ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ಸಣ್ಣ ವರ್ತಕರಿಗೆ ಸಂಜೀವಿನಿ– ರಾಜಿ ತೆರಿಗೆ ಪದ್ಧತಿ

ಅಕ್ಷರ ಗಾತ್ರ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ದೇಶದಾದ್ಯಂತ ಜಾರಿಗೆ ಬಂದ ನಂತರ ಕಂಪ್ಯೂಟರ್‌ ಬಳಕೆ ಮತ್ತು ಅದರ ಉಪಯೋಗದ ಬಗ್ಗೆ ಕಡಿಮೆ ತಿಳಿವಳಿಕೆ ಹೊಂದಿದ ಮತ್ತು  ದುಡಿಮೆಗೆ ಸಿಬ್ಬಂದಿ ನೇಮಿಸಿಕೊಳ್ಳದ ಸಣ್ಣ ವರ್ತಕರಲ್ಲಿ ಜಿಎಸಟಿ ಕುರಿತು ಒಂದು ಬಗೆಯ ಅವ್ಯಕ್ತ ಭಯ ಕಂಡು ಬರುತ್ತಿದೆ. ರಸೀದಿ ನೀಡುವಿಕೆ, ವಿವರಪಟ್ಟಿ ಸಲ್ಲಿಕೆ, ತೆರಿಗೆ ಪಾವತಿ-ಇತ್ಯಾದಿ ಕೆಲಸಗಳ ನಿಯಮಿತ ನಿರ್ವಹಣೆಯ ಸಂಬಂಧ ಅವರಲ್ಲಿ ಹಲವಾರು ಆತಂಕಗಳು ಮನೆ ಮಾಡಿವೆ.

ಮುಖ್ಯವಾಗಿ ಸಣ್ಣ ವ್ಯಾಪಾರ-ವಹಿವಾಟಿನ ವರ್ತಕರು ಗಾಬರಿಗೆ ಒಳಗಾಗಿದ್ದಾರೆ. ಇವರ ಈ ಆತಂಕ ಮತ್ತು ಭಯಗಳನ್ನು ಹೋಗಲಾಡಿಸಲು ಮತ್ತು ವ್ಯಾಪಾರ - ವಹಿವಾಟಿನಲ್ಲಿನ ಖರ್ಚು ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ ಸಣ್ಣ ವರ್ತಕರ ಹಿತಸಾಧನೆಗಾಗಿ ಜಿಎಸ್‌ಟಿಯಲ್ಲಿ ‘ರಾಜಿ ತೆರಿಗೆ ಪದ್ಧತಿ’ ಪರಿಚಯಿಸಲಾಗಿದೆ.

ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ,2017 ರ ಕಲಂ 10 ಮತ್ತು ನಿಯಮ 3 ರಲ್ಲಿ ಈ ರಾಜಿ ತೆರಿಗೆ ಪದ್ಧತಿಯನ್ನು ಯಾರು ಆಯ್ದುಕೊಳ್ಳಬಹುದು, ಆಯ್ದುಕೊಳ್ಳಲು ಯಾವ ಕ್ರಮ ಅನುಸರಿಸಬೇಕು, ರಾಜಿಪದ್ಧತಿಯ ತೆರಿಗೆ ದರಗಳೇನು, ಇವುಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಕಂಪೋಸಿಷನ್‌ ಸ್ಕೀಮ್‌  (composition scheme)  ಎನ್ನಲಾಗುವ ಈ ಪರಿಕಲ್ಪನೆಗೆ ಕನ್ನಡದಲ್ಲಿ ‘ರಾಜಿ ತೆರಿಗೆ ಪದ್ಧತಿ’ ಎನ್ನುತ್ತಾರೆ.

ಅಂದರೆ, ಸಾಮಾನ್ಯ ವರ್ತಕರಿಗಿಂತ ಬೇರೆಯಾದ ಒಂದು ರಾಜಿ ಕ್ರಮದ ದರದಲ್ಲಿ ತೆರಿಗೆ ಪಾವತಿಸುವ ಪದ್ಧತಿ ಇದಾಗಿದೆ. ತೆರಿಗೆ ಕಾಯ್ದೆಯ ಎಲ್ಲ ಷರತ್ತುಗಳನ್ನು ಪಾಲಿಸಲಾಗದ ಅಥವಾ ಹಾಗೆ  ಪಾಲಿಸಿದರೆ ಅವರ ವ್ಯಾಪಾರ-ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಾದ ಸಣ್ಣ ವರ್ತಕರನ್ನು ಗಮನದಲ್ಲಿ ಇರಿಸಿಕೊಂಡು ಈ ತೆರಿಗೆ ಪದ್ಧತಿ ರೂಪಿಸಲಾಗಿದೆ. ಒಂದು ಆರ್ಥಿಕ ವರ್ಷದಲ್ಲಿಯ ಒಟ್ಟು ವಹಿವಾಟು 75 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರುವ ಯಾವುದೇ ವರ್ತಕರು ಈ ಪದ್ಧತಿಯನ್ನು ಸ್ವ-ಇಚ್ಛೆಯಿಂದ ಆಯ್ದುಕೊಳ್ಳಬಹುದು. ಆದರೆ, ಇದಕ್ಕೆ ಕೆಲವು ಷರತ್ತುಗಳಿವೆ.

ಈ ಕೆಳಗಿನ ವರ್ತಕರು ಈ ಪದ್ಧತಿಯನ್ನು ಆಯ್ಕೆ ಮಾಡಿ ಕೊಳ್ಳುವಂತಿಲ್ಲ.

* ಅಂತರರಾಜ್ಯ ಪೂರೈಕೆ (ಮಾರಾಟ) ಮಾಡುವವರು ಈ ಕಾಯ್ದೆಯಡಿಯಲ್ಲಿ ತೆರಿಗೆ ವಿಧಿಸಲಾಗದ ಸರಕುಗಳ (ಉದಾಹರಣೆಗೆ– ಮದ್ಯ,ಪೆಟ್ರೋಲಿಯಂ ಉತ್ಪನ್ನಗಳು) ಪೂರೈಕೆಯಲ್ಲಿ(ಖರೀದಿ- ಮಾರಾಟ) ತೊಡಗಿದವರು

* ಆಹಾರ ಮತ್ತು ಮದ್ಯ ಹೊರತುಪಡಿಸಿ ಇತರ ಸೇವೆಗಳ ಪೂರೈಕೆಯಲ್ಲಿ ತೊಡಗಿದವರು

* ಸಾಂದರ್ಭಿಕ ಮತ್ತು ಅನಿವಾಸಿ ವರ್ತಕರು ಗೊತ್ತುಪಡಿಸಿದ ದಿನ (ಜುಲೈ 1,2017) ಅಂತರರಾಜ್ಯ ಕ್ರಮದಲ್ಲಿ ಖರೀದಿಸಿದ ಅಥವಾ ದಾಸ್ತಾನು ವರ್ಗಾವಣೆ ಮಾಡಿಕೊಂಡ ಸರಕುಗಳ ದಾಸ್ತಾನು ಹೊಂದಿದವರು

* ಇ-ಕಾಮರ್ಸ ಆಪರೇಟರಗಳ ಮೂಲಕ ತಮ್ಮ ಸರಕುಗಳನ್ನು ಪೂರೈಕೆ ಮಾಡುವ ವರ್ತಕರು ಜಿಎಸ್‌ಟಿ ಮಂಡಳಿಯ ಶಿಫಾರಸಿನಂತೆ ಅಧಿಸೂಚಿಸುವ ಸರಕುಗಳ ತಯಾರಿಕೆಯಲ್ಲಿ ತೊಡಗಿದವರು ಈ ರಾಜಿಪದ್ಧತಿಯನ್ನು ಆಯ್ದುಕೊಳ್ಳಲು ಬರುವುದಿಲ್ಲ.

ಒಂದೊಮ್ಮೆ ರಾಜಿ ತೆರಿಗೆ ಪದ್ಧತಿಯನ್ನು ಆಯ್ದುಕೊಂಡ ಈ ವರ್ತಕರಿಗೆ ಜಿಎಸ್‌ಟಿಯಲ್ಲಿ ಸಾಮಾನ್ಯವಾದ ತೆರಿಗೆ ದರಗಳ (ಶೇ.0,5,12,18,28) ಬದಲಾಗಿ ಪ್ರತ್ಯೇಕವಾಗಿ 3 ಬಗೆಯ ತೆರಿಗೆ ದರಗಳನ್ನು ನಿಗದಿಪಡಿಸಲಾಗಿದೆ.

* ಸರಕುಗಳ ತಯಾರಿಕೆಯಲ್ಲಿ ತೊಡಗಿರುವವರಿಗೆ ಶೇ 2

* ಆಹಾರ ಮತ್ತು ಪಾನೀಯ ಸೇವಾಪೂರೈಕೆಯಲ್ಲಿ (ಹೋಟೆಲ್‌-ರೆಸ್ಟೊರಂಟ್ಸ್‌) ತೊಡಗಿರುವವರಿಗೆ ಶೇ 5

* ಇತರ ಎಲ್ಲ ವ್ಯಾಪಾರಿಗಳಿಗೆ ಶೇ 1 ರಷ್ಟು ರಾಜಿ ತೆರಿಗೆ ನಿಗದಿಪಡಿಸಲಾಗಿದೆ

ಈ ಪದ್ಧತಿಯನ್ನು ಆಯ್ದುಕೊಂಡ ವರ್ತಕರು ಮಾರಾಟ ವಹಿವಾಟಿನ (ಬಾಹ್ಯ ಪೂರೈಕೆ) ಒಟ್ಟು ಮೊತ್ತದ ಮೇಲೆ ಅನ್ವಯಿಸುವ  ಈ ಮೂರು ದರಗಳ ಪೈಕಿ ಒಂದು ದರದಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ.

ರಾಜಿ ಪದ್ಧತಿ ಆಯ್ದುಕೊಂಡ ವರ್ತಕರು ತೆರಿಗೆ ಬೆಲೆಪಟ್ಟಿ (invoice) ನೀಡುವಂತಿಲ್ಲ. ಅಂದರೆ ತಮ್ಮ ಸರಕುಗಳ ಮಾರಾಟ ರಸೀದಿಗಳಲ್ಲಿ ತೆರಿಗೆ ಸಂಗ್ರಹಿಸುವಂತಿಲ್ಲ. ಸರಕುಗಳ ಬಾಹ್ಯ ಪೂರೈಕೆ (ಮಾರಾಟ) ಮಾಡಿದ ಕುರಿತು ಒಂದು ಪೂರೈಕೆ ಬಿಲ್ಲು(bill of supply) ನೀಡಿದರೆ ಸಾಕು. ಇದು ರಾಜಿ ತೆರಿಗೆ ಪದ್ಧತಿಯ ಒಂದು ಮುಖ್ಯ ಪ್ರಯೋಜನವಾಗಿದ್ದು,ಬೇರೆ ಬೇರೆ ಹಲವು ದರಗಳ ಸರಕುಗಳ ವಹಿವಾಟು ನಡೆಸುವ ಕಿರಾಣಿ ವರ್ತಕರಿಗೆ ಮಾರಾಟ ರಸೀದಿ ಹರಿಯುವ ಪ್ರಕ್ರಿಯೆ ಬಹಳ ಸುಲಭವಾಗುತ್ತದೆ.

ಆದರೆ, ಗ್ರಾಹಕರು ಇವರಿಂದ ಮಾರಾಟ ಬಿಲ್‌  ಕೇಳಬಹುದಾದರೂ ಪ್ರತ್ಯೇಕವಾಗಿ ತೆರಿಗೆ ನಮೂದಿಸಿದ ತೆರಿಗೆ ಬೆಲೆಪಟ್ಟಿ ಕೇಳುವಂತಿಲ್ಲ. ಏಕೆಂದರೆ ಇವರು ಕಂಪೋಜಿಷನ ಸ್ಕೀಮ್‌ನಲ್ಲಿ ಬರುವ ವರ್ತಕರಾಗಿರುವುದರಿಂದ ಇವರು ತೆರಿಗೆ ಬೆಲೆಪಟ್ಟಿ  ನೀಡಲಾರರು. ಆದರೆ, ವರ್ತಕರು ಗ್ರಾಹಕರಿಗೆ ಕಾಣುವಂತೆ ನಾಮಫಲಕದಲ್ಲಿ ತಾನು ರಾಜಿ ತೆರಿಗೆ ಪದ್ಧತಿ ವರ್ತಕನೆಂದು ಸ್ಪಷ್ಟವಾಗಿ ಕಾಣುವಂತೆ ಬರೆಯಬೇಕು. ಪೂರೈಕೆ ಬಿಲ್‌ ಮೇಲೆಯೂ ಕಡ್ಡಾಯವಾಗಿ ನಮೂದಿಸಿರಬೇಕು.

ಈ ಪದ್ಧತಿಯಡಿ ವಿವರಪಟ್ಟಿ (ರಿಟರ್ನ್ಸ) ಸಲ್ಲಿಕೆಯನ್ನೂ ಬಹಳ ಸರಳಗೊಳಿಸಲಾಗಿದೆ. ಸಾಮಾನ್ಯ ವರ್ತಕರು ಪ್ರತಿ ತಿಂಗಳೂ ಜಿಎಸಟಿಆರ್-01, ಜಿಎಸಟಿಆರ್-2, ಜಿಎಸಟಿಆರ್-3 ಹೀಗೆ 3 ವಿವರಪಟ್ಟಿಗಳನ್ನು ಸಲ್ಲಿಸಬೇಕು. ಆದರೆ ಈ ರಾಜಿ ತೆರಿಗೆ ಪದ್ಧತಿಯಡಿಯ ವರ್ತಕರು ಮೂರು ತಿಂಗಳಿಗೊಮ್ಮೆ (ತ್ರೈಮಾಸಿಕ) ಜಿಎಸ್‌ಟಿಆರ್‌–4 ಎಂಬ ಒಂದು ವಿವರಪಟ್ಟಿ ಸಲ್ಲಿಸಿದರೆ ಸಾಕು. ಇದು ಕೂಡ ಜಿಎಸ್‌ಟಿಯ ಒಂದು ಮುಖ್ಯ ಪ್ರಯೋಜನವಾಗಿದೆ. ಲೆಕ್ಕಪತ್ರ ನಿರ್ವಹಣೆ, ವಿವರಪಟ್ಟಿ ಸಲ್ಲಿಕೆ ಇತ್ಯಾದಿ ಕಾರ್ಯಗಳಿಗಾಗಿ ವರ್ತಕರು ಮಾಡಬೇಕಾದ ಖರ್ಚು ಗಣನೀಯವಾಗಿ ಕಡಿಮೆಯಾಗುತ್ತದೆ. ಶ್ರಮವೂ ಉಳಿಯುತ್ತದೆ.

ವ್ಯಾಟ್‌ ತೆರಿಗೆ ಪದ್ಧತಿಯಲ್ಲಿ ರಾಜಿ ತೆರಿಗೆ ವರ್ತಕರಿಗೆ (ಕಾಮಗಾರಿ ಗುತ್ತಿಗೆದಾರರನ್ನು ಹೊರತುಪಡಿಸಿ) ಅಂತರರಾಜ್ಯ ವಹಿವಾಟು ನಡೆಸುವ ಅವಕಾಶ

ನೀಡಿರಲಿಲ್ಲ. ಆದರೆ, ಹೊಸ ತೆರಿಗೆ ವ್ಯವಸ್ಥೆಯಡಿ ರಾಜಿ ತೆರಿಗೆ ಪದ್ಧತಿ ವರ್ತಕರು ಹೊರರಾಜ್ಯಗಳಿಂದ ಸರಕುಗಳನ್ನು ಖರೀದಿಸಬಹುದು (ಒಳಪೂರೈಕೆ ಮಾಡಿಕೊಳ್ಳಬಹುದು). ಹಾಗೇಯೇ ಹೊರದೇಶಗಳಿಂದಲೂ ಸರಕುಗಳನ್ನು ಆಮದು

ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಏಕೆಂದರೆ ಆಮದುಗಳನ್ನು ಜಿಎಸ್‌ಟಿಯಲ್ಲಿ ಅಂತರರಾಜ್ಯ ಪೂರೈಕೆ ಎಂದು ಪರಿಗಣಿಸಲಾಗಿದೆ. ಈ ಅವಕಾಶದಿಂದಾಗಿ ನಿಪ್ಪಾಣಿಯಂತಹ ರಾಜ್ಯದ ಎಲ್ಲ ಗಡಿಭಾಗದ ವರ್ತಕರಿಗೆ ನಿಶ್ಚಿಂತೆಯಿಂದ ರಾಜಿ ತೆರಿಗೆ ಪದ್ಧತಿ ಆಯ್ದುಕೊಂಡು ವ್ಯಾಪಾರ ನಡೆಸಲು ಬಹಳ ಅನುಕೂಲವಾಗುತ್ತದೆ.

ಆದರೆ, ಜಿಎಸ್‌ಟಿಯ ಒಂದು ಮುಖ್ಯ ಲಕ್ಷಣವಾಗಿರುವ ಹೂಡುವಳಿ ತೆರಿಗೆ ಜಮೆ (input credit tax) ಎಂಬ ಕಲ್ಪನೆಯಿಂದ ರಾಜಿ ತೆರಿಗೆ ಪದ್ಧತಿ ಹೊರಗಿಡಲಾಗಿದೆ. ಈ ರಾಜಿ ವರ್ತಕರು ಒಳಪೂರೈಕೆ (ಖರೀದಿ) ಮಾಡಿಕೊಂಡ ಸರಕುಗಳ ಮೇಲೆ ಹೂಡುವಳಿ ತೆರಿಗೆ ಜಮಾ ಸೌಲಭ್ಯ ದೊರೆಯುವುದಿಲ್ಲ. ಹಾಗೇಯೇ ಇವರಿಂದ ಸರಕುಗಳನ್ನು ಖರೀದಿಸಿದ ನೋಂದಾಯಿತ ವರ್ತಕರಿಗೂ ಹೂಡುವಳಿ ತೆರಿಗೆ ಜಮೆ ಸಿಗುವುದಿಲ್ಲ. 

ಒಟ್ಟಿನಲ್ಲಿ ಮಾನವ ಸಂಪನ್ಮೂಲದ ಕೊರತೆ, ಗಣಕಯಂತ್ರ ಮತ್ತು ಅದರ ನಿರ್ವಹಣೆಯ ಜ್ಞಾನವಿಲ್ಲದ ಬಹಳಷ್ಟು ಜನ ಸಣ್ಣ ವರ್ತಕರಿಗೆ ಜಿಎಸ್‌ಟಿಯಲ್ಲಿ ಪರಿಚಯಿಸಲಾಗಿರುವ ಈ ರಾಜಿ ತೆರಿಗೆ ಪದ್ಧತಿ ಆಕರ್ಷಕ  ಯೋಜನೆಯಾಗಿದೆ. ಸಣ್ಣ ವರ್ತಕರಿಗೆ ಸಂಜೀವಿನಿಯಾಗಿದೆ ಎಂದರೆ ತಪ್ಪಲ್ಲ.ಗ್ರಾಮಾಂತರ ಮತ್ತು ಸಣ್ಣಪಟ್ಟಣಗಳ ವರ್ತಕರಿಗೆ ಇದು ಹೇಳಿ ಮಾಡಿಸಿದಂತಿದೆ. 

ಈ ಯೋಜನೆ ಆಯ್ದುಕೊಳ್ಳುವ ವಿಧಾನ ಸರಳಗೊಳಿಸಲಾಗಿದೆ. ಈಗಾಗಲೇ ವ್ಯಾಟ್‌ ಕಾಯ್ದೆಯಡಿಯಲ್ಲಿ ನೋಂದಣಿ ಪಡೆದಿರುವ ವರ್ತಕರು ಜುಲೈ1ರಿಂದ 30 ದಿನಗಳಲ್ಲಿ ನಮೂನೆ ಜಿಎಸ್‌ಟಿ ಕಂಪೋ-01 ರಲ್ಲಿ ಜಿಎಸ್‌ಟಿ ಜಾಲತಾಣದಲ್ಲಿ ವಿದ್ಯುನ್ಮಾನ ಕ್ರಮದಲ್ಲಿ ಅರ್ಜಿ ಸಲ್ಲಿಸಿದರೆ ಸಾಕು. ಈಗ ಜಿಎಸ್‌ಟಿಯಲ್ಲಿ ಹೊಸದಾಗಿ ನೋಂದಣಿ ಪಡೆಯುವ ವರ್ತಕರು ನಮೂನೆ ಜಿಎಸ್‌ಟಿ ರಾಜಿ-01 ರ ಭಾಗ-ಬಿ ಯಲ್ಲಿ ನಮೂದಿಸುವ ಮೂಲಕ ಈ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

**

ಗಡುವು ವಿಸ್ತರಣೆ

ಈ ಯೋಜನೆ ಆಯ್ಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಈಗ ಗಡುವು ವಿಸ್ತರಿಸಿದೆ. ಸಣ್ಣ ಪ್ರಮಾಣದ ವರ್ತಕರು, ಉದ್ದಿಮೆದಾರರು ಆಗಸ್ಟ್‌ 16ರವರೆಗೆ ಈ ಯೋಜನೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಜಿಎಸ್‌ಟಿ ಸಿಎಂಪಿ–01 ಅರ್ಜಿ ಭರ್ತಿ ಮಾಡಲು ಇನ್ನೂ ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ ಎಂದು ಅಬಕಾರಿ ಮತ್ತು ಸೀಮಾ ಸುಂಕಗಳ ಕೇಂದ್ರೀಯ ಮಂಡಳಿಯು (ಸಿಬಿಇಸಿ) ಅಧಿಕೃತ ಆದೇಶದಲ್ಲಿ ತಿಳಿಸಿದೆ.

ಜಿಎಸ್‌ಟಿ ಅಂತರ್ಜಾಲ ತಾಣದಲ್ಲಿ (www.gst.gov.in), ಲಾಗಿನ್‌ ಆಗಿ, ಸೇವೆಗಳ ವಿಭಾಗದಲ್ಲಿ ಕಂಪೋಸಿಷನ್‌ ಸ್ಕೀಮ್‌ ಆಯ್ಕೆ ಮಾಡಿಕೊಳ್ಳಬೇಕು. ಅಬಕಾರಿ, ಸೀಮಾಸುಂಕ ಮತ್ತು ವ್ಯಾಟ್‌ ಪಾವತಿಸುತ್ತಿದ್ದ  70 ಲಕ್ಷಕ್ಕೂ ಹೆಚ್ಚು ತೆರಿಗೆದಾರರ ಜತೆಗೆ ಈಗ ಹೊಸದಾಗಿ 8 ಲಕ್ಷ ತೆರಿಗೆದಾರರು ಈ ತಾಣದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಹೊಸ ತೆರಿಗೆದಾರರು ನೋಂದಣಿ ಸಂದರ್ಭದಲ್ಲಿಯೇ ಈ ಸ್ಕೀಮ್‌ ಆಯ್ಕೆ ಮಾಡಿಕೊಳ್ಳಬಹುದು.

(ಲೇಖಕರು ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT