ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಸ್ಥಿರ ಅಭಿವೃದ್ಧಿಗೆ ಪಂಚ ಯೋಜನೆ’

ಕೃಷಿ ಶಿಕ್ಷಣ ವಿಸ್ತರಣಾ ಕೇಂದ್ರದಲ್ಲಿ ‘ಸಾಮರ್ಥ್ಯ ಸಂವರ್ಧನಾ’ ಕಾರ್ಯಾಗಾರ
Last Updated 25 ಜುಲೈ 2017, 10:42 IST
ಅಕ್ಷರ ಗಾತ್ರ

ಕೊಪ್ಪಳ: ‘ಸುಸ್ಥಿರ ಅಭಿವೃದ್ಧಿಗಾಗಿ ಜನ, ಭೂಮಿ, ಸಮೃದ್ಧಿ, ಶಾಂತಿ ಹಾಗೂ ಸಹಯೋಗ ಎಂಬ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ’ ಎಂದು ಬೆಂಗಳೂರಿನ ಮಕ್ಕಳ ಹಕ್ಕುಗಳ ಟ್ರಸ್ಟ್ ನಿರ್ದೇಶಕ ವಾಸುದೇವ ಶರ್ಮಾ ಹೇಳಿದರು.

ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಸೋಮವಾರ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಯುನಿಸೆಫ್, ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಕಲಬುರ್ಗಿ ವಿಭಾಗಮಟ್ಟದ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತ ಸಾಮರ್ಥ್ಯ ಸಂವರ್ಧನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ನಮ್ಮ ಸುತ್ತಮುತ್ತಲಿನ ಸ್ಥಳೀಯ ಸರ್ಕಾರಗಳು, ಆಡಳಿತ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿವಿಧ ಸೇವಾವಲಯಗಳನ್ನು ಮಕ್ಕಳ ಹಕ್ಕುಗಳ ದೃಷ್ಟಿಕೋನದಲ್ಲಿ ಗಮನಿಸುವ ಅವಶ್ಯಕತೆ ಇದೆ. ಮುಂದಿನ 15 ವರ್ಷಗಳಲ್ಲಿ ಜಗತ್ತಿನ ಒಳಿತಿಗೆ ಉತ್ತಮ ವಿಶ್ವ ರೂಪಿಸಲು ವಿಶ್ವ ಸಂಸ್ಥೆ ಕೆಲವು ಗುರಿಗಳನ್ನು ರೂಪಿಸಿ ಅವುಗಳನ್ನು ‘ಸುಸ್ಥಿರ ಅಭಿವೃದ್ಧಿ ಗುರಿಗಳು’ ಎಂದು ಹೆಸರಿಸಿದೆ.

ಮಕ್ಕಳು ಮತ್ತು ಯುವಜನರೂ ಸೇರಿದಂತೆ ಕೋಟ್ಯಂತರ ಜನರ ಮತ್ತು ಸಂಸ್ಥೆಗಳ ಭಾಗವಹಿಸುವಿಕೆ ಸಹಿತ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳ ಪ್ರತಿನಿಧಿಗಳು ಸೇರಿ ತೀರ್ಮಾನಿಸಲಾದ ಗುರಿಗಳನ್ನು ವಿಶ್ವದ ಎಲ್ಲ ದೇಶಗಳು ಒಪ್ಪಿಕೊಂಡಿವೆ. ಈ ಗುರಿಗಳು ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತವೆ’ ಎಂದರು.

‘ದೇಶದಲ್ಲಿ ಒಟ್ಟು ಜನಸಂಖ್ಯೆಯಲ್ಲಿ (2011 ಜನಗಣತಿ) ಶೇ 40ರಷ್ಟು ಜನ 18 ವರ್ಷದ ಒಳಗಿನವರಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಅಭಿವೃದ್ಧಿ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ, ಮರಣ ಪ್ರಮಾಣ, ರಕ್ಷಣೆ, ಶಿಕ್ಷಣ, ಶೋಷಣೆ, ಭಾಗವಹಿಸುವಿಕೆ ಮೊದಲಾದ ವಿಚಾರಗಳಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಹೋಲಿಸಿದಾಗ ಭಾರತ ಮತ್ತು ಕರ್ನಾಟಕದ ಮಕ್ಕಳ ಪರಿಸ್ಥಿತಿಯನ್ನು ತಿಳಿಯಬಹುದು’ ಎಂದರು.

ಬಳ್ಳಾರಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಘವೇಂದ್ರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶೇಖರಗೌಡ ರಾಮತ್ನಾಳ, ಮಕ್ಕಳ ರಕ್ಷಣಾ ಘಟಕದ ಪ್ರಾದೇಶಿಕ ಸಂಯೋಜಕ ರಾಘವೇಂದ್ರ ಭಟ್, ಯುನೆಸೆಫ್ ಸಂಯೋಜಕ ಹರೀಶ ಜೋಗಿ ಇದ್ದರು.

*
ಜಗತ್ತಿನ ಒಳಿತಿಗೆ ಉತ್ತಮ ವಿಶ್ವ ರೂಪಿಸಲು ವಿಶ್ವ ಸಂಸ್ಥೆ ಕೆಲವು ಗುರಿಗಳನ್ನು ರೂಪಿಸಿ ಅವುಗಳನ್ನು ‘ಸುಸ್ಥಿರ ಅಭಿವೃದ್ಧಿ ಗುರಿಗಳು’ ಎಂದು ಹೆಸರಿಸಿದೆ.
–ವಾಸುದೇವ ಶರ್ಮಾ, ನಿರ್ದೇಶಕ, ಮಕ್ಕಳ ಹಕ್ಕುಗಳ ಟ್ರಸ್ಟ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT