ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟ: ಅಧಿಕಾರಿಗಳಿಗೆ ಎಚ್ಚರಿಕೆ

ಸ್ವಚ್ಛತೆ, ಗುಣಮಟ್ಟದ ಬಗ್ಗೆ ನಿಗಾ ವಹಿಸಲು ಸೂಚನೆ; ಬಯೊಮೆಟ್ರಿಕ್‌ ಅಳವಡಿಕೆಗೆ ಆ.15 ಗಡುವು
Last Updated 25 ಜುಲೈ 2017, 7:09 IST
ಅಕ್ಷರ ಗಾತ್ರ

ಗದಗ: ಪ್ರಸ್ತಾವ ಸಲ್ಲಿಸಿ ಒಂದು ವರ್ಷ ಕಳೆದರೂ ಶಾಲಾ ಕೊಠಡಿಗಳ ದುರಸ್ತಿಗೆ ಬಿಡುಗಡೆಯಾಗದ ಅನುದಾನ, ಬೆಳೆ ವಿಮೆ ಮೊತ್ತ ಪಾವತಿಯಲ್ಲಿ ಆಗುತ್ತಿರುವ ವಿಳಂಬ ಮತ್ತು ಶುದ್ಧ ನೀರಿನ ಘಟಕಗಳ ಅಸಮರ್ಪಕ ನಿರ್ವಹಣೆ ಕುರಿತು ಸೋಮವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಚರ್ಚೆ ನಡೆಯಿತು.

ಬಿಸಿಯೂಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಒಂದೆರಡು ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿರುವ ಹಿನ್ನೆಲೆ ಯಲ್ಲಿ, ಈ ಕುರಿತು ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಮಂಜುನಾಥ ಚವ್ಹಾಣ ಅವರು ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿಗೆ ಸೂಚನೆ ನೀಡಿದರು.

‘ಬಿಸಿಯೂಟ ತಯಾರುಗೊಂಡ ನಂತರ, ಶಿಕ್ಷಕರು ಮೊದಲು ಸೇವಿಸಿ ಗುಣಮಟ್ಟ ಖಾತ್ರಿಪಡಿಸಿಕೊಂಡ ನಂತರವೇ ವಿದ್ಯಾರ್ಥಿಗಳಿಗೆ ಬಡಿಸ ಬೇಕು. ಬಿಸಿಯೂಟಕ್ಕೆ ಬಳಸುವ ಸಾಮಗ್ರಿ ಗುಣಮಟ್ಟ, ಅಡುಗೆ ಕೋಣೆಗಳ ಸ್ವಚ್ಛತೆ ಬಗ್ಗೆ ಮುಖ್ಯ ಶಿಕ್ಷಕರು ತೀವ್ರ ನಿಗಾ ವಹಿಸಬೇಕು’ ಎಂದರು.

‘ಪ್ರತಿದಿನ ಬಿಸಿಯೂಟಕ್ಕೆ ಬಳಕೆಯಾಗುವ ಆಹಾರ ಧಾನ್ಯಗಳ ವಿವರ, ಪೂರೈಕೆಯಾಗಿರುವ, ಸದ್ಯ ದಾಸ್ತಾನಿರುವ ಮಾಹಿತಿಯನ್ನು ನಿಗದಿತ ಪುಸ್ತಕದಲ್ಲಿ ಪ್ರತಿ ದಿನ ದಾಖಲಿಸಬೇಕು. ಅವಧಿ ಮುಗಿದ ಹಾಗೂ ಕಳಪೆ ಗುಣಮಟ್ಟದ ಆಹಾರವನ್ನು ತಕ್ಷಣ ಮರಳಿಸಬೇಕು. ಜಿಲ್ಲಾ ಸಮನ್ವಯ ಅಧಿಕಾರಿಗಳು ಆಗಾಗ್ಗೆ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿರಬೇಕು. ಇದು ಅತ್ಯಂತ ಗಂಭೀರ ವಿಚಾರ. ಬಿಸಿ ಯೂಟಕ್ಕೆ ಸಂಬಂಧಿಸಿದಂತೆ ಏನೇ ದೂರುಗಳು ಬಂದರೂ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗು ವುದು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ ಅವರು ಎಚ್ಚರಿಕೆ ನೀಡಿದರು.

ಅಂಗನವಾಡಿಯಲ್ಲಿ ಮಕ್ಕಳಿಗೆ ನೀಡಲಾಗುವ ಆಹಾರ ಸಾಮಗ್ರಿಯನ್ನೂ ಸರಿಯಾಗಿ ಪರಿಶೀಲಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
‘ಶಾಲೆಗಳಲ್ಲಿ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆ ಆಗಸ್ಟ್‌ 15ರೊಳಗೆ ಪೂರ್ಣಗೊಳ್ಳಲಿದೆ. ಶಾಲೆಗೆ ನಿಗದಿತ ಸಮಯಕ್ಕೆ ಹಾಜರಾಗದ, ಪದೇ ಪದೇ ಗೈರು ಹಾಜರಾಗುವ ಶಿಕ್ಷಕ ಮಾಹಿತಿ ಇದರಿಂದ ಲಭಿಸಲಿದೆ. ಮುಖ್ಯ ಶಿಕ್ಷಕ ರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಮಾಹಿತಿ  ಪಡೆದುಕೊಂಡು, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ವಾಸಣ್ಣ ಕುರಡಗಿ ಸೂಚಿದರು. 

ಕಳೆದ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ತತ್ವಾರ ಉಂಟಾದಾಗ ಕೆಲವು ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ ಮಾಲೀಕರ ಜತೆಗೆ ಒಪ್ಪಂದ ಮಾಡಿಕೊಂಡು ನೀರು ಪೂರೈಕೆ ಮಾಡಲಾಗಿತ್ತು. ಇವರಿಗೆ ಬಾಕಿ ಇರುವ ಬಿಲ್‌ಗಳನ್ನು ಶೀಘ್ರವೇ ಪಾವತಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.

ಬಹು ಗ್ರಾಮ ಕುಡಿಯುವ ನೀರು ಪೂರೈಸುವ ಯೋಜನೆಯಡಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಇಲಾಖೆಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಿ, ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು  ಕಾಳಜಿ ವಹಿಸುವಂತೆಯೂ ಸೂಚಿಸಿದರು.

‘ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ರೋಣ, ನರಗುಂದ ತಾಲ್ಲೂಕುಗಳಿಂದ ದೂರುಗಳು ಬಂದಿವೆ. ನೀರು ಪೂರೈಕೆಯಲ್ಲಿ ಯಾವುದೇ ತೊಂದರೆ ಆಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿರುವ ಸೋಲಾರ್ ದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಕುರಿತು ಅಧಿಕಾರಿಗಳು ಸಂಬಂಧಿಸಿದ ಏಜೆನ್ಸಿಗಳ ಗಮನಕ್ಕೆ ತರಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಮಂಜುನಾಥ ಚವಾಣ ಸೂಚಿಸಿದರು.

₹17 ಕೋಟಿ ಬೆಳೆ ವಿಮೆ ಪಾವತಿ
ಕಳೆದ ಸಾಲಿನ ಫಸಲ್‌ ಬಿಮಾ ಯೋಜನೆಯಡಿ ಜಿಲ್ಲೆಯ ರೈತರಿಗೆ ವಿತರಣೆಯಾಗಬೇಕಿದ್ದ  ₹61 ಕೋಟಿ ಬೆಳೆ ವಿಮಾ ಮೊತ್ತದಲ್ಲಿ ಇದುವರೆಗೆ ಕೇವಲ ₹17 ಕೋಟಿ ಮಾತ್ರ ಎರಡು ಹಂತದಲ್ಲಿ ಬಿಡುಗಡೆ ಆಗಿದೆ. ಬಾಕಿ ಉಳಿದ ಮೊತ್ತವನ್ನು ತಕ್ಷಣವೇ ಸಂಬಂಧಿತ ರೈತರ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡುವಂತೆ ಜಿಲ್ಲಾಧಿಕಾರಿಗಳು, ಇತ್ತೀಚೆಗೆ ವಿಮಾ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ.ಬಾಲರೆಡ್ಡಿ ಅವರು ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆಯಡಿ  2016–17ನೇ ಸಾಲಿನಲ್ಲಿ  4,095 ಮತ್ತು ಪ್ರಸಕ್ತ ಸಾಲಿನಲ್ಲಿ ಇದುವರೆಗೆ 1,986 ಕೃಷಿ ಹೊಂಡಗಳು ನಿರ್ಮಾಣವಾಗಿವೆ. ರೈತರಿಗೆ  ಬಾಕಿ ಇರುವ ಸಹಾಯ ಧನವನ್ನು ಶೀಘ್ರದಲ್ಲೇ ಪಾವತಿಸ ಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ  ರಾಜುಗೌಡ ಕೆಂಚನಗೌಡ, ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಟಿ.ದಿನೇಶ, ಯೋಜನಾಧಿಕಾರಿ ಶಂಕರ ಶಂಪೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT