ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಾವಣ ಆರಂಭ: ಹೂವಿನ ಬೆಲೆ ಏರಿಕೆ!

₹ 80ರ ಗಡಿಯಲ್ಲೇ ಸ್ಥಿರವಾದ ಟೊಮೆಟೊ ಬೆಲೆ, ರಾಗಿ, ಹುರುಳಿ ದುಬಾರಿ
Last Updated 25 ಜುಲೈ 2017, 8:59 IST
ಅಕ್ಷರ ಗಾತ್ರ

ಮಂಡ್ಯ: ಆಷಾಡ ಮಾಸ ಕಳೆದು ಶ್ರಾವಣ ಆರಂಭವಾಗುತ್ತಿದ್ದಂತೆ ಮಹಿಳೆಯರಲ್ಲಿ ಭಕ್ತಿ ಭಾವ ಹೆಚ್ಚಾಗಿದೆ. ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಪೂಜೆ ಸಲ್ಲಿಸುವ ಮಹಿಳೆಯರು ದೇವರಿಗೆ ಹೂವು ಅರ್ಪಿಸಿ ಪ್ರಾರ್ಥಿಸುತ್ತಿದ್ದಾರೆ. ಹೀಗಾಗಿ ಹೂವಿನ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ.

ಶ್ರಾವಣ ಆರಂಭಕ್ಕೂ ಮುನ್ನಾ ದಿನವೇ ಭಾನುವಾರ ಭೀಮನ ಅಮಾವಾಸ್ಯೆಯಂದು ಹೂವಿನ ಬೆಲೆ ಏರಿಕೆಯ ಮುನ್ಸೂಚನೆ ಸಿಕ್ಕಿತ್ತು. ಸೋಮವಾರ ಶ್ರಾವಣ ಆರಂಭವಾಗಿದ್ದು ವಿವಿಧ ಹೂವುಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೆ.ಜಿ. ಬಿಡಿ ಮಲ್ಲಿಗೆ ಹೂವಿನ ಬೆಲೆ ₹ 180ಕ್ಕೆ ಏರಿದೆ. ಮೊದಲು ₹ 150ಕ್ಕೆ ಸಿಗುತ್ತಿತ್ತು. ಮಾರು ಮಲ್ಲಿಗೆ  ₹ 50ಕ್ಕೆ ಮಾರಾಟವಾಗುತ್ತಿದೆ.

ಕೆ.ಜಿ.ಕಾಕಡ ಕೂಡ ₹ 160ಕ್ಕೆ ಏರಿದೆ. ಮಾರು ₹ 40ಕ್ಕೆ ಸಿಗುತ್ತಿದೆ. ಸೇವಂತಿಗೆ ಹೂವಿನ ಕೊರತೆ ಉಂಟಾಗದ್ದು ಅಂಗಡಿಗಳಲ್ಲಿ ಹೆಚ್ಚಾಗಿ ಕಾಣುತ್ತಿಲ್ಲ. ಬೆಲೆಯೂ ಹೆಚ್ಚಾಗಿದ್ದು ಮಾರು ₹ 50ಕ್ಕೆ ಮಾರಾಟವಾಗುತ್ತಿದೆ. ಹಾರದ ಬೆಲೆಯಲ್ಲೂ ಕೊಂಚ ಹೆಚ್ಚಾಗಿದ್ದು ₹ 50ರಿಂದ 150ರವರೆಗೆ ಮಾರಾಟವಾಗುತ್ತಿದೆ.

‘ಶ್ರಾವಣ ಮಾಸದಲ್ಲಿ ಹೂವಿನ ಬೆಲೆ ಹೆಚ್ಚಳವಾಗುವುದು ಸಹಜ. ಶ್ರಾವಣದಲ್ಲಿ ಕೆಲವರು ಮದುವೆ ಮಾಡುವುದರಿಂದ ಹೂವಿನ ಬೆಲೆ ಇನ್ನೂ ಹೆಚ್ಚಾಗಲಿದೆ’ ಎಂದು ಹೂವಿನ ವ್ಯಾಪಾರಿ ಅಜಿತ್‌ ಹೇಳಿದರು.

ತರಕಾರಿ ಬೆಲೆ ಸ್ಥಿರ: ಟೊಮೆಟೊ ಹೊರತುಪಡಿಸಿ ತರಕಾರಿ ಬೆಲೆಯಲ್ಲಿ ಹೆಚ್ಚೇನೂ ವ್ಯತ್ಯಾಸ ಕಂಡುಬಂದಿಲ್ಲ. ಮೂಲಂಗಿ ಬೆಲೆಯಲ್ಲಿ ಕಳೆದ ವಾರಕ್ಕಿಂತ ಈ ಬಾರಿ ₹ 10 ಕಡಿಮೆಯಾಗಿದೆ. ಕಳೆದವಾರ ಕೆ.ಜಿ ಮೂಲಂಗಿ ₹ 30 ಇತ್ತು, ಈ ವಾರ ₹ 20ಕ್ಕೆ ಮಾರಾಟವಾಗುತ್ತಿದೆ.

ಕೆ.ಜಿ. ಕ್ಯಾರೆಟ್‌, ಬೀಟರೂಟ್‌ ₹ 40ಕ್ಕೆ ಸಿಗುತ್ತಿದೆ. ಬೀನ್ಸ್‌ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಕೆ.ಜಿ.ಬೀನ್ಸ್‌ ₹ 40ಕ್ಕೆ ಮಾರಾಟವಾಗುತ್ತಿದೆ. ಕೆ.ಜಿ. ದೊಣಮೆಣಸಿನಕಾಯಿ ₹ 40, ಈರೇಕಾರಿ ₹ 40, ಪಡುವಲಕಾಯಿ ₹ 20, ತೊಂಡೆಕಾಯಿ ₹ 20, ಬದನೆಕಾಯಿ ₹ 30ಕ್ಕೆ ಮಾರಾಟವಾಗುತ್ತಿವೆ.

ಪಾತಾಳಕ್ಕಿಳಿದ ಕೊತ್ತಂಬರಿ ಬೆಲೆ!
ರಮ್ಜಾನ್‌ ಮಾಸದಲ್ಲಿ ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ಬೆಲೆ ₹ 60ಕ್ಕೇರಿತ್ತು. ಆದರೆ ಈ ವಾರ ಸೊಪ್ಪಿನ ಬೆಲೆ ಪಾತಾಳಕ್ಕಿಳಿದಿದೆ. ₹ 2–3ಕ್ಕೆ ಒಂದು ಕಟ್ಟು ಕೊತ್ತಂಬರಿ ಸೊಪ್ಪು ಸಿಗುತ್ತಿದೆ.‘ಸಂಜೆಯ ವೇಳೆಯಲ್ಲಿ ತರಕಾರಿ ಮಾರುಕಟ್ಟೆಗೆ ಬಂದರೆ ರೂಪಾಯಿಗೊಂದು ಕಟ್ಟು ಕೊತ್ತಂಬರಿ ಮಾರುತ್ತಿದ್ದಾರೆ. ಸೊಪ್ಪು ತಿನ್ನುವವರಿಗೆ ಇದು ಸಕಾಲ’ ಎಂದು ಗ್ರಾಹಕರಾದ ತಿಮ್ಮೇಗೌಡ ಹೇಳಿದರು.

ಹುರಳಿ, ರಾಗಿ ದುಬಾರಿ: ಕಳೆದ ವಾರಕ್ಕಿಂತ ಹುರಳಿ ಹಾಗೂ ರಾಗಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಕಳೆದ ವಾರ ಕೆ.ಜಿ ಹುರಳಿ ₹ 60 ಇತ್ತು. ಈ ವಾರ ₹ 70ಕ್ಕೆ ಏರಿದೆ. ರಾಗಿ ಬೆಲೆಯಲ್ಲೂ ಹೆಚ್ಚಳ ಕಂಡುಬಂದ್ದು ಕೆ.ಜಿ.ರಾಗಿ ₹ 30ಕ್ಕೆ ಮಾರಾಟವಾಗುತ್ತಿದೆ.

‘ಜಿಲ್ಲೆಯಲ್ಲಿ ಮಳೆ ಕೊರತೆಯಾಗಿದ್ದು ಇನ್ನೂ ಸರಿಯಾಗಿ ಬಿತ್ತನೆ ಮಾಡಿಲ್ಲ. ಹೀಗಾಗಿ ರೈತರು ಮನೆಯಲ್ಲಿ ಬಿತ್ತನೆ ಬೀಜವಾಗಿ ರಾಗಿ ದಾಸ್ತಾನು ಇಟ್ಟು ಕೊಂಡಿರುವ ಕಾರಣ ಕೊರತೆಯುಂಟಾಗಿ ಬೆಲೆ ಕೊಂಚ ಏರಿದೆ’ ಎಂದು ಧಾನ್ಯ ವ್ಯಾಪಾರಿ ವಿನಯ್‌ ತಿಳಿಸಿದರು.

₹ 60ಕ್ಕಿಳಿದ ಟೊಮೆಟೊ!
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಟೊಮೆಟೊ ಬೆಲೆಯಲ್ಲಿ ₹ 20 ಇಳಿದಿದೆ. ₹ 80ಕ್ಕೆ ಮಾರಾಟವಾಗುತ್ತಿದ್ದ ಕೆ.ಜಿ.ಟೊಮೆಟೊ ಈ ವಾರ ₹ 60ಕ್ಕೆ ಬಂದು ನಿಂತಿದೆ.

‘ಮಂಡ್ಯ ಜಿಲ್ಲೆಯಲ್ಲಿ ವರ್ತಕರು ಟೊಮೆಟೊವನ್ನು ತಮಿಳುನಾಡಿಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ನಮ್ಮ ಸಣ್ಣ ವ್ಯಾಪಾರಿಗಳಿಗೆ ಟೊಮೆಟೊ ಸಿಗುತ್ತಿಲ್ಲ. ಒಂದು ಕ್ರೇಟ್‌ ಬೆಲೆ ₹ 1300ಕ್ಕಿಂತಲೂ ಹೆಚ್ಚಾಗಿದೆ’ ಎಂದು ಟೊಮೆಟೊ ವ್ಯಾಪಾರಿ ರಮೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT