ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಕಂಪು ತಂದ ಪುನೀತ್‌

ತೆರಿಗೆ ದಿನಾಚರಣೆ: ಇಂಗ್ಲಿಷ್‌ಮಯವಾಗಿದ್ದ ಕಾರ್ಯಕ್ರಮದಲ್ಲಿ ಬದಲಾವಣೆ
Last Updated 24 ಜುಲೈ 2017, 19:43 IST
ಅಕ್ಷರ ಗಾತ್ರ

ಬೆಂಗಳೂರು:  ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ತ್ರಿಭಾಷಾ ಸೂತ್ರ ಪಾಲನೆ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದರೆ, ಆದಾಯ ತೆರಿಗೆ ಇಲಾಖೆ ಏರ್ಪಡಿಸಿದ್ದ ಆದಾಯ ತೆರಿಗೆ ದಿನಾಚರಣೆ ಕಾರ್ಯಕ್ರಮ ಪೂರ್ತಿ ಇಂಗ್ಲಿಷ್‌ಮಯವಾಗಿತ್ತು.

ಈ ಕಾರ್ಯಕ್ರಮದ ನಿರೂಪಣೆಯಲ್ಲಾಗಲಿ, ವೇದಿಕೆಯಲ್ಲಾಗಲೀ ಕನ್ನಡಕ್ಕೆ ಸ್ಥಾನವೇ ಇರಲಿಲ್ಲ. ಅತಿಥಿಯಾಗಿದ್ದ ಪುನೀತ್ ರಾಜ್‌ಕುಮಾರ್‌ ಕನ್ನಡದಲ್ಲಿ ಮಾತು ಆರಂಭಿಸುತ್ತಿದ್ದಂತೆಯೇ ಚಪ್ಪಾಳೆ, ಕೇಕೆ ಮೊಳಗಿತು. ಇದ್ದಕ್ಕಿದ್ದಂತೆ ಅಲ್ಲಿ ಕನ್ನಡದ ವಾತಾವರಣ ಸೃಷ್ಟಿಯಾಯಿತು.

ಸಭಿಕರು ‘ರಾಜಕುಮಾರ’ ಚಿತ್ರ ಹಾಡನ್ನು ಹಾಡುವಂತೆಯೂ ಒತ್ತಾಯಿಸಿದರು. ‘ಸಭೆಯಲ್ಲಿ  ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ  ಎಸ್‌.ಕೆ.ಮುಖರ್ಜಿ ಹಾಗೂ ಹಿರಿಯ ಅಧಿಕಾರಿಗಳು ಇರುವುದರಿಂದ ಹಾಡಲು ಏನೋ ಅಳುಕು’ ಎಂದು ಪುನೀತ್‌  ಹಿಂದೇಟು ಹಾಕಿದರು.

ಬಳಿಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರು ಹಸಿರು ನಿಶಾನೆ ತೋರಿಸಿದರು. ಪುನೀತ್‌  ಅವರು ‘ಬೊಂಬೆ ಹೇಳುತ್ತೈತೆ... ಮತ್ತೆ ಹೇಳುತ್ತೈತೆ....’ ಚಿತ್ರಗೀತೆಯನ್ನು ಹಾಡಿದರು. ಪ್ರೇಕ್ಷಕರು ಚಪ್ಪಾಳೆಯ ಮೂಲಕ ದನಿಗೂಡಿಸಿದರು.

‘ತೆರಿಗೆ ಪಾವತಿಸಿದರೆ ಮಾತ್ರ ದೇಶ ದೇಶ ಒಳ್ಳೆಯ ರೀತಿಯಲ್ಲಿ ನಡೆಯಲು ಸಾಧ್ಯ. ಸರ್ಕಾರವು ಮನೆ, ಆಸ್ಪತ್ರೆ, ರಸ್ತೆಯಂತಹ ಮೂಲಸೌಕರ್ಯ ಕಲ್ಪಿಸಲು ಸಾಧ್ಯ. ನಾನು ಸರಿಯಾಗಿ ತೆರಿಗೆ ಪಾವತಿಸುತ್ತೇನೆ. ಇತರರನ್ನೂ ಉತ್ತೇಜಿಸುತ್ತೇನೆ’ ಎಂದು ಪುನೀತ್‌ ಹೇಳಿದರು.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮಾತನಾಡಿ, ‘ಮನುಸ್ಮೃತಿ ಹಾಗೂ ಅರ್ಥಶಾಸ್ತ್ರದಂತಹ ಪ್ರಾಚೀನ ಗ್ರಂಥಗಳಲ್ಲೂ ತೆರಿಗೆ ಪದ್ಧತಿಯ ಉಲ್ಲೇಖವಿದೆ.  ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಹಾಗೂ ಅತಿಯಾದ ತೆರಿಗೆ ಎರಡೂ ಒಳ್ಳೆಯದಲ್ಲ ಎಂದು ಮನು ಹೇಳಿದ್ದಾನೆ’ ಎಂದರು.

‘ಅನೇಕರು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡುವುದನ್ನು ಹೆಮ್ಮೆ ಎಂದು ಭಾವಿಸಿದ್ದಾರೆ. ಈ ಪ್ರವೃತ್ತಿ ಒಳ್ಳೆಯದಲ್ಲ. ತೆರಿಗೆಯ ಹಣವನ್ನು ಸರ್ಕಾರವೂ ಎಚ್ಚರಿಕೆಯಿಂದ ವಿನಿಯೋಗಿಸಬೇಕು’ ಎಂದು ಹೇಳಿದರು.

***

‘ತೆರಿಗೆದಾರರಿಗೆ ರಕ್ಷಣೆ ಒದಗಿಸಲು ಮನವಿ’
‘ನನ್ನ ಗೆಳೆಯ ವಕೀಲರೊಬ್ಬರು ಚಾಚೂತಪ್ಪದೆ ತೆರಿಗೆ ಪಾವತಿಸುತ್ತಾರೆ. “ವರ್ಷಕ್ಕೆ  ಲಕ್ಷಗಟ್ಟಲೆ ರೂಪಾಯಿ ತೆರಿಗೆ ಪಾವತಿಸುತ್ತೇನೆ. ಇದ್ದಕ್ಕಿದ್ದಂತೆ ನಾನೇನಾದರೂ ಅನಾರೋಗ್ಯ ಪೀಡಿತನಾದರೆ ಸರ್ಕಾರ ನೆರವಿಗೆ ಬರುತ್ತದೆಯೇ” ಎಂಬುದು ಅವರ ಪ್ರಶ್ನೆ. ನಿಷ್ಠೆಯಿಂದ ತೆರಿಗೆ ಪಾವತಿಸುವವರು ಸಂಕಷ್ಟಕ್ಕೆ ಸಿಲುಕಿದರೆ ಅವರ ರಕ್ಷಣೆ ಒದಗಿಸುವ   ಅಗತ್ಯವಿದೆ’  ಎಂದು ಎಸ್‌.ಕೆ.ಮುಖರ್ಜಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT