗೆ ತರಬಹುದು. ತೊಟ್ಟಿ, ಡ್ರಮ್‌ ಹಾಗೂ ಮಡಿಕೆಯಲ್ಲಿ ಶೇಖರಿಸಿದ ನೀರಿನಲ್ಲಿ ಸೊಳ್ಳೆಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಮನೆಯ ಸುತ್ತಲಿನ ಚರಂಡಿ ಹಾಗೂ ಗುಂಡಿಗಳಲ್ಲಿ ನಿಂತಿರುವ ನೀರಿನಲ್ಲೂ ಸೊಳ್ಳೆಗಳ ಸಂತಾನೋತ್ಪತ್ತಿ ನಡೆಯುತ್ತದೆ’ ಎಂದು ಆರೋಗ್ಯಾಧಿಕಾರಿ ಹೇಳುತ್ತಾರೆ.

‘ಸಿಮೆಂಟ್‌ ತೊಟ್ಟಿ, ಡ್ರಮ್‌ ಮತ್ತು ಮಡಿಕೆಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ನಂತರ ನೀರು ತುಂಬಿಸಬೇಕು’ ಎಂದು ಸಲಹೆ ನೀಡುತ್ತಾರೆ.

ರೋಗದ ಲಕ್ಷಣಗಳು: ಈಡಿಸ್‌ ಈಜಿಪ್ಟೈ ಎಂಬ ಸೊಳ್ಳೆಯ ಕಡಿತದಿಂದ ಡೆಂಗಿ ಹಾಗೂ ಚಿಕೂನ್‌ಗುನ್ಯ ಬರುತ್ತದೆ. ಹಠಾತ್ತನೆ ಬರುವ ಅಧಿಕ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರತರದ ನೋವು, ಮೈ–ಕೈ ನೋವು, ಕೀಲುಗಳಲ್ಲಿ ನೋವು, ವಾಕರಿಕೆ ಮತ್ತು ವಾಂತಿ ಈ ರೋಗದ ಲಕ್ಷಣಗಳು.

ಏನು ಮಾಡಬೇಕು?: ಈ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ನೀರಿನಾಂಶ ಇರುವ ಪದಾರ್ಥ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT