ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ, ಶೋಭಾ ರಾಜೀನಾಮೆಗೆ ಆಗ್ರಹ

ಕೋಮು ಗಲಭೆಗೆ ಪ್ರಚೋದನೆಯ ಆರೋಪ: ನಗರದಲ್ಲಿ ಎಸ್‌ಡಿಪಿಐ ಪ್ರತಿಭಟನೆ
Last Updated 25 ಜುಲೈ 2017, 8:53 IST
ಅಕ್ಷರ ಗಾತ್ರ

ಮಡಿಕೇರಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ನಡೆಯಲು ಸಂಸದರೂ ಆದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರೇ ಕಾರಣವಾಗಿದ್ದು, ಇಬ್ಬರೂ ತಮ್ಮ (ಸಂಸದ) ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟ್‌ ಆಫ್‌ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ನಗರ ಇಂದಿರಾ ಗಾಂಧಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಕಾರ್ಯಕರ್ತರು ಇಬ್ಬರ ವಿರುದ್ಧವೂ ಘೋಷಣೆ ಕೂಗಿ, ರಾಜೀನಾಮೆಗೆ ಪಟ್ಟು ಹಿಡಿದರು. ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಮೀನ್‌ ಮೋಹಿಸಿನ್‌ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ‘ಕರಾವಳಿ ಭಾಗದಲ್ಲಿ ಒಂದು ತಿಂಗಳು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಇಬ್ಬರು ಅಮಾಯಕರ ಕೊಲೆ, 12 ಚೂರಿ ಇರಿತ ಪ್ರಕರಣಗಳು ನಡೆದಿವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ನಿಷೇಧಾಜ್ಞೆ ಹೇರಿದ್ದರು. ಇದರ ನಡುವೆಯೂ ಶೋಭಾ, ನಳೀನ್‌ ಕುಮಾರ್ ಕಟೀಲ್‌ ಅವರು ಶರತ್‌ ಕೊಲೆ ಪ್ರಕರಣ ಖಂಡಿಸುವ ನೆಪದಲ್ಲಿ ಬಿ.ಸಿ. ರೋಡ್‌ನಲ್ಲಿ ಪ್ರತಿಭಟನೆ ನಡೆಸಿ ವಾತಾವರಣ ಮತ್ತಷ್ಟು ಪ್ರಕ್ಷುಬ್ಧವಾಗುವಂತೆ ಮಾಡಿದ್ದರು’ ಎಂದು ಆರೋಪಿಸಿದರು.

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಪ್ರಧಾನ ಕಾರ್ಯದರ್ಶಿ ಹ್ಯಾರೀಸ್‌ ಮಾತನಾಡಿ, ‘ತನಿಖೆ ಹಂತದಲ್ಲಿರುವಾಗಲೇ ಬಿಜೆಪಿ ಸಂಸದರು ಕೊಲೆಯ ಆರೋಪವನ್ನು ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಯ ಮುಖಂಡರ ಮೇಲೆ ಹೊರಿಸಲು ಮುಂದಾಗಿರುವ ಕ್ರಮ ಸರಿಯಲ್ಲ. ಇದು ಪೊಲೀಸರ ತನಿಖೆಯನ್ನೇ ದಿಕ್ಕು ತಪ್ಪಿಸುವ ಹುನ್ನಾರವಾಗಿದೆ’ ಎಂದು ದೂರಿದರು.

‘ಶೋಭಾ, ಯಡಿಯೂರಪ್ಪ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು. ಕೋಮು ಪ್ರಚೋದನೆ ಹಾಗೂ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಬಿಜೆಪಿ ಸಂಸದರು, ಶಾಸಕರು, ಸಂಘ ಪರಿವಾರದ ನಾಯಕರನ್ನು ಶಿಕ್ಷೆಗೆ ಗುರಿಪಡಿಸಬೇಕು. ಜತೆಗೆ, ಬಿಜೆಪಿ ತನ್ನ ಸದಸ್ಯತ್ವದಿಂದ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಮನ್ಸೂರ್‌ ಆಲಿ, ಪ್ರಮುಖರಾದ ಲಿಯಕತ್‌ ಆಲಿ, ಅಬ್ದುಲ್‌ ಅಡ್ಕರ್‌, ಇಬ್ರಾಹಿಂ ಹಾಜರಿದ್ದರು.

*
ಸೂತಕದ ಮನೆಯಲ್ಲಿ ರಾಜಕೀಯ ಮಾಡುತ್ತಿರುವ ಮುಖಂಡರ ವಿರುದ್ಧ ಮೊದಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕರಾವಳಿ ಭಾಗದಲ್ಲಿ ಕೋಮುದ್ವೇಷ ಕೊನೆಗಾಣಿಸಲು ಸಾಧ್ಯವಿಲ್ಲ.
–ಹ್ಯಾರೀಸ್‌,
ಪ್ರಧಾನ ಕಾರ್ಯದರ್ಶಿ, ಪಿಎಫ್‌ಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT