ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸರು ಗದ್ದೆಯಾದ ವಿದ್ಯಾನಗರ ಮುಖ್ಯರಸ್ತೆ

Last Updated 26 ಜುಲೈ 2017, 4:58 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದ ಒಳಗೆ ಹಾದುಹೋಗಿರುವ ಬೆಂಗಳೂರು – ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಮಸ್ಯೆಗಳ ಆಗರವಾಗಿದೆ. ಸಹ್ಯಾದ್ರಿ ಕಾಲೇಜು ಬೈಪಾಸ್‌ನಿಂದ ಮುಖ್ಯ ಬಸ್ ನಿಲ್ದಾಣದವರೆಗಿನ ಬಿ.ಎಚ್. ರಸ್ತೆ ಹಲವು ಸಮಸ್ಯೆಗಳ ತಾಣವಾಗಿದೆ. ಕೆಲವೆಡೆ ಚೆಂದ ಕಾಣುವ ರಸ್ತೆ, ಅಲ್ಲಲ್ಲಿ ಗುಂಡಿಗಳಿಂದ ಆವೃತವಾಗಿದೆ. ಹೊಳೆಹೊನ್ನೂರು ರೈಲ್ವೆಗೇಟ್ ಸಮೀಪವಂತೂ ಸಂಪೂರ್ಣ ಕೆಸರು ಮಯವಾಗಿದೆ.

ವಿದ್ಯಾನಗರ ಬಡಾವಣೆಯಿಂದ ಸಹ್ಯಾದ್ರಿ ಕಾಲೇಜಿನವರೆಗೂ ರಸ್ತೆ ದೊಡ್ಡ ಗುಂಡಿಗಳಿಂದ ಕೂಡಿದೆ. ಪಾದಚಾರಿ ಗಳಿಗೆ, ವಾಹನ ಸವಾರರಿಗೆ ಯಮಕೂಪವಾಗಿದೆ. ಹೊಳೆ ಬಸ್‌ನಿಲ್ದಾಣದಿಂದ ಮುಖ್ಯ ಬಸ್‌ನಿಲ್ದಾಣದವರೆಗೆ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿತವಾಗಿದ್ದರೂ ಹೆಚ್ಚಿನ ಕಡೆ ಬಿರುಕುಬಿಟ್ಟಿದೆ. ಇದು ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.

ಕೆಸರುಗದ್ದೆಯಾದ ರಸ್ತೆ: ಚನ್ನಗಿರಿ, ಹೊಳೆಹೊನ್ನೂರು, ಚಿತ್ರದುರ್ಗಕ್ಕೆ ತೆರಳುವ ಜನರು ಹೊಳೆಹೊನ್ನೂರು ರೈಲ್ವೆಗೇಟ್ ಸಮೀಪದಲ್ಲಿಯೇ ಬಸ್‌ಗಾಗಿ ಕಾಯುತ್ತಾ ನಿಲ್ಲುತ್ತಾರೆ. ರೈಲ್ವೆಗೇಟ್ ಹಾಕಿದ ಸಂದರ್ಭದಲ್ಲಿ ಸಹಜವಾಗಿ ವಾಹನ ದಟ್ಟಣೆ ಹೆಚ್ಚಿರುತ್ತದೆ. ಆಗ ಕೆಲವರು  ಪಾದಚಾರಿ ಮಾರ್ಗಗಳಲ್ಲಿ ಕಾರು, ಬೈಕ್‌ಗಳು ಓಡಿಸುತ್ತಾರೆ. ಮಳೆಗಾಲದ ಈ ಸಮಯದಲ್ಲಿ ಸಂಪೂರ್ಣ ಕೆಸರುಮಯವಾಗುತ್ತದೆ. ಹಲವರು ಜಾರಿ ಬಿದ್ದಿದ್ದಾರೆ. ವಾಹನಗಳು ಸಿಲುಕಿಕೊಂಡ ಉದಾಹರಣೆಗಳು ಸಾಕಷ್ಟಿವೆ.

‘ನಿತ್ಯವೂ ಇಲ್ಲಿ ಸಾವಿರಾರು ಜನರು ಓಡಾಡುತ್ತಾರೆ. ದ್ವಿಚಕ್ರ ವಾಹನಗಳು, ಬಸ್, ಲಾರಿ ಸೇರಿದಂತೆ ಭಾರಿ ವಾಹನ ಸಂಚರಿಸುತ್ತವೆ. ಸ್ವಲ್ಪ ಸಮತೋಲನ ತಪ್ಪಿದರೂ ಮುಗಿಯಿತು. ನಿಯಂತ್ರಣ ತಪ್ಪಿ ಕೆಸರಿನಲ್ಲಿ ಬೀಳಬೇಕಾಗುತ್ತದೆ. ಇತ್ತೀಚೆಗಷ್ಟೆ ಒಬ್ಬ ದ್ವಿಚಕ್ರ ವಾಹನ ಸವಾರ ಆಯತಪ್ಪಿ ಬಿದ್ದು, ಆಸ್ಪತ್ರೆಗೆ ಸೇರಿದ್ದಾನೆ.

ರೈಲು ಆಗಮಿಸಿದ ಸಮಯದಲ್ಲಿ ಉಂಟಾಗುವ ವಾಹನ ದಟ್ಟಣೆ ಪೊಲೀಸರು ನಿಯಂತ್ರಿಸಬೇಕು. ಇಲ್ಲದಿದ್ದರೆ ಅಪಾಯ ಸಂಭವಿಸುತ್ತಲೇ ಇರುತ್ತದೆ’ ಎಂದು ಆಂತಕ ವ್ಯಕ್ತಪಡಿಸಿದರು ಗುರುಪುರದ ಶ್ರೀನಿವಾಸ.

‘ಶಿವಮೊಗ್ಗದ ಬಿ.ಎಚ್. ರಸ್ತೆಯ ಕಾಂಕ್ರೀಟ್‌ ಹಲವೆಡೆ ಹಾಳಾಗಿದೆ. ಕರ್ನಾಟಕ ಸಂಘದ ಬಳಿ, ಅಮೀರ್ ಅಹಮದ್ ವೃತ್ತದ ಬಳಿ ಗುಂಡಿಗಳು ಬಿದ್ದಿವೆ. ವಿದ್ಯಾನಗರ ಬಳಿಯೂ ಇದೇ ಅವಸ್ಥೆ. ದಿನವೂ ರಸ್ತೆ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಾ ಓಡಾಡುತ್ತಿದ್ದೇವೆ’ ಎಂದು ದೂರುತ್ತಾರೆ ದ್ವಿಚಕ್ರ ವಾಹನ ಸವಾರ ನಾಗಮಂಜು.

ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ
ಬಿ.ಎಚ್. ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆ. ರೈಲ್ವೆ ಮೇಲು ಸೇತುವೆ ನಿರ್ಮಾಣವಾಗುವವರೆಗೂ ಈ ಸಮಸ್ಯೆಗೆ ಮುಕ್ತಿ ಇಲ್ಲ. ಮಳೆಗಾಲದಲ್ಲಿ ಸಮಸ್ಯೆ ಹೆಚ್ಚು. ಪಾಲಿಕೆ ಆಯುಕ್ತರ ಗಮನಕ್ಕೆ ತಂದು, ತಾತ್ಕಾಲಿಕ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇನೆ ಎಂದು ವಿದ್ಯಾನಗರ ಭಾಗದ ಮಹಾನಗರ ಪಾಲಿಕೆ ಸದಸ್ಯ ಪಂಡಿತ್‌ ವಿ. ವಿಶ್ವನಾಥ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT