ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವಿಗಳಿಗಿರಲಿ ಫಿಲ್ಟರ್‌!

Last Updated 25 ಜುಲೈ 2017, 19:30 IST
ಅಕ್ಷರ ಗಾತ್ರ

ಸುಭಾಷಿತಸುಧಾನಿಧಿಯ ಪದ್ಯವೊಂದು ಹೀಗಿದೆ

ಪ್ರಾಜ್ಞೋsಪಿ ಜಲ್ಪತಾಂ ಪುಂಸಾಂ ಶ್ರುತ್ವಾ ವಾಚಃ ಶುಭಾಶುಭಾಃ |

ಗುಣವದ್ವಾಕ್ಯಮಾದತ್ತೇ ಹಂಸಃ ಕ್ಷೀರವಿವಾಂಭಸಃ ||

ಇದರ ತಾತ್ಪರ್ಯ: ‘ವಾಚಾಳಿಗಳಿಂದ ಹೊರಬರುವ ಒಳ್ಳೆಯ ಮತ್ತು ಕೆಟ್ಟ ಮಾತುಗಳನ್ನು ಕೇಳುವ ವಿವೇಕಿ, ಅವುಗಳಲ್ಲಿ ಗುಣಗಳಿರುವಂಥವನ್ನಷ್ಟೇ ಆರಿಸಿಕೊಳ್ಳಬೇಕು; ಇದು ಹೇಗೆಂದರೆ, ಹಾಲಿನಿಂದ ನೀರನ್ನು ಹಂಸಪಕ್ಷಿಯು ಬೇರ್ಪಡಿಸುವಂತೆ.’

ನಮ್ಮ ಕಾಲಕ್ಕೆ ತುಂಬ ಅನಿವಾರ್ಯವಾಗಿರುವ ತಿಳಿವಳಿಕೆಯ ಬಗ್ಗೆ ಈ ಶ್ಲೋಕ ಗಮನವನ್ನು ಸೆಳೆಯುತ್ತಿದೆ. ಇಂದು ನಮ್ಮ ಪರಿಸರವೆಲ್ಲವೂ ಮಲಿನಗೊಂಡಿದೆ. ಅದೂ ಹಲವು ರೀತಿಯ ಮಲಿನಗಳು. ಅವುಗಳಲ್ಲಿ ಪ್ರಧಾನವಾದುದು ಶಬ್ದಮಾಲಿನ್ಯ. ಸಾಮಾನ್ಯವಾಗಿ ‘ಶಬ್ದಮಾಲಿನ್ಯ’ ಎಂದಕೂಡಲೇ ನಾವು ನಗರಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸದ್ದು ಎಂದೇ ತಿಳಿದುಕೊಳ್ಳುತ್ತೇವೆ. ಹೌದು; ಅದೂ ಮಾಲಿನ್ಯವೇ. ಆದರೆ ಅದಕ್ಕಿಂತಲೂ ಇನ್ನೂ ಅಪಾಯಕಾರಿಯಾದ ಮಾಲಿನ್ಯದ ಬಗ್ಗೆ ಇಲ್ಲಿ ಹೇಳುತ್ತಿರುವುದು. ಅದೇ ‘ಮಾತಿನ ಹಾವಳಿ’. ಅದನ್ನು ಬೇಕಾದರೆ ‘ಪದಮಾಲಿನ್ಯ’ ಎಂದು ಕೂಡ ಕರೆಯಬಹುದೆನಿಸುತ್ತದೆ. ಎಂದರೆ ಎಲ್ಲೆಲ್ಲೂ ಮಾತು ಮಾತು ಮಾತು. ಆಧುನಿಕ ಜಗತ್ತಿನಲ್ಲಿ ಮೌನಕ್ಕೆ ನೆಲೆಯೇ ಇಲ್ಲವಾಗುತ್ತಿದೆ. ಜೋರಾಗಿ ಮಾತನಾಡಿಯೇ ನಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಬೇಕೆಂಬ ಅನಿವಾರ್ಯತೆಗೆ ನಾವಿಂದು ಮುಟ್ಟಿದ್ದೇವೆ. ಮನೆಯಲ್ಲಿ ಮನುಷ್ಯರು ಮಾತನಾಡದಿದ್ದರೂ ಟೀವಿಗಳು ಮಾತನಾಡುತ್ತಲೇ ಇರುತ್ತವೆ; ಫೋನ್‌ಗಳು ಕೂಗುತ್ತಲೇ ಇರುತ್ತವೆ. ರಸ್ತೆ–ಕಚೇರಿಯಲ್ಲೂ ಸದ್ದಿನದ್ದೇ ಆರ್ಭಟಗಳು. ಈ ಪದಮಾಲಿನ್ಯವು ನಮಗೆ ಬೇಡವಾಗಿದ್ದರೂ ಅದರಿಂದ ನಮಗೆ ಬಿಡುಗಡೆ ಇಲ್ಲ; ಕೇಳಲೇ ಬೇಕಿದೆ.

ಹೀಗಿದ್ದರೂ ನಾವು ಜಾಣ್ಮೆಯಿಂದ ಈ ಸದ್ದಿನ ಯುದ್ಧವನ್ನು ಎದುರಿಸಬಹುದು. ಕಿವಿಯ ಮೇಲೆ ಬಿದ್ದ ಎಲ್ಲ ಶಬ್ದಗಳನ್ನೂ ನಾವು ಒಳಗೆ ಬಿಟ್ಟುಕೊಳ್ಳಬೇಕಿಲ್ಲ. ನಾವು ಜಗತ್ತಿನ ಸದ್ದನ್ನು ಅಡಗಿಸಲು ಸಾಧ್ಯವಿಲ್ಲ; ಆದರೆ ನಮ್ಮ ಕಿವಿಗೆ ‘ಫಿಲ್ಟರ್‌’ಅನ್ನು ಅಳವಡಿಸಿ ಕೊಳ್ಳಬಹುದು. ನಮಗೆ ನೇರವಾಗಿ ಸಂಬಂಧಿಸದ ಶಬ್ದಪ್ರಪಂಚದಿಂದ ನಾವು ದೂರ ಉಳಿಯಬಹುದಾಗಿದೆ. ಅದಕ್ಕೆ ಬೇಕಾಗಿರುವುದು ನಮ್ಮ ಅಂತರಂಗದ ಮೌನ. ಸಹಜವಾಗಿಯೇ ನಮ್ಮೊಳಗೆ ಮೌನವು ನೆಲೆಯನ್ನು ಕಂಡುಕೊಂಡಿದ್ದರೆ ಆಗ ಹೊರಗಿನ ಕೂಗಾಟಗಳು ನಮ್ಮನ್ನು ದಿಕ್ಕು ತಪ್ಪಿಸಲು ಸಾಧ್ಯವಾಗದು. ಈ ಪದಮಾಲಿನ್ಯವು ನಮ್ಮ ವ್ಯಕ್ತಿತ್ವದ ಮೇಲೂ ದಾಳಿ ಮಾಡಬಹುದು. ನಾವು ಆಗ ಮತ್ತಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಹಂಸಪಕ್ಷಿಗೆ ವಿಶೇಷ ಶಕ್ತಿಯೊಂದು ಇದೆ; ಅದು ಹಾಲನ್ನೂ ನೀರನ್ನೂ ಬೇರ್ಪಡಿಸುತ್ತದೆ – ಎನ್ನುವುದು ಕವಿಸಮಯ. ನಾವೂ ಆ ಪಕ್ಷಿಯ ಆದರ್ಶದಲ್ಲಿ ನಮ್ಮ ಕಿವಿಗಳನ್ನು ಸಿದ್ಧಗೊಳಿಸಿ ಕೊಳ್ಳಬೇಕಿದೆ. ಒಳಿತನ್ನಷ್ಟೆ ಸ್ವೀಕರಿಸಿ, ಕೇಡಾದುದನ್ನು ತ್ಯಜಿಸಬೇಕಿದೆ.

-ಹರಿತಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT