ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿಯಲ್ಲೇ ಕುಳಿತರೆ ಗುರಿ ಸಾಧನೆ ಕಷ್ಟ

‘ಆದಾಯ ತೆರಿಗೆ ದಿನಾಚರಣೆ’ಯಲ್ಲಿ ಇಲಾಖೆ ಜಂಟಿ ಆಯುಕ್ತ ಆನಂದ
Last Updated 25 ಜುಲೈ 2017, 6:02 IST
ಅಕ್ಷರ ಗಾತ್ರ

ದಾವಣಗೆರೆ: ‘ದೂರು ಬಂದಲ್ಲಿ ಹೋಗಿ ದಾಳಿ ಮಾಡಿ. ಕಚೇರಿಯಲ್ಲಿ ಕುಳಿತು ಕೆಲಸ ಮಾಡಿದರಷ್ಟೇ ಗುರಿ ಸಾಧನೆ ಸಾಧ್ಯವಿಲ್ಲ’ ಎಂದು ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಜೆ.ಆನಂದ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಪ್ರಧಾನ ಆದಾಯ ತೆರಿಗೆ ಆಯುಕ್ತರ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಆದಾಯ ತೆರಿಗೆ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ಜಿಲ್ಲೆಗೆ 2017–18ರಲ್ಲಿ ₹480 ಕೋಟಿ ಆದಾಯ ತೆರಿಗೆ ಸಂಗ್ರಹ ಗುರಿ ನಿಗದಿಪಡಿಸಲಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಈ ಗುರಿ ಸಾಧನೆ ಸುಲಭ. ಇಲಾಖೆ ಅಧಿಕಾರಿಗಳು, ತೆರಿಗೆ ಸಲಹೆಗಾರರು, ಲೆಕ್ಕಪರಿಶೋಧಕರು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

‘ಆದಾಯ ತೆರಿಗೆಗೆ ಸಂಬಂಧಿಸಿ ದಂತೆ ಬ್ಯಾಂಕ್‌, ನೋಂದಣಿ ಕಚೇರಿ, ಪಾಲಿಕೆಗಳಿಂದ ಸಾಕಷ್ಟು ದೂರುಗಳು ಬರುತ್ತಿವೆ. ಇವುಗಳನ್ನು ಖುದ್ದು ಹೋಗಿ ಪರಿಶೀಲಿಸಿ, ಕ್ರಮ ಕೈಗೊಳ್ಳಿ. ದೊಡ್ಡ ಮೊತ್ತದ ಆದಾಯ ತೆರಿಗೆ ಕಟ್ಟುವವರಿಗಿಂತ ಸಣ್ಣ ಮೊತ್ತದ ತೆರಿಗೆ ಕಟ್ಟುವವರ ಬಗ್ಗೆ ಹೆಚ್ಚಿನ ಗಮನ ಕೊಡಿ’ ಎಂದು ಅವರು ತೆರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಹಿರಿಯ ಲೆಕ್ಕಪರಿಶೋಧಕ ಅಥಣಿ ವೀರಣ್ಣ ಮಾತನಾಡಿ, ‘ನೋಟು ರದ್ದತಿ, ಜಿಎಸ್‌ಟಿ ಜಾರಿ, ಸತತ ಬರಗಾಲದಿಂದಾಗಿ ಆದಾಯ ತೆರಿಗೆ ಇಲಾಖೆ ಈ ವರ್ಷ ಜಿಲ್ಲೆಯಲ್ಲಿ ನಿಗದಿಪಡಿಸಿದ ಗುರಿ ಸಾಧನೆ ಕಷ್ಟ ವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ದಾವಣಗೆರೆ ಜಿಲ್ಲೆಯಲ್ಲಿ 2015–16ರಲ್ಲಿ ₹180 ಕೋಟಿ, 2016–17ರಲ್ಲಿ ₹ 300 ಕೋಟಿ ಆದಾಯ ತೆರಿಗೆ ಸಂಗ್ರಹಿಸಲಾಗಿತ್ತು. ಈ ವರ್ಷ ₹ 285 ಕೋಟಿ ತೆರಿಗೆ ಸಂಗ್ರಹ ಗುರಿ ನಿಗದಿಪಡಿಸಲಾಗಿದೆ. ಆದರೆ, ಸರ್ಕಾರ ಕೈಗೊಂಡ ಹಲವು ಕ್ರಮಗಳಿಂದಾಗಿ ಈ ಆರ್ಥಿಕ ವರ್ಷದಲ್ಲಿ ಈ ಗುರಿ ಸಾಧನೆ ಕಷ್ಟ’ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

‘ಜಿಎಸ್‌ಟಿ ಜಾರಿ ಆಗುವುದಕ್ಕಿಂತ ಮೂರು ತಿಂಗಳು ಮೊದಲು ಹಾಗೂ ಈಗ ಜಾರಿಯಾದ ನಂತರೂ ವ್ಯಾಪಾರಸ್ಥರಲ್ಲಿ ಭಯ ಹೋಗಿಲ್ಲ. ಹಾಗಾಗಿ, ವ್ಯಾಪಾರ–ವಹಿವಾಟು ನಿಗದಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಇದರಿಂದ ಆರ್ಥಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ’ ಎಂದು ವಿಶ್ಲೇಷಿಸಿದರು.

ದೊಡ್ಡ ಮೊತ್ತದ ತೆರಿಗೆ ಸಂಗ್ರಹವಾಗುವ ದಾವಣಗೆರೆ ಜಿಲ್ಲೆಯಲ್ಲಿ ಆದಾಯ ತೆರಿಗೆ ಇಲಾಖೆಗೆ ಸ್ವಂತ ಕಟ್ಟಡ ಇಲ್ಲ. ನಗರದ ಜೆ.ಎಚ್‌.ಪಟೇಲ್‌ ಬಡಾವಣೆಯಲ್ಲಿ ಐದು ಎಕರೆ ಜಾಗ ಇಲಾಖೆಗೆ ಮಂಜೂರು ಆಗಿದ್ದು, ಮುಂದಿನ ಕ್ರಮ ಕೈಗೊಳ್ಳಲು ಇಲಾಖೆ ಹಿರಿಯ ಅಧಿಕಾರಿಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.

ದಾವಣಗೆರೆ ವಲಯ ಆದಾಯ ತೆರಿಗೆ ಇಲಾಖೆ ಆಯುಕ್ತ ರಾಕೇಶ್‌ ಕುಮಾರ್ ಝಾ ಮಾತನಾಡಿ, ‘ನೋಟು ರದ್ದತಿ, ಜಿಎಸ್‌ಟಿ ಯಾವುದೇ ಕ್ರಮಗಳನ್ನು ಕೈಗೊಂಡರೂ ಎಲ್ಲವನ್ನೂ ಜೀರ್ಣಿಸಿಕೊಂಡು ಸಮಸ್ಥಿತಿಗೆ ಬರುವ ಶಕ್ತಿ ದೇಶದ ಆರ್ಥಿಕ ವ್ಯವಸ್ಥೆಗಿದೆ. ಈ ರೀತಿಯ ಕ್ರಮಗಳು ಆದಾಯ ತೆರಿಗೆ ಸಂಗ್ರಹ ಗುರಿ ಸಾಧನೆಗೆ ಅಡ್ಡಿಯಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆದಾಯ ತೆರಿಗೆ ಇಲಾಖೆ ಇನ್‌ಸ್ಪೆಕ್ಟರ್ ಸುಧಾ, ‘ಇದು ಆದಾಯ ತೆರಿಗೆಯ ಮೊದಲ ವರ್ಷಾಚರಣೆ. ಇನ್ನು ಮುಂದೆ ಪ್ರತಿ ವರ್ಷ ಜುಲೈ 24ರಂದು ಆದಾಯ ತೆರಿಗೆ ದಿನ ಆಚರಿಸಲಾಗುವುದು. 1860ರಲ್ಲಿ ಜುಲೈ 24ರಂದು ಭಾರತದಲ್ಲಿ ಪ್ರಥಮ ಬಾರಿಗೆ ಆದಾಯ ತೆರಿಗೆಯನ್ನು ಜಾರಿಗೊಳಿಸಲಾಯಿತು. ಅಂದಿನಿಂದ ಇಂದಿನವರೆಗೂ ಆದಾಯ ತೆರಿಗೆ ಕಾಯ್ದೆಯು ಹಲವಾರು ಮಾರ್ಪಾಡು ಗಳನ್ನು ಹೊಂದಿ, ಪ್ರಸ್ತುತ 1961ರ ಆದಾಯ ತೆರಿಗೆ ಕಾಯ್ದೆಯು ಜಾರಿ ಯಲ್ಲಿದೆ’ ಎಂದು ಮಾಹಿತಿ ನೀಡಿದರು.

ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಅಲ್ಲದೇ, ಬೆಳಿಗ್ಗೆ ರಕ್ತದಾನ ಶಿಬಿರ, ವಿಶೇಷ ನಾಣ್ಯ ಹಾಗೂ ನೋಟುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.  ಸಮಾರಂಭದಲ್ಲಿ ಆದಾಯ ತೆರಿಗೆ ಅಧಿಕಾರಿ ಎಸ್.ಭಾಸ್ಕರ್‌ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT