ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆಗೆ ಆಗ್ರಹಿಸಿ ಖಾಲಿ ಕೊಡ ಪ್ರದರ್ಶನ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮೂರು ಪ್ರತ್ಯೇಕ ಪ್ರತಿಭಟನೆ, ಮನವಿ ಸಲ್ಲಿಕೆ
Last Updated 25 ಜುಲೈ 2017, 8:56 IST
ಅಕ್ಷರ ಗಾತ್ರ

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಅಲ್ಲಾಪಟ್ಣಣ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಖಾಲಿ ಕೊಡ ಪ್ರದರ್ಶಿಸಿ ಸೋಮವಾರ ಪ್ರತಿಭಟನೆ ಮಾಡಿದರು.

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮುಂಡಗದೊರೆ ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಇಲ್ಲ. ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ. ಕಳೆದ ಏಳು ತಿಂಗಳುಗಳಿಂದ ನೀರಿನ ಸಮಸ್ಯೆ ಎದುರಾಗಿದೆ. ಈ ಬಗ್ಗೆ ತಾಲ್ಲೂಕು ಪಂಚಾಯಿತಿಗೂ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಗ್ರಾಮದ ಜನರು ಎರಡು ಕಿ.ಮೀ. ದೂರದಿಂದ ನೀರನ್ನು ತರುತ್ತಿದ್ದಾರೆ. ಇದರಿಂದ ಮಹಿಳೆಯರಿಗೆ ತೀವ್ರ ತೊಂದರೆ ಆಗಿದ್ದು ಗ್ರಾಮಸ್ಥರು ಕಂಗಾಲಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜಿಲ್ಲಾಡಳಿತ ಮಧ್ಯ ಪ್ರವೇಶಿಸಬೇಕು. ತಕ್ಷಣ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಬೇಕು. ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಬೇಕು ಎಂದು ಒತ್ತಾಯಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಅವರಿಗೆ ಮನವಿ ನೀಡಿದರು.

ಗ್ರಾಮಸ್ಥರಾದ ಚಂದ್ರು, ಕೆಂಪೇಗೌಡ, ಎ.ಬಿ. ಗಂಗಾಧರ, ರವೀಂದ್ರ, ಜಯಂತಿ, ಮರಿದೇವಮ್ಮ, ಭಾರತಿ, ಪುಟ್ಟಮ್ಮ, ಚೆನ್ನಾಜಮ್ಮ, ರವಿಕುಮಾರ್‌, ಕೃಷ್ಣೇಗೌಡ, ಬೋರೇಗೌಡ, ರಾಮು  ಭಾಗವಹಿಸಿದ್ದರು.

ಮದ್ಯಮಾರಾಟ ನಿಲ್ಲಿಸಿ
ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಕೆಲ ಕಿರಾಣಿ ಅಂಗಡಿಗಳಲ್ಲಿ ಮದ್ಯಮಾರಾಟ ಎಗ್ಗಿಲ್ಲದೇ ನಡೆ ಯುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ಮಾಡಿದರು.

ಗ್ರಾಮದ ಯುವಕರು ಮದ್ಯಕ್ಕೆ ದಾಸರಾಗಿದ್ದಾರೆ. ಇದರಿಂದ ಕುಟುಂಬದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಪ್ರತಿದಿನ ಗ್ರಾಮದಲ್ಲಿ ಕುಡಿದು ಜಗಳವಾತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪಾನಮತ್ತರಾಗಿ ಗ್ರಾಮದಲ್ಲಿ ಗಲಾಟೆ ಮಾಡತ್ತಿರುವ ಕಾರಣ ಜನರು ನೆಮ್ಮದಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ ಎಂದು ದೂರಿದರು.

ಕೆಲವು ಕಿರಣಿ ಅಂಗಡಿ ಮಾಲೀಕರು ಮಂಡ್ಯ ನಗರದ ಬಾರ್‌ಗಳಲ್ಲಿ ಕೆಲಸ ಮಾಡುವ ಹುಡುಗರಿಂದ ನೇರವಾಗಿ ಮದ್ಯ ತರಿಸಿಕೊಳ್ಳುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಒತ್ತಾಯಿಸಿದರು.

ಕುಟುಂಬದ ಜವಾಬ್ದಾರಿ ಹೊತ್ತವರು ಕುಡಿತದ ಚಟಕ್ಕೆ ಬಲಿಯಾಗಿದ್ದಾರೆ. ಇನ್ನಾದರೂ ಪೊಲೀಸರು, ಅಬಕಾರಿ ಇಲಾಖೆ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾಮಸ್ಥರಾದ ಗವಿ, ನಿಂಗರಾಜು, ತಿಮ್ಮರಾಜು, ಕುಮಾರ್‌, ಶಿವಕುಮಾರ್‌, ಯೋಗೇಶ್‌, ಸಂತೋಷ್‌, ಶಶಿಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

ಜೆಸಿಬಿ ಬಾಡಿಕೆ ನೀಡಲು ಒತ್ತಾಯ
ಮಂಡ್ಯ:
ತಾಲ್ಲೂಕಿನ ಹಲ್ಲೇಗೆರೆ ಕೆರೆ ಅಭಿವೃದ್ಧಿ ಸಮಿತಿ ಗ್ರಾಮಸ್ಥರ ನೆರವಿನಿಂದ ಜೆ.ಸಿ.ಬಿ ಬಳಸಿ ಕೆರೆಯ ಹೂಳು ತೆಗೆಯಲಾಗಿದ್ದು ಈವರೆಗೂ ಸರ್ಕಾರ ಜೆ.ಸಿ.ಬಿ ಬಾಡಿಗೆ ನೀಡಿಲ್ಲ ಎಂದು ಆರೋಪಿಸಿ ಸಮಿತಿ ಸದಸ್ಯರು ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಸೋಮವಾರ ಪ್ರತಿಭಟನೆ ಮಾಡಿದರು.

ಗ್ರಾಮದಲ್ಲಿ ಕೆರೆ ಹೂಳು ತೆಗೆಯುವ ಕಾರ್ಯಕ್ಕೆ  ಏ.20 ರಿಂದ ಕೆಲಸ ಆರಂಭವಾಯಿತು. ಶಾಸಕ ಅಂಬರೀಷ್‌ ಅವರ ನೆರವನ್ನು ಗ್ರಾಮಸ್ಥರು ಕೇಳಿದ್ದರು. ಅದರಂತೆ ಸ್ಥಳ ಪರಿಶೀಲನೆ ನಡೆಸಿದ ಅಂಬರೀಷ್‌ ಮೂರು ಜೆ.ಸಿ.ಬಿ ಯಂತ್ರ ಬಳಸುವಂತೆ ಸೂಚಿಸಿದ್ದರು.  ಜೊತೆಗೆ ಸರ್ಕಾರದಿಂದ ₹ 2.11 ಕೋಟಿ ಅನುದಾನ ನೀಡಲು ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಆದರೂ ಅಧಿಕಾರಿಗಳು ಬಾಡಿಗೆ ಹಣ ನೀಡಿಲ್ಲ ಎಂದು ಆರೋಪಿಸಿದರು.

ಬಾಡಿಗೆ ನೀಡದ ಕಾರಣ ಕೇವಲ 20 ದಿನ 500 ಗಂಟೆ ಮಾತ್ರ ಕೆಲಸ ಮಾಡಿದ್ದಾರೆ. ಉಳಿದ ಕೆಲಸ ಮಾಡಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ಜೆಸಿಬಿ ಯಂತ್ರದ ಮಾಲೀಕರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಶಿವರಾಮು, ಎಚ್‌.ಪಿ. ಸರೀಶ್‌, ಮಹಾಲಿಂಗೇಗೌಡ, ಸಿದ್ದೇಗೌಡ, ಹಲ್ಲೇಗೆರೆ ಹರೀಶ್‌, ನಿಂಗೇಗೌಡ, ನವೀನ್‌, ಪಿ.ಕೆ. ನಾಗಣ್ಣ, ಕೀಲಾರ ಸೋಮಶೇಖರ್‌, ನಾಗರಾಜು ಹೊಳಲು, ನವೀನ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT