ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 25 ಜುಲೈ 2017, 19:30 IST
ಅಕ್ಷರ ಗಾತ್ರ

ಕೃಷ್ಣ. ಎನ್‌.ಪಿ., ಬೆಳಗಾವಿ

* ನಿವೃತ್ತ ಸರ್ಕಾರಿ ನೌಕರ. ವಯಸ್ಸು 68. ನನ್ನ ವಾರ್ಷಿಕ ಆದಾಯ ಪಿಂಚಣಿ ₹ 2.80 ಲಕ್ಷ. ಠೇವಣಿ ಮೇಲಿನ ಬಡ್ಡಿ ₹ 90,000. ನಾನು ಎಲ್‌.ಐ.ಸಿ. ಪ್ರೀಮಿಯಂ ₹ 11,943 ಕಟ್ಟುತ್ತೇನೆ. (ವಿಮೆ ಮಗನ ಹೆಸರಿನಲ್ಲಿದೆ) ನಾನು ಬ್ಯಾಂಕಿಗೆ (15ಎಚ್‌) ನಮೂನೆ ಫಾರಂ ಸಲ್ಲಿಸಿಲ್ಲ, ಹಾಗೂ ಬಡ್ಡಿಯ ಮೂಲದಲ್ಲಿ ತೆರಿಗೆ (ಟಿಡಿಎಸ್‌) ಮುರಿದಿಲ್ಲ. ನನಗೆ ಆದಾಯ ತೆರಿಗೆ ಬರುತ್ತದೆಯೇ?.

ಉತ್ತರ: ಸೆಕ್ಷನ್‌ 194–ಎ ಪ್ರಕಾರ, (15ಎಚ್‌) ಕೊಡದಿರುವಲ್ಲಿ, ವಾರ್ಷಿಕ ಬಡ್ಡಿ ₹ 10,000 ದಾಟಿದಲ್ಲಿ, ಬಡ್ಡಿಯ ಮೂಲದಲ್ಲಿ ತೆರಿಗೆ ಮುರಿಯುವುದು ಕಡ್ಡಾಯವಾಗಿದೆ. ಬ್ಯಾಂಕಿನಲ್ಲಿ ಏಕೆ ಮುರಿಯಲಿಲ್ಲ ತಿಳಿಯುತ್ತಿಲ್ಲ.

ಜೀವವಿಮೆ ಪ್ರೀಮಿಯಂ ಹಣ, ಮಗನ ಪಾಲಿಸಿಯಾದಲ್ಲಿ, ನಿಮ್ಮ ಮಗ ಅಪ್ರಾಪ್ತ ವಯಸ್ಕರಾದಲ್ಲಿ ಮಾತ್ರ ಸೆಕ್ಷನ್‌ 80ಸಿ ಆಧಾರದ ಮೇಲೆ ಒಟ್ಟು ಆದಾಯದಿಂದ ಕಳೆಯಬಹುದು. ಇವನ್ನು ಗಮನಿಸಿ ₹ 3 ಲಕ್ಷ ದಾಟಿದ ಆದಾಯಕ್ಕೆ ಶೇ 10 ರಷ್ಟು ತೆರಿಗೆ ನೀವು ಸಲ್ಲಿಸಬೇಕಾಗುತ್ತದೆ ಹಾಗೂ ತೆರಿಗೆಯ ಮೊತ್ತದ ಶೇ 3 ಎಜ್ಯುಕೇಷನ್‌ ಸೆಸ್‌ ಕೂಡಾ ಕೊಡಬೇಕಾಗುತ್ತದೆ.

***

ಲಕ್ಷ್ಮೀನಾರಾಯಣ, ಬೆಂಗಳೂರು

* ಸೆಕ್ಷನ್‌ 87–ಇನ್‌ಕಂ ಟ್ಯಾಕ್ಸ್‌ ಆ್ಯಕ್ಟ್‌ನಲ್ಲಿ ₹ 5000 ರಿಬೇಟ್‌ ಪಡೆಯುವ ವಿಧಾನ ಯಾವುದು?

ಉತ್ತರ: Rebate V/S 87 of Income Tax Act. Where the total income of an assessee being an individual  resident of India does not exceed ₹ 5 Lakhs, rebate of ₹ 5000 or actual Tax payable which -even is less is allowed from actual tax payable.

ವಿ.ಸೂ. ಅಸೆಸ್‌ಮೆಂಟ್‌ ವರ್ಷ 2016–17 (1.4.16 ರಿಂದ 31.3.17) ರಲ್ಲಿ ರಿಬೇಟ್‌ ₹ 2000 ಇದ್ದು, 2017–18 ಅಸೆಸ್‌ಮೆಂಟ್‌ ವರ್ಷದಲ್ಲಿ ₹ 5000ಕ್ಕೆ ಹೆಚ್ಚಿಸಲಾಗಿದೆ.

ಸೆಕ್ಷನ್‌ 87: ಆದಾಯ ತೆರಿಗೆಗೆ ಒಳಗಾಗುವ ಒಬ್ಬ ಭಾರತೀಯ ಪ್ರಜೆಯ (Individual Indian)  ವಾರ್ಷಿಕ ಒಟ್ಟು ಆದಾಯ ₹ 5 ಲಕ್ಷದೊಳಗಿರುವಲ್ಲಿ, ಆದಾಯ ತೆರಿಗೆಯಲ್ಲಿ ₹ 5000 ರಿಬೇಟ್‌ ಅಥವಾ ನಿಜವಾಗಿ ಕೊಡಬೇಕಾದ ತೆರಿಗೆ ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ಆರಿಸಿಕೊಳ್ಳಬಹುದು.

ಉದಾಹರಣೆ: ರಾಮಮೋಹನ್‌ (ವಯಸ್ಸು 48) ಇವರ ವಾರ್ಷಿಕ ಒಟ್ಟು ಆದಾಯ (ಎಲ್ಲಾ ವಿನಾಯ್ತಿ ಪಡೆದ ನಂತರ) ₹ 4 ಲಕ್ಷ, ₹ 2.50 ಲಕ್ಷ, ಸ್ಟ್ಯಾಂಡರ್ಡ್‌ ಡಿಡಕ್ಷನ್‌–ಕಳೆದು ₹ 1.50 ಲಕ್ಷ. ರಾಮ ಮೋಹನ್‌ ಅವರ ತೆರಿಗೆ ಆದಾಯ ₹ 1.50 ಲಕ್ಷವಾಗಿದ್ದು. ಶೇ 10 ರಂತೆ, ಅವರು ₹ 15,000 ಆದಾಯ ತೆರಿಗೆ ಕೊಡಬೇಕಾಗುತ್ತದೆ. ಇವರು 2016–17 ರಲ್ಲಿ ತೆರಿಗೆ ರಿಟರ್ನ್‌, 31–7–2017 ರೊಳಗೆ ಸಲ್ಲಿಸುವಾಗ ₹ 15000ದಲ್ಲಿ ₹ 2000 ಕಳೆದು ₹ 13000 ಹಾಗೂ ಎಜ್ಯುಕೇಷನ್‌ ಸೆಸ್‌ ಶೇ 3 ₹ 390, ಅಂದರೆ ₹ 13390 ತೆರಿಗೆ ಕೊಡಬೇಕಾಗುತ್ತದೆ.

**

ಹರ್ಷ, ಬೆಂಗಳೂರು

* ನನ್ನ ವಯಸ್ಸು 53. ಒಬ್ಬಳೇ ಮಗಳು. ಈಗ ಅವಳು ಅಮೆರಿಕದಲ್ಲಿ ಓದು ಮುಗಿಸುವ ಹಂತದಲ್ಲಿದ್ದಾಳೆ. ನನಗೆ ಬೇರಾವ ಆದಾಯವಿಲ್ಲ. ನನ್ನ ಹೆಸರಿನಲ್ಲಿ 60’X40’ ಬಿಡಿಎ ನಿವೇಶನ ಇದೆ. ಅದರ ಇಂದಿನ ಬೆಲೆ ₹ 1 ಕೋಟಿ. ಮಗಳ ಓದಿಗಾಗಿ ಬಂಧು ಮಿತ್ರರಿಂದ ಬಡ್ಡಿ ರಹಿತ ₹ 40 ಲಕ್ಷ ಸಾಲ ಮಾಡಿದ್ದೇನೆ. ಈಗ ನನ್ನೊಡನಿರುವ ನಿವೇಶನ ಮಾರಾಟ ಮಾಡಿ, ಸಾಲ ತೀರಿಸಿ, ಉಳಿಯುವ ಹಣದಲ್ಲಿ ಜೀವನ ಸಾಗಿಸಬೇಕೆಂದಿದ್ದೇನೆ. ಈಗ ₹ 12 ಲಕ್ಷದ ಭೋಗ್ಯದ ಮನೆಯಲ್ಲಿ ವಾಸವಾಗಿದ್ದೇನೆ.  ನನ್ನ ಆಲೋಚನೆ ಸರಿಯೇ?

ಉತ್ತರ: ನೀವು ತೆಗೆದುಕೊಂಡಿರುವ ನಿರ್ಧಾರ ಸರಿ ಇದೆ. ನಿಮ್ಮನ್ನು ನಂಬಿ, ಬಡ್ಡಿ ರಹಿತ ಸಾಲಕೊಟ್ಟ ಮಹನೀಯರ ಹಣ, ನಿವೇಶನ ಮಾರಾಟ ಮಾಡಿ ಕೊಟ್ಟು ಋಣ ಮುಕ್ತರಾಗಿರಿ.

ನಿವೇಶನ ಮಾರಾಟ ಮಾಡಿದಾಗ, ನೀವು ನಿವೇಶನ ಕೊಂಡುಕೊಳ್ಳಲು ಕೊಟ್ಟ ಹಣ ಹಾಗೂ ಇದುವರೆಗಿನ Cost of inflation index ನಂತೆ ಬರುವ ಮೊತ್ತ ಸೇರಿಸಿ. ಈಗ ಮಾರಾಟ ಮಾಡಿ ಬರುವ ಮೊತ್ತದಲ್ಲಿ ಕಳೆದು ಬರುವ ಮೊತ್ತಕ್ಕೆ ಶೇ 20 ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಕೊಡಬೇಕಾಗುತ್ತದೆ. ಇದೇ ವೇಳೆ ಗರಿಷ್ಠ ₹ 50 ಲಕ್ಷ NHAI-REC ಬಾಂಡುಗಳಲ್ಲಿ ಇರಿಸಿ, ಉಳಿದ ಹಣಕ್ಕೆ ತೆರಿಗೆ ಸಲ್ಲಿಸುವ ಅವಕಾಶವೂ ಇದೆ. ಇದರಿಂದ ₹ 10 ಲಕ್ಷ ತೆರಿಗೆ ಉಳಿಸಿದಂತಾಗುತ್ತದೆ. NHAI-REC ಎರಡೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ್ದರಿಂದ, ಭದ್ರತೆಯ ವಿಚಾರದಲ್ಲಿ ಏನೂ ಭಯಪಡುವ ಅವಶ್ಯವಿಲ್ಲ, ಜೊತೆಗೆ ಇಲ್ಲಿ ಬರೇ ಮೂರು ವರ್ಷಗಳ ಅವಧಿಗೆ ಇರಿಸಬಹುದು.   ನೀವು ಈಗ ವಾಸವಾಗಿರುವ ಫ್ಲ್ಯಾಟ್‌ನಲ್ಲಿಯೇ ಮುಂದುವರೆಯಿರಿ.

ನಿಮಗೆ ಬೇರಾವ ಆದಾಯ ಇಲ್ಲದಿರುವುದರಿಂದಲೂ, ವಯಸ್ಸು 53 ಆಗಿರುವುದರಿಂದಲೂ, ತೆರಿಗೆ ಉಳಿಸಲು NHAI-REC ಬದಲಾಗಿ, ಮನೆ, ಫ್ಲ್ಯಾಟ್‌, ಸ್ಥಿರಾಸ್ತಿ ಕೊಂಡುಕೊಳ್ಳುವುದು ಜಾಣತನವಲ್ಲ. ಈಗ ನಿಮ್ಮ ಹೂಡಿಕೆಯಿಂದ ಬರುವ ಹಣ ಖರ್ಚಿಗೆ ಸರಿಹೋಗುತ್ತದೆ. ತೆರಿಗೆಗೋಸ್ಕರ ಸರ್ಕಾರಿ ಬಾಂಡುಗಳಲ್ಲಿ ತೊಡಗಿಸಿದ ಹಣ ವಾಪಸು ಬಂದಾಗ ಅದರಲ್ಲಿ ಗರಿಷ್ಠ ₹ 10 ಲಕ್ಷ ಮಗಳ ಮದುವೆಗೆ ಮುಡುಪಾಗಿಸಿ ಹಾಗೂ ಉಳಿದ ಹಣ ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ ಇರಿಸಿ ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆದು ಸುಖವಾಗಿ ಜೀವಿಸಿರಿ.

**

ರಾಮಣ್ಣ, ರಾಣೆಬೆನ್ನೂರು

* ನನಗೆ ಒಂದು ಎಕರೆ ಬರಡು ಭೂಮಿ ಇದೆ. ಇದನ್ನು ₹ 22 ಲಕ್ಷಕ್ಕೆ ಮಾರಾಟ ಮಾಡಬೇಕೆಂದಿದ್ದೇನೆ. ಭೂಮಿ ಬೆಲೆ ಸರ್ಕಾರ ನಿಗದಿಪಡಿಸಿದಂತೆ ಇಂದಿನ ಬೆಲೆ ₹ 2 ಲಕ್ಷ ಮಾತ್ರ. ಕೊಳ್ಳುವವರು ₹ 2 ಲಕ್ಷಕ್ಕೆ ಡಿ.ಡಿ. ಕೊಟ್ಟು, ಉಳಿದ ₹ 20 ಲಕ್ಷ ನಗದು ಅಥವಾ ಚೆಕ್ ಕೊಡುತ್ತಾರೆ ಹಾಗೂ ಕರಾರು ಪತ್ರ (Agreement) ಮಾಡಿ ಕೊಡುತ್ತಾರೆ. ನನ್ನ ಪ್ರಶ್ನೆಏನೆಂದರೆ, ಬ್ಯಾಂಕಿನಲ್ಲಿ ಕರಾರು ಪತ್ರ ತೋರಿಸಿ, ಠೇವಣಿ ಇರಿಸಬಹುದೇ, ಮುಂದೆ ಏನಾದರೂ ತೊಂದರೆ ಆಗಬಹುದೇ?

ಉತ್ತರ: ಕ್ರಯ ಪತ್ರದಲ್ಲಿ ನಮೂದಿಸಿದ ಹಣಕ್ಕಿಂತ ಹೆಚ್ಚಿನ ಹಣ ಚೆಕ್ ಅಥವಾ ನಗದು ರೂಪದಲ್ಲಿ ಪಡೆದು ಠೇವಣಿ ಮಾಡಿದಾಗ ಅಂತಹ ಹಣ ಕಪ್ಪು ಹಣ (Black Money) ಆಗುತ್ತದೆ. ಸಾಮಾನ್ಯವಾಗಿ ಬ್ಯಾಂಕುಗಳು ಠೇವಣಿ ಇರಿಸುವಾಗ ಆದಾಯದ ಮೂಲ ಕೇಳುವುದಿಲ್ಲ. ಆದರೆ ಈ ವಿಚಾರ ಆದಾಯ ತೆರಿಗೆ ಇಲಾಖೆಯವರು ವಿಚಾರಿಸಬಹುದು. ಕೊಟ್ಟ ಹಣಕ್ಕೆ ನೋಂದಾಯಿಸಿ, ಡಿ.ಡಿ. ಮುಖಾಂತರ ಸಂಪೂರ್ಣ ಹಣ ಪಡೆದು ಬ್ಯಾಂಕಿನಲ್ಲಿ ಠೇವಣಿ ಇರಿಸಿ ನೆಮ್ಮದಿಯಿಂದ ಬಾಳಿರಿ.

**

ನಾಗೇಶ, ಜಗಳೂರು

* ನಾನು ನಿಮ್ಮ ಬುಧವಾರದ ಅಂಕಣ ತಪ್ಪದೇ ಓದುತ್ತೇನೆ. ನನ್ನ ಪ್ರಶ್ನೆ: ನನ್ನ ವಯಸ್ಸು 28. ಸರ್ಕಾರಿ ನೌಕರ. ಎಸ್‌ಬಿಐ ನಲ್ಲಿ ₹ 7 ಲಕ್ಷ ಸಾಲ ಪಡೆದು ಹೊಸಕಾರು ಕೊಂಡಿದ್ದೇನೆ. ಇಎಂಐ ₹ 12,200. ಬಡ್ಡಿದರ ಶೇ 9.65. ಈಗ ಅಂದರೆ ಎರಡು ತಿಂಗಳಿಂದ ಬಡ್ಡಿದರ ಶೇ 9.25ಕ್ಕೆ ಇಳಿದಿದೆ. ಆದರೆ ಲಾಭ ನನಗೆ ದೊರೆಯುತ್ತಿಲ್ಲ. ಬದಲಾಗುವ ಬಡ್ಡಿ ದರದಂತೆ ಕರಾರು ಆಗಿದೆ. ನಾನು ಏನು ಮಾಡಬಹುದು?

ಉತ್ತರ: ಎಸ್‌ಬಿಐ ಭಾರತದ ಪ್ರತಿಷ್ಠಿತ ಹಾಗೂ ಬಹುದೊಡ್ಡ ವಾಣಿಜ್ಯ ಬ್ಯಾಂಕ್. ನೀವು ಬದಲಾಗುವ (Floating Rate) ಬಡ್ಡಿ ದರದಲ್ಲಿ ಕರಾರು ಮಾಡಿಕೊಂಡಲ್ಲಿ, ಬಡ್ಡಿದರ ಇಳಿಕೆಯಾದ ತಾರೀಕಿನಿಂದಲೇ ಇಎಂಐ ಕೂಡಾ ಅದರಂತೆ ಕಡಿಮೆಯಾಗಬೇಕು. ನಿಮ್ಮ ಎಸ್‌ಬಿಐ ಶಾಖೆಗೆ ಅದರ ನಿಯಂತ್ರಿಸುವ ಕಚೇರಿಯಿಂದ ಸುತ್ತೋಲೆ ಬಂದಿರಲಿಕ್ಕಿಲ್ಲ. ಬಂದೇ ಬರುತ್ತದೆ. ಬ್ಯಾಂಕುಗಳಲ್ಲಿ ಇಂತಹ ವಿಚಾರವನ್ನು ಗಣಕೀಕೃತ ಯಂತ್ರಗಳಲ್ಲಿ (Computer System) ತಕ್ಷಣ ಅಳವಡಿಸಿಕೊಳ್ಳುತ್ತಾರೆ. ಸ್ವಲ್ಪ ಸಮಯ ಕಾದು ನೋಡಿರಿ. ಆಗಲೂ ಸರಿಪಡಿಸದಿರುವಲ್ಲಿ, ಒಂದು ಅರ್ಜಿ ತಯಾರಿಸಿ, ಶಾಖಾ ವ್ಯವಸ್ಥಾಪಕರಿಗೆ ಕೊಡಿರಿ. ಅಲ್ಲಿಯೂ ನ್ಯಾಯ ದೊರೆಯದಿರುವಲ್ಲಿ, ಅವರ ಪ್ರಾದೇಶಿಕ ಕಚೇರಿ, ಸೇಂಟ್ ಮಾರ್ಕ್ ರೋಡ್, ಬೆಂಗಳೂರು ಇವರಿಗೆ ದೂರು ನೀಡಿ.

**

ಪ್ರಶಾಂತ ಡಿಸೋಜ, ಊರು ಬೇಡ

* ನಾನು ಗಲ್ಫ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿಯ ಆರ್ಥಿಕ ಅಸ್ಥಿರತೆಯಿಂದ ಕೆಲಸ ಕಳೆದುಕೊಂಡಿದ್ದೇನೆ ಹಾಗೂ ಸದ್ಯಕ್ಕೆ ಭಾರತದಲ್ಲಿಯೇ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಗಲ್ಫ್‌ನಲ್ಲಿ ಕೆಲಸ ಮಾಡುವಾಗ ಭಾರತದಲ್ಲಿ  ಎನ್ಆರ್‌ಇ ಬ್ಯಾಂಕ್ ಖಾತೆ ಪ್ರಾರಂಭಿಸಿದ್ದೆ. ಭಾರತಕ್ಕೆ ಹಿಂದಿರುಗಿದ ನಂತರ ಎಷ್ಟು ಸಮಯದೊಳಗೆ ಈ ಖಾತೆಯನ್ನು ಮುಚ್ಚಬೇಕು. ಬೇರಾವ ತೆರಿಗೆ ರಹಿತ ಉಳಿತಾಯ ಅಥವಾ ಹೂಡಿಕೆಗಳಿದ್ದರೆ ತಿಳಿಸಿರಿ. ಈ ಖಾತೆಯನ್ನು ಬೇರೆ ಯಾವುದಾದರೂ ತೆರಿಗೆ ವಿನಾಯಿತಿ ಖಾತೆಗೆ ವರ್ಗಾಯಿಸಬಹುದೇ?

ಉತ್ತರ: ನೀವು ಭಾರತಕ್ಕೆ ಮರಳಿ ಆರು ತಿಂಗಳೊಳಗೆ ಎನ್‌ಆರ್‌ಇ ಬ್ಯಾಂಕ್ ಖಾತೆ ಮುಚ್ಚಿ, ಸಾಧಾರಣ ಉಳಿತಾಯ ಖಾತೆ ಪ್ರಾರಂಭಿಸಬೇಕು. ಈ ಖಾತೆಯನ್ನು ತೆರಿಗೆ ರಹಿತ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಬರುವುದಿಲ್ಲ. ನೀವು ಬಯಸಿದರೆ ಪಿ.ಪಿ.ಎಫ್. ಖಾತೆ ತೆರೆದು ವಾರ್ಷಿಕ ಗರಿಷ್ಠ ₹ 1.50 ಲಕ್ಷ ಇಲ್ಲಿ ಹಣ ಹೂಡುವ ಅವಕಾಶವಿದೆ. ಆದರೆ, ಉಳಿತಾಯ ಖಾತೆಯ ತತ್ವ ಇದರಲ್ಲಿ ಇರುವುದಿಲ್ಲ. ಇದೊಂದು ತೆರಿಗೆ ರಹಿತ ದೀರ್ಘಾವಧಿ ಹೂಡಿಕೆಯಾಗಿದೆ. ಸಂವೇದಿ ಸೂಚ್ಯಂಕ (Sensex) ಗಗನಕ್ಕೇರಿರುವುದರಿಂದ, ಮ್ಯೂಚುವಲ್ ಫಂಡ್ ಹೂಡಿಕೆ ಕೂಡಾ ಕಂಟಕಕ್ಕೆ ಒಳಗಾಗಲಿದೆ ಎನ್ನುವುದು ಕೆಲವು ತಜ್ಞರ ಅಭಿಪ್ರಾಯ. ನಿಮ್ಮೊಡನಿರುವ ಹಣ ಸದ್ಯ ಬ್ಯಾಂಕ್, ಅಂಚೆ ಕಚೇರಿ ಠೇವಣಿಯಲ್ಲಿ ಇರಿಸಿರಿ.

**

ಲೋಕೇಶ್.ವಿ.ಜಿ., ಬೆಂಗಳೂರು

* ನನ್ನ ಅಜ್ಜಿ ₹ 500ರ ಹಳೆಯ 12 ನೋಟುಗಳನ್ನು ಅವಳ ಕವಾಟಿನಲ್ಲಿ ಇಟ್ಟಿದ್ದು, ಈಗ ಹುಡುಕುವಾಗ ಸಿಕ್ಕಿದೆ. ಈ ನೋಟುಗಳನ್ನು ಈಗಲೂ ವಿನಿಮಯ ಮಾಡಿಕೊಳ್ಳಬಹುದೇ?

ಉತ್ತರ: ₹ 500– ₹ 1,000 ಮುಖಬೆಲೆಯ ಹಳೆ ನೋಟು ಹೊಸ ನೋಟಿಗೆ ವಿನಿಮಯ ಮಾಡಿಕೊಳ್ಳುವ ಅವಧಿ 31–3–2017ಕ್ಕೆ ಮುಗಿದಿದೆ. ಆದರೂ ಸತ್ಯಾಂಶವನ್ನು ಒಂದು ಅರ್ಜಿಯಲ್ಲಿ ಬರೆದು, ಪ್ಯಾನ್–ಆಧಾರ್ ಕಾರ್ಡು ನಕಲು ಇರಿಸಿ (ನಿಮ್ಮ ಅಜ್ಜಿಯ ಹತ್ತಿರ ಇರುವಲ್ಲಿ) ಭಾರತೀಯ ರಿಸರ್ವ್ ಬ್ಯಾಂಕಿಗೆ ಸಲ್ಲಿಸಿರಿ. ನೃಪತುಂಗಾ ರಸ್ತೆಯಲ್ಲಿ ಆರ್.ಬಿ.ಐ. ಕಚೇರಿ ಇದೆ. ಈ ಮಾರ್ಗದಿಂದ ನಿಖರವಾಗಿ ನಿಮಗೆ ಹಣ ವಿನಿಮಯ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಹೇಳಲಾಗುವುದಿಲ್ಲ. ಪ್ರಯತ್ನ ಮಾಡಿರಿ.

**

ಮಂಜುನಾಥ ಅವಧಾನಿ, ಬೆಂಗಳೂರು

* ಖಾಸಗಿ ಕಂಪನಿಯಲ್ಲಿ ಕೆಲಸ. ತಿಂಗಳ ಸಂಬಳ ₹ 60,000. ನನ್ನ ಮುಂಚಿನ ಕಂಪೆನಿಯಿಂದ ₹ 4 ಲಕ್ಷ ಬೋನಸ್ ಕಳೆದ ವರ್ಷ ಬಂದಿದೆ. ಸಂಬಳದಲ್ಲಿ ಕಡಿತ, ಗೃಹಸಾಲದ ಕಂತು ₹ 14,500. ವಾಹನ ಸಾಲದ ಕಂತು ₹6,500. ಮನೆ ಖರ್ಚು ₹ 8,000. ನನಗೆ ಇರುವ ಉತ್ತಮ ಉಳಿತಾಯದ ಮಾರ್ಗ ಯಾವುದು?

ಉತ್ತರ: ನೀವು ನಿಮ್ಮ ಮನೆ ಖರ್ಚಿಗೆ ಬರೇ ₹ 8,000–10,000 ಮಾತ್ರ ಬಳಸುತ್ತಿರುವುದಕ್ಕೆ ಮುಖ್ಯವಾಗಿ ನಿಮ್ಮ ಹೆಂಡತಿಗೆ ಅಭಿನಂದಿಸುತ್ತೇನೆ. ಸಂಬಳದಲ್ಲಿ ಕಡಿತ, ಮನೆ ಖರ್ಚು ಕಳೆದು ₹ 20,000 ನಿಮ್ಮೊಡನಿರುತ್ತದೆ.

ಇದುವರೆಗೆ ಈ ಹಣ ಎಲ್ಲಿ ವಿನಿಯೋಗಿಸಿದ್ದೀರಿ ತಿಳಿಯಲಿಲ್ಲ. ಇದೇ ವೇಳೆ ಆದಾಯ ತೆರಿಗೆ, ಅನಿರೀಕ್ಷಿತ ಖರ್ಚು ಹೀಗೆ ₹ 5,000 ತಿಂಗಳಿಗೆ ನೀವು ಮುಡುಪಾಗಿ ಇಡಬೇಕಾಗುತ್ತದೆ. ಹೀಗೆ ಮಾಡಿದಾಗಲೂ ನಿಮ್ಮೊಡನೆ ₹ 15,000 ಉಳಿಯುತ್ತದೆ. ಇನ್ನು ಮುಂದೆ ₹ 15,000 ಹೀಗೆ ವಿನಿಯೋಗಿಸಿ.

ಆದಾಯ ತೆರಿಗೆ ಉಳಿಸಲು ಕನಿಷ್ಠ ₹ 1 ಲಕ್ಷ ಪಿ.ಪಿ.ಎಫ್. ಖಾತೆ ತೆರೆದು ವಾರ್ಷಿಕವಾಗಿ ತುಂಬಿರಿ. ಒಮ್ಮೆಲೇ ₹ 1ಲಕ್ಷ ತುಂಬಲು ಕಷ್ಟವಾದ್ದರಿಂದ ₹ 8,000 ಆರ್.ಡಿ. ಒಂದು ವರ್ಷಕ್ಕೆ ಮಾಡಿರಿ. ಅದೇ ರೀತಿ ಇನ್ನೊಂದು ಆರ್.ಡಿ. ₹ 3,000 ಒಂದು ವರ್ಷಕ್ಕೆ ಮಾಡಿ, ವರ್ಷಾಂತ್ಯಕ್ಕೆ ಬಂಗಾರ ನಾಣ್ಯ ಕೊಳ್ಳಿರಿ. ಈ ಪ್ರಕ್ರಿಯೆ ನಿರಂತರವಾಗಿರಲಿ. ಇನ್ನು ಉಳಿಯುವ ₹ 4,000, ಎಲ್.ಐ.ಸಿ. ಜೀವನ ಆನಂದ ಪಾಲಿಸಿ ಮಾಡಿ, ಸಂಬಳದಲ್ಲಿ ನೇರ ಕಡಿತವಾಗುವಂತೆ (salary Saving Scheme) ಮಾಡಿರಿ. ಈ ರೀತಿ ಮಾಡಿದಲ್ಲಿ ನಿಮ್ಮ ಜೀವನದ ಸಂಜೆ ಸುಖಮಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT