ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನವಾಸಿಯ ಭತ್ತದ ಕಣಜಕ್ಕೆ ಕುತ್ತು

ನಿರಂತರ ಮೂರು ವರ್ಷಗಳ ಬರ: ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಮೆಕ್ಕೆಜೋಳದೆಡೆಗೆ ವಾಲಿದ ರೈತರು
Last Updated 25 ಜುಲೈ 2017, 7:42 IST
ಅಕ್ಷರ ಗಾತ್ರ

ಶಿರಸಿ: ನಿರಂತರ ಮೂರು ವರ್ಷಗಳ ಬರದಿಂದ ಭತ್ತ ಕೃಷಿಯಲ್ಲಿ ಕೈಸುಟ್ಟು ಕೊಂಡಿರುವ ತಾಲ್ಲೂಕಿನ ಬನವಾಸಿ ಹೋಬಳಿಯ ರೈತರು ಕಡಿಮೆ ನೀರು ಬಯಸುವ ಮೆಕ್ಕೆಜೋಳದೆಡೆಗೆ ವಾಲಿ ದ್ದಾರೆ. ಭತ್ತದ ಕಣಜದ ನೆಲವನ್ನು ಮೆಕ್ಕೆಜೋಳ ಆಕ್ರಮಿಸಿಕೊಂಡಿದೆ.

ಬನವಾಸಿ ಹೋಬಳಿ ಭತ್ತ ಬೆಳೆಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿನ ರೈತರು ಭತ್ತದ ಕೃಷಿಯಲ್ಲಿ ಬದುಕು ಕಟ್ಟುಕೊಂಡಿದ್ದಾರೆ. ನೆರೆಗೂಳಿ, ಮಟ್ಟಳಗ, ಕರಿ ಭತ್ತ, ಜಿಗ್ಗ ಮೊದಲಾದ ಸಾಂಪ್ರದಾಯಿಕ ತಳಿಗಳು ವರದಾ ನದಿಗೆ ಪ್ರವಾಹ ಬಂದರೆ ಅದನ್ನು ತಡೆದುಕೊಂಡು ಉತ್ತಮ ಫಸಲು ನೀಡುವ ವಿಶೇಷ ಗುಣ ಹೊಂದಿವೆ. ಇವುಗಳ ಜೊತೆಗೆ ರೈತರು ಇತ್ತೀಚಿನ ವರ್ಷಗಳಲ್ಲಿ ಅಧಿಕ ಇಳುವರಿ ನೀಡುವ ಜಯಾ, ಇಂಟಾನ್, ಜೆಜಿಎಲ್ ತಳಿಗಳ ಭತ್ತಗಳನ್ನು ಬೆಳೆಯುತ್ತಿದ್ದರು.

2014ರಲ್ಲಿ ಭತ್ತಕ್ಕೆ ಅಗತ್ಯವಿರುವಷ್ಟು ಮಳೆಯಾಗದ ಕಾರಣ ಬಿತ್ತನೆ ಮಾಡಿದ ಭತ್ತ ತೆನೆಗಟ್ಟಲೇ ಇಲ್ಲ. ನಂತರದ ಎರಡು ವರ್ಷಗಳಲ್ಲಿ ಬರಗಾಲದ ಈ ಪ್ರದೇಶವನ್ನು ಢಾಳಾಗಿ ಆವರಿಸಿದ್ದರಿಂದ ರೈತರ ಮನೆಯ ಭತ್ತದ ಕಣಜ ಖಾಲಿಯಾಗಿಯೇ ಉಳಿಯಿತು. ಇದರಿಂದ ಬೇಸತ್ತ ರೈತರು ಈ ಬಾರಿ ಭತ್ತ ಬೆಳೆಯುವ ನೆಲ ದಲ್ಲಿ ಮೆಕ್ಕೆಜೋಳ ನಾಟಿ ಮಾಡಿದ್ದಾರೆ. ಪ್ರತಿ ವರ್ಷ ಬನವಾಸಿ ಹೋಬಳಿಯಲ್ಲಿ 300 ಹೆಕ್ಟೇರ್ ಭೂಮಿಯಲ್ಲಿ ಮೆಕ್ಕೆ ಜೋಳದ ನಾಟಿ ನಡೆಯುತ್ತಿತ್ತು. ಈ ಬಾರಿ 500 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆ ಜೋಳದ ಸಸಿಗಳು ತೊನೆದಾಡುತ್ತಿವೆ.

‘ಬನವಾಸಿ ಹೋಬಳಿಯಲ್ಲಿ ಸುಮಾರು 5250 ಹೆಕ್ಟೇರ್ ಪ್ರದೇಶದಲ್ಲಿ ಪ್ರತಿ ವರ್ಷ ಭತ್ತ ಬಿತ್ತನೆ, ನಾಟಿ ನಡೆಯುತ್ತದೆ. ಮೂರು ವರ್ಷಗಳಿಂದ ಭತ್ತ ರೈತರ ಸಾಲವನ್ನು ಹೆಚ್ಚಿಸಿದೆ. ಸೊಸೈಟಿಗಳಲ್ಲಿ ಸಾಲ ಮಾಡಿ ರೈತರು ಕೃಷಿ ಮಾಡುತ್ತಾರೆ. ಒಂದು ಎಕರೆಯಲ್ಲಿ ಭತ್ತ ನಾಟಿ ಮಾಡಲು ಗೊಬ್ಬರ, ಕೂಲಿ ಸೇರಿ ₹ 40ಸಾವಿರಕ್ಕೂ ಅಧಿಕ ಖರ್ಚಾಗುತ್ತದೆ.

ಕಳೆದ ಎರಡು ವರ್ಷಗಳಲ್ಲಿ ಈ ಭಾಗ ದಲ್ಲಿ ಮಳೆಯಾಗದೇ ಭತ್ತದ ಸಸಿಗಳು ಮೇಲೇಳಲೇ ಇಲ್ಲ. ನೀರಿಲ್ಲದೇ ಸಸಿಗಳು ಒಣಗಿದವು. ಕೊಯ್ಲು ಮಾಡಲು ಹಣ ವಿಲ್ಲದೇ ಎಷ್ಟೋ ರೈತರು ಗದ್ದೆಗಳನ್ನು ಹಾಗೆಯೇ ಬಿಟ್ಟರು. ಈ ಬಾರಿ ಮೆಕ್ಕೆಜೋಳ ಬೆಳೆಯಲು ಹದವಾದ ವಾತಾವರಣ ಇರುವುದರಿಂದ ಹೆಚ್ಚಿನ ರೈತರು ಇದನ್ನೇ ಬೆಳೆದಿದ್ದಾರೆ’ ಎನ್ನುತ್ತಾರೆ ರೈತ ಶಂಕರ ಗೌಡರ್.

‘ಕಳೆದ ವರ್ಷಗಳಲ್ಲಿ ಮಳೆಯಿಲ್ಲದೇ ವರದಾ ನದಿ ತುಂಬಿ ಹರಿಯಲೇ ಇಲ್ಲ. ಸಣಕಲಾಗಿದ್ದ ನದಿ ಬೇಸಿಗೆಯಲ್ಲಿ ಸಂಪೂರ್ಣ ಬತ್ತಿ ಹೋಗಿತ್ತು. ಮುಂಗಾರು ಭತ್ತವನ್ನೇ ಸರಿಯಾಗಿ ಬೆಳೆಯಲಾಗದ ನಮಗೆ ಹಿಂಗಾರು ಕೃಷಿ ಇನ್ನೆಲ್ಲಿಂದ ಸಾಧ್ಯ. ನಿರಂತರ ಬರಗಾಲ ಭತ್ತದಿಂದ ರೈತರನ್ನು ವಿಮುಖರನ್ನಾಗಿ ಮಾಡುತ್ತಿದೆ’ ರುದ್ರಪ್ಪ ಗೌಡ.

‘ಬನವಾಸಿ ಹೋಬಳಿಯಲ್ಲಿ ಸುಮಾರು 300 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿತ್ತು. ಈ ವರ್ಷ ಮುಂಗಾರಿನ ಆರಂಭದ ದಿನ ಗಳಲ್ಲಿ ಮಳೆಯಾಗದ ಕಾರಣ ರೈತರು ಭತ್ತ ಬಿಟ್ಟು ಮೆಕ್ಕೆಜೋಳ ನಾಟಿ ಮಾಡಿದ್ದಾರೆ.

ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಸೊರಗಿದ್ದ ಭತ್ತದ ಗದ್ದೆಗಳು ಚಿಗಿತುಕೊಂಡಿವೆ. ಭತ್ತ ನಾಟಿ ಕಾರ್ಯ ಚುರುಕುಗೊಂಡಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ವಿ. ಕೂರ್ಸೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

*
ನೀರಿನ ಕೊರತೆ ರೈತರ ಬೆಳೆಯ ಆಯ್ಕೆಯನ್ನು ಬದಲಿಸಿದೆ. ಮುಂದಿನ ವರ್ಷ ಸರಿಯಾಗಿ ಮಳೆಯಾದರೆ ಮತ್ತೆ ಭತ್ತ ಕೃಷಿ ಮಾಡುತ್ತೇವೆ.
ಉಮಾಕಾಂತ ಗೌಡ,
ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT