ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯಿಂದ ನೀರು, ಮುಖದಲ್ಲಿ ಮಂದಹಾಸ

Last Updated 26 ಜುಲೈ 2017, 4:48 IST
ಅಕ್ಷರ ಗಾತ್ರ

ದಾವಣಗೆರೆ: ನೀರು ನುಗ್ಗಿ ಬಂತು. ಸ್ವಾಮೀಜಿ ಮುಖದಲ್ಲಿ ಮಂದಹಾಸ ಮೂಡಿತು. ಪಕ್ಕದಲ್ಲಿದ್ದ ಸಚಿವರ ಬೆನ್ನು ತಟ್ಟಿ ಭೇಷ್‌ ಎಂದರು. ಅಲ್ಲಿದ್ದ ರೈತರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಹರಿಹರ ಸಮೀಪದಲ್ಲಿ ತುಂಗಭದ್ರಾ ನದಿಯ ರಾಜನಹಳ್ಳಿ ಜಾಕ್‌ವೆಲ್‌ನಿಂದ ನೀರು ಹರಿದ ಸಂದರ್ಭ.

22 ಕೆರೆಗಳಿಗೆ ತುಂಗಭದ್ರಾ ನದಿ ನೀರು ಹರಿಸುವ ಮತ್ತೊಂದು ಪ್ರಯತ್ನ ಯಶಸ್ಸು ಕಂಡ ಕ್ಷಣವಿದು. ಮಂಗಳವಾರ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ ಜತೆಗೂಡಿಯೇ ನೀರು ಹರಿಸುವುದಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ‘ಈ ಭಾಗದ ಜನರ ಬಹುದಿನದ ಕನಸು ನನಸಾಗಿದೆ. ಮುಂದೆ ಬರುವ ವಿಜಯದಶಮಿ ಇಂದೇ ಬಂದಷ್ಟು ಸಂತೋಷವಾಗಿದೆ’ ಎಂದರು. ‘ಯೋಜನೆಯಲ್ಲಿದ್ದ ತಾಂತ್ರಿಕ ದೋಷಗಳೆಲ್ಲ ಈಗ ನಿವಾರಣೆಯಾಗಿವೆ. ಯೋಜನೆ ಈ ಸ್ವರೂಪ ಪಡೆದುಕೊಳ್ಳಲು ಕಾರಣರಾದ ಸಚಿವ ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಮುಖಂಡರು, ರೈತರು, ಎಲ್ಲರನ್ನೂ ಅಭಿನಂದಿಸುತ್ತೇನೆ’ ಎಂದು ಪ್ರಶಂಸಿಸಿದರು.

ಈ ಯೋಜನೆಯಿಂದ ಉದ್ದೇಶಿತ 22 ಕೆರೆಗಳಿಗೆ ನೀರು ಹರಿಯುವುದು ಖಚಿತ. ಮುಂದೆ ಜಗಳೂರು, ಭರಮಸಾಗರದ ಕೆರೆಗಳಿಗೂ ಈ ನೀರು ಹರಿಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಯನ್ನು ಪುನರ್‌ ಪರಿಶೀಲಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.

‘ಯೋಜನೆ ನಿರ್ವಹಣೆಗೆ ಸರ್ಕಾರದ ಆರ್ಥಿಕ ನೆರವು ನಂಬಿಕೊಂಡರೆ ಸದ್ಯಕ್ಕೆ ಆಗದ ಮಾತು. ಸರ್ಕಾರದ ನಿಯಮಗಳ ಅಡಿಯಲ್ಲೇ ನೀರು ಬಳಕೆದಾರರ ಸಂಘ ರಚಿಸಬೇಕು. ರೈತರಿಂದ ನಿಧಿ ಸಂಗ್ರಹಿಸಬೇಕು. ಕನಿಷ್ಠ ₹ 5 ಕೋಟಿ ನಿಧಿ ಸಂಗ್ರಹಿಸುವ ಗುರಿ ಹೊಂದಬೇಕು. ಈ ನಿಟ್ಟಿನಲ್ಲಿ ಈ ಭಾಗದ ರೈತರ ಸಭೆಯನ್ನು ಶೀಘ್ರ ಕರೆಯಬೇಕು. ಚನ್ನಗಿರಿ ತಾಲ್ಲೂಕಿನಲ್ಲಿ ಈ ಮಾದರಿ ಯಶಸ್ವಿಯಾಗಿದೆ. ಅದನ್ನೇ ಇಲ್ಲಿ ಅನುಸರಿಬೇಕು’ ಎಂದು ಸಚಿವರಿಗೆ ಸೂಚಿಸಿದರು.

‘ರೈತರು ಕೆರೆ ತುಂಬುವವರೆಗೂ ಸಹನೆ ತೋರಬೇಕು. ನೀರಿನ ವಾಲ್ವ್ ಒಡೆಯುವುದು, ಪೈಪ್‌ ಕತ್ತರಿಸುವುದು ಮಾಡಬಾರದು’ ಎಂದು ಸ್ವಾಮೀಜಿ ಇದೇ ವೇಳೆ ಎಚ್ಚರಿಕೆ ನೀಡಿದರು. 22 ಕೆರೆಗಳಿಗೂ ನೀರು ತುಂಬುವವರೆಗೆ ಎಲ್‌ ಅಂಡ್ ಟಿ ಕಂಪೆನಿಯೇ ತಾಂತ್ರಿಕ ನಿರ್ವಹಣೆ ಮಾಡಬೇಕು. ಕಂಪೆನಿ ಇದಕ್ಕೆ ಸ್ಪಂದಿಸದಿದ್ದರೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸಚಿವರಿಗೆ ಸೂಚಿಸಿದರು.

‘ಮುಂದೆ ಯಾರೇ ಅಧಿಕಾರಕ್ಕೆ ಬರಲಿ ಈ ಯೋಜನೆಯನ್ನೇ ಮಾದರಿಯಾಗಿಟ್ಟುಕೊಳ್ಳಬೇಕು. ಜಿಲ್ಲೆಯ ಎಲ್ಲಾ ಕೆರೆಗಳನ್ನೂ ತುಂಬಿಸಬೇಕು. ಸರ್ಕಾರ ದೊಡ್ಡ–ದೊಡ್ಡ ಯೋಜನೆಗಳನ್ನು ಜಾರಿಗೊಳಿಸುವುದಕ್ಕಿಂತ ಇಂತಹ ಚಿಕ್ಕಪುಟ್ಟ ಯೋಜನೆಗಳನ್ನು ಕೈಗೆತ್ತಿಕೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಸಾಸ್ವೆಹಳ್ಳಿ ಏತನೀರಾವರಿ ಯೋಜನೆಗೆ ತಾಂತ್ರಿಕ ಮಂಜೂರಾತಿ ಈಗಾಗಲೇ ಸಿಕ್ಕಿದೆ. ಈ ಮಧ್ಯೆ ಸೂಳೆಕೆರೆಗೂ ನೀರು ತುಂಬಿಸುವ ಯೋಜನೆಗೂ ಚಾಲನೆ ಸಿಗಬೇಕಿದೆ ಎಂದು ಸಲಹೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ ಮಾತನಾಡಿ, ‘ಜಾಕ್‌ವೆಲ್ ಅವೈಜ್ಞಾನಿಕವಾಗಿತ್ತು.

ಈಗ ನದಿಪಾತ್ರದಿಂದ 8 ಮೀಟರ್‌ ಕೆಳಗೆ 135 ಎಚ್‌ಪಿಯ ಮೂರು ಪಂಪ್‌ಸೆಟ್‌ಗಳನ್ನು ಅಳವಡಿಸಲಾಗಿದೆ. ಅವು ಪ್ರತಿ ಸೆಕೆಂಡಿಗೆ 750 ಲೀಟರ್‌ ನೀರನ್ನು ಪಂಪ್‌ ಮಾಡುತ್ತವೆ. ಇದಕ್ಕಾಗಿ 100 ಕೆ.ವಿ. ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಕನಿಷ್ಠ 200 ದಿನ ನಿರಂತರವಾಗಿ ನದಿಯಿಂದ ನೀರು ಪೂರೈಸಲು ಸಾಧ್ಯವಾಗಲಿದೆ’ ಎಂದು ಮಾಹಿತಿ ನೀಡಿದರು.

ಯೋಜನೆಯ ಪ್ರತಿ ಹಂತದಲ್ಲೂ ಸ್ವಾಮೀಜಿ ಮಾರ್ಗದರ್ಶನ ಮಾಡಿದ್ದಾರೆ. ಮುಂದೆ ನಿರ್ವಹಣೆ ಹಂತದಲ್ಲೂ ಅವರ ಸಲಹೆ–ಸೂಚನೆಗಳು ಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭ ದಾವಣಗೆರೆ ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್ ಉಪಸ್ಥಿತರಿದ್ದರು.

ಜಗಳೂರಿನಲ್ಲಿ ವೈಭವದ ತರಳಬಾಳು ಹುಣ್ಣಿಮೆ
22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಂಡ ಹಿನ್ನೆಲೆಯಲ್ಲಿ 2018ರ ಜನವರಿ ಹಾಗೂ ಫೆಬ್ರುವರಿ ತಿಂಗಳಿನಲ್ಲಿ ಜಗಳೂರಿನಲ್ಲಿ ತರಳಬಾಳು ಹುಣ್ಣಿಮೆಯನ್ನು ವೈಭವದಿಂದ ಆಚರಿಸಲಾಗುವುದು ಎಂದು ಸ್ವಾಮೀಜಿ ಘೋಷಿಸಿದರು.

ಮಠದ ಇತಿಹಾಸದಲ್ಲಿ 2ಕ್ಕಿಂತ ಹೆಚ್ಚು ವರ್ಷ ತರಳಬಾಳು ಹುಣ್ಣಿಮೆ ಆಚರಣೆಯನ್ನು ನಿಲ್ಲಿಸಿರಲಿಲ್ಲ. ಬರದ ಕಾರಣದಿಂದ ಸತತ ಎರಡು ವರ್ಷ ಹುಣ್ಣಿಮೆ ಆಚರಿಸಿರಲಿಲ್ಲ. ಆದರೆ, ಈ ಬಾರಿ ಜಗಳೂರು ಭಾಗದ ಕೆರೆಗಳಿಗೆ ನೀರು ಹರಿಯುವುದರಿಂದ ಸಂತೋಷದಿಂದ ಹುಣ್ಣಿಮೆ ಆಚರಿಸಲಾಗುವುದು ಎಂದರು.

ಉಬ್ರಾಣಿ ಏತನೀರಾವರಿ ಯೋಜನೆಯಿಂದ ಚನ್ನಗಿರಿ ಭಾಗದ ಕೆರೆಗಳಿಗೆ ನೀರು ತುಂಬಿಸಿ ಹುಣ್ಣಿಮೆ ಆಚರಿಸಲಾಗಿತ್ತು. ಈ ಬಾರಿ ಜಗಳೂರು ಹುಣ್ಣಿಮೆಯನ್ನು ಕೆರೆಯಿಂದ ಕೆರೆಗೆ ನೀರು ಹರಿಸಿ ಆಚರಿಸುವ ಉದ್ದೇಶವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಗಳೂರು ಪಟ್ಟಣದಲ್ಲಿ 500 ಎಕರೆ ವಿಸ್ತೀರ್ಣದಲ್ಲಿರುವ ಕೆರೆಯನ್ನೂ ಈ ಯೋಜನೆ ವ್ಯಾಪ್ತಿಗೆ ಸೇರಿಸಬೇಕು ಎಂದು ಜಗಳೂರು ಭಾಗದ ಮುಖಂಡರಾದ ಶ್ರೀಲಕ್ಷ್ಮಣ್, ಎನ್.ಎಸ್‌.ರಾಜು, ಶಿವಣ್ಣರೆಡ್ಡಿ, ಬಸವರಾಜ ಅವರ ನೇತೃತ್ವದ ತಂಡ ಸ್ವಾಮೀಜಿ ಹಾಗೂ ಸಚಿವರಿಗೆ ಮನವಿ ಸಲ್ಲಿಸಿತು. ಈ ಕೆರೆಗೆ ನೀರು ಹರಿಸಿದರೆ 12 ಹಳ್ಳಿಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದು ತಂಡ ಅಭಿಪ್ರಾಯಪಟ್ಟಿತು.

ಕಾಣಿಸಿಕೊಳ್ಳದ ರೈತರು; ಆಕ್ಷೇಪ
ಯೋಜನೆ ಸಾರ್ಥಕಗೊಂಡ ಈ ಕ್ಷಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳದಿರುವುದಕ್ಕೆ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು. ಇಂತಹ ಸಂಭ್ರಮದಲ್ಲಿ ರೈತರು, ಭಾಗಿಯಾಗಬೇಕು. ಹೋರಾಟಗಳಿಗೆ ಸಂಘಟಿತರಾಗುವ ರೈತರು ಅದು ಸಾರ್ಥಕಗೊಂಡಾಗ ಕಾಣಿಸಿಕೊಳ್ಳದಿರುವುದು ಸರಿಯಲ್ಲ.

ಇಂತಹ ವೇಳೆಯಲ್ಲೇ ಹಸಿರು ಟವಲ್‌ಗಳು ಗಾಳಿಯಲ್ಲಿ ಹಾರಾಡಬೇಕು ಎಂದು ಮಾರ್ಮಿಕವಾಗಿ ನುಡಿದರು. ನೀರು ಹರಿಸುವ ಬಗ್ಗೆ ಜನರಿಗೆ ಮಾಹಿತಿ ನೀಡಲಾಗಿತ್ತೆ ಎಂಬ ಪ್ರಶ್ನೆಯನ್ನು ಸ್ವಾಮೀಜಿ ಸಚಿವರ ಮುಂದಿಟ್ಟಾಗ ಅವರ ಬೆಂಬಲಿಗರು, ‘ಹೌದು’ ಎಂದಷ್ಟೇ ಹೇಳಿ ಸುಮ್ಮನಾದರು.

* * 

ಹರಿಹರ, ದಾವಣಗೆರೆ ಹಾಗೂ 22 ಕೆರೆಗಳಿಗೆ ನೀರು ಒದಗಿಸಲು ತುಂಗಭದ್ರಾ ನದಿಗೆ ಸೂಕ್ತ ಸ್ಥಳದಲ್ಲಿ ಬ್ಯಾರೇಜ್‌ ನಿರ್ಮಾಣದ  ನೀಲನಕ್ಷೆ ತಯಾರಿಸಲು ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ.
–ಎಸ್‌.ಎಸ್‌.ಮಲ್ಲಿಕಾರ್ಜುನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT