ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಪ್ಪರಕಲ್ಲು ಗೋಕಾಡು ಕಬಳಿಸಲು ಹುನ್ನಾರ?

29.25 ಎಕರೆ ವಿಸ್ತೀರ್ಣದ ಖರಾಬು ಭೂಮಿ * ಸರ್ಕಾರಿ ಉದ್ಯಾನವನ ನಿರ್ಮಾಣಕ್ಕೆ ಸಾರ್ವಜನಿಕರ ಒತ್ತಾಯ
Last Updated 25 ಜುಲೈ 2017, 10:10 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನ ಬೀರಸಂದ್ರ ಗ್ರಾಮ ವ್ಯಾಪ್ತಿಯ ಚಪ್ಪರದ ಕಲ್ಲು ಗೋಕಾಡು ಕಬಳಿಸಲು ಭೂ ಮಾಫಿಯಾ ಹುನ್ನಾರ ನಡೆಯುತ್ತಿರುವ ದೂರು ಸ್ಥಳೀಯರದು.

ಪ್ರಸ್ತುತ ಜಿಲ್ಲಾಧಿಕಾರಿ ಕೇಂದ್ರ ಕಚೇರಿ ಸಂಕೀರ್ಣ ಕಟ್ಟಡ ನಿರ್ಮಾಣವಾಗುತ್ತಿರುವ ಎದುರಿನ ಬೀರಸಂದ್ರ ಗ್ರಾಮದ ಸರ್ವೆ ನಂ.15ರಲ್ಲಿ ಸರ್ಕಾರಿ ಗೋಕಾಡು 29.25 ಎಕರೆ ವಿಸ್ತೀರ್ಣದ ಖರಾಬು ಭೂಮಿ ಇದೆ. ಇದನ್ನು ಗ್ರಾಮದ ಗೋವುಗಳಿಗೆ ಕಾಯ್ದಿರಿಸಿರುವುದು ಪಹಣಿ ದಾಖಲೆಯಲ್ಲಿದೆ.

ಈ ಜಮೀನಿನಲ್ಲಿ ಏಳೆಂಟು ರೈತರು ನಮೂನೆ 53ರ ಅಡಿಯಲ್ಲಿ ಸಾಗುವಳಿ ಹಕ್ಕು ಪತ್ರ ನೀಡುವಂತೆ ಭೂ ಸಕ್ರಮೀಕರಣ ಸಮಿತಿಗೂ ಅರ್ಜಿ ಸಲ್ಲಿಸಿ ಸಾಗುವಳಿ ಪತ್ರವನ್ನು ಪಡೆದಿದ್ದರು. ಅದನ್ನು ಉಪವಿಭಾಗಾಧಿಕಾರಿ ತಿರಸ್ಕರಿಸಿದ್ದರು.

ತಾಲ್ಲೂಕು ಭೂ ಸಕ್ರಮ ಸಮಿತಿ ಶಿಫಾರಸಿನಂತೆ ಅರ್ಜಿ ಸಲ್ಲಿಸಿದ್ದ ಏಳೆಂಟು ರೈತರ ಪೈಕಿ ಮೂವರಿಗೆ ಸಾಗುವಳಿ ಹಕ್ಕುಪತ್ರ ನೀಡಿದಾಗ ಸ್ಥಳೀಯ ಮುಖಂಡ ಆರ್.ಎನ್.ಕೃಷ್ಣಮೂರ್ತಿ ಹಾಗೂ ಗ್ರಾಮಸ್ಥರು 2004 ಫೆ. 16ರಂದು ಉಪವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು.

ಈ ಸರ್ವೆ ನಂಬರ್‌ನಲ್ಲಿ ಪುರಾತನ ಕಾಲದ ಒಂದು ದೊಡ್ಡ ಬೃಹತ್ ಬಂಡೆಯ ಮೇಲೆ ಕಲ್ಲಿನ ಚಪ್ಪರವಿದೆ. ಇದಕ್ಕೆ ಸಂಬಂಧಿಸಿದ ಇತಿಹಾಸವಿದೆ. ಈ ಸ್ಥಳದಿಂದಲೇ ಚಪ್ಪರದ ಕಲ್ಲು ಎಂದು ಹೆಸರು ಬಂದಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ಉಳಿಸಿಕೊಳ್ಳಬೇಕು ಎಂದು ಕೋರಿದ್ದರು.

ಯಾವುದೇ ಕಾರಣಕ್ಕೂ ಇಲ್ಲಿ  ಯಾರಿಗೂ ಸಾಗುವಳಿ ಚೀಟಿ ನೀಡಬಾರದು. ಸಾಗುವಳಿ ಮಾಡುತ್ತಿರುವುದು ಅನಧಿಕೃತವಾಗಿದೆ ಎಂದು ಪ್ರಸ್ತಾಪಿಸಿದ್ದರು.

ಈ ಸರ್ವೆ ನಂಬರ್‌ನ ಜಮೀನು ಸಾರ್ವಜನಿಕರ ದೃಷ್ಟಿಕೋನದಿಂದ ಐತಿಹಾಸಿಕ ಸ್ಮಾರಕಕ್ಕಾಗಿ ಪರಿಶೀಲಿಸುವ ಅವಶ್ಯಕತೆ ಇದೆ. ಆದ್ದರಿಂದ ಭೂ ಸಕ್ರಮೀಕರಣ ಸಮಿತಿ ಸಭಾ ನಡಾವಳಿ ಸಕ್ರಮಿಸಿರುವುದನ್ನು 2005 ಸೆಪ್ಟೆಂಬರ್‌ 30ರಂದು ವಜಾ ಮಾಡಿದೆ ಎಂದು ಉಪವಿಭಾಗಾಧಿಕಾರಿ ತಿಳಿಸಿದ್ದರು.

ಇಷ್ಟಾದರೂ ನಮೂನೆ 53ರ ಅಡಿ ಅರ್ಜಿ ಹಾಕಿದ ರೈತರು ಜಾಗದ ಸ್ವಾಧೀನ ಹೊಂದಿದ್ದರು. ವಿಶ್ವನಾಥಪುರ ಗ್ರಾಮದಲ್ಲಿ ಬಾಡಿಗೆ ಕಟ್ಟಡದಲ್ಲಿ ಪೊಲೀಸ್ ಠಾಣೆಗೆ ನೂತನ ನಿವೇಶನ ಕೋರಿ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 2008 ಆಗಸ್ಟ್‌ 8ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ನಂತರ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ ಇದೇ ಸರ್ವೆ ನಂಬರ್‌ ಜಮೀನು ಮೂಲಕ ಸರ್ಕಾರಿ ಗೋಮಾಳ (ಗೋಕಾಡು) ಇದ್ದು ಪೊಲೀಸ್‌ ಠಾಣೆಗೆ ಮಂಜೂರು ಮಾಡಬೇಕಾದ ಜಮೀನಿನಲ್ಲಿ ಮರ, ಮಾಲ್ಕಿ ಕಟ್ಟಡಗಳು ಇರುವುದಿಲ್ಲ ಎಂದು ತಿಳಿಸಿದ್ದರು.

ಸದರಿ ಜಮೀನಿಗೆ ಯಾರು ನಮೂನೆ 50 ಮತ್ತು 53ರ ಅಡಿಯಲ್ಲಿ ಅರ್ಜಿ  ಸಲ್ಲಿಸಿಲ್ಲ. ಪೊಲೀಸ್ ಠಾಣೆ ಕಟ್ಟಡ ಕಟ್ಟುವ ಉದ್ದೇಶಕ್ಕೆ ಒಂದು ಎಕರೆ ಮಂಜೂರು ಮಾಡಿ ಗೋಮಾಳ ಶೀರ್ಷಿಕೆ ತಗ್ಗಿಸಬಹುದು. ಕಟ್ಟಡಕ್ಕೆ ಕಾಯ್ದಿರಿಸುವಂತೆ ಜಮೀನಿನ ಚಕ್ಕುಬಂದಿ ನೀಡಿ ಹಸ್ತಾಂತರಿಸಿದ್ದರು.

ಸರ್ಕಾರ ಠಾಣೆಗೆ ನೀಡಿದ ನಿವೇಶನದ ಜಾಗದಲ್ಲೇ ಗುಂಡ್ಲು ಮುನಿಯಪ್ಪ ನಮೂನೆ 53ರಡಿಯಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಚೀಟಿ ಪಡೆದಿದ್ದರು. ಅದು  ರದ್ದುಗೊಂಡ ನಂತರವೂ ಸರ್ಕಾರದ ಕಂದಾಯ ಅಧಿಕಾರಿಗಳು ಐತಿಹಾಸಿಕ ಸ್ಥಳವನ್ನು ಕಾಯ್ದುಕೊಂಡಿಲ್ಲ ಎಂಬ ಆರೋಪ ಕೇಳಿಸಿದೆ.

ಬಳಿಕ 2012ರಲ್ಲಿ ಮೈಲಾರಪ್ಪ ಎಂಬುವರಿಗೆ ಠಾಣೆ ಪಕ್ಕದಲ್ಲಿ 1.20 ಎಕರೆಗೆ ಸಾಗುವಳಿ ಚೀಟಿ ನೀಡಿದೆ. ಒಂದು ಬಾರಿ ಸಾರ್ವಜನಿಕರ ಉದ್ದೇಶಕ್ಕೆ ಎಂದು ಹೇಳುವ ಸರ್ಕಾರ ಮತ್ತೆ ಸಾಗುವಳಿ ಚೀಟಿ ನೀಡಲು ಮುಂದಾಗಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಸಾಗುವಳಿ ನೀಡಿದ ತಕ್ಷಣ ಎಚ್ಚೆತ್ತುಕೊಂಡ ಭೂಮಾಫಿಯಾ 53ರಡಿಯಲ್ಲಿ ಅರ್ಜಿ ಸಲ್ಲಿಸಿದ ಕೆಲವರನ್ನು ಒತ್ತಾಯ ಪೂರ್ವಕವಾಗಿ ಹೊರ ಹಾಕಿದ್ದಾರೆ. ಈ ಪೈಕಿ ಬಿ.ಬಿ.ಅನಂತಮೂರ್ತಿ ಮತ್ತು ಮುನಿಯಮ್ಮ ಸೇರಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಕೆಲ ಭೂಮಾಫಿಯ ನಕಲು ದಾಖಲೆ ಸೃಷ್ಟಿಸಿ ಕಚೇರಿಗೆ ಕಡತ ತಲುಪಿಸಿದ್ದಾರೆ. ಸಾಗುವಳಿ ಮೂಲ ಅನುಭವದಲ್ಲಿರುವವರಿಗೆ ನೀಡಲಿ ಇಲ್ಲದಿದ್ದರೆ ನೂತನ ಜಿಲ್ಲಾ ಕೇಂದ್ರ ಕಚೇರಿ ನಿರ್ಮಾಣವಾಗುತ್ತಿದ್ದು ಸಾರ್ವಜನಿಕರಿಗೆ ಸರ್ಕಾರ ಉದ್ಯಾನವನಕ್ಕಾಗಿ ಕಾಯ್ದಿರಿಸಲಿ ಎಂದು ಜಮೀನು ಅನುಭವದಲ್ಲಿರುವ ಹಸಿರು ಸೇನೆ ಮತ್ತು ರೈತ ಸಂಘ ಮುಖಂಡರಾದ ರವಿ ಮತ್ತು ಮೋಹನ್ ಹೇಳಿದ್ದಾರೆ.

ಐತಿಹಾಸಿಕ ಚಪ್ಪರದ ಕಲ್ಲು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಅಂದಿನ ಅಧಿಕಾರಿಗಳು ಸಾರ್ವಜನಿಕರ ಮನವಿಗೆ ಮನ್ನಣೆ ನೀಡಿದ್ದರು. ಹಣದ ದುರಾಸೆಗೆ ಐತಿಹಾಸಿಕ ಜಾಗವನ್ನು ಕಬಳಿಸಲು ನಕಲಿ ದಾಖಲೆ ಸೃಷ್ಟಿ ಮಾಡಿ ಕಂದಾಯ ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಬೇಸರ ಮೂಡಿಸಿದೆ ಎನ್ನುತ್ತಾರೆ ಸ್ಥಳೀಯ ಆರ್.ಎನ್. ಕೃಷ್ಣಮೂರ್ತಿ.

‘2012ರಲ್ಲಿ ಇಲ್ಲಿ 1.20 ಎಕರೆ ಮಂಜೂರು ಆಗಿರುವ ಬಗ್ಗೆ ಮಾಹಿತಿ ಇದೆ. ಇತ್ತೀಚೆಗೆ ಆಗಿಲ್ಲ. ನಮಗೂ ನೀಡಿ ಎಂದು ಕೆಲ ರೈತರು ಅರ್ಜಿ ಸಲ್ಲಿಸಿದ್ದಾರೆ, ಕೆಲವರು ಅವರ ವಿರುದ್ಧ ಅರ್ಜಿ ನೀಡಿದ್ದಾರೆ. ಯಾವುದೇ ಕ್ರಮಕ್ಕೂ  ಮುಂದಾಗಿಲ್ಲ ಎನ್ನುತ್ತಾರೆ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ.

ಒಂದು ಗುಂಟೆಗೆ 15 ಲಕ್ಷ
ಈ ಜಾಗದ ಒಂದು ಗುಂಟೆ ಮೌಲ್ಯ 15ರಿಂದ 20 ಲಕ್ಷಕ್ಕೆ ಏರಿದೆ. 1998ರಲ್ಲಿ ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದೇವೆ. 30 ವರ್ಷದಿಂದ ಜಾಗ ಅನುಭವದಲ್ಲಿದೆ.  ಇದರ ನಕಲಿ ದಾಖಲೆ ಸೃಷ್ಟಿಸುವ ಸಾಧ್ಯತೆ ಇದೆ’ ಎಂದು ರೈತ ಬಿ.ವಿ.ಅನಂತಮೂರ್ತಿ ತಿಳಿಸಿದರು.

‘ನಮಗೂ ಸಾಗುವಳಿ ಚೀಟಿ ನೀಡಿ ಎಂದು 2017 ಜುಲೈ 20ರಂದು ಅರ್ಜಿ ಸಲ್ಲಿಸಿದ್ದೆ. ನೀಡಿದರೆ ಎಲ್ಲರಿಗೂ ನೀಡಲಿ ಇಲ್ಲವೆಂದರೆ ಯಾರಿಗೂ ಬೇಡ’ ಎಂದರು.

*
ಕೋಟ್ಯಂತರ ಮೌಲ್ಯದ ಸರ್ಕಾರದ ಆಸ್ತಿ ಇದು. ಯಾವುದೇ ಒತ್ತಡ ಬಂದರೂ ಕಾನೂನಿಗೆ ವಿರುದ್ಧವಾಗಿ ಸಾಗುವಳಿಗೆ ಅವಕಾಶವಿಲ್ಲ
–ಬಾಲಕೃಷ್ಣ,  ಕುಂದಾಣ ಉಪ ತಹಸೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT