ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಉದ್ಯಮಿಗಳಿಗೆ ‘ಇವಿಭಾ’

Last Updated 25 ಜುಲೈ 2017, 19:30 IST
ಅಕ್ಷರ ಗಾತ್ರ

ಉದ್ಯಮಕ್ಕೆ ಕಾಲಿಡುವುದು ಸುಲಭ. ಆದರೆ, ತಮ್ಮ ಸೇವೆ ಹಾಗೂ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿಕೊಳ್ಳುವುದು ಮಹಿಳಾ ಉದ್ಯಮಿಗಳ ಮುಂದಿರುವ ಬಹು ದೊಡ್ಡ ಸವಾಲಾಗಿದೆ. ಅಂಗಡಿ ಮುಂಗಟ್ಟು, ಮಾಲ್, ಮಳಿಗೆಗಳಿಗೆ ಎಡತಾಕದೇ ಕುಳಿತಲ್ಲಿಯೇ ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಿಕೊಡಲು ಮುಂದಾಗಿದೆ ಇವಿಭಾಡಾಟ್‌ಕಾಮ್‌ (evibha.com).

ಹೌದು, ಮಹಿಳಾ ಉದ್ಯಮಶೀಲತಾ ಚಟುವಟಿಕೆಗಳಲ್ಲಿ ನಮ್ಮ ರಾಜ್ಯ 3ನೇ ಸ್ಥಾನದಲ್ಲಿದೆ. ಸುಮಾರು 1.5 ಲಕ್ಷಕ್ಕಿಂತ ಹೆಚ್ಚು ಮಹಿಳೆಯರು ಉದ್ಯಮದಲ್ಲಿ ನೆಲೆ ಕಂಡುಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಮಹಿಳಾ ಉದ್ಯಮ ಕ್ಷೇತ್ರ ಹಿಗ್ಗುತ್ತಿದೆ. ಆದರೆ, ಬಹುತೇಕ ಮಹಿಳೆಯರಿಗೆ ಮಾರುಕಟ್ಟೆ ಕಂಡುಕೊಳ್ಳುವುದೇ ದೊಡ್ಡ ಸವಾಲು. ಈ ಸವಾಲನ್ನು ಮೆಟ್ಟಿ ನಿಲ್ಲಲು ಮಹಿಳೆಯರ ಪರವಾಗಿ ಕೆಲಸ ಮಾಡಲು ಕಣ್ಣುಬಿಟ್ಟಿರುವ ಸಂಸ್ಥೆಯಿದು.

ಮಹಿಳಾ ಉದ್ಯಮಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಆನ್‌ಲೈನ್‌ ಮಾರುಕಟ್ಟೆ ಒದಗಿಸುವ ಗುರಿಯೊಂದಿಗೆ ಸಜ್ಜಾಗಿದೆ ಇವಿಭಾಡಾಟ್‌ಕಾಮ್‌. ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತಿ, ಮಾರ್ಗದರ್ಶನ ನೀಡುವುದು, ಪರಸ್ಪರರ ನಡುವೆ ಚರ್ಚೆ –ಸಂವಾದಗಳಿಗೆ ವೇದಿಕೆ ಕಲ್ಪಿಸುವುದು ಹಾಗೂ ಉದ್ಯಮದ ಸರ್ವಾಂಗೀಣ ಅಭಿವೃದ್ಧಿಗೆ ಅವಕಾಶ ಕಲ್ಪಿಸುವುದು ‘ಇವಿಭಾ’ದ ಕನಸಾಗಿದೆ.ಈ ವೇದಿಕೆಯ ಮೂಲಕ ಯಾವುದೇ ಭೌಗೋಳಿಕ ಮಿತಿಗಳಿಲ್ಲದೆ ಮಹಿಳೆಯರು ತಮ್ಮ ಎಲ್ಲಾ ಶ್ರೇಣಿಯ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಮಾರಾಟ ಮಾಡಬಹುದು.

ಉದ್ಯಮ, ವ್ಯವಹಾರ ಹಾಗೂ ಇ–ವಾಣಿಜ್ಯ ಕ್ಷೇತ್ರಗಳಲ್ಲಿ ದಶಕಗಳ ಕಾಲ ಅನುಭವ ಪಡೆದಿರುವ ಜಯಂತಿ ಕೆ. ರಾವ್  ‘ಇವಿಭಾ’ ಸ್ಥಾಪಿಸಿದರು. ನಂತರ ಆರತಿ ಶೆಣೈ ಇವರೊಂದಿಗೆ ಕೈಜೋಡಿಸಿದರು.

(ಸಾಂಪ್ರದಾಯಿಕ ಲಂಬಾಣಿ ಕುಸರಿ ಕಲೆಯ ಉತ್ಪನ್ನಗಳ ಪ್ರದರ್ಶನದಲ್ಲಿ ಜಯಂತಿ ರಾವ್)

‘ಆರಂಭದಲ್ಲಿ ವ್ಯಾಪಾರಿಗಳನ್ನು ಕಂಗೆಡಿಸುವ ಸಂಗತಿ ಎಂದರೆ ಮಾರುಕಟ್ಟೆ. ಅದರಲ್ಲೂ ಮನೆಯಲ್ಲಿ ಸಣ್ಣ–ಪುಟ್ಟ ವಸ್ತುಗಳನ್ನು ತಯಾರಿಸುವ ಮಹಿಳೆಯರಿಗೆ ತಮ್ಮ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದು ಕಷ್ಟ. ಮನೆಯಲ್ಲಿ ಕುಳಿತು ಮಾಡುವ ಅವರ ಕೆಲಸಕ್ಕೆ, ಶ್ರಮಕ್ಕೆ ಜಾಗತಿಕ ಮಾರುಕಟ್ಟೆಯನ್ನು ಒದಗಿಸುವುದು ನಮ್ಮ ಉದ್ದೇಶ’ ಎನ್ನುತ್ತಾರೆ ಜಯಂತಿ ಕೆ. ರಾವ್.

‘ಯಾವುದೇ ಮಧ್ಯವರ್ತಿಗಳಿಲ್ಲದೆ ಮಹಿಳೆಯರ ಉತ್ಪನ್ನಗಳು ನೇರವಾಗಿ ಗ್ರಾಹಕರಿಗೆ ತಲುಪುತ್ತವೆ. ಅವರ ಲಾಭ ಅವರಿಗೇ ಸಿಗುತ್ತದೆ. ಅದರಲ್ಲಿ ನಮ್ಮ ಸೇವಾ ಶುಲ್ಕವನ್ನು ಮಾತ್ರ ನಾವು ಕಡಿದುಕೊಳ್ಳುತ್ತೇವೆ. ಅವರ ಲಾಭದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಅವರು ಹೇಳುತ್ತಾರೆ.

ಯಾವುದಾದರೂ ಒಂದು ವ್ಯಾಪಾರದಲ್ಲಿ ತೊಡಗಬೇಕು ಎಂದು ಆಲೋಚನೆ ಇರುವ ಮಹಿಳೆಯರೂ ಇಲ್ಲಿ ಸದಸ್ಯತ್ವ ಪಡೆಯಬಹುದು. ಅಂತಹವರಿಗೆ ಅವರ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ತಿಳಿಸಿಕೊಡುವುದು, ತರಬೇತಿ ನೀಡುವುದು, ಹೊಸ ವ್ಯಾಪಾರ ವಿಧಾನದ ಬಗ್ಗೆ ಸಕಾಲಿಕ ಮಾಹಿತಿ ಒದಗಿಸುವುದು ‘ಇವಿಭಾ’ ವ್ಯಾಪ್ತಿಗೆ ಬರುತ್ತದೆ. ಹಾಗೆಯೇ ಈಗಾಗಲೇ ವ್ಯಾಪಾರದಲ್ಲಿ ತೊಡಗಿರುವ ಮಹಿಳೆಯರೂ ಇಲ್ಲಿ ನೂತನ ಮಾರುಕಟ್ಟೆಯ ಲಾಭ ಪಡೆಯಬಹುದು. ಅಷ್ಟೇ ಅಲ್ಲ, ಸೇವಾ ವಲಯದವರಿಗೂ ಇಲ್ಲಿ ಅವಕಾಶವಿದೆ. ಆನ್‌ಲೈನ್ ಮೂಲಕ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವ ಜೊತೆಗೆ ವಸ್ತು ಪ್ರದರ್ಶನಗಳನ್ನು ಏರ್ಪಡಿಸಲಾಗುವುದು.

‘ಮಾರಾಟಗಾರರು ತಮ್ಮ ಉತ್ಪನ್ನಗಳ ವಿವರ ಮತ್ತು ಬೆಲೆಗಳ ಮಾಹಿತಿಯೊಂದಿಗೆ ನಮ್ಮ ಅಂತರ್ಜಾಲ ತಾಣದಲ್ಲಿ ಅಪ್‌ಲೋಡ್‌ ಮಾಡುತ್ತಾರೆ. ಆ ಉತ್ಪನ್ನ ಮಾರಾಟವಾಗಿ ಹಣ ಸಂದಾಯವಾದ ಬಳಿಕ ನಾವು ನಮ್ಮ ಅಲ್ಪ ಪ್ರಮಾಣದ ಶುಲ್ಕವನ್ನು ಮುರಿದುಕೊಂಡು ಉಳಿದ ಹಣವನ್ನು ಎರಡು ವಾರದೊಳಗೆ ಅವರ ಸೆಲ್ಲರ್ ಖಾತೆಗೆ ಸಂದಾಯ ಮಾಡುತ್ತೇವೆ. ಸೇವಾ ತೆರಿಗೆ ಹಾಗೂ ಕೊರಿಯರ್ ಖರ್ಚನ್ನೂ ಇದರಲ್ಲಿ ಸೇರಿಸಲಾಗುತ್ತದೆ’ ಎನ್ನುತ್ತಾರೆ ಆರತಿ ಶಣೈ.

‘ಒಂದು ಉತ್ಪನ್ನಕ್ಕೆ ಗ್ರಾಹಕರಿಂದ ಆರ್ಡರ್‌ ಬಂದ ಕೂಡಲೇ ಅದರ ಪ್ರತಿಯೊಂದನ್ನು ಮೊದಲು ಮಾರಾಟಗಾರರಿಗೆ, ಬಳಿಕ ಸಂಚಾಲಕರಿಗೆ ಮತ್ತು ಪಾಲುದಾರರಿಗೆ ತಲುಪಿಸಲಾಗುತ್ತದೆ. ಖರೀದಿದಾರರಿಗೆ ಎಸ್ಎಂಎಸ್ ಅಥವಾ ಇ-ಮೇಲ್ ಮೂಲಕ ಪಾವತಿ ಖಾತರಿ ಸಂದೇಶವನ್ನು ರವಾನಿಸಲಾಗುತ್ತದೆ. ಎಲ್ಲಾ ಹಂತದಲ್ಲಿಯೂ ಪಾರದರ್ಶಕತೆ ಕಾಯ್ದುಕೊಳ್ಳಲು ಈ ಕ್ರಮ ಅನುಸರಿಸಲಾಗುತ್ತದೆ’ ಎನ್ನುತ್ತಾರೆ ಅವರು.

**

ಪ್ರಾರಂಭಿಕ ಹಂತದ ಮಹಿಳಾ ಉದ್ಯಮಿಗಳಿಗೆ ಸೂಕ್ತ ಶಿಕ್ಷಣ-ತರಬೇತಿ ಹಾಗೂ ವ್ಯಾಪಾರ ಮಾರ್ಗದರ್ಶನವನ್ನು ನೀಡುವುದು ನಮ್ಮ ಉದ್ದೇಶ.
-ಆರತಿ ಶೆಣೈ
‘ಇವಿಭಾ’ದ ಸಹ ಸಂಸ್ಥಾಪಕರು

**

ಗ್ರಾಮೀಣ ಪ್ರದೇಶಗಳ ಮಹಿಳಾ ಉದ್ಯಮಿಗಳನ್ನು ತಲುಪುವ ಪ್ರಯತ್ನವೂ ನಡೆದೇ ಇದೆ. ಏಕೆಂದರೆ ಇತ್ತೀಚೆಗೆ ಗ್ರಾಮೀಣ ಭಾಗಗಳಿಂದಲೂ ಸಾಕಷ್ಟು ಜನ ಉದ್ಯಮ ಕ್ಷೇತ್ರಕ್ಕೆ ಬರಲು ಇಚ್ಚಿಸುತ್ತಿದ್ದಾರೆ. ಅಂಥವರಿಗೆ ಆನ್‌ಲೈನ್‌ ವ್ಯವಹಾರದ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ. ಅವರನ್ನು ತಲುಪಲು ನಮ್ಮಲ್ಲಿ ವಿಶೇಷ ತಂಡವಿದೆ. ಈ ತಂಡ ಆಯಾ ಪ್ರದೇಶಗಳಿಗೇ ತೆರಳಿ ಅವರ ಪರಿಚಯ, ಉತ್ಪನ್ನಗಳ ಬಗ್ಗೆ ಮಾಹಿತಿ ಹಾಗೂ ಚಿತ್ರಗಳನ್ನು ಪಡೆದು ಅದನ್ನು ನಮ್ಮ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುತ್ತಾರೆ. ಉಚಿತವಾಗಿ ನೋಂದಾಯಿಸಿಕೊಳ್ಳಲು ಲಾಗಿನ್‌ ಆಗಿ: http://www.evibha.com

–ಜಯಂತಿ ಕೆ. ರಾವ್, ‘ಇವಿಭಾ’ದ ಸಂಸ್ಥಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT