ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒತ್ತಡಗಳನ್ನು ಆಹ್ವಾನಿಸುವವನೇ ಕಲಾವಿದ’

Last Updated 25 ಜುಲೈ 2017, 19:30 IST
ಅಕ್ಷರ ಗಾತ್ರ

ನೀರಿಗೆ ಪಾಚಿ ಇದ್ದಂತೆ ಜೀವನದಲ್ಲಿ ಒತ್ತಡಗಳು. ನಾವು ಈಗ ನೀರು ಕುಡಿಯಬೇಕಿದೆ. ಆಗ ಏನು ಮಾಡುತ್ತೇವೆ? ಪಾಚಿಯ ಸಮೇತ ನೀರನ್ನು ಕುಡಿಯುವುದಿಲ್ಲ, ಅಲ್ಲವೆ? ಪಾಚಿಯನ್ನು ಪಕ್ಕಕ್ಕೆ ಸರಿಸುತ್ತೇವೆ; ತಿಳಿಯಾದ ನೀರನ್ನು ಕುಡಿಯುತ್ತೇವೆ. ಹೀಗೆಯೇ ಒತ್ತಡಗಳನ್ನು ಪಕ್ಕಕ್ಕೆ ಸರಿಸಿ, ಮನಸ್ಸನ್ನು ತಿಳಿಮಾಡಿಕೊಳ್ಳುತ್ತಿರಬೇಕು. ಅದೇ ಜೀವನಕಲೆ.

ನಾನೊಬ್ಬ ಕಲಾವಿದ. ಒತ್ತಡವನ್ನು ಕಲೆಯ ನೆಲೆಯಲ್ಲೇ ನೋಡುತ್ತೇನೆ. ಒತ್ತಡವಿಲ್ಲದೆ, ಅಡ್ಡಿ–ಆತಂಕಗಳಿಲ್ಲದೆ, ಕಲೆಯೇ ಅರಳುವುದಿಲ್ಲ. ಒತ್ತಡಗಳನ್ನು ಆಹ್ವಾನಿಸುವವೇ ಕಲಾವಿದ. ಆ ಒತ್ತಡವನ್ನೂ ಹೇಗೆ ಕ್ರಿಯಾಶೀಲವಾಗಿಸಬಲ್ಲ ಎನ್ನುವುದೇ ಕಲಾವಿದನ ಪ್ರತಿಭೆಯನ್ನೂ ಕಲಾಸೃಷ್ಟಿಯನ್ನೂ ನಿರ್ಧರಿಸಬಲ್ಲ ಅಂಶವಾಗಿರುತ್ತೆ ಎನ್ನುವುದು ನನ್ನ ಅನಿಸಿಕೆ. ಕಲಾಸೃಷ್ಟಿಯನ್ನೇ ನಾನಿಲ್ಲಿ ಒಂದು ರೂಪಕವಾಗಿ ಹೇಳಬಹುದು ಎನಿಸುತ್ತೆ. ಒಂದು ದೇವಸ್ಥಾನವನ್ನು ನೋಡಿ. ಗುಡಿ ಎಂದರೆ ಮೆಟ್ಟಿಲುಗಳು, ಕಂಬಗಳು, ದ್ವಾರಪಾಲಕರು, ಮೂಲಮೂರ್ತಿ – ಇವೆಲ್ಲ ಇರುತ್ತವೆ, ಅಲ್ಲವೆ? ಇವೆಲ್ಲವನ್ನೂ ಕಲ್ಲಿನಿಂದಲೇ ಮಾಡಿರುವುದು. ಒಂದೇ ಬಂಡೆಯ ಕಲ್ಲುಗಳೂ ಆಗಿರಬಹುದು.

ಹೀಗಿದ್ದರೂ ಒಂದು ಕಲ್ಲು ಮೆಟ್ಟಿಲಾಗಿ ಜನರ ತುಳಿತಕ್ಕೆ ಒಳಗಾಗುತ್ತಿರುತ್ತದೆ; ಆದರೆ ಅದೇ ಬಂಡೆಯ ಮತ್ತೊಂದು ಕಲ್ಲು ದೇವರವಿಗ್ರಹವಾಗಿ ಪೂಜೆಯನ್ನು ಮಾಡಿಸಿಕೊಳ್ಳುತ್ತಿರುತ್ತದೆ. ನಮಗೆಲ್ಲರಿಗೂ ಇಲ್ಲೇ ಪಾಠ ಇದೆ. ಅದರಲ್ಲೂ ಕಲಾವಿದನಿಗೆ ಈ ಪಾಠ ಇನ್ನೂ ಚೆನ್ನಾಗಿ ಮನದಟ್ಟಾಗುವಂಥದ್ದು. ಇದು ಹೇಗೆ? ಯಾವ ಕಲ್ಲು ಅತಿ ಕಡಿಮೆ ಪ್ರಮಾಣದಲ್ಲಿ ಉಳಿಯ ಪೆಟ್ಟುಗಳನ್ನು ಪಡೆದಿರುತ್ತದೆಯೋ ಅದು ಗುಡಿಯ ಮೆಟ್ಟಿಲಾಗಿರುತ್ತೆ. ಅದಕ್ಕಿಂತಲೂ ಇನ್ನು ಸ್ವಲ್ಪ ಜಾಸ್ತಿ ಪೆಟ್ಟುಗಳನ್ನು ತಿಂದಿರುವಂಥವು ಕಂಬಗಳು; ಅವಕ್ಕೂ ಹೆಚ್ಚು ಉಳಿಯ ಘಾಸಿಗೆ ಮೈ ಕೊಟ್ಟಂಥವು ದ್ವಾರಪಾಲಕರು. ಆದರೆ ಅತಿ ಹೆಚ್ಚು ಪೆಟ್ಟುಗಳನ್ನು ಯಾವ ಕಲ್ಲು ಪಡೆದಿರುತ್ತದೆಯೋ ಅದು ದೇವರ ಮೂರ್ತಿಯಾಗಿರುತ್ತದೆ. ಅದಕ್ಕೆ ಗೌರವ–ಭಕ್ತಿಗಳಿಂದ ಪೂಜೆ ಸಲ್ಲುತ್ತದೆ. ಇಲ್ಲಿ ‘ಉಳಿಯ ಏಟು’ ಎಂದರೆ ನಮ್ಮ ಸಾಧನೆಯ ಹಾದಿಯಲ್ಲಿ ಎದುರಾಗುವ ಎಲ್ಲ ರೀತಿಯ ಒತ್ತಡಗಳು. ಅದು ಮಾನಸಿಕ ಕ್ಷೋಭೆಗಳಾಗಿರಬಹುದು, ದೈಹಿಕ ತೊಂದರೆಗಳಾಗಿರಬಹುದು, ಕೌಟುಂಬಿಕ ಕಷ್ಟಗಳಾಗಿರಬಹುದು, ಸಾಮಾಜಿಕ ಟೀಕೆಗಳಾಗಿರಬಹುದು. ಇಂಥವನ್ನು ನಮ್ಮ ವ್ಯಕ್ತಿತ್ವ ನಿರ್ಮಾಣದ ಕಲಾಸೋಪಾನಗಳು ಎಂದು ಸ್ವೀಕರಿಸಿದಾಗ ಮಾತ್ರವೇ ನಮ್ಮ ಗುರಿಯನ್ನು ಮುಟ್ಟಲು ಸಾಧ್ಯ; ನೆಮ್ಮದಿಯನ್ನು ಪಡೆಯಲು ಸಾಧ್ಯ. ಹೀಗಾಗಿ ಒತ್ತಡಗಳಿಗೆ ಹೆದರುವ ಬದಲು ಅವನ್ನು ಶಕ್ತಿಯನ್ನಾಗಿ ಬಳಸಿಕೊಳ್ಳಬಲ್ಲ ಕಲೆಗಾರಿಕೆಯನ್ನು ಕಲಿಯಬೇಕು. ಅಂಥವನೇ ನಿಜವಾದ ಕಲೆಗಾರ.

ನನ್ನ ಬಾಲ್ಯದಲ್ಲೇ ಇಂಥದೊಂದು ತಿಳಿವಳಿಕೆಯನ್ನು ಕೊಟ್ಟವರು ಕುವೆಂಪು. 1964ರಲ್ಲಿ ಅವರೊಂದು ಪತ್ರದಲ್ಲಿ

‘ಪ್ರತಿಭೆ ಗಣಿಯ ವಜ್ರದಂತೆ;

ಸಾಣೆ ಹಿಡಿಯುವುದೇ ರಸತಪಸ್ಯೆ;

ಸ್ವಾರ್ಥಿಗಳ ಕ್ಷಣಿಕ ಪ್ರಶಂಸೆಗೆ ಮಾರುಹೋಗಬೇಡಿ;

ನಿಮ್ಮ ಕಲೆ ಪೂಜೆಗೆತ್ತಿದ ಆರತಿಯಾಗಿ ನಿರಂತರ ಬೆಳಗಲಿ’

– ಎಂದು ಬರೆದಿದ್ದರು. ಈ ಸಾಲುಗಳನ್ನು ನಾನಿಂದಿಗೂ ಮರೆತಿಲ್ಲ. ಕಲೆಯ ಬಗ್ಗೆಯೇ ಸದಾ ಮನಸ್ಸಿನಲ್ಲಿ ಏನಾದರೊಂದು ಓಡುತ್ತಲೇ ಇರುತ್ತದೆ. ಹೀಗಾಗಿ ಬೇರೆ ವಿಷಯಗಳು ನನ್ನನ್ನು ಅಷ್ಟಾಗಿ ಬಾಧಿಸುವುದಿಲ್ಲ. ನಾವು ಮಾಡುವ ಕೆಲಸದ ಬಗ್ಗೆ ಪ್ರೀತಿ ಇದ್ದರೆ ನಮಗೆ ಎಂಥ ಒತ್ತಡಗಳೂ ತೊಂದರೆ ಕೊಡದು.

ನಾನು ಒತ್ತಡದ ನಿಯಂತ್ರಣಕ್ಕೆ ಎಂದೇ ಪ್ರತ್ಯೇಕವಾದ ಯಾವುದೇ ಅಭ್ಯಾಸಗಳನ್ನು ಇಟ್ಟುಕೊಂಡಿಲ್ಲ. ಆದರೆ ಪೇಂಟಿಂಗ್‌ ಮಾಡುವಾಗ ಸಂಗೀತವನ್ನು ಕೇಳುತ್ತಿರುತ್ತೇನೆ; ನಾನು ಕೇಳುವುದು ವಾದ್ಯಸಂಗೀತ. ಪಂಡಿತ್ ಹರಿಪ್ರಸಾದ್‌ ಚೌರಾಸಿಯಾ, ಪಂಡಿತ್‌ ಶಿವಕುಮಾರ ಶರ್ಮಾ ಅಂಥವರ ಸಂಗೀತವನ್ನು ಕೇಳುತ್ತಿರುತ್ತೇನೆ. ನನ್ನ ಕಲಾಸೃಷ್ಟಿಯ ಸಂದರ್ಭದಲ್ಲಿ ಅಗರಬತ್ತಿಯ ಸುಗಂಧದ ಸಾಂಗತ್ಯವೂ ನನಗೆ ಬೇಕು. ಸ್ವಲ್ಪ ಸಮಯ ಪ್ರಾಣಾಯಾಮವನ್ನೂ ಮಾಡುವೆ. ನನ್ನ ಆಹಾರಸೇವನೆಯೂ ಹಿತಮಿತವಾಗಿರುತ್ತದೆ; ಚಿತ್ರರಚನೆಯ ಸಮಯದಲ್ಲಿ ಆಗಾಗ ಚಾಕೊಲೇಟನ್ನು ತಿನ್ನುವುದುಂಟು. ಕಲೆಗೆ ಸಂಬಂಧಿಸಿದಂತೆ ಪುಸ್ತಕಗಳನ್ನೂ ಓದುವೆ. ಕುವೆಂಪು, ಬೇಂದ್ರೆಯಂಥವರ ಕಾವ್ಯವೂ ನನ್ನ ಉಲ್ಲಾಸಕ್ಕೂ ಕಲಾಸೃಷ್ಟಿಗೂ ನೆರವಾಗುತ್ತಿರುತ್ತದೆ. ಕಾಲಿದಾಸನ ಮೇಘಸಂದೇಶ ನನ್ನ ಕಲೆಯ ಮೇಲೆ ತುಂಬ ಪ್ರಭಾವವನ್ನು ಬೀರಿದೆ. ಆಗಾಗ ಸಣ್ಣ ಸಣ್ಣ ಪದ್ಯಗಳೂ ಹೊಳೆಯುತ್ತಿರುತ್ತವೆ; ಅವನ್ನು ಬರೆದಿಟ್ಟುಕೊಳ್ಳುವೆ. ಇವೂ ಒಂದು ವಿಧದಲ್ಲಿ ಆಹ್ಲಾದವನ್ನು ಒದಗಿಸುತ್ತಿರುತ್ತವೆ.

ಎಷ್ಟೋ ಸಂದರ್ಭಗಳಲ್ಲಿ ನನ್ನ ಪೇಂಟಿಂಗ್‌ ನನಗೇ ತೃಪ್ತಿಕೊಡುವುದಿಲ್ಲ; ಆಗೆಲ್ಲ ಮನಸ್ಸು ಸ್ವಲ್ಪ ವಿಚಲಿತವಾಗುವುದು ನಿಜ. ಆದರೆ ನನ್ನನ್ನು ಮಂಕು ಮಾಡಲು ಅದಕ್ಕೆ ಅವಕಾಶವನ್ನು ನೀಡಲಾರೆ. ಅರಳಿದ ಹೂವೆಲ್ಲವೂ ಕಾಯಾಗಲಾರದು; ಕಾಯೆಲ್ಲವೂ ಹಣ್ಣಾಗದು, ಅಲ್ಲವೆ? ಆದರೆ ಹೂವಾಗದೆ ಉದುರಿದ ಎಲೆಯೂ, ಹಣ್ಣಾಗದೆ ಬಿದ್ದ ಕಾಯಿಯೂ ಅದೇ ಗಿಡಕ್ಕೆ ಗೊಬ್ಬರವಾಗಿ ಕಸುವನ್ನು ತುಂಬುತ್ತದೆ. ಮತ್ತೆ ಎಷ್ಟೋ ಹೂವು–ಕಾಯಿ–ಹಣ್ಣುಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ಹೀಗೆಯೇ ಇಂದಿನ ಅತೃಪ್ತಿ ನಾಳೆಯ ಚಿತ್ರಕ್ಕೆ ಮತ್ತಷ್ಟು ಸ್ಫೂರ್ತಿಯನ್ನೂ ಕಲ್ಪನೆಯನ್ನೂ ಒದಗಿಸಬಲ್ಲದು.  ಕಲೆಯ ದಾರಿ ಎಂದರೆ ನಿರಂತರ ಕಲಿಕೆಯೇ. ಹೀಗಾಗಿ ಸೋಲು–ಗೆಲುವು ಎನ್ನುವುದು ಅಲ್ಲಿ ಮುಖ್ಯವಾಗುವುದಿಲ್ಲ.

ಮೊದಲು ಕೋಪ ಬರುತ್ತಿತ್ತು. ಈಗ ಕೋಪವನ್ನು ಗಂಟುಕಟ್ಟಿ ದೂರ ಇಟ್ಟಿರುವೆ; ಅದು ನನ್ನ ಹತ್ತಿರ ಸುಳಿಯದು. ಕಾವ್ಯಚಿತ್ರದಂಥ ಸಾರ್ವಜನಿಕ ಕಾರ್ಯಕ್ರಮಗಳನ್ನು ನೀಡುವಾಗ ಹಲವು ಸಂದರ್ಭಗಳಲ್ಲಿ ಅಹಿತಕರ ಎನಿಸುವಂಥ ಸಣ್ಣ ಪುಟ್ಟ ಘಟನೆಗಳು ನಡೆಯುತ್ತಿರುತ್ತವೆ. ಆದರೆ  ಅಂದಿನ ಕಾರ್ಯಕ್ರಮವನ್ನು ಕೆಡಿಸುವಷ್ಟು ಅದನ್ನು ನಾನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ನನ್ನ ಗಮನವೆಲ್ಲ ನನ್ನ ಕಲಾಸೃಷ್ಟಿ ಮತ್ತು ಅದನ್ನು ನೋಡಲು ಬಂದಿರುವ ಜನರ ಕಡೆಗೇ ಇರುತ್ತದೆ. ಜನರೇ ನನ್ನ ಪಾಲಿಗೆ ‘ಜನರೇಟರ್‌.’ ಮೈಸೂರಿನಲ್ಲಿ ಕಾರ್ಯಕ್ರಮವೊಂದು ಆಯೋಜಿತವಾಗಿತ್ತು. ಕಾರಿನಲ್ಲಿ ಹೊರಟೆ. ಮೈಸೂರಿಗೆ ಹತ್ತಿರ ಇರುವಾಗ ಆಯೋಜಕರಿಗೆ ಫೋನ್‌ ಮಾಡಿದೆ. ಆದರೆ ಆ ಕಾರ್ಯಕ್ರಮ ನಿಗದಿಯಾಗಿದ್ದದ್ದು ಮುಂದಿನ ತಿಂಗಳು; ನಾನು ಕಾರ್ಯಕ್ರಮಕ್ಕೆ ಒಂದೇ ಒಂದು ತಿಂಗಳಷ್ಟೆ ಮುಂಚಿತವಾಗಿ ಹೊರಟುಬಿಟ್ಟಿದ್ದೆ!

ಹೀಗೆ ನಮ್ಮ ಕಡೆಯಿಂದಲೂ ಆಗಾಗ ಇಂಥ ಪೇಚಿನ ಪ್ರಸಂಗಗಳು ನಡೆಯುತ್ತವೆಯಾದ್ದರಿಂದ, ಬೇರೊಬ್ಬರ ತಪ್ಪುಗಳನ್ನೇ ದೊಡ್ಡದಾಗಿ ನೋಡುವಂಥ ದೃಷ್ಟಿ ಸರಿ ಅಲ್ಲ ಎನ್ನುವುದು ಮನವರಿಕೆಯಾಗಿದೆ. ಮಾತ್ರವಲ್ಲ, ಆದ ತಪ್ಪುಗಳನ್ನೂ ಕೂಡ ಪಾಠವನ್ನಾಗಿ ಸ್ವೀಕರಿಸಬಹುದು. ಅಂದು ನಾನು ‘ಈಗ ನಾನು ಕಾರ್ಯಕ್ರಮಕ್ಕೆ ಹೊರಟವನಲ್ಲ, ಪಿಕ್‌ನಿಕ್‌ಗೆ ಹೊರಟವನು’ ಎಂದುಕೊಂಡೆ. ಆ ಕ್ಷಣದಲ್ಲೇ ಮನಸ್ಸು ನಿರಾಳವಾಯಿತು. ಆ ಪ್ರಸಂಗ ನಗುವನ್ನೂ ತಂದಿತು. ಕಾರ್ಯಕ್ರಮಗಳಲ್ಲಿ ನನ್ನ ಚಿತ್ರರಚನೆಯನ್ನು ಕಂಡ ಜನರು ‘ವರ್ಮಾ ಅವರೇ, ನೀವು ಬರೆದದ್ದನ್ನು ಅಳಿಸುವುದೇ ಇಲ್ಲವಲ್ಲ, ಅಷ್ಟು ಪರ್ಫೆಕ್ಟ್ ಆಗಿ ಬರೆಯುತ್ತೀರಿ’ ಎಂದು ಉದ್ಗರಿಸುತ್ತಾರೆ.

‘ನೀವು ಮನೆಗೆ ಬಂದು ನೋಡಿ ಎಷ್ಟೊಂದು ಬಾರಿ ಎರೇಸರ್ ಉಪಯೋಗಿಸುತ್ತಿರುತ್ತೇನೆ ಎಂದು ಗೊತ್ತಾಗುತ್ತೆ’ ಎಂದು ನಗುವೆ. ಅಭ್ಯಾಸ ನಿರಂತರವಾಗಿದ್ದರಷ್ಟೆ ಕಲೆಯಲ್ಲಿ ಏಕಾಗ್ರತೆ ಒದಗುವುದು. ಜೀವನದಲ್ಲಿ ಎದುರಾಗುವ ತಪ್ಪುಗಳನ್ನೂ ಸಹ ಅಭ್ಯಾಸವಾಗಿಯೇ ಸ್ವೀಕರಿಸಿದರೆ ಮನಸ್ಸು ಹಗರುವಾಗುತ್ತೆ.

ನಾವು ಸಮಾಧಾನವಾಗಿದ್ದರಷ್ಟೆ ಸಾಲದು; ನಮ್ಮ ಸುತ್ತಲಿನ ಪರಿಸರವೂ ಹಾಗೇ ಇರಬೇಕು. ಈ ವಿಷಯದಲ್ಲಿ ನನ್ನ ಶ್ರೀಮತಿಯ ಪಾತ್ರ ದೊಡ್ಡದು. ಶಾಂತಾ ವರ್ಮಾ ಹೆಸರಿಗಷ್ಟೆ ಅಲ್ಲ; ಆಕೆ ನಿಜವಾಗಿಯೂ ನನ್ನ ಶಾಂತಿಯನ್ನು ಕಾಪಾಡುತ್ತಿರುವ ಶಾಂತಮೂರ್ತಿಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT