ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವಪರೀಕ್ಷೆ ವಿಳಂಬ: ಬಂಧುಗಳ ಆಕ್ರೋಶ

Last Updated 25 ಜುಲೈ 2017, 9:20 IST
ಅಕ್ಷರ ಗಾತ್ರ

ಬೈಂದೂರು: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭಾನುವಾರ ರಾತ್ರಿ ತರಲಾಗಿದ್ದ ಶವದ ಪರೀಕ್ಷ ಸಕಾಲದಲ್ಲಿ ನಡೆಯಲಿಲ್ಲ ಎಂದು ಆರೋಪಿಸಿದ ಮೃತನ ಬಂಧುಗಳು ಸೋಮವಾರ ಕೇಂದ್ರದಲ್ಲಿ ಆಕ್ರೋಶದಿಂದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು.

ಕೇಂದ್ರದ ಅವ್ಯವಸ್ಥೆ, ವೈದ್ಯರ ಅನುಪಸ್ಥಿತಿ, ಸಿಬ್ಬಂದಿಗಳ ಅಸಹಕಾರ ವಿರುದ್ಧ ಹರಿಹಾಯ್ದರು. ಮೇಲಾಧಿಕಾರಿಗಳನ್ನು ಕರೆಸುವ ವರೆಗೆ ಶವಪರೀಕ್ಷೆ ನಡೆಸಬಾರದೆಂದು ಪಟ್ಟು ಹಿಡಿದರು. ಕೇಂದ್ರಕ್ಕೆ ಬಂಸಿದ ಜಿಲ್ಲಾ ಕೆಡಿಪಿ  ಸದಸ್ಯ ಎಸ್. ರಾಜು ಪೂಜಾರಿ ಮಧ್ಯೆಪ್ರವೇಶಿಸಿ ವೈದ್ಯರು ಮತ್ತು ಮೃತನ ಬಂಧುಗಳ ಜತೆ ಮಾತುಕತೆ ನಡೆಸಿ ಮನವೊಲಿಸಿದ ಬಳಿಕ ಶವಪರೀಕ್ಷೆ ನಡೆದು  ಶವವನ್ನು ಬಂಧುಗಳಿಗೆ ಹಸ್ತಾಂತರಿಸಲಾಯಿತು.

ಘಟನೆಯ ವಿವರ:  ಸಮೀಪದ ಹೊಸಾಡು ವಿದ್ಯಾನಗರ ನಿವಾಸಿ ಸಯ್ಯದ್ ಅಬ್ಬಾಸ್ (65) ತಮ್ಮ ಮನೆಯ ಸಮೀಪದ ಗೇರು ಹಾಡಿಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದರು. ಒಂದು ದಿನ ಹುಡುಕಾಡಿದ ಬಳಿಕ ಅವರ ಮೃತದೇಹ ಭಾನುವಾರ ಪತ್ತೆಯಾಗಿತ್ತು. ಸಮುದಾಯ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗೆ ಭಾನುವಾರ ರಾತ್ರಿ ಒಯ್ದಾಗ ಕರ್ತವ್ಯನಿರತ ಇಲ್ಲದೇ ಇದ್ದದ್ದರಿಂದ ಶೈತ್ಯಾಗಾರ ಘಟಕದಲ್ಲಿ ಶವವನ್ನಿರಿಸಲಾಗಿತ್ತು.

ಬೆಳಿಗ್ಗೆ ಸಂಬಂಧಿಕರು ನೋಡುವಾಗ ಶವದ ಮೇಲೆ ಹುಳಗಳು ಹರಿದಾಡುತ್ತಿದ್ದವು. ಸಿಟ್ಟಿಗೆದ್ದ ಅವರು ಇದಕ್ಕೆ ವೈದ್ಯರ ಗೈರುಹಾಜರಿ, ಸುಸ್ಥಿತಿಯಲ್ಲಿಲ್ಲದ ಶವಶೈತ್ಯಾಗಾರ ಮತ್ತು ಸಿಬ್ಬಂದಿ  ನಿರ್ಲಕ್ಷ್ಯ ಕಾರಣ ಎಂದು ಕೂಗಾಡಿದರು.

ಸಮಜಾಯಿಷಿ ನೀಡಿದ ವೈದ್ಯಾಧಿಕಾರಿ ಡಾ. ಪ್ರಶಾಂತ ಭಟ್ ವ್ಯಕ್ತಿ ಮೃತನಾದ ಒಂದು ದಿನದ ಬಳಿಕ  ತಂದುದರಿಂದ ಅದು  ಕೊಳೆಯಲು ಆರಂಭವಾಗಿತ್ತು. ಶವಾಗಾರದ ಹೊರಗೆ 28 ಡಿಗ್ರಿ ಉಷ್ಣಾಂಶ ಇದ್ದರೆ, ಶವಾಗಾರದೊಳಗೆ 8 ಇರಬೇಕಾಗಿದ್ದ ಉಷ್ಣಾಂಶ 18 ಇತ್ತು. ಶವ ಕೊಳೆತು ಹುಳಗಳಾಗಲು ಅದೇ ಕಾರಣವಲ್ಲ ಎಂದರು.

ಅಂತಿಮವಾಗಿ ತಾಲ್ಲೂಕು ವೈದ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಮರವಂತೆಯ ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ ಬಂದ ಬಳಿಕ ಪರಿಸ್ಥಿತಿ ತಿಳಿಯಾಗಿ ಶವಪರೀಕ್ಷೆ ನಡೆಯಿತು.

ಸಾರ್ವಜನಿಕರ ಆರೋಪ: ಸುದ್ದಿ ಕೇಳಿ ಆರೋಗ್ಯ ಕೇಂದ್ರಕ್ಕೆ ಬಂದ ಸಾರ್ವಜನಿಕರು ಇಲ್ಲಿನ ಸಿಬ್ಬಂದಿ ಕೊರತೆ, ರಾತ್ರಿ ಹೊತ್ತಿನಲ್ಲಿ ವೈದ್ಯರ ಗೈರುಹಾಜರಿ, ಸಿಬ್ಬಂದಿಗಳ ಕರ್ತವ್ಯ ಲೋಪ, ಕೆಲವು ತುರ್ತು ಚಿಕಿತ್ಸೆಗೆ ಅಗತ್ಯವಿರುವ ಔಷಧಿಯ ಕೊರತೆ ವಿರುದ್ಧ ಆಕ್ರೋಶ ವ್ಯಕ್ತಪಡಿ ಸುತ್ತಿರುವುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT