ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದಿಲ್ಲದೆ ನಡೆದ ಗೋರಕ್ಷಣೆಯ ಕಾಯಕ

ಮಹಾಂತಪ್ಪ ನೇತೃತ್ವದಲ್ಲಿ ಮನಮಾನಹಳ್ಳಿಯ ಶ್ರೀ ಶಿವಕುಮಾರಸ್ವಾಮಿ ಗೋಶಾಲಾ ಸಂಘದ ಪ್ರಯತ್ನ
Last Updated 25 ಜುಲೈ 2017, 9:54 IST
ಅಕ್ಷರ ಗಾತ್ರ

ಕಸಬಾ (ರಾಮನಗರ): ಗೋ ಹತ್ಯೆ ಬಗ್ಗೆ ದೇಶದಲ್ಲಿ ಚರ್ಚೆಗಳು ನಡೆಯುತ್ತಿದೆ. ಆದರೆ ಇಲ್ಲಿನ ಮನಮಾನಹಳ್ಳಿಯಲ್ಲಿ ಸಂಘಟನೆಯೊಂದು ಸದ್ದಿಲ್ಲದೆ ಗೋ ರಕ್ಷಣೆಯ ಕಾಯಕದಲ್ಲಿ ತೊಡಗಿದೆ.

ಶ್ರೀ ಶಿವಕುಮಾರಸ್ವಾಮಿ ಗೋಶಾಲಾ ಸಂಘ ಗೋ ರಕ್ಷಣೆಯ ಕಾಯಕದಲ್ಲಿ ತೊಡಗಿಸಿಕೊಂಡಿರುವ ಸಂಘಟನೆ. ಮಹಾಂತಪ್ಪ ಅವರ ನೇತೃತ್ವದಲ್ಲಿ 10 ಮಂದಿ ಒಗ್ಗೂಡಿ ಈ ಸಂಘಟನೆಯನ್ನು ಹುಟ್ಟು ಹಾಕಿದ್ದಾರೆ. ಸದ್ಯ ಕರುಗಳು ಸೇರಿದಂತೆ 40 ಜಾನುವಾರನ್ನು ಸಾಕಲಾಗುತ್ತಿದೆ.

ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಮಹಾಂತಪ್ಪ ಅವರಿಗೆ ಸಿದ್ದಗಂಗಾ ಮಠದ ಶಿವಕುಮಾರಸ್ವಾಮೀಜಿ ಆಶೀರ್ವಾದ ಮಾಡಿ ‘ಗೋ ಸಂರಕ್ಷಣೆಯಲ್ಲಿ ತೊಡಗಿಸಿಕೊ’ ಎಂದು ಸೂಚಿಸಿದರಂತೆ. ಗುರುಗಳ ಸಲಹೆಯಂತೆ ಮಹಾಂತಪ್ಪ ಅವರು ಹುಟ್ಟೂರು ಮನಮಾನಹಳ್ಳಿಯ ಸ್ವಂತ ಜಮೀನಿನಲ್ಲಿ ಸುಮಾರು ₹15 ಲಕ್ಷ ವೆಚ್ಚದಲ್ಲಿ ಗೋಶಾಲೆ ನಿರ್ಮಿಸಿದ್ದಾರೆ.

ಪರಿಚಯಸ್ಥರು ಹಾಗೂ ಸ್ನೇಹಿತರಾದ ಜೋಗಯ್ಯ, ಕೆ.ರವೀಂದ್ರ ನಾಥ್, ಕೆಂಪಯ್ಯ, ಎಚ್.ಕೆ.ಉಮೇಶ್, ಚಂದ್ರಶೇಖರ್, ಪುಟ್ಟಮಾರಯ್ಯ, ಕೆ.ಶಿವರುದ್ರಪ್ಪ, ಶಿವಯ್ಯ, ಶಿವಲಿಂಗ ಪ್ರಸಾದ್, ವಿಶ್ವನಾಥ್ ಮತ್ತು ರುದ್ರಸ್ವಾಮಿ ಒಗ್ಗೂಡಿ ಶ್ರೀ ಶಿವಕುಮಾರಸ್ವಾಮಿ ಗೋಶಾಲಾ ಸಂಘವನ್ನು ಸ್ಥಾಪಿಸಿದ್ದಾರೆ.

ಉದ್ದೇಶ: ಜರ್ಸಿ ತಳಿಯ ಹಸುಗಳಲ್ಲಿ ಕೇವಲ ಹೆಣ್ಣು ಕರು ಜನಿಸುವಂತಹ ಸಂತಾನ ವೀರ್ಯವನ್ನು ಸಂಘದ ವತಿಯಿಂದ ವಿತರಿಸುವುದು ಪ್ರಮುಖ ಉದ್ದೇಶ. ಗೋವುಗಳನ್ನು ಸಂರಕ್ಷಿಸು ವುದು, ವಿವಿಧ ತಳಿಗಳನ್ನು ಅಭಿವೃದ್ದಿ ಪಡಿಸುವುದು, ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಯು ಗೋ ಆಧಾರಿತ ವಾಗುವಂತೆ ಮಾಡುವುದು, ಜತೆಗೆ ಗೋ ಉತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆ ಕಲ್ಪಿಸುವುದು ಸಂಘದ ಉದ್ದೇಶವಾಗಿದೆ.

‘ಪಶುಸಂಗೋಪನೆ ಪ್ರಸ್ತುತ ರೈತರ ಆರ್ಥಿಕ ಹಾಗೂ ರಾಜ್ಯದ ಮಾನವ ಸಂಪನ್ಮೂಲ ಅಭಿವೃದ್ದಿಗೆ ಪೂರಕವಾಗಿ ನಿಂತಿರುವ ಕಸುಬಾಗಿದೆ. ಭಾರತದಲ್ಲಿ ಕೃಷಿ ಮತ್ತು ಪಶುಸಂಗೋಪನೆ ಎರಡೂ ರೈತರ ಜೀವನಾಧಾರಗಳಾಗಿವೆ. ಆದರೆ ಹೈನುಗಾರಿಕೆಗೆ ಉತ್ತಮ ತಳಿಗಳ ಆಯ್ಕೆಯ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ನಮ್ಮ ಸಂಘದಲ್ಲಿ ಉತ್ತಮ ತಳಿಗಳ ರಾಸುಗಳನ್ನು ಸಾಕುವುದು, ಈ ತಳಿಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ವಿಶೇಷವಾಗಿ ಕೇವಲ ಹೆಣ್ಣು ಕರುಗಳನ್ನು ಜನಿಸುವ ವೀರ್ಯವನ್ನು ಸಂಶೋಧಿಸುವುದು ಸಂಘದ ಮೂಲ ಉದ್ದೇಶ’ ಎನ್ನುತ್ತಾರೆ ಸಂಘದ ಅಧ್ಯಕ್ಷ ಮಹಾಂತಪ್ಪ.

‘ಕರು ದಾನ ಮಾಡುವವರು ಸಂಘದ ಸದಸ್ಯರಾಗಬಹುದು. ಬರದಿಂದ ಮೇವಿಗೆ ಸಂಕಷ್ಟ ಎದುರಾ ದಾಗ ರೈತರು ತಮ್ಮ ಗೋವುಗಳನ್ನು ಇಲ್ಲಿನ ಗೋಶಾಲೆಯಲ್ಲಿ ಬಿಡಬಹುದು. ಗೋಶಾಲೆಯಲ್ಲಿರುವ ಗೋವುಗಳ ಗಂಜಲ ಮತ್ತು ಸಗಣಿಯನ್ನು ಗೋಶಾಲೆಗೆ ಹೊಂದಿಕೊಂಡಂತೆ ಇರುವ ಜಮೀನಿಗೆ ಹರಿಸಿ ಅಲ್ಲಿ ಮೇವು ಬೆಳೆಯಲು ಬಳಸಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು. 

ಪಶುಪಾಲನೆ ತರಬೇತಿ: ಗ್ರಾಮೀಣ ಭಾಗದ ಯುವ ಸಮುದಾಯಕ್ಕೆ ಹೈನೋದ್ಯಮದ ಮೂಲಕ ಬದುಕು ಕಟ್ಟಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿವಳಿಕೆ ಮೂಡಿಸುವ ಉದ್ದೇಶವೂ ಸಂಘಕ್ಕಿದೆ. ಪಶು ತಜ್ಞರಿಂದ ತರಬೇತಿ ನೀಡಿ ಆಸಕ್ತ ಯುವಕ, ಯುವತಿಯರು ಪಶು ಸಂಗೋಪನೆಯಲ್ಲಿ ತೊಡಗಿಸಿ ಕೊಳ್ಳುವಂತೆ ಸಂಘ ಪ್ರೇರಣೆ ನೀಡಲಿದೆ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT