ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಸಮಸ್ಯೆ: ಎರಡು ಸರ್ಕಾರಿ ಶಾಲೆಗಳಿಗೆ ರಜೆ

Last Updated 26 ಜುಲೈ 2017, 4:40 IST
ಅಕ್ಷರ ಗಾತ್ರ

ಚನ್ನಗಿರಿ: ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಸರ್ಕಾರಿ ಬಾಲಿಕಾ ಪ್ರೌಢಶಾಲೆ ಹಾಗೂ ಬಾಲಕರ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಬಿಸಿಯೂಟ ತಯಾರಿ ತೊಂದರೆಯಾಗಿದೆ. ಹೀಗಾಗಿ ಮಂಗಳವಾರ ಮಧ್ಯಾಹ್ನ  ಶಾಲೆಗೆ ರಜೆ ನೀಡಲಾಯಿತು.

ಬಾಲಿಕಾ ಪ್ರೌಢಶಾಲೆಯಲ್ಲಿ 363 ಬಾಲಕಿಯರು ಹಾಗೂ ಪ್ರಾಥಮಿಕ ಶಾಲೆಯಲ್ಲಿ 120 ವಿದ್ಯಾರ್ಥಿಗಳಿಗೆ ಪ್ರತಿದಿನ ಬಿಸಿಯೂಟ ನೀಡಲಾಗುತ್ತಿತ್ತು. ಒಂದು ತಿಂಗಳಿನಿಂದ ಪಟ್ಟಣದಲ್ಲಿ ತೀವ್ರವಾದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಪುರಸಭೆಯವರು 15 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ. ಶಾಲೆಗಳಲ್ಲಿ ನೀರಿನ ತೊಟ್ಟಿಗಳ ವ್ಯವಸ್ಥೆ ಇಲ್ಲ. ಹೀಗಾಗಿ ಅಷ್ಟು ದಿನಗಳಿಗೆ ಆಗುವಷ್ಟು ನೀರನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ.

‘ನೀರಿನ ಸಮಸ್ಯೆಯಿಂದಾಗಿ ಇಂದು ಬಿಸಿಯೂಟ ತಯಾರಿಸಲು ಸಾಧ್ಯವಾಗಿಲ್ಲ. ಶಾಲೆಯಲ್ಲಿ ಇರುವ ಕೊಳವೆಬಾವಿಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಟ್ಯಾಂಕರ್ ಮೂಲಕ ನೀರು ತರಿಸಿಕೊಂಡು ಬಿಸಿಯೂಟ ಮಾಡಿಸಲು ಸಾಧ್ಯವಿಲ್ಲ. ನಮ್ಮಲ್ಲಿರುವ ಕೊಳವೆಬಾವಿಗೆ ಇನ್ನಷ್ಟು ಪೈಪ್‌ಗಳನ್ನು ಬಿಡಲಾಗಿದೆ. ನಾಳೆಯಿಂದ ಮಕ್ಕಳಿಗೆ ಬಿಸಿಯೂಟ ನೀಡಲಾಗುವುದು’ ಎಂದು ಮುಖ್ಯ ಶಿಕ್ಷಕ ಎಸ್. ಶಂಕರಪ್ಪ ತಿಳಿಸಿದರು.

‘ಪಟ್ಟಣವಷ್ಟೇ ಅಲ್ಲದೆ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕೆಲವು ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ತರಿಸಿ, ಅಲ್ಲಿಯ ಶಾಲೆಗಳ ಮುಖ್ಯ ಶಿಕ್ಷಕರು ಬಿಸಿಯೂಟಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಎರಡು ಶಾಲೆಗಳಲ್ಲಿ ಸಮಯಕ್ಕೆ ಸರಿಯಾಗಿ ಟ್ಯಾಂಕರ್ ನೀರು ಪೂರೈಕೆಯಾಗಿಲ್ಲ. ಇನ್ನು ಮುಂದೆ ಈ ರೀತಿಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು’ ಎಂದು ಬಿಇಒ ಪರಮೇಶ್ವರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT